ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗಳಲ್ಲಿ ಗಣೇಶ ಹಬ್ಬ ಆಚರಣೆ ಸಂಬಂಧಿಸಿ ಮೌಖಿಕವಾಗಿ ಪ್ರಸ್ತಾಪವಾಗಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ನೀಡಿಲ್ಲ, ಅವಕಾಶ ನೀಡುವುದು ಕೂಡ ಇಲ್ಲ. ಹಿಂದೆ ಯಾವ ನಿಯಮಗಳು ಇದ್ದವೋ ಅದೇ ನಿಯಮ ಈಗಲೂ ಇವೆ. ಗಣೇಶ ಹಬ್ಬ ಆಚರಣೆ ಬ್ರಿಟಿಷರ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ, ಶಿಕ್ಷಣ ಇಲಾಖೆ ಮುಂದೆ ವಕ್ಫ್ ಬೋರ್ಡ್ ಹೊಸ ಬೇಡಿಕೆ ಇಟ್ಟಿದ್ದು, ಶಾಲೆಗಳಲ್ಲಿ ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು, ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ನೀಡಿ. ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆ ಮಾಡಲು ಅವಕಾಶ ಮಾಡಿಕೊಡಿ. ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು, ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾ ಅದಿ ಬೇಡಿಕೆ ಇಟ್ಟಿದ್ದಾರೆ.
ಶಿಕ್ಷಣ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲಾತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಮವಸ್ತ್ರ ಹಾಗೂ ಧಾರ್ಮಿಕ ಸಂಕೇತಗಳಿಗೆ ಅವಕಾಶ ಇಲ್ಲ ಎಂದ ಮೇಲೆ, ಗಣೇಶ ವಿಗ್ರಹವನ್ನು ಶಾಲೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದಕ್ಕೆ ಅವಕಾಶ ಹೇಗೆ ಕೊಡುತ್ತಿದ್ದಾರೆ ಎಂದು ಹಲವು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಜಾಬ್ ವಿವಾದ ಭಾರೀ ಚರ್ಚೆ ಇದ್ದ ಸಂದರ್ಭ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವ್ಯತಿರಿಕ್ತ ಹೇಳಿಕೆ ನೀಡಿ, ಶಾಲಾ ಕಾಲೇಜು ಆವರಣದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲ ಎಂದಿದ್ದರು, ಇದೀಗ ಗಣೇಶ ಹಬ್ಬ ಆಚರಣೆ ವಿಚಾರದಲ್ಲಿ ಸಚಿವರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರೋದು ಸರಿಯಲ್ಲ ಅಂತ ಸಚಿವರ ನಿರ್ಧಾರವನ್ನು ಖಂಡಿಸುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಈಗ ಹಿಜಾಬ್ ವಿವಾದ ನಂತರ ಗಣೇಶೋತ್ಸವ ಆಚರಣೆ ಸಂಬಂಧಿಸಿದ ಸ್ವತಃ ಶಿಕ್ಷಣ ಇಲಾಖೆಯ ಮೌಖಿಕ ಆದೇಶದಿಂದ ಧರ್ಮಗಳ ನಡುವೆ ಮತ್ತು ಸೌಹಾರ್ದತೆಗೆ ಧಕ್ಕೆ ಎದುರಾಗುತ್ತಿದೆ. ಒಂದಲ್ಲ ಒಂದು ಹೊಸ ವಿವಾದಗಳನ್ನು ಮುಂದಿಡುವ ಮೂಲಕ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಧರ್ಮದ ಅಮಲಿಗೆ ಒಳಪಡಿಸುವ ಪ್ರಯತ್ನಗಳು ಆರಂಭವಾಗುತ್ತಿವೆ.