ಸಿ.ಸಿದ್ದಯ್ಯ
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಅನುರ ಕುಮಾರ ದಿಸ್ಸಾನಾಯಕೆ ಅವರ ಅಚ್ಚರಿಯ ಗೆಲುವು ಸಾಧಿಸುವ ಮೂಲಕ, ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಿಸ್ಸಾನಾಯಕೆ ಅವರ ಅಮೋಘ ಗೆಲುವು ವಿಶ್ವದಾದ್ಯಂತ ಎಡಪಂಥೀಯರಿಗೆ ಮತ್ತು ಪ್ರಗತಿಪರರಿಗೆ ಸಂತಸ ತಂದಿದೆ.
ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ನಂತರ ಚುನಾವಣೆಗಳು ನಡೆದಿದ್ದರಿಂದ, ಪಲಿತಾಂಶದ ಕುರಿತು ವ್ಯಾಪಕ ಕುತೂಹಲ ಮೂಡಿತ್ತು. ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿಸ್ಸಾನಾಯಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎಡಪಕ್ಷಗಳೂ ಸೇರಿದಂತೆ 27 ಸಂಘಟನೆಗಳನ್ನು ಒಗ್ಗೂಡಿಸಿ ಎನ್.ಪಿ.ಪಿ. ಎಂಬ ರಾಷ್ಟ್ರೀಯ ಜನಾಂದೋಲನವನ್ನು ಹುಟ್ಟುಹಾಕಲಾಗಿದೆ.
ಸೆಪ್ಟೆಂಬರ್ 21ರಂದು ನಡೆದ ಚುನಾವಣೆಯಲ್ಲಿ ಶೇ. 70ಕ್ಕೂ ಹೆಚ್ಚು ಮತದಾನವಾಗಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಎನ್.ಪಿ.ಪಿ. ಅಭ್ಯರ್ಥಿ ದಿಸ್ಸಾನಾಯಕೆ ಶೇ. 42.3ರಷ್ಟು ಮತಗಳನ್ನು ಪಡೆದು ಪ್ರಥಮ ಸ್ಥಾನ, ಪ್ರತಿಪಕ್ಷದ ನಾಯಕ ಮತ್ತು ಎಸ್‌ಎಲ್ ಪಿ ಅಭ್ಯರ್ಥಿ ಸಜಿತ್ ಪ್ರೇಮದಾಸ ಶೇ. 32.76 ಮತಗಳನ್ನು ಪಡೆದು ಎರಡನೇ ಸ್ಥಾನ ಹಾಗೂ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಶೇ. 17.27ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಮೊದಲ ಸುತ್ತಿನಲ್ಲಿ ಶೇ. 50ಕ್ಕಿಂತ ಹೆಚ್ಚು ಮತ ಪಡೆದವರು ವಿಜೇತರಾಗುತ್ತಾರೆ. ಅಷ್ಟು ಮತಗಳು ಯಾರಿಗೂ ಸಿಗದ ಕಾರಣ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯ ನಂತರ ದಿಸ್ಸಾನಾಯಕೆ ಅವರು ಅತ್ಯಧಿಕ ಶೇ.55.89ರಷ್ಟು ಮತಗಳನ್ನು ಪಡೆದು ಮುನ್ನಡೆ ಸಾಧಿಸಿದರು. 1982 ರಲ್ಲಿ, ಶ್ರೀಲಂಕಾದ ಹೊಸ ಸಂವಿಧಾನದ ನಂತರ, ದಿಸ್ಸಾನಾಯಕೆ ಎರಡನೇ ಪ್ರಾಶಸ್ತ್ಯದ ಮತಗಳೊಂದಿಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಗೆದ್ದರು.
ಇದನ್ನೂ ಓದಿ: ಹೊರ ಗುತ್ತಿಗೆ ನೇಮಕಾತಿ ಏಜೆನ್ಸಿ ಬದಲಾಗಿ ವಿವಿಧೋದ್ದೇಶ ಸಹಕಾರ ಸಂಘ
2019ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಎನ್.ಪಿ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿಸ್ಸಾನಾಯಕೆ ಕೇವಲ ಶೇ. 3.16 ಮತಗಳನ್ನು ಪಡೆದಿದ್ದರು. ಅಂಥವರು ಈಗ ಅಧಿಕಾರಕ್ಕೆ ಬಂದಿರುವುದು ಸಣ್ಣ ವಿಚಾರವೇನಲ್ಲ. ಕಳೆದ ಎಂಟು ದಶಕಗಳಿಂದ ವಿವಿಧ ಪಕ್ಷಗಳನ್ನು ನೋಡಿದ ಜನರು ನಂಬಿಕೆ ಕಳೆದುಕೊಂಡು ಈ ಬಾರಿ ಎಡಪಂಥೀಯ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹಿಂದಿನ ಸರಕಾರಗಳ ದುರಾಡಳಿತದಿಂದ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಇದನ್ನು ವಿರೋಧಿಸಿ ಯುವಜನತೆ, ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ಜನ ಪರ್ಯಾಯದ ಬಗ್ಗೆ ಯೋಚಿಸಿ ಎಡಪಂಥೀಯ ಅಭ್ಯರ್ಥಿಗೆ ಮತ ಹಾಕಿರುವುದರಲ್ಲಿ ಅರ್ಥವಿದೆ. ಹಿಂದೆ, ಜೆವಿಪಿ ಎರಡು ಬಾರಿ ಶಸ್ತ್ರಾಸ್ತ್ರಗಳನ್ನು ಹಿಡಿದು ಕ್ರಾಂತಿಯನ್ನು ತರಲು ವಿಫಲವಾಗಿತ್ತು. ಈಗ ಮತದಾನದ ಮೂಲಕ ಅಧಿಕಾರ ನೀಡಲಾಗಿದೆ. ಈ ಗೆಲುವು ಅದರ ಇತಿಹಾಸದಲ್ಲಿ ಒಂದು ಮಹತ್ವದ ತಿರುವು.
ದಿಸ್ಸಾನಾಯಕೆ ಅವರು ಈ ಗೆಲುವನ್ನು ಬದಲಾವಣೆಗೆ ಜನತೆಯ ವಿಜಯ ಎಂದು ಕರೆದರು. ಶ್ರೀಲಂಕಾ ಅತ್ಯಂತ ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. 70 ವರ್ಷಗಳಿಗೂ ಹೆಚ್ಚು ಕಾಲ, ಎರಡು ಮಾಜಿ ಉದಾರವಾದಿ ಪಕ್ಷಗಳು ಶ್ರೀಲಂಕಾದ ಜನರ ಜೀವನದ ಎಲ್ಲಾ ಅಡಿಪಾಯಗಳನ್ನು ನಾಶಪಡಿಸಿವೆ. ಶ್ರೀಲಂಕಾವು ನವ-ಉದಾರವಾದಿ ನೀತಿಗಳ ತೀವ್ರ ಅನುಷ್ಠಾನದಿಂದಾಗಿ ಸಾಮಾಜಿಕ ಉದ್ವಿಗ್ನತೆಗಳು ಪ್ರಬಲವಾಗಿರುವ ದೇಶವಾಗಿದೆ. ದಕ್ಷಿಣ ಏಷ್ಯಾ ಮತ್ತು ತೃತೀಯ ಜಗತ್ತಿನ ಇತರ ಹಲವು ದೇಶಗಳಂತೆಯೇ ಬಡತನ, ಸಂಕಷ್ಟ ಮತ್ತು ನಿರುದ್ಯೋಗದಿಂದ ಜನರು ನರಳುತ್ತಿದ್ದಾರೆ.
ಪಾವತಿ ಬಿಕ್ಕಟ್ಟು, ಹೆಚ್ಚಿರುವ ಬೆಲೆಗಳು, ನಿರುದ್ಯೋಗ ಮತ್ತು IMF ಸಾಲದಿಂದ ಶ್ರೀಲಂಕಾವನ್ನು ಹೊರತರುವುದು ದಿಸ್ಸಾನಾಯಕೆ ಮುಂದಿರುವ ತಕ್ಷಣದ ಸವಾಲು. ಅದಾನಿ ಎನರ್ಜಿ ಪ್ರಾಜೆಕ್ಟ್ ರದ್ದತಿ, ಐಎಂಎಫ್ ಜೊತೆ ಹಿಂದಿನ ಸರಕಾರ ಸಹಿ ಮಾಡಿದ್ದ 290 ಕೋಟಿ ಡಾಲರ್ ಪಾವತಿ ಒಪ್ಪಂದದ ಪರಾಮರ್ಶೆ, ಹೀಗೆ ಹಲವು ಭರವಸೆಗಳನ್ನು ಜನತೆಗೆ ನೀಡಲಾಗಿತ್ತು. ಇವುಗಳನ್ನು ಅನುಷ್ಠಾನಗೊಳಿಸಬೇಕು.
ನರೇಂದ್ರ ಮೋದಿ ಮತ್ತು ಅವರ ಕಚೇರಿಯ ನೇರ ಮಧ್ಯಪ್ರವೇಶದಿಂದ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿ ವಿದ್ಯುತ್ ಯೋಜನೆಯನ್ನು ಮಾರಿ ಅದಾನಿಗೆ ನೀಡಿದರು ಎಂಬ ಆರೋಪಗಳಿದ್ದವು. ದಿಸಾನಾಯಕ್ ಅವರ ಗೆಲುವು ನಮ್ಮ ದೇಶದಲ್ಲಿ ಬಿಜೆಪಿ ಮತ್ತು ಮೋದಿಯವರಿಗೆ ಮುಜುಗರ ತಂದೊಡ್ಡಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಕಮ್ಯುನಿಸ್ಟರು ಮತ್ತು ಎಡಪಂಥೀಯ ಶಕ್ತಿಗಳ ಕೆಲಸ ಮುಗಿದುಹೋಗಿದೆ, ಅವರು ಮತ್ತೆ ಚೇತರಿಸಿಕೊಂಡು ಅಧಿಕಾರಕ್ಕೆ ಬರುವ ಅವಕಾಶವೇ ಇಲ್ಲ ಎಂಬ ಹತಾಶೆಯಲ್ಲಿದ್ದವರಿಗೆ ಶ್ರೀಲಂಕಾದಲ್ಲಿ ಎಡಪಂಥೀಯ ಅಭ್ಯರ್ಥಿಯ ಆಯ್ಕೆ ಉತ್ತೇಜನಕಾರಿಯಾಗಿದೆ.
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಕಮ್ಯುನಿಸ್ಟರ ಅಗತ್ಯವಿಲ್ಲ ಎಂದು ವ್ಯಾಖ್ಯಾನಿಸುವ ಬಂಡವಾಳಶಾಹಿ ಬುದ್ಧಿಜೀವಿಗಳಿಗೆ ಆಘಾತವಾಗಿದೆ. ಲ್ಯಾಟಿನ್ ಅಮೇರಿಕಾದಲ್ಲಿ ಎಡಪಂಥೀಯರ ವಿಜಯಗಳು, ದಕ್ಷಿಣ ಆಫ್ರಿಕಾದ ಆಡಳಿತ ಒಕ್ಕೂಟದಲ್ಲಿ ಕಮ್ಯುನಿಸ್ಟರು, ನೇಪಾಳದಲ್ಲಿ ತಡೆಯಲಾಗದ ಶಕ್ತಿಯಾಗಿ ಎಡಪಂಥೀಯರು ಇದ್ದಾರೆ. ಈಗ ಶ್ರೀಲಂಕಾದ ಸರದಿ. ಅಧ್ಯಕ್ಷರ ಚುನಾವಣೆ ಹಾಗೂ ಸಂಸತ್ ಚುನಾವಣೆಯಲ್ಲಿ ಎನ್.ಪಿ.ಪಿ. ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮಾತ್ರ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯುತ್ತವೆ. ದಿಸ್ಸಾನಾಯಕೆ ಅವರು ಶ್ರೀಲಂಕಾ ಎದುರಿಸುತ್ತಿರುವ ಚುನಾವಣಾ ಭರವಸೆಗಳು ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಆಶಿಸೋಣ.
ಇದನ್ನೂ ನೋಡಿ: ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ- ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳJanashakthi Media