ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆನು 9 ದಿನ ಅಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಪ್ರತಿನಿತ್ಯ ರಾಜ್ಯ ಸಂಚರಿಸಿ ರೋಡ್ ಶೋ, ರ್ಯಾಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳನ್ನು ಕೇಳಿದ್ದಾರೆ.
ಅದರಲ್ಲೂ ಪ್ರಮುಖವಾಗಿ ನರೇಂದ್ರ ಮೋದಿಯವರ ಬೆಂಗಳೂರು ರೋಡ್ ಶೋ ನಿನ್ನೆ ಹಾಗೂ ಇವತ್ತು ಭಾರೀ ಸದ್ದು ಮಾಡಿತ್ತು. ಲಕ್ಷಾಂತರ ಜನ ರೋಡ್ ಶೋ ಗೆ ಸಾಕ್ಷಿಯಾಗಿ ಸಂಭ್ರಮಿಸಿದ್ದರು. ಆದರೆ ಕೇವಲ ಚುನಾವಣಾ ಸಂದರ್ಭದಲ್ಲಿ ಬರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲಿನ ಸಮಸ್ಯೆಗಳ ಕುರಿತು ಹಾಗೂ ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ರ್ಯಾಂಕ್ ಕುಸಿದಿರುವ ಕುರಿತು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ 9 ಪ್ರಶ್ನೆಗಳು
ಪ್ರಶ್ನೆ 1: ಪ್ರಧಾನ ಮಂತ್ರಿಯವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿ ಬಾಯ್ತುಂಬಾ ಮಾತನಾಡುತ್ತಿದ್ದಾರೆ. ಆದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಪ್ರಧಾನಿಗಳಿಗೇ ಪತ್ರ ಬರೆಯುವಷ್ಟು ಭ್ರಷ್ಟಾಚಾರ ಇಲ್ಲಿ ತಾರಕಕ್ಕೇರಿದೆ.
ಪ್ರಶ್ನೆ 2 : ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಾನಗಳ ನಗರ, ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ, ಸ್ಟಾರ್ಟ್ಅಪ್ ರಾಜಧಾನಿ ಎಂದೆಲ್ಲ ಖ್ಯಾತಿ ಗಳಿಸಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಗುಂಡಿಬಿದ್ದ ರಸ್ತೆಗಳು, ನೆರೆನೀರಿನಲ್ಲಿ ಮುಳುಗುವ ಮನೆಗಳು, ಅಪರಾಧಿಗಳ ಜಗತ್ತಿನ ರಾಜಧಾನಿ ಎಂಬ ಕುಖ್ಯಾತಿ ಗಳಿಸಿದೆ.
ಪ್ರಶ್ನೆ 3 : ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್ ಒನ್ ತಾಣವಾಗಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಗರಗಳ ಪಟ್ಟಿಯಲ್ಲಿ ಹದಿನೇಳನೇ ಸ್ಥಾನಕ್ಕೆ ಕುಸಿದಿದೆ.
ಪ್ರಶ್ನೆ 4 : ಅಪರಾಧ ಸಂಖ್ಯೆಗಳ ಹೆಚ್ಚಳ, ಕುಸಿದುಬಿದ್ದಿರುವ ಮೂಲಸೌಕರ್ಯ ವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳಿಂದಾಗಿ ಜಾಗತಿಕ ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರು ಕನಿಷ್ಠ ಶ್ರೇಣಿಗೆ ತಲುಪಿದೆ.
#AnswerMadiModi pic.twitter.com/Yyapd5BqXD
— Siddaramaiah (@siddaramaiah) May 7, 2023
ಪ್ರಶ್ನೆ 5 : ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಬಿದ್ದ ರಸ್ತೆಗಳಿಂದಾಗಿ 31 ಮಂದಿಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಕೇವಲ ರಸ್ತೆ ಗುಂಡಿಮುಚ್ಚಲು ರೂ.7,121 ಖರ್ಚು ಮಾಡಿದರೂ ಇನ್ನೂ ನೂರಾರು ಹಳೆಯ ಗುಂಡಿಗಳು ಉಳಿದಿವೆ, ಹೊಸ ಗುಂಡಿಗಳು ತಯರಾಗುತ್ತಿವೆ.
ಪ್ರಶ್ನೆ 6 : ಶೇಕಡಾ 48ರಷ್ಟು ವಾಹನದಟ್ಟಣೆಯ ಪ್ರಮಾಣದಿಂದಾಗಿ ಬೆಂಗಳೂರು ನಗರ ದೇಶದಲ್ಲಿ ಎರಡನೇ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಒಳಪಟ್ಟಿದೆ. ಇದರಿಂದಾಗಿ ನಗರವಾಸಿಗಳು ಮನೆಗಿಂತ ಹೆಚ್ಚಿನ ಸಮಯ ರಸ್ತೆಯಲ್ಲಿ ಕಳೆಯುವಂತಾಗಿದೆ.
ಪ್ರಶ್ನೆ 7 : ಎನ್.ಸಿ.ಆರ್.ಬಿ ವರದಿ ಪ್ರಕಾರ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಯುವ ಅಪರಾಧಗಳ ಪೈಕಿ 72% ಕಳ್ಳತನಗಳು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಕಾರಣ ಬೆಂಗಳೂರು ನಗರ ಈಗ ಅಪರಾಧಗಳ ತಾಣವಾಗಿದೆ.
ಪ್ರಶ್ನೆ 8 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯದ ಪ್ರಮಾಣ 2021ರಲ್ಲಿ ಶೇಕಡಾ 18ರಷ್ಟು ಹೆಚ್ಚಾಗಿದೆ.
ಎನ್.ಡಿ.ಪಿ.ಎಸ್ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 1493% ರಷ್ಟು ಹೆಚ್ಚಾಗಿವೆ. 2021ರಲ್ಲಿ ಇಮ್ಮೊರಲ್ ಟ್ರಾಫಿಕಿಂಗ್ ಶೇಕಡಾ 61ರಷ್ಟು ಹೆಚ್ಚಾಗಿದೆ.
ಪ್ರಶ್ನೆ 9: ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರ್ ವೆಲ್ ಮತ್ತು ಟ್ಯಾಂಕರ್ ನೀರನ್ನು ಬಳಸುತ್ತಿದ್ದಾರೆ.