ಶಶಿಕಾಂತ ಯಡಹಳ್ಳಿ
ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಗಮನಾರ್ಹ ಹೆಜ್ಜೆ ಗುರುತು ಮೂಡಿಸಿದ ರಂಗಸಂಘಟಕರಲ್ಲಿ ಪ್ರಮುಖರು ಜೆ.ಲೋಕೇಶ್. 70-80 ರ ದಶಕದಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾದ ರಂಗಸಂಪದ ರಂಗತಂಡದ ಮುಖ್ಯ ರೂವಾರಿ ಇವರು. ಅವರ ರಂಗಭೂಮಿಯ ಒಡನಾಟ ನಾಲ್ಕು ದಶಕಗಳ ಸುದೀರ್ಘ ಅವಧಿಯದು. ಸ್ವಂತ ಹಿತಾಸಕ್ತಿ ಹಾಗೂ ಕೌಟುಂಬಿಕ ಆಸಕ್ತಿಗಳನ್ನು ಮೀರಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ರಂಗಸಂಗಾತಿ ಲೋಕೇಶರವರ ಬದುಕು ಮತ್ತು ಸಾಧನೆ ಕುರಿತ ಅಭಿನಂದನಾ ಗ್ರಂಥ ಬಿಡುಗಡೆಯಾಗಿದೆ.
ಇದನ್ನು ಓದಿ: ನಮ್ಮವನೇ ಆದ ಶಿವ, ನಮ್ಮೊಳಗಿನ ಶಿವ ‘ಶೂದ್ರಶಿವ’
ಆಗಸ್ಟ್ 6 ರಂದು ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ʻಶೋ ಶುಡ್ ಗೋ ಆನ್; ಜೆ.ಲೋಕೇಶ್ʼ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಂಡಿತು. ಲೋಕೇಶರವರ ರಂಗ ತುಡಿತ ಮಿಡಿತಗಳನ್ನು ಬಲ್ಲ 40 ಜನ ಲೇಖನಗಳನ್ನು ಬರೆದಿದ್ದು, ಎನ್.ಕೆ.ಮೋಹನ್ ರಾಂ ಈ ಗ್ರಂಥದ ಸಂಪಾದಕರಾಗಿದ್ದಾರೆ. ಬಿ.ಎಸ್.ವಿದ್ಯಾರಣ್ಯ ತಮ್ಮ ಚಾರುಮತಿ ಪ್ರಕಾಶನದ ಮೂಲಕ ಈ ಸಂಗ್ರಹಯೋಗ್ಯ ಕೃತಿಯನ್ನು ಪ್ರಕಟಿಸಿದ್ದಾರೆ. ರಂಗಸಂಪದದ ಸಂಗಾತಿಗಳಾದ ಎಂ. ಚಂದ್ರಕಾಂತ್, ಚಡ್ಡಿ ನಾಗೇಶ್, ಶಿವಲಿಂಗಪ್ರಸಾದ್ ಈ ಗ್ರಂಥ ಬಿಡುಗಡೆ ಸಮಾರಂಭವನ್ನು ರಂಗ ಸಂಭ್ರಮವಾಗಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಕನ್ನಡ ನಾಡಿನಲ್ಲಿ ಅಭಿನಂದನಾ ಗ್ರಂಥಗಳ ಫಸಲು ಹುಲುಸಾಗಿಯೇ ಬೆಳೆದಿದೆ. ಅವುಗಳಲ್ಲಿ ಕೆಲವು ದಾಖಲಾರ್ಹ ಗ್ರಂಥಗಳಾದರೆ ಇನ್ನು ಹಲವು ವ್ಯಕ್ತಿ ವೈಭವದ ಆತ್ಮರತಿ ಕೃತಿಗಳಾಗಿವೆ. ಅಭಿನಂದನಾಪೂರ್ವಕವಾದ ಲೇಖನಗಳಲ್ಲಿ ವಸ್ತುನಿಷ್ಟ ವಿಶ್ಲೇಷಣೆಯನ್ನು ಅಪೇಕ್ಷಿಸುವುದರಲ್ಲಿ ಅರ್ಥವಿಲ್ಲ. ನಕರಾತ್ಮಕ ಅಂಶಗಳಿಗೆ ಒತ್ತುಕೊಟ್ಟಲ್ಲಿ ಅದು ಅಭಿನಂದನೆಯೂ ಅಲ್ಲ. ಆದರೆ ಸಾಧಕ ವ್ಯಕ್ತಿಯೊಬ್ಬನ ಸುತ್ತ ಆತ ಪ್ರತಿನಿಧಿಸುವ ಕ್ಷೇತ್ರದ ಚರಿತ್ರೆಯೂ ದಾಖಲಾಗುವುದು ಕೆಲವು ಅಭಿನಂದನಾ ಗ್ರಂಥಗಳ ವಿಶೇಷತೆ.
ಇದನ್ನು ಓದಿ: ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
“ಶೋ ಶುಡ್ ಗೋ ಆನ್…” ಸಹ ಅಂತಹುದೇ ವಿಶೇಷತೆಯನ್ನು ಹೊಂದಿದೆ. ಇದರಲ್ಲಿ ಲೋಕೇಶ್ ಎನ್ನುವ ರಂಗಪರಿಚಾರಕನನ್ನು ಕೇಂದ್ರವಾಗಿಟ್ಟುಕೊಂಡು ಈಗಿನ ತಲೆಮಾರಿನವರಿನವರ ಅರಿವಿಗೆ ಬರದ 70-80 ರ ದಶಕದ ರಂಗಚಟುವಟಿಕೆಗಳ ದಾಖಲಾತಿ ಈ ಗ್ರಂಥದಲ್ಲಿರುವ ಕೆಲವಾರು ಲೇಖನಗಳಲ್ಲಿವೆ. ಲೋಕೇಶ್ ರವರ ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಕೆಲಸಗಳ ವಿವರಗಳಿವೆ. ಸಾಂಸ್ಕೃತಿಕ ಚಳುವಳಿಗಳು, ಯೂನಿಯನ್ ಹೋರಾಟಗಳು, ಸಂಘಟನಾ ತಂತ್ರಗಾರಿಕೆಗಳೂ ದಾಖಲಾಗಿವೆ. ಆಸಕ್ತಿ ಮತ್ತು ಬದ್ದತೆ ಇರುವ ವ್ಯಕ್ತಿ ಅದು ಹೇಗೆ ರಂಗಭೂಮಿಯ ಬೆಳವಣಿಗೆಗೆ ಶಕ್ತಿ ತುಂಬಬಹುದು ಎಂಬುದರ ಕುತೂಹಲಕಾರಿ ಮಾಹಿತಿಗಳಿವೆ. ಇಂದಿನ ಹಾಗೂ ಮುಂದಿನ ತಲೆಮಾರಿನಲ್ಲಿ ರಂಗ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಈ ಅಭಿನಂದನಾ ಗ್ರಂಥ ಬಹು ಮುಖ್ಯ ಆಕರವಾಗಬಹುದಾಗಿದೆ. ಲೋಕೇಶರವರ ಸಮಕಾಲೀನ ಸಂಗಾತಿಗಳು ಅವರನ್ನು ಪರಿಭಾವಿಸಿದ ಪರಿಯನ್ನು ಓದುವುದರಲ್ಲಿ ಒಂದು ರೀತಿಯ ಖುಷಿ ಇದೆ.
“ಶೋ ಶುಡ್ ಗೋ ಆನ್..” ಗ್ರಂಥ ಬಿಡುಗಡೆ ಸಮಾರಂಭದ ವಿಶೇಷತೆ ಏನೆಂದರೆ 70 ರ ದಶಕದಲ್ಲಿ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಈಗ 70 ರ ಆಜೂಬಾಜು ಹರಯದಲ್ಲಿರುವ ಬಹುತೇಕ ಜನ ಬಹುದಿನಗಳ ನಂತರ ನಯನದಲ್ಲಿ ಸೇರಿದ್ದರು. ತಮ್ಮ ಕಾಲದ ರಂಗಕಾಯಕಗಳನ್ನು ನೆನಪಿಸಿಕೊಂಡು ಆನಂದಿಸಿದರು, ಪರಸ್ಪರ ಅಭಿನಂದಿಸಿಕೊಂಡರು. ಎಮ್ಮವರೆಲ್ಲ ಬೆಸಗೊಂಡು ಇಡೀ ಕಾರ್ಯಕ್ರಮವನ್ನು ಶುಭಲಗ್ನವಾಗಿಸಿದರು. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಸಮಾನಾಸಕ್ತ , ಸಮಾನ ವಯಸ್ಕರ ಆತ್ಮೀಯ ಕೂಟದಂತೆ ಭಾಸವಾಯಿತು. ಲೋಕೇಶರವರ ಅಭಿನಂದನಾ ಗ್ರಂಥದ ನೆಪದಲ್ಲಿ ಇಷ್ಟೊಂದು ಜನ ಹಿರಿಯ ರಂಗಕರ್ಮಿಗಳು ಒಂದು ಕಡೆ ಸೇರಿ ಸಂಭ್ರಮಿಸಿದ್ದನ್ನು ನೋಡುವುದೇ ಅಸಮಕಾಲೀನರಾದ ನನ್ನಂಥವರಿಗೆ ಸೋಜಿಗದ ಸಂಗತಿ. “ಎಲ್ಲಾ ಮುದುಕರೂ ಒಂದು ಕಡೆ ಸೇರಿದ್ದು ಸಂತಸವಾಯ್ತು” ಎಂದು ಹಿರಿಯರೊಬ್ಬರು ಹೇಳಿದ್ದಕ್ಕೆ ತಕರಾರು ಎತ್ತಿದ ನಾನು ” ಮುದುಕರು ಎನ್ನುವುದು ತಪ್ಪು ಸರ್, ಅನುಭವಿಗಳು ಎಂದು ಹೇಳುವುದು ಸರಿಯಾದದ್ದು” ಎಂದಾಗ ಅವರ ಕಣ್ಣುಗಳಲ್ಲಿನ ಹೊಳಪು ಇಮ್ಮಡಿಯಾಯಿತು.
ಇದನ್ನು ಓದಿ: ಸಾಹಿತ್ಯವೆಂದರೆ ಜನ-ಜನರ ಬದುಕಿನ ಪ್ರತಿಫಲನ, ಜನರ ಬದುಕಿಗೆ ಸಂಬಂಧಿಸಿದ್ದು : ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಅಭಿನಂದನಾ ಗ್ರಂಥಗಳ ಅಗತ್ಯ ಅನಗತ್ಯಗಳ ಕುರಿತ ಚರ್ಚೆ ಏನೇ ಇರಲಿ… ನಿಜವಾದ ಸಾಧಕರ ಕುರಿತಾದ ಇಂತಹ ದಾಖಲಾತಿಗಳು ಮುಂದಿನ ತಲೆಮಾರಿನ ರಂಗಾಸಕ್ತರಿಗೆ ಮಾದರಿಯಾಗಬಹುದಾಗಿದೆ. ಇಲ್ಲಿರುವ ಲೇಖನಗಳಲ್ಲಿರುವ ಕೆಲವು ಕ್ಲೀಷೆ, ಮುಖಸ್ತುತಿ, ಅಸೂಯೆ ಮುಂತಾದ ಜೊಳ್ಳನ್ನು ಗಾಳಿಗೆ ತೂರಿದರೆ ಉಳಿಯುವ ಗಟ್ಟಿಕಾಳುಗಳಲ್ಲಿ ರಂಗ ಚರಿತ್ರೆಯ ದಾಖಲಾತಿಗಳನ್ನು ದಕ್ಕಿಸಿಕೊಳ್ಳಬಹುದಾಗಿದೆ. ಅಭಿನಂದನಾ ಗ್ರಂಥದ ಅಗತ್ಯತೆಯನ್ನೂ ಮೀರಿ ಬೆಳೆದ ರಂಗ ಸಾಧಕ ಜೆ.ಲೋಕೇಶರು 73 ನೇ ವರ್ಷಕ್ಕೆ ಪಾದಾರ್ಪನೆ ಮಾಡುತ್ತಿರುವುದಕ್ಕೆ ಅಭಿನಂದನೆಗಳು. ಈಗಲೂ ರಂಗಭೂಮಿಯ ಕುರಿತು ಆಸಕ್ತಿಯನ್ನು ಹೊಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ರಂಗಪಾರಿಚಾರಿಕೆಯನ್ನು ತಮ್ಮ ಬದುಕಿನ ಭಾಗವೆಂಬಂತೆ ಮುಂದುವರೆಸಿಕೊಂಡಿರುವುದಕ್ಕೆ ವಂದನೆಗಳು.
ಏನೇ ಇರಲಿ, ಹಾಗೇಯೇ ಇರಲಿ ರಂಗಭೂಮಿಯ ಸಾರ್ವಕಾಲಿಕ ಘೋಷಣೆ ಶೂ ಶುಡ್ ಗೋ ಆನ್.. ಶೋ ಮಸ್ಟ್ ಗೋ ಆನ್.. ಆಗಿರಲಿ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ