- ನಾಟಕ : ಚೋಮನ ದುಡಿ
- ತಂಡ : ರೂಪಾಂತರ
- ನಿರ್ದೇಶನ : ಕೆಎಸ್‌ಡಿಎಲ್ ಚಂದ್ರು
- ಪ್ರದರ್ಶನ : ಮೇ 30, 2022 – ಸಂಜೆ 7.00 ಗಂಟೆಗೆ
- ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ಚೋಮ…..
ಚೋಮ ಒಬ್ಬ ಅಸ್ಪೃಶ್ಯ ವ್ಯಕ್ತಿ. ಐದು ಮಕ್ಕಳೊಂದಿಗೆ ಬದುಕು ಸಾಗಿಸುವ ಆತನು ಹೆಂಡದ ಅಮಲಿನಲ್ಲಿ ದುಡಿವವ. ಈ ವೇಳೆ ‘ದುಡಿ’ ಬಾರಿಸುತ್ತಿದ್ದ. ಬ್ರಾಹ್ಮಣ ಧನಿ ಸಂಕಪ್ಪಯ್ಯನವರ ಹೊಲದಲ್ಲಿ ಕೂಲಿಯೂ ಮಾಡುತ್ತಿದ್ದ. ತನ್ನದೇ ಜಮೀನು ಹೊಂದಿ, ಬೇಸಾಯ ಮಾಡುವದು ಆತನ ಕನಸು. ಹೊಲೆಯರು ಬೇಸಾಯ ಮಾಡುವಂತಿಲ್ಲ. ಆದರೆ, ಈ ಕುರಿತು ಸಂಕಪ್ಪಯ್ಯನವರಿಗೆ ಕೇಳಿ ಅವಮಾನ ಹೊಂದುವುದು ಬೇಡ ಎಂಬುದು ಮಗಳು ಬೆಳ್ಳಿಯ ಸಲಹೆ. ಆದರೂ, ಈ ವಿಷಯ ಹೇಳಿ ಧನಿಯಿಂದ ಬೈಸಿಕೊಳ್ಳುತ್ತಾನೆ.
ಪರವೂರಿನಲ್ಲಿದ್ದ ಹಿರಿಯ ಮಗ ಚನಿಯ ಮಲೇರಿಯಾ ಜ್ವರಕ್ಕೆ ತುತ್ತಾಗಿ ಊರಿಗೆ ಬಂದು ಸಾಯುತ್ತಾನೆ. ಕಿರಿಯ ಮಗ ಗುರುವ, ಕ್ರಿಶ್ಚಿಯನ್ ಹುಡುಗಿಗೆ ಮದುವೆಯಾಗಿ ಆ ಧರ್ಮಕ್ಕೆ ಮತಾಂತರಗೊಳ್ಳುತ್ತಾನೆ. ಸಾಲದ ಹೊರೆ ಹೆಚ್ಚುತ್ತದೆ. ತೋಟದಲ್ಲಿ ಮನ್ವೆಲನ ಕಾಮದಾಸೆಗೆ ಮಗಳು ಬೆಳ್ಳಿ ಬಲಿಯಾಗುತ್ತಾಳೆ. ಮಗಳಿಗೆ ಮದುವೆ ಮಾಡಲಾಗದೇ, ತಾನು ಬೇಸಾಯ ಮಾಡಲಾಗದೇ ಚೋಮ ತತ್ತರಿಸುತ್ತಾನೆ. ಒಂದು ದಿನ, ಮಕ್ಕಳಾದ ಕಾಳ ಹಾಗೂ ನೀಲನನ್ನು ಸ್ನಾನಕ್ಕಾಗಿ ತೋಡಿಗೆ ಕರೆದೊಯ್ಯುತ್ತಾನೆ. ನೀಲ ನೀರಿನಲ್ಲಿ ಮುಳುಗುತ್ತಿದ್ದಾಗ, ಜಾತಿ ಅಡ್ಡ ಬರುತ್ಬಂತದೆ. ನೀಲ ಸಾಯುತ್ತಾನೆ….
ನಂತರ, ಚೋಮನ ಬೇಸಾಯದ ಕನಸು ಮರುಕಳಿಸುತ್ತದೆ. ಕ್ರೈಸ್ತ ಮತಕ್ಕೆ ಸೇರಲು ನಿರ್ಧರಿಸುತ್ತಾನೆ. ಆದರೆ, ಬೇಸಾಯದ ಆಸೆ ಕೈಗೂಡುವುದಿಲ್ಲ. ಮಗಳು ಬೆಳ್ಳಿ, ಮನ್ವೇಲನೊಂದಿಗೆ ಇದ್ದಿದ್ದು ತನಗೆ ಮಾಡಿದ ವಂಚನೆ ಎಂದು ತಿಳಿಯುತ್ತಾನೆ. ‘ಮಕ್ಕಳು ಹಾಗಾಗಲಿ…ಹೀಗಾಗಲಿ’ ಎಂದು ‘ಅವರು ಹೇಗಾದರೇನಂತೆ? ತನಗೇನು’ ಎಂದು ವಿಕಟವಾಗಿ ನಗುತ್ತಾ. ನಗುತ್ತಾ ‘ದುಡಿ’ಯನ್ನು ಜೋರು ಜೋರಾಗಿ ಬಾರಿಸುತ್ತಾನೆ. ಬೇಸಾಯಗಾರನಾಗುವ ಆಸೆಯೂ ಕಮರಿದ್ದ ಚೋಮನ ಮನಸ್ಥಿತಿ, ‘ದುಡಿ’ಯನ್ನು ಬಾರಿಸುತ್ತಲೇ ಜೀವ ಕಳೆದುಕೊಳ್ಳುತ್ತದೆ.
ಬದುಕಿನ ಅನ್ವೇಷಕ ಶಿವರಾಮ ಕಾರಂತ…
ಶಿವರಾಮ ಕಾರಂತರಿಗೆ ಅತಿಯಾದ ಆದರ್ಶಗಳಲ್ಲಿ ನಂಬಿಕೆ ಇರದ ಕಾರಂತರಿಗೆ ಯಾವುದು ವಾಸ್ತವ ಯಾವುದು ಆದರ್ಶ ಎನ್ನುವುದರ ಬಗ್ಗೆ ಖಚಿತ ತಿಳುವಳಿಕೆ ಇತ್ತು. 45 ಕಾದಂಬರಿಗಳು, 400 ಕೃತಿಗಳು, 800ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಮತ್ತು ಅಪಾರವಾದ ಸುತ್ತಾಟ ಮಾಡಿರುವ ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಬಹುದೊಡ್ಡ ಸಾಹಿತಿ.
ಶಿವರಾಮ ಕಾರಂತರು ಅಸ್ಪೃಶ್ಯರು ಎದುರಿಸುತ್ತಿದ್ದ ಅನ್ಯಾಯಗಳ ವಿರುದ್ಧ ಕಾದಂಬರಿ ಮೂಲಕ ಧ್ವನಿ ಎತ್ತಿದ್ದ ಮೊದಲಿಗರು ಎಂಬ ಖ್ಯಾತಿ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಆರ್ಥಿಕ ಸಮೀಕ್ಷೆಯಲ್ಲಿ ತೊಡಗಿದ್ದ ಕಾರಂತರು, ಆ ಜಿಲ್ಲೆಯ ಹೊಲೆಯರ ದಾರುಣ ಬದುಕನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಲೇಖಕನಾದವನಿಗೆ ತನ್ನ ಹಿಂದಿನ ಬರಹಗಳ ಬಗ್ಗೆ ಸ್ಮರಣ ಶೂನ್ಯತೆ ಇರಬೇಕು. ಅದಿಲ್ಲದಿದ್ದರೆ ಹೊಸ ಚಿಂತನೆಗಳು ಸೇರಿಕೊಳ್ಳುವುದಿಲ್ಲ ಎನ್ನುವ ಅವರು ಪ್ರಯೋಗಶೀಲತೆ, ನಿಷ್ಪಕ್ಷಪಾತತೆ ನನ್ನ ಬರಹಗಳ ಪ್ರಮುಖವಾದಂಥ ಅಂಶ ಎಂದು ಹೇಳುತ್ತಾರೆ. ಅವರ ‘ಚೋಮನ ದುಡಿ’ 1933 ರಲ್ಲಿ ರಚನೆಯಾಗಿದ್ದು ಒಬ್ಬ ದಲಿತ ಭೂಮಿಯನ್ನು ಊಳುವ ಕನಸನ್ನಿಟ್ಟುಕೊಂಡಿರುವ, ಆಸೆ ಕನಸು ಗಳಲ್ಲಿ ನಲುಗಿ ಹೋಗುತ್ತಿರುವ ಒಂದು ಸ್ಥಿತಿಗೆ ಚೌಕಟ್ಟನ್ನು ನೀಡುತ್ತದೆ. ಚೋಮನ ದುಡಿ ಕಾದಂಬರಿಯು ಕಾರಂತರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು.
ನಿರ್ದೇಶಕರ ಕುರಿತು…
ರಂಗ ಶಿಕ್ಷಣ ಪಡೆದು ನಾಟಕಗಳನ್ನು ಪ್ರದರ್ಶಿಸಿದವರಿಗಿಂತ, ಎಲ್ಲಿಯೂ ತರಬೇತಿ ಪಡೆಯದೆ ರಂಗ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರ ಕೆಎಸ್‌ಡಿಎಲ್ ಚಂದ್ರು, ಅವರು ಇತರರು ಮಾಡುತ್ತಿದ್ದ ನಾಟಕಗಳನ್ನು ನೋಡಿ ಕಲಿತವರು. ಕಥೆ, ಕಾದಂಬರಿಗಳನ್ನೇ ರಂಗ ರೂಪಾಂತರ ಮಾಡಿ ಸಾಧನೆ ಮಾಡುತ್ತಿದ್ದಾರೆ.
ರಂಗಭೂಮಿ, ಕಾರ್ಮಿಕ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಮಹತ್ವದ ನಿರ್ದೇಶಕರಾಗಿಯೂ, ಸಂಘಟಕರಾಗಿ ಗುರುತಿಸಿಕೊಂಡಿರುವ ಕೆಎಸ್‌ಡಿಎಲ್ ಚಂದ್ರು ಅವರು, ಕೊಕ್ಕೆ, ಹೆಜ್ಜೆಗಳು, ಮಳೆಬೀಜ, ಕರ್ವಾಲೊ, ಮುಸ್ಸಂಜೆ ಕಥಾ ಪ್ರಸಂಗ, ಮೈಮನಗಳ ಸುಳಿಯಲ್ಲಿ, ಬಡೇಸಾಬು ಪುರಾಣ, ಗಲ್ಬಸ್ಕಿ, ಯಹೂದಿ ಹುಡುಗಿ, ರಾಮಧಾನ್ಯ, ಟ್ರೈನ್ ಟು ಪಾಕಿಸ್ತಾನ್, ಕರಿಸಿದ್ಧ, ಚಕ್ರರತ್ನ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.
ತಂಡದ ಕುರಿತು….
ಸಾಂಪ್ರದಾಯಿಕ ರಂಗ ತರಬೇತಿ, ಶಿಕ್ಷಣದ ಹಂಗಿಲ್ಲದ ಕಾರ್ಮಿಕರು, ಅಧಿಕಾರಿಗಳು, ಎಂಜಿನಿಯರ್‌ಗಳು, ಹೋಟೆಲ್ ಮಾಲಿಗಳು ಸರ್ಕಾರಿ ಮತ್ತು ಖಾಸಗಿ ನೌಕರರು, ಗೃಹಿಣಿಯರು, ಹೆಣ್ಣುಮಕ್ಕಳು ಹೀಗೆ ಎಲ್ಲಾ ಸ್ತರಗಳ ಮಂದಿ ಕಟ್ಟಿ ಬೆಳೆಸಿದ ತಂಡವೇ ರೂಪಾಂತರ.
೧೯೮೯ರಲ್ಲಿ ಯುವ ರಂಗ ನಿರ್ದೇಶಕರ ನಾಟಕೋತ್ಸವದಲ್ಲಿ ನಿರ್ದೇಶಕ ಅಮರದೇವ ನಿರ್ದೇಶಿಸಿದ ‘ರೊಟ್ಟಿ’ ನಾಟಕ (ಮೂಲ ಕತೆ: ಪಿ.ಲಂಕೇಶ್)ದಲ್ಲಿ ಪಾತ್ರ ವಹಿಸಿದ ಯುವಕರ ಗುಂಪೇ ಒಟ್ಟಾಗಿ ಕಟ್ಟಿಕೊಂಡ ತಂಡ ‘ರೂಪಾಂತರ’.
ಅಪರೂಪದ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ಪ್ರಯೋಗಿಸಿದ ಹೆಗ್ಗಳಿಕೆ ರೂಪಾಂತರದ್ದು. ಕನ್ನಡದ ಕಾವ್ಯ, ಕಥೆ, ಕಾದಂಬರಿಗಳನ್ನು ರಂಗದಲ್ಲಿ ಸಾಕ್ಷಾತ್ಕಾರಗೊಳಿಸಿದ ರೂಪಾಂತರ ಕುವೆಂಪು, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕುಂ.ವೀರಭದ್ರಪ್ಪ, ಡಾ.ಕೆ.ಶಿವರಾಮ ಕಾರಂತ, ಡಾ.ಶಾಂತರಸ, ಸಂತ ಕವಿ ಕನಕದಾಸ, ಖುಷ್ವಂತ್ ಸಿಂಗ್, ಪ್ರಭಾಕರ ಶಿಶಿಲ ಮುಂತಾದವರ ಕಥಾನಕಗಳನ್ನು ರಂಗದ ಮೇಲೆ ಮರುಸೃಷ್ಟಿಸಿದೆ.
ರೂಪಾಂತರ ತಂಡ ಪ್ರಸಿದ್ಧ ನಾಟಕಗಳು; ರೊಟ್ಟಿ, ಅಬಚೂರಿನ ಪೋಸ್ಟಾಫೀಸ್, ಕತ್ತಲನು ತ್ರಿಶೂಲ ಹಿಡಿದ ಕತೆ, ತಲೆದಂಡ, ಗುಣಮುಖ, ಕೊಕ್ಕೆ, ಕಿರಗೂರಿನ ಗಯ್ಯಾಳಿಗಳು, ಕರ್ವಾಲೊ, ಮುಸ್ಸಂಜೆಯ ಕಥಾಪ್ರಸಂಗ, ಮಳೆಬೀಜ, ಮೈಮನಗಳ ಸುಳಿಯಲ್ಲಿ, ಗಾಂಧಿ ಜಯಂತಿ, ಬಡೇಸಾಬು ಪುರಾಣ, ಗಲ್ಬಸ್ಕಿ, ಯಹೂದಿ ಹುಡುಗಿ, ರಾಮಧಾನ್ಯ, ಟ್ರೈನ್ ಟು ಪಾಕಿಸ್ತಾನ್, ಹುಲಿ ಹಿಡಿದ ಕಡಸು, ಕಾಡುಮಲ್ಲಿಗೆ, ಪುಂಸ್ತ್ರೀ, ಕರಿಸಿದ್ಧ ಮತ್ತು ಚಕ್ರರತ್ನ ಇತ್ಯಾದಿ.
ರಂಗ ರೂಪ : ಆರ್. ನಾಗೇಶ್, ಗೀತ ಸಾಹಿತ್ಯ : ಡಾ|| ಸಿದ್ಧಲಿಂಗಯ್ಯ,
ಸಂಗೀತ ದೇಸಿ ಮೋಹನ್, ನಿರ್ವಹಣೆ : ಹೆಚ್.ಎಸ್. ರಾಜು, ಸಹಕಾರ : ವಿ. ಗಂಗಾಧರ್