ದೆಹಲಿ ವಿಧಾನಸಭೆ ಚುನಾವಣೆ: ಕಣದಲ್ಲಿ 699 ಅಭ್ಯರ್ಥಿಗಳು

ವದೆಹಲಿ: 2025ರ ದೆಹಲಿ ವಿಧಾನಸಭೆ ಚುನಾವಣೆ ಕಣ ಅಂತಿಮವಾಗಿದ್ದೂ, 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಅಂತಿಮವಾಗಿ ಕಣದಲ್ಲಿ 699 ಅಭ್ಯರ್ಥಿಗಳಿದ್ದಾರೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.

ಜನವರಿ 20ರ ಸೋಮವಾರ ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 1522 ನಾಮಪತ್ರಗಳ ಪೈಕಿ 487 ನಾಮಪತ್ರಗಳು ತಿರಸ್ಕಾರವಾಗಿವೆ, ಅಂತಿಮವಾಗಿ 70 ಕ್ಷೇತ್ರಗಳಲ್ಲಿ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜ್ಯದ ಆಡಳಿತ ಪಕ್ಷ ಎಎಪಿ. ಈಗಾಗಲೇ 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಎಎಪಿಗೆ ಎದುರಾಳಿಗಳು.

ಇದನ್ನೂ ಓದಿ: ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ : ಹಲವು ಅಂಗಡಿ-ಮುಂಗಟ್ಟು ಮಾಲೀಕರು ಬೀದಿಗೆ

ಎಎಪಿ, ಬಿಜೆಪಿ, ಕಾಂಗ್ರೆಸ್ ಮೂರು ಪಕ್ಷಗಳು ಯಾವುದೇ ಮೈತ್ರಿಕೂಟ ಮಾಡಿಕೊಳ್ಳದೇ ಏಕಾಂಗಿಯಾಗಿ ಜನರ ಮುಂದೆ ಹೋಗಿವೆ. ಎಎಪಿ, ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿದ್ದವು. ಆದರೆ ದೆಹಲಿ ಚುನಾವಣೆಯನ್ನು ಎರಡೂ ಪಕ್ಷಗಳು ಏಕಾಂಗಿಯಾಗಿ ಎದುರಿಸುತ್ತಿವೆ.

ಪ್ರಮುಖ ಸ್ಪರ್ಧಿಗಳು: ದೆಹಲಿ ಚುನಾವಣೆಯಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರ್ವೇಶ್ ವರ್ಮಾ, ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಅಭ್ಯರ್ಥಿಗಳು.

ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಕಜಿ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಕ್ಷೇತ್ರದಲ್ಲಿ ರಮೇಶ್ ಬಿಧೂರಿ, ಕಾಂಗ್ರೆಸ್‌ನಿಂದ ಅಲ್ಕಾ ಲಾಂಬ ಅಭ್ಯರ್ಥಿಗಳು. ಈ ಬಾರಿಯ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿ ಎಂದು ಅತಿಶಿ ಈಗಾಗಲೇ ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಚಾರ ರಾಜ್ಯದಲ್ಲಿ ಬಿರುಸು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 3 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 15 ಸಮಾವೇಶಗಳನ್ನು ನಡೆಸಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಸಹ ಹಲವು ಸಮಾವೇಶಗಳನ್ನು ಉದ್ದೇಶಿಸಿ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್, ಬಿಜೆಪಿಯ ಪ್ರಕಾರ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಆದ್ದರಿಂದ ಎರಡೂ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು. ಎಎಪಿ ಹ್ಯಾಟ್ರಿಕ್ ಬಾರಿಸುವುದನ್ನು ತಪ್ಪಿಸಬೇಕು ಎಂದು ತಂತ್ರ ರೂಪಿಸಿ ಚುನಾವಣಾ ಕಣಕ್ಕಿಳಿದಿವೆ.

2008ರಲ್ಲಿ 43 ಸೀಟುಗಳಲ್ಲಿ ಗೆದ್ದು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ 2015ರಲ್ಲಿ ಎಎಪಿಗೆ ಅಧಿಕಾರ ಬಿಟ್ಟುಕೊಟ್ಟಿತ್ತು. ಪಕ್ಷ 2020ರ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲು ಸಹ ವಿಫಲವಾಗಿತ್ತು. ಆದ್ದರಿಂದ ಈ ಬಾರಿ 20 ಸೀಟುಗಳ ಮೇಲೆ ಹೆಚ್ಚು ಗಮನ ಹರಿಸಿ ಬೂತ್ ಮಟ್ಟದಲ್ಲಿ ಪ್ರಚಾರವನ್ನು ಪಕ್ಷ ನಡೆಸುತ್ತಿದೆ.

ಇದನ್ನೂ ನೋಡಿ: ಬಹುತ್ವ ಸಂಸ್ಕೃತಿ ಭಾರತೋತ್ಸವ – 2025 | ಸೌಹಾರ್ದ ಜಾಥಾ – ಬಹಿರಂಗ ಸಭೆ

Donate Janashakthi Media

Leave a Reply

Your email address will not be published. Required fields are marked *