ಬೆಂಗಳೂರು, ಫೆ.01: 2021-22 ರ ಕೇಂದ್ರ ಬಜೆಟ್ ಶಿಕ್ಷಣದ ಖಾಸಗೀಕರಣ ಹಾಗೂ ಕೇಂದ್ರೀಕರಣವನ್ನು ತೀವ್ರಗೊಳಿಸುವ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದ್ದು ಇದು ಶಿಕ್ಷಣ ವಿರೋಧಿ ಬಜೆಟ್ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಆರೋಪಿಸಿದೆ.
2018 ರ ಹಣಕಾಸು ವರ್ಷದಲ್ಲಿ ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್ ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿಯನ್ನು ಸಂಗ್ರಹ ಮಾಡಿತ್ತು. ಆದರೆ ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಭಿವೃದ್ದಿಗೆ ವೆಚ್ಚ ಮಾಡದೆ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎಂದು ಎಸ್.ಎಫ್.ಐ ಆರೋಪಿಸಿದೆ.
‘ಯುಜಿಸಿ’ ರದ್ದುಗೊಳಿಸಿ ‘ಉನ್ನತ ಶಿಕ್ಷಣ ಆಯೋಗ’ (HEC) ರಚಿಸಲು ಈ ವರ್ಷ ಚಾಲನೆ ನೀಡಿದೆ. ಶಿಕ್ಷಣದ ಕೇಂದ್ರೀಕರಣಕ್ಕೂ ಚಾಲನೆ ನೀಡಿದೆ. ಇನ್ನು ವಿಶ್ವ ವಿದ್ಯಾಲಯಗಳ ಧನ ಸಹಾಯ ಮತ್ತು ಅನುದಾನವು ನೇರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ಸುಪರ್ದಿಗೆ ಹೋಗುತ್ತದೆ. ಇದು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಶಿಕ್ಷಣಕ್ಕೆ ಇನ್ನಷ್ಟು ತೀವ್ರ ಸಂಕಷ್ಟಗಳನ್ನು ತಂದೊಡ್ಡಲಿದೆ. ಶಿಕ್ಷಣಕ್ಕೆ ಕಳೆದ ಬಜೆಟ್ ಅಂದಾಜು 99,312 ಕೋಟಿ ನೀಡಲಾಗಿತ್ತು. ಈ ಬಾರಿ ರೂ. 93,224 ಕೊಟಿಗೆ ಇಳಿಸಲಾಗಿದೆ.
ಮುಂದಿನ 6 ವರ್ಷಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗಾಗಿ 35,219 ಕೋಟಿ ಹಣ ವೆಚ್ಚ ಮಾಡಲಾಗುವುದು ಎಂದು ಬಜೆಟ್ ಘೋಷಣೆ ಮಾಡಿದ್ದಾರೆ. ಇದು ಎಂತಹ ವಂಚನೆ, ಮೋಸವೆಂದರೆ, ಇದು 1944 ರಿಂದ ಜಾರಿಯಲ್ಲಿರುವ ಪ.ಜಾತಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆಯಾಗಿದೆ. ಇದರಲ್ಲಿ ಹೊಸದೇನೂ ಇಲ್ಲ ದೇಶದಾದ್ಯಂತ ಸುಮಾರು 57 ಲಕ್ಷ ಪ.ಜಾತಿ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿದರೆ. ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷ 10,000 ರೂ, ಪ್ರತಿ ತಿಂಗಳು 858 ರೂ. ದೊರಕುತ್ತದೆ. ಈ ಕೇವಲ ಹಣದಿಂದ ಆ ವಿದ್ಯಾರ್ಥಿಗೆ ಯಾವ ಆರ್ಥಿಕ ಅನುಕೂಲವೂ ದೊರಕುವುದಿಲ್ಲ. ಮತ್ತು ಈ ಹಣವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಕೊಡಬೇಕು. ಆದರೆ ರಾಜ್ಯ ಕೊಡುವುದಿಲ್ಲ, ಹಾಗಾಗಿ ಕೇಂದ್ರವೂ ಕೊಡುವುದಿಲ್ಲ. ಇಲ್ಲಿಯವರೆಗೆ ವಿದ್ಯಾರ್ಥಿಗಳು ಇಂತಹದ್ದೆ ಸಮಸ್ಯೆಯಲ್ಲಿ ನರಳುತ್ತಾ ಬಂದಿದ್ದಾರೆ.
ಇದು ಬಡ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚನೆ ಮಾಡುವ ಶಿಕ್ಷಣ ವಿರೋಧಿ ಬಜೆಟ್ ಆಗಿದೆ. ದೇಶದ ಸಮಗ್ರ ಶಿಕ್ಷಣ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್ ನಲ್ಲಿ ಕನಿಷ್ಠ 10% ಮೀಸಲಿಡಬೇಕು ಎಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡದಿರುವುದು ಅನಿರೀಕ್ಷಿತವೇನಲ್ಲ. ದುಡ್ಡಿದ್ದವರಿಗೆ ಶಿಕ್ಷಣವನ್ನು ಮಾರಾಟ ಮಾಡುವ ಶಿಕ್ಷಣದ ಖಾಸಗೀಕರಣ ಕೇಂದ್ರೀಕರಣ ತೀವ್ರಗೊಳಿಸುವ ಉದ್ದೇಶಗಳು ಎದ್ದು ಕಾಣುತ್ತಿವೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ, ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ದಿಲೀಪ್, ಗಾಯಿತ್ರಿ ಹಾಗೂ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಾಳ ಆರೋಪಿಸಿದರು.