ಬೆಂಗಳೂರು: ನಗರದಲ್ಲಿನ ವಿರ್ಗೋನಗರದ ಈಸ್ಟ್ ಪಾಯಿಂಟ್ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದಾರೆಂದು ಆರೋಪಿಸಿ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರನ್ನು ಅವಮಾನಿಸಿರುವ ಸೋನು ನಿಗಮ್‌ರನ್ನು ಕನ್ನಡ ಚಿತ್ರರಂಗದಿಂದಲೇ ನಿರ್ಬಂಧಿಸಬೇಕು, ಅವರನ್ನು ಬಂಧಿಸಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.
ಇದಕ್ಕೆ ಧ್ವನಿಗೂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾರೆ. ಕರ್ನಾಟಕ ಪೊಲೀಸರು ಈ ಕೂಡಲೇ ಸೋನು ನಿಗಮ್ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗುತ್ತದೆ? ಕನ್ನಡದ ಅನ್ನ ತಿಂದು ಕೊಬ್ಬಿರುವ ಸೋನು ನಿಗಮ್ ಇನ್ನು ಮುಂದೆ ಕರ್ನಾಟಕದಲ್ಲಿ ಶೋಗಳನ್ನು ನಡೆಸಲು ಬಿಡುವುದಿಲ್ಲ.
ಕರ್ನಾಟಕದ ಯಾವ ನಿರ್ಮಾಪಕರೂ ಇವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವರ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 2025ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ : ₹2.37 ಲಕ್ಷ ಕೋಟಿ ಸಂಗ್ರಹ
ಸೋನು ನಿಗಮ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಮಾಡಿರುವುದಷ್ಟೇ ಅಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರದಂತಿದೆ. ಹೀಗಾಗಿ ಅವರ ಮೇಲೆ ಕೂಡಲೇ ದೂರು ದಾಖಲಾಗಬೇಕು.
ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ. ಇಂತಹ ಕೃತಘ್ನರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ಕೈಬಿಡಬೇಕು ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನೆಲದ ಶ್ರೇಷ್ಠತೆ ಈ ಬಾಡಿಗೆ ಗಾಯಕನಿಗೆ ಹೇಗೆ ತಿಳಿದೀತು: – ಸಂಭಾಷಣೆಕಾರ ಮಾಸ್ತಿ
ಇವತ್ತು ವೇದಿಕೆಯ ಮೇಲಿದ್ದ ಈತನನ್ನು ಕನ್ನಡ ಹಾಡು ಹಾಡೆಂದು ಕೇಳಿದಾಗ ‘ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು ಇದೇ ಕಾರಣಕ್ಕೆ ‘ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ವರುಷಗಳಿಂದ ಕನ್ನಡಿಗರು ಯಾವ ಕಂಠವನ್ನು ಕೊಂಡಾಡುತ್ತಿದ್ದರೋ ಇಂದು ಅದೇ ಕಂಠ ತುಚ್ಚವಾಗಿ ಅಪಮಾನಿಸಿದೆ.
ಇಲ್ಲಿನ ಜನರು ತೋರೋ ಪ್ರೀತಿ, ನೀಡೋ ಗೌರವ ಕಂಡು ವಿಶ್ವವಿಖ್ಯಾತ ಗಾಯಕ ಮೇರುಪ್ರತಿಭೆ ಶ್ರೀ ಎಸ್ ಪಿ ಬಾಲ ಸುಬ್ರಮಣ್ಯಮ್ ರವರು ‘ನನಗೆ ಮುಂದಿನ ಜನುಮ ಅಂತ ಇದ್ದರೆ ಅದು ಕನ್ನಡ ನೆಲದಲ್ಲಿಯೇ ಇರಲಿ ನಾನು ಕನ್ನಡಿಗನಾಗಿಯೇ ಹುಟ್ಟಬೇಕು ‘ ಎಂದು ನುಡಿದಿದ್ದರು. ಇದು ಈ ನೆಲದ ಶ್ರೇಷ್ಠತೆ ಮತ್ತು ಮಹಾನುಭಾವ ಎಸ್ ಪಿ ಬಾಲ ಸುಬ್ರಮಣ್ಯಮ್ ರವರ ಜೇಷ್ಠತೆ. ಇದೆಲ್ಲಾ ಈ ಬಾಡಿಗೆ ಗಾಯಕ ಸೋನು ನಿಗಮ್ಮನಿಗೆ ಹೇಗೆ ತಾನೇ ತಿಳಿಯಬೇಕು. ದಿಕ್ಕಾರವಿರಲಿ ಈ ಅಪ್ರಭುದ್ದನ ಅರಿವಿಗೆ.
ಆಗಿದ್ದೇನು?
ಬೆಂಗಳೂರಿನ ಕಾಲೇಜೊಂದರಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದರು. ಆಗ ಯುವಕನೊಬ್ಬ ಕನ್ನಡ ಕನ್ನಡ ಎಂದು ಪಟ್ಟುಹಿಡಿಯುವಂತೆ ಬೇಡಿಕೆ ಇಟ್ಟ. ಯುವಕನ ವರ್ತನೆಯಿಂದ ಬೇಸತ್ತ ಸೋನು ನಿಗಮ್ ತಾಳ್ಮೆಕಳೆದುಕೊಂಡು ಮಾತನಾಡಿದ್ದರು.
ಇದನ್ನೂ ನೋಡಿ: ಮೇ ದಿನದ ವಿಶೇಷ | ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತದೆ? Janashakthi Media