ಮೈಸೂರು: “ಕಾಂಗ್ರೆಸ್ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈಗ ನಾನೊಂದು ತೀರ, ನೀನೊಂದು ತೀರ ಆಗಿದ್ದಾರೆ” ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ವರ್ದಂತಿಯ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುವಾಗ “ರಾಜ್ಯ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ರಿಮೋಟ್ ಕಂಟ್ರೋಲ್ ಸಿಎಂ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
”ಪಾಪ ಡಿ ಕೆ ಶಿವಕುಮಾರ್ ಅವರಿಗೆ ತಾನು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬುದು ಬಹಳ ವರ್ಷದ ಕನಸು. ಅದಕ್ಕಾಗಿ ತುಂಬಾ ಒದ್ದಾಡುತ್ತಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿಯೇ ಸರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ನಲ್ಲಿ ಬಿಡುತ್ತಿಲ್ಲ. ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅವರು ಮತ್ತೊಬ್ಬರ ತಟ್ಟೆ ನೋಡುವ ಮೊದಲು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದನ್ನು ನೋಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
ಜಿಎಸ್ಟಿ ರಾಜ್ಯದ ಪಾಲು ಕೊಡುತ್ತಿದೆ;
ದೇಶದ ಎಲ್ಲಾ ಪಕ್ಷಗಳು, ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಸೇರಿ ಪಾರ್ಲಿಮೆಂಟಿನಲ್ಲಿ ಜಿಎಸ್ಟಿಗೆ ಸಂವಿಧಾನಾತ್ಮಕವಾಗಿಯೇ ಅನುಮೋದನೆ ನೀಡಿದ್ದಾರೆ. ಜಾರಿಗೆ ಬಂದು ಆವಾಗಲೇ ಅದು ಐದು ವರ್ಷ ಎಂದು ನಿಗದಿ ಮಾಡಲಾಗಿತ್ತು. ಕೋವಿಡ್ ಬಂದ ಸಂದರ್ಭದಲ್ಲಿ ಯಾವುದೇ ರೀತಿಯ ಜಿಎಸ್ಟಿ ಸಂಗ್ರಹ ಆಗಿರಲಿಲ್ಲ. ಸಂಗ್ರಹವಾದರೆ ಮಾತ್ರವೇ ಅದರಲ್ಲಿ ಪಾಲು ಕೊಡಬೇಕು ಎಂದಿದೆ. ಆದರೆ, ತೆರಿಗೆ ಸಂಗ್ರಹ ಆಗದಿದ್ದರೂ ಕೋವಿಡ್ ವೇಳೆ ಕೇಂದ್ರ ಸರ್ಕಾರ ಪರಿಹಾರ ನೀಡಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲನ್ನು ನಮಗೆ ಕೊಡುತ್ತಿದ್ದಾರೆ. ಮೊನ್ನೆ ಕೂಡ ಬಾಕಿ ಇದ್ದ 8,800 ಕೋಟಿ ರೂ. ಕೊಟ್ಟಿದ್ದಾರೆ. ಬಾಕಿ ಹಣವನ್ನು ಕೊಡುತ್ತಾರೆ ಅದರಲ್ಲಿ ಏನು ತೊಂದರೆ ಏನು ಇಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ:
ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ಯಾವಾಗ ನಡೆಯಲಿದೆ ? ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ”ಜುಲೈ 22ಕ್ಕೆ ಚುನಾವಣೆ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ವಾರ್ಡುಗಳ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿ ವರದಿಯನ್ನು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿ ನಂತರ ಅಲ್ಲಿನ ನಿರ್ದೇಶನದ ಅನ್ವಯ ಚುನಾವಣೆ ನಡೆಸಲಾಗುವುದು. ಮೈಸೂರು ಮೇಯರ್ ಚುನಾವಣೆಯೂ ಕೂಡ ಮೀಸಲಾತಿ ನಿಗದಿ ವರದಿ ಬಂದ ಬಳಿಕ ಚುನಾವಣೆ ಪ್ರಕ್ರೀಯೆ ಪ್ರಾರಂಭಿಸಲಾಗುವುದು” ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಬಿನಿ ಮತ್ತು ಕೆಆರ್‌ಎಸ್ ನಲ್ಲಿ ಬಾಗಿನ ಅರ್ಪಿಸುವರು.