ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಬೇಸತ್ತ ಸಾರಿಗೆ ಚಾಲಕ ಆತ್ಮಹತ್ಯೆ: ಸದನದಲ್ಲಿ ಸುಧೀರ್ಘ ಚರ್ಚೆ

ಬೆಂಗಳೂರು: ವಿಧಾನಸಭಾ ಅಧಿವೇಶನದ ಸದನ ಆರಂಭಗೊಳ್ಳುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಂಧುತ್ವ ಪ್ರಮಾಣ ಸಿಗದೇ ಆತ್ಮಹತ್ಯೆಗೆ ಶರಣಾದ ಕೆಎಸ್‌ಆರ್‌ಟಿಸಿ ಚಾಲಕ ಓಂಕಾರ್‌ ಶೇರಿಕರ್‌ ಅವರ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಿನ್ನೆಯಷ್ಟೇ(ಮಾ.13) ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಗ್ರಾಮದ ಗೊಂಡಾ ಸಮಾಜದ ಓಂಕಾರ್ ರೇವಣ್ಣಪ್ಪ ಶೇರಿಕರ್ ಎಂಬುವ ಕೆಎಸ್ಆರ್‌ಟಿಸಿ ಚಾಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ‌ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ ಓಂಕಾರ್ ರೇವಣಪ್ಪ ಅವರು ಕೆಲಸಕ್ಕೆ ಸೇರಿ ಎಂಟು ವರ್ಷಗಳಾದರೂ ಸಿಂಧುತ್ವ ಪ್ರಮಾಣಪತ್ರ ಸಿಗದೆ ಜಿಲ್ಲಾಧಿಕಾರಿ, ತಾಲೂಕು ಕಚೇರಿಗೆ ಅಲೆಯುತ್ತಲೇ ಇದ್ದರು. ಈ ಮಧ್ಯೆ ಕೆಎಸ್ಆರ್‌ಟಿಸಿ ಡಿಪೋದಿಂದ ಪ್ರಮಾಣ ಪತ್ರ ಸಲ್ಲಿಸುವಂತೆ ಮೇಲಿಂದ ಮೇಲೆ ನೋಟಿಸ್ಸುಗಳನ್ನು ನೀಡಲಾಗಿತ್ತು. ಈ ಎಲ್ಲಾ ಕಿರುಕುಳಗಳಿಂದ ನೊಂದ ಆತ ಆತ್ಮಹತ್ಯೆಗೆ ಶರಣಾಗಿನೆ ಎಂದರು.

ಸರ್ಕಾರ 2021ರ ಜನವರಿ 16ರಂದು ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳು ವರದಿ ಪಡೆದು ಅದನ್ನು ಪರಿಶೀಲನೆ ಮಾಡಿ, ನಂತರ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಿದೆ. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ವರದಿ ಪಡೆದು ನೀಡಲಾಗುತ್ತಿತ್ತು. ಈ ಸಿಆರ್‌ಇ ಸೆಲ್ ಜನರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇದೆ. ಸರ್ಕಾರ ಮತ್ತೆ ಅವರಿಗೆ ಅಧಿಕಾರ ನೀಡಿ ಜನರನ್ನು ಇನ್ನಷ್ಟು ಸಮಸ್ಯೆಗೆ ನೂಕಿದೆ ಎಂದರು.

2021 ಜನವರಿಯಲ್ಲಿ ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕು. ಗೊಂಡ, ರಾಜಗೊಂಡ ಸಮುದಾಯದವರು ಎಸ್.ಟಿ ಮೀಸಲಾತಿ ಅಡಿ ಬರುತ್ತಾರೆ, ಕೋಲಿ, ಟೋಕ್ರೆ ಈ ಸಮಾಜದ ಜನರಿಗೂ ಮೀಸಲಾತಿ ಪತ್ರ ಸಿಗಬೇಕು. ಈಗ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ ಓಂಕಾರ್ ರೇವಣಪ್ಪ ಅವರ ಕುಟುಂಬದವರಿಗೆ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಹೊಸ ಆದೇಶ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ, ಈ ಹಿಂದೆ ನಾನು ಸಹ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಎರಡು ಪತ್ರ ಬರೆದಿದ್ದೆ. ಸರ್ಕಾರ ಆದೇಶ ಹಿಂಪಡೆದಿದ್ದರೆ ಇನ್ನಷ್ಟು ಅಮಾಯಕ ಜನರ ಸಾವಿಗೆ ಕಾರಣರಾಗದಂತೆ ಕ್ರಮವಹಿಸಿ ತಕ್ಷಣವೇ ಗಮನಿಸಬೇಕೆಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ಜಿಲ್ಲಾಧಿಕಾರಿ ಸಿಂಧುತ್ವ ಪ್ರಮಾಣ ಪತ್ರ ನೀಡುತ್ತಿದ್ದರು. ಆದರೆ 12 ಜಾತಿಗಳಿಗೆ ಪ್ರಮಾಣ ಪತ್ರ ನೀಡುವ ವಿಚಾರ ಮಾಡಲಾಗಿತ್ತು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ಮಾತ್ರ ಪತ್ರ ನೀಡಲಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ಸಂಬಂಧ ಸುಪ್ರೀಂ ಆದೇಶ ಮಾಡಿದೆ. ಆ ಆದೇಶದಂತೆ ಗೊಂಡಾ ಸಮುದಾಯಕ್ಕೆ ಅನ್ವಯಿಸುತ್ತಾ? ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರ ಹೊಸ ಆದೇಶದ ಬಗ್ಗೆ ಕಾನೂನು ಸಲಹೆ ಪಡೆಯಲಿದೆ. ಕಾನೂನು ಸಲಹೆ ಪಡೆದು ಕ್ರಮಕೈಗೊಳ್ಳಲಿದೆ. ಮೊದಲಿನ ವ್ಯವಸ್ಥೆ ಜಾರಿ ಮಾಡಲು ಆಗುತ್ತಾ ಎಂದು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದೆ.

ಮತ್ತೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದನ್ನು ಕಾನೂನಾತ್ಮಕವಾಗಿ ಕ್ರಮತೆಗೆದುಕೊಳ್ಳುತ್ತೇವೆ. ಮಾನವೀಯ ಆಧಾರದಲ್ಲಿ ಸರ್ಕಾರ ಪರಿಹಾರ ಕೊಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎಂಟು ಲಕ್ಷ ರೂ. ಕೊಟ್ಟರೂ ಸಿಗಲಿಲ್ಲಜಾತಿ ಪ್ರಮಾಣ ಪತ್ರ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಕೆಕೆಆರ್‌ಟಿಸಿ) ಬಸ್ ಚಾಲಕ ಓಂಕಾರ್ ಶೇರಿಕರ್ (40) ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಅವರು, ಭಾಲ್ಕಿ ಡಿಪೋನಲ್ಲಿ ಕಳೆದ 9 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರವೂ ಕರ್ತವ್ಯ ಹಾಜರಾಗಿದ್ದರು. ಅವರು, 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಸಹ ಎಸ್‌ಟಿ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಸಿಕ್ಕಿಲ್ಲ ಎಂದು ಸಂಸ್ಥೆಯು ಖಾಯಂಗೊಳಿಸದೆ, ಈವರೆಗೂ ಪ್ರೊಬೇಷನರಿಯಾಗಿಯೇ ದುಡಿಯುತ್ತಿದ್ದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯಿಂದ ಕುಟುಂಬವನ್ನು ಉತ್ತಮ ವೇತನವಿಲ್ಲದೆ, ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮಾಜಕಲ್ಯಾಣ ಇಲಖಾ ಅಧಿಕಾರಿಗಳು ಮಾತ್ರ, ಎಸ್‌ಟಿ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪಡೆಯುವುದಕ್ಕಾಗಿ ಸುಮಾರು 8 ಲಕ್ಷ ರೂಪಾಯಿವರೆಗೂ ಖರ್ಚು‌ ಮಾಡಿದ್ದರು. ಆದರೂ ಸಿಂಧುತ್ವ ನೀಡದೇ ಅಧಿಕಾರಿಗಳು ಸತಾಯಿಸಿದ್ದರಿಂದ ಓಂಕಾರ್‌ ಅಂತಿಮವಾಗಿ ಆತ್ಮಹತ್ಯೆಯ ದಾರಿಯನ್ನು ಹಿಡಿದರು.

Donate Janashakthi Media

Leave a Reply

Your email address will not be published. Required fields are marked *