ಔಷಧಿಗಳ ಗುಣಮಟ್ಟದ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯದಲ್ಲಿ ಮಾರಾಟವಾಗುತ್ತಿರುವಂತ ಔಷಧಿಗಳ ಗುಣಮಟ್ಟದ ಬಗ್ಗೆ ಶಾಕಿಂಗ್ ಮಾಹಿತಿಯನ್ನು ಬಹಿರಂಗಪಡಿಸಿದೆ. ಔಷಧಿ

ಈ ಕುರಿತಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಮಾಹಿತಿ ನೀಡಿದ್ದು, ಔಷಧ ಆಡಳಿತವು ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ಸರ್ಕಾರ ನಿಗದಿ ಪಡಿಸಿದ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.

ಅಂತೆಯೇ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಸಾರ್ವಜನಿಕರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಅಂಶಗಳನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರು| ಪ್ರಜ್ವಲ್ ರೇವಣ್ಣಗೆ ಜಾಮೀನು ಕೊಡಲ್ಲ: ಹೈಕೋರ್ಟ್

ಔಷಧ ಆಡಳಿತ:

ಔಷಧ ಆಡಳಿತ ವಿಭಾಗದ ಅಮಲು ಜಾರಿ ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ ಮಾರ್ಚ್‌ 2025ರ ಮಾಹೆಯಲ್ಲಿ ಒಟ್ಟು 1,891 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆದಿರುತ್ತಾರೆ. ಸದರಿ ಔಷಧ ಮಾದರಿಗಳನ್ನು ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ 1,298 ಉತ್ತಮ ಗುಣಮಟ್ಟದ ಔಷಧಗಳೆಂದು ಘೋಷಿತವಾಗಿವೆ. ಮತ್ತು 41 ಅನುತ್ತಮ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ.

2024-25ನೇ ಸಾಲಿನಲ್ಲಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 1940 ಮತ್ತು ಅದರಡಿಯ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ದ ಫೆಬ್ರವರಿ-2025ರ ಮಾಹೆಯಲ್ಲಿ ಒಟ್ಟು 10 ಮತ್ತು ಮಾರ್ಚ್‌ 2025ರ ಮಾಹೆಯಲ್ಲಿ ಒಟ್ಟು 18 ಮೊಕದ್ದಮೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ.

ರಿಂಗರ್‌ ಲ್ಯಾಕ್ಟೇಟ್‌ ದ್ರಾವಣಕ್ಕೆ ಸಂಬಂಧಿಸಿದಂತೆ 196 ಬ್ಯಾಚ್‌ನ ಮಾದರಿಗಳಲ್ಲಿ 113 ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆಯಾದ M/s Paschim Banga Pharmaceuticals ವಿರುದ್ಧ ಮಾರ್ಚ್‌ 2025ರ ಅಂತ್ಯದವರೆಗೆ ವಿವಿಧ ನ್ಯಾಯಾಲಯಗಳಲ್ಲಿ 78 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದಲ್ಲದೇ ಅನುತ್ತಮ ಗುಣಮಟ್ಟದ ಔಷಧವೆಂದು ಘೋಷಿತವಾದ ಹಾಗೂ ಇತರೆ ಉಲ್ಲಂಘನೆಗಾಗಿ ವಿವಿಧ ತಯಾರಿಕ ಸಂಸ್ಥೆಗಳ ವಿರುದ್ಧ 43 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ.

ಔಷಧ ಆಡಳಿತದ ಅಮಲುಜಾರಿ ಅಧಿಕಾರಿಗಳು ಫೆಬ್ರವರಿ 2025ರ ಮಾಹೆಯಲ್ಲಿ ಒಟ್ಟು 1,872 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆದಿರುತ್ತಾರೆ. 2,078 ಔಷಧ ಮಳಿಗೆಗಳನ್ನು ಪರಿವೀಕ್ಷಣೆ ಕೈಗೊಂಡಿರುತ್ತಾರೆ. ಅವುಗಳಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 215 ಸಂಸ್ಥೆಗಳ ಪರವಾನಿಗೆಗಳನ್ನು ಅಮಾನತ್ತುಗೊಳಿಸಲಾಗಿದೆ.

ರಾಜ್ಯದಲ್ಲಿ NSQ ಬಂದಂತಹ ಪ್ರಕರಣಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ -2025ರ ಮಾಹೆಗಳಲ್ಲಿ ವಿಶೇಷ ಅಭಿಯಾನ ಕೈಗೊಂಡು ಸುಮಾರು ರೂ24,29,479/- ಮೌಲ್ಯದ ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ಸುಧಾರಣಾ ಕ್ರಮಗಳು:

ಅನುತ್ತಮ ಗುಣಮಟ್ಟದೆಂದು ಘೋಷಿತವಾದ ಔಷಧಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯುವ ನಿಟ್ಟಿನಲ್ಲಿ ಸದರಿ ದಾಸ್ತಾನುಗಳನ್ನು ಹಿಂಪಡೆಯಲು, ಚಿಲ್ಲರೆ ಔಷಧ ಮಳಿಗೆಗಳು / ಸಗಟು ಮಾರಾಟಗಾರರು / ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಸದರಿ ತಂತ್ರಾಂಶವನ್ನು ಜಾರಿಗೆ ತರಲಾಗುವುದು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಹಕ್ಕು | ಆರೋಗ್ಯ ಎಂದರೆ ರೋಗವಿಲ್ಲದಿರುವುದೇ?! | ಸರಣಿ ಕಾರ್ಯಕ್ರಮ – ಸಂಚಿಕೆ 01 Janashakthi Media

Donate Janashakthi Media

Leave a Reply

Your email address will not be published. Required fields are marked *