ಶೋಷಿತರಿಗೆ ಶಿಕ್ಷಣ ಒದಗಿಸಿದ ಸಾವಿತ್ರಿ ಬಾಯಿ ಫುಲೆ ಆಧುನಿಕ ಯುಗಕ್ಕೆ ದೊಡ್ಡ ಪ್ರೇರಣೆ: ಡಾ|| ಕಾಂತೇಶ್ ಅಂಬಿಗೇರ್

ರಾಣೇಬೆನ್ನೂರ: ಸಾವಿತ್ರಿಬಾಯಿ ಫುಲೆ ಎಂದ ತಕ್ಷಣವೇ ನನಗೆ ಒಂದು ರೋಮಾಂಚನ ಮತ್ತು ಪ್ರೇರಣೆ. ಅಕ್ಷರದ ಅರಿವೆ ಇಲ್ಲದ ಒಬ್ಬ ಹೆಣ್ಣು ಮಗಳ ಬಾಲ್ಯ ವಿವಾಹಕ್ಕೆ ಒಳಗಾಗಿ ತರುವಾಯ ತನ್ನ ಪತಿ ಜ್ಯೋತಿಬಾ ಪುಲೆ ಯವರ ಪ್ರೇರಣೆಯಿಂದ ಅಕ್ಷರ ಪಡೆದು, ಭಾರತದ ಮೊಟ್ಟ ಮೊದಲ ಶಿಕ್ಷಕಿ ಆಗುವ ಸಾಧನೆ ಇದೆಯಲ್ಲ, ಕೇವಲ ಹೆಣ್ಣು ಮಕ್ಕಳಿಗಲ್ಲ ಆಧುನಿಕ ಸಂದರ್ಭದಲ್ಲಿ ಎಲ್ಲಾ ಜನರಿಗೆ ಒಂದು ದೊಡ್ಡ ಪ್ರೇರಣೆ ಎಂದು ಸಾಹಿತಿ, ಉಪನ್ಯಾಸಕ ಡಾ|| ಕಾಂತೇಶ್‌ ಅಂಬಿಗೇರ್‌ ಹೇಳಿದರು.

ಇದನ್ನು ಓದಿ: ಸಾವಿತ್ರಿಬಾಯಿ ಫುಲೆ ಜನ್ಮದಿನ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ

ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನಗರದ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಾಂತಿಜ್ಯೋತಿ, ದೇಶದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದ ಡಾ|| ಕಾಂತೇಶ್‌ ಅಂಬಿಗೇರ್‌, ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಾವಿತ್ರಿ ಬಾಪುಲೆ ತಮ್ಮ ಒಂಬತ್ತನೇ ವಯಸ್ಸಿನಲ್ಲಿ 13ನೇ ವರ್ಷದ ಜ್ಯೋತಿಬಾ ಫುಲೆ ಅವರನ್ನು ವಿವಾಹವಾದರು. ತರುವಾಯ ಅವರ ಬದುಕಿನ ದಿಕ್ಕು ಬದಲಾಗುತ್ತದೆ. ಏಕೆಂದರೆ ಜ್ಯೋತಿಬಾ ಫುಲೆ ಈ ಸಮಾಜ ಕಂಡ ಪರಮೋದ್ಯೋಕ  ಬದುಕನ್ನು ಗರಿಷ್ಟ ಮಟ್ಟಕ್ಕೆ ಸಾರ್ಥಕ ಮಾಡಿಕೊಳ್ಳುವ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಜ್ಯೋತಿ ಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಯವರು ನಮ್ಮ ಕಣ್ಮುಂದೆ ಜೀವಂತ ಸಾಕ್ಷಿಯಾಗಿದ್ದಾರೆ. ಸಮಾಜದಲ್ಲಿದ್ದ ವರ್ಣವ್ಯವಸ್ಥೆ ಕೇವಲ ಅಕ್ಷರ ಸಂಸ್ಕೃತಿಯನ್ನು ಒಂದು ಸಮುದಾಯ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ ಕಾಲದಲ್ಲಿ ಈ ನೆಲದ ಮಹಿಳೆಯರು, ಶೋಷಿತರು, ಅಸ್ಪೃಶ್ಯತೆರು ಶಿಕ್ಷಣದಿಂದ ವಂಚಿತರಾಗ ಬೇಡವೆಂದು ಆಶಯವನ್ನು ಹೊಂದಿದ್ದರು. ಹಾಗಾಗಿ ಶಿಕ್ಷಣ ಕ್ರಾಂತಿಗೆ ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ಮಹಿಳೆಗೆ ಜವಾಬ್ದಾರಿ ನೀಡದೆಯೇ ಅನುಭವ ಇಲ್ಲ ಎನ್ನುತ್ತಾರೆ: ಡಾ.ಆರ್‌ ಇಂದಿರಾ

ಸಮಾಜ ಸುಧಾರಣೆಯಲ್ಲಿ ಹೋರಾಡಿದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಫುಲೆ ಪ್ರಭಾವ 1818ರ ಸುಮಾರಿಗೆ ಅದು ಬ್ರಿಟೀಷರ ಕಾಲಕ್ಕೆ ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ-ಸರ್ವರಿಗೂ ಸಮಾನ ಹಕ್ಕು ಎಂಬ ಪರಕಲ್ಪನೆಯ ಮತ್ತೆ ಜೀವ ತಾಳಿದವು ಎಂದು ನಾವು ಪರಿಗಣಿಸಬೇಕು. ಒಬ್ಬ ಶಿಕ್ಷಕಿ ಆಗುವ ತರಬೇತಿಯನ್ನು ಸಾವಿತ್ರಿ ಬಾಫುಲೆ ಪಡೆಯುತ್ತಾರೆ. ಆ ಮೂಲಕ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂದು ಬ್ರಿಟಿಷರಿಂದ ಪ್ರಶಂಸೆಗೆ ಒಳಗಾಗುತ್ತಾಳೆ. ಜುಲೈ 3, 1851ರಲ್ಲಿ ಮಹಿಳೆಯರಿಗಾಗಿ ಮಾತ್ರ ಶಾಲೆಗಳನ್ನು ತೆರೆಯುತ್ತಾರೆ. ಪೂನಾದಲ್ಲಿ ಶಾಲೆಗಳನ್ನು ಆರಂಭಿಸುವುದರ ಮೂಲಕ ಅಮೋಘ ಕ್ರಾಂತಿಯನ್ನು ಶೂದ್ರ ಬದುಕಿನಲ್ಲಿ ತರುತ್ತಾರೆ. ಮಹಾತ್ಮ ಜ್ಯೋತಿ ಬಾಪುಲೆ ಅವರು ಒಂದು ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿ ಅನೇಕ ಅಸ್ಪೃಶ್ಯ ಸಮಸ್ಯೆಗಳು ವಿರುದ್ಧ ಅದರಲ್ಲಿಯೂ ವಿಶೇಷವಾಗಿ ಬಾಲ್ಯ ವಿವಾಹ ದೇವದಾಸಿ ಪದ್ಧತಿ ಮತ್ತು ಬ್ರಾಹ್ಮಣ ವಿಧವೆಯವರಿಗೆ ವಿದ್ವಾಶ್ರಮವನ್ನು ಸ್ಥಾಪಿಸುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಬಿ.ನಂದ್ಯಾಲ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿ ಬಾಯಿ ಫುಲೆ ನಮಗೆಲ್ಲರಿಗೂ ಆದರ್ಶ. ಫುಲೆ ದಂಪತಿಗಳು ಸಮಾಜಕ್ಕಾಗಿ ಬದುಕಿದವರು. ಹಾಗೆ ಸಮಾಜದಲ್ಲಿನ ಕೆಡುಕು, ಒಡಕು ತರುವ ದುಷ್ಟ ಶಕ್ತಿಗಳು ವಿರುದ್ಧ ಮಹಿಳೆಯರ ಐಕ್ಯತೆಗಾಗಿ ವಿದ್ಯಾರ್ಥಿನೀಯರನ್ನು ಸಂಘಟಿಸುವ ನಿಟ್ಟಿನಲ್ಲಿ ಚಳುವಳಿಯನ್ನು ರೂಪಿಸುವಲ್ಲಿ ಎಸ್ಎಫ್ಐ ಸಂಘಟನೆ ಮುಂದಾಗಲಿ ಎಂದು ಕರೆ ನೀಡಿದರು.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಯು ಬಹುಸಂಖ್ಯಾತರನ್ನು ಶಿಕ್ಷಣ ಕಲಿಕೆಯಿಂದ ದೂರಸರಿಸುವ ತಂತ್ರ

ನಮ್ಮ ಧರ್ಮ, ನಮ್ಮ ಜಾತಿಗಳ ಬಗ್ಗೆ ಗೌರವವಿದೆ. ಆದರೆ ಇತರೆ ಧರ್ಮಗಳನ್ನು ದ್ವೇಷ ಮಾಡದೆ ಅಪಾರ ಗೌರವ ನೀಡುವ ಮೂಲಕ ಕೋಮು ಸಾಮರಸ್ಯ ಕಾಪಾಡಬೇಕು. ಸಾವಿತ್ರಿಬಾಯಿ ಫುಲೆಯವರು ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ಮಹಿಳೆಯರ ಶಿಕ್ಷಣಕ್ಕೆ ಸಾಕಷ್ಟು ಶ್ರಮಿಸಿದರು. ಅವರ ಈ ಕಾರ್ಯದಲ್ಲಿ ಜ್ಯೋತಿಬಾ ಫುಲೆಯವರ ಕೊಡುಗೆ ಮರೆಯಲಾಗದು. ಸಾವಿತ್ರಿಬಾಯಿ ಫುಲೆ ಅವರಿಗೆ ಶಿಕ್ಷಣ ಕೊಡಿಸಿ ಅವರನ್ನು ಶಿಕ್ಷಕಿಯನ್ನಾಗಿ ಮಾಡಿದ್ದು ಜ್ಯೋತಿಬಾ ಫುಲೆಯವರು ಎಂದರು.

ಕಾರ್ಯಕ್ರಮದ ಅಂಗವಾಗಿ ʻʻಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಮಹಿಳಾ ಶಿಕ್ಷಣದಲ್ಲಿ ಎದುರಿಸುತ್ತಿರುವ ಸವಾಲುಗಳುʼʼ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಾಮಾಜಿಕ ಹೋರಾಟಗಾರರು, ಗುತ್ತಿಗೆದಾರರಾದ ಮಾಲತೇಶ್ ಬ್ಯಾಡಗಿ, ದಲಿತ ಮುಖಂಡ ಮಲ್ಲೇಶಪ್ಪ ಮದ್ಲೇರ್ ಬಹುಮಾನ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಕಾಂತೇಶ್ ರೆಡ್ಡಿ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳನ್ನು ಎಸ್ಎಫ್ಐ ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ಆಡಿದರು. ಎಸ್ಎಫ್ಐ ಉಪಾಧ್ಯಕ್ಷ ನೇಹಲ ಖಾನ್, ಮುಖಂಡರಾದ ವೀಣಾ ಜಟ್ಟೆಣ್ಣನವರ, ಪ್ರಜ್ವಲ, ಕರಿಯಪ್ಪ ನಡುವಿನಮನಿ, ಪ್ರಕಾಶ್ ತಳವಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *