ಬೆಂಗಳೂರು: ರಾಜ್ಯದಲ್ಲಿ ದುರುದ್ದೇಶಪೂರಿತವಾಗಿ ಉಂಟು ಮಾಡುತ್ತಿರುವ ಧರ್ಮದ್ವೇ಼ಷದ ವಾತಾವರಣವನ್ನು ನಿಯಂತ್ರಿಸಲು ಹಾಗೂ ಶಿರವಸ್ತ್ರ ವಿವಾದದಿಂದ ಶಿಕ್ಷಣ ವಂಚಿತರಾಗದಂತೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಸಮಾನ ಮನಸ್ಕ ಸಂಘಟನೆಯ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಂಟಿಯಾಗಿ ಪತ್ರ ಬರೆದಿದ್ದಾರೆ ಅದರ ಹೇಳಿಗೆ ಹೀಗಿವೆ;
ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ಹೆಸರಿನ ವಿಪರೀತಗಳು ನಮಗೆ ತೀವ್ರ ಕಳವಳ ಉಂಟು ಮಾಡಿವೆ. ದುಡಿಯುವ ಜನರ ಬದುಕು ಬೆಲೆ ಏರಿಕೆ, ನಿರುದ್ಯೋಗ, ಅರೆ ಉದ್ಯೋಗಗಳಿಂದ ತಲ್ಲಣಿಸುತ್ತಿರುವಾಗ ಅದಕ್ಕೆ ಪರಿಹಾರ ನೀಡುವ ಬದಲು ಜನರ ಬದುಕಿನ ಕನಿಷ್ಟ ದಾರಿಯನ್ನೂ ಮುಚ್ಚುತ್ತಿರುವುದರ ಬಗ್ಗೆ ನಮಗೆ ಆತಂಕವಾಗಿದೆ. ಕೊವಿಡ್ ಪೀಡಿತ ಎರಡು ವರ್ಷಗಳ ಹೊಡೆತದಿಂದ ಸಮಾಜವಿನ್ನೂ ಹೊರ ಬಂದಿಲ್ಲ. ಈ ಸಂದರ್ಭದಲ್ಲಿ ಪ್ರತಿ ದಿನ ಒಂದಲ್ಲ ಒಂದು ಭಾವೋದ್ರೇಕದ ಸಂಗತಿಗಳನ್ನು ಎತ್ತಿ ಜನಮಾನಸವನ್ನು ಇನ್ನಷ್ಟು ತಲ್ಲಣಗೊಳಿಸುತ್ತ ಸಮಾಜದ ಶಾಂತಿ, ಸುವ್ಯವಸ್ಥೆಗೆ ಭಂಗತರುತ್ತಿರುವುದನ್ನು ನಾವು ಒಪ್ಪುವುದಿಲ್ಲ.
ಸರ್ವ ಜನಾಂಗದ ಶಾಂತಿಯ ತೋಟವೆಂದು ನಾಡಗೀತೆಯನ್ನು ಪ್ರತಿನಿತ್ಯ ಪಠಿಸುವ ಈ ನೆಲದಲ್ಲಿ ಉದ್ದೇಶ ಪೂರ್ವಕವಾಗಿ ಧರ್ಮ ದ್ವೇಷವನ್ನು ಹುಟ್ಟು ಹಾಕುವ ಕೆಲಸ ನಿರ್ಲಜ್ಜವಾಗಿ ನಡೆಯುತ್ತಿದೆ. ಮತಾಂಧತೆ ಮತ್ತು ಕೋಮುವಾದದ ಅಟ್ಟಹಾಸ ಹೆಣ್ಣು ಮಕ್ಕಳ ತಲೆ ವಸ್ತ್ರವನ್ನೂ ಅಸ್ತ್ರವನ್ನಾಗಿ ಬಳಸಿಕೊಂಡು ಮುಸ್ಲಿಂ ಸಮುದಾಯದ ಬಡ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನೂ ಕಸಿಯುತ್ತಿದೆ. ಶೈಕ್ಷಣಿಕ ವರ್ಷಾಂತ್ಯದಲ್ಲಿ ಎದ್ದ ಶಿರವಸ್ತ್ರ ವಿವಾದ ದ್ವಿತೀಯ ಪಿ.ಯು.ಸಿ. ಓದುತ್ತಿರುವ ಮುಸ್ಲಿಂ ಹೆಣ್ಣು ಮಕ್ಕಳ ಭವಿಷ್ಯವನ್ನು ಅತಂತ್ರಗೊಳಿಸಿದರೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮುನ್ನಾದಿನ ಸಮವಸ್ತ್ರ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿ ಮುಸ್ಲಿಂ ಹೆಣ್ಣುಮಕ್ಕಳ ಜೊತೆ ಇತರ ಬಡ, ಹಿಂದುಳಿದ ವರ್ಗಗಳ ಮಕ್ಕಳೂ ಕಂಗಾಲಾಗುವಂತೆ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಶಾಲೆಗಳೇ ನಡೆದಿಲ್ಲ. ಎರಡು ವರ್ಷ ಮೊದಲು ಪೂರೈಕೆ ಮಾಡಿದ ಸಮವಸ್ತ್ರಗಳನ್ನು ಬೆಳೆಯುವ ಮಕ್ಕಳು ಈಗ ತೊಡಲು ಸಾಧ್ಯವಾಗುವುದಿಲ್ಲ. ಇಷ್ಟು ಕನಿಷ್ಟ ಪ್ರಜ್ಞೆಯೂ ಇಲ್ಲದೇ ಪರೀಕ್ಷೆಯ ಮುನ್ನಾದಿನ ಸಮವಸ್ತ್ರ ಕಡ್ಡಾಯಗೊಳಿಸುವ ಅಗತ್ಯ ಸರಕಾರಕ್ಕೆ ಏನಿತ್ತು, ಇದಾವ ಪರಿಯ ನಡವಳಿಕೆ ಎಂದು ನಮಗೆ ಅರ್ಥವಾಗುತ್ತಿಲ್ಲ.
ಇದ್ದಕ್ಕಿದ್ದಂತೆ ಮತ್ತೆ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಮಕ್ಕಳು ಸಂವಿಧಾನವನ್ನು ಓದುವುದು ಅಗತ್ಯವೆಂದು ನಾವು ಅಭಿಪ್ರಾಯ ಪಡುತ್ತೇವೆ.
ಬಹುರೂಪಿಯಂಥಹ ಸಾಂಸ್ಕೃತಿಕ ಉತ್ಸವದಲ್ಲಿ ಉದ್ದಾಮ ಪಂಡಿತರೆಂದು ಕರೆಯಿಸಿಕೊಳ್ಳುತ್ತಿರುವವರು ಮಹಿಳೆಯರನ್ನು ಕುರಿತು ಲೇವಡಿ ಮಾಡಿ ಕೀಳು ಮಟ್ಟದ ಭಾಷೆಯನ್ನು ಬಳಸಿ ಅದನ್ನೊಂದು ಹಾಸ್ಯ ಪ್ರಜ್ಞೆ ಎಂದು ಸಮರ್ಥಿಸಿಕೊಳ್ಳುತ್ತಾರೆ.
ಸಾಮರಸ್ಯದ ತಾಣಗಳನ್ನು ವಿವಾದದ ಕೇಂದ್ರಗಳನ್ನಾಗಿ ಪರಿವರ್ತಿಸಿ ರಾಜಕೀಯದಾಟಕ್ಕೆ ಬಳಸುವುದು ಅಕ್ಷಮ್ಯ ಅಪರಾಧವಾಗಿದೆ. ತಲೆ ತಲಾಂತರಗಳಿಂದ ಉಳಿಸಿ ಬೆಳೆಸಿಕೊಂಡು ಬಂದ ಪರಂಪರಾಗತ ಸೌಹಾರ್ದತೆಯನ್ನು ಹಾಳುಗೆಡಹಲು ಟೊಂಕ ಕಟ್ಟಿ ನಿಂತವರನ್ನು ನಿಗ್ರಹಿಸಬೇಕಾದುದು ಸರಕಾರದ ಹೊಣೆ ಎಂದು ನಾವು ಅಭಿಪ್ರಾಯ ಪಡುತ್ತೇವೆ.
ರಾಜ್ಯದ ಎಲ್ಲೆಡೆಯ ಜಾತ್ರೆಗಳು, ಉತ್ಸವಗಳು, ಹಬ್ಬಗಳು, ರಾಶಿ ಕಣಗಳು ಹೀಗೆ ಎಲ್ಲ ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಮುಸ್ಲಿಂ ಬಂಧುಗಳಿಲ್ಲದೆ ಸಂಪನ್ನವಾಗುವುದೇ ಇಲ್ಲ. ಕೆಲವು ವರ್ಷಗಳ ಹಿಂದೆ ಗದಗಿನ ತೋಂಟದಾರ್ಯ ಮಠದ ಜಾತ್ರಾ ಸಮಿತಿಯ ಅಧ್ಯಕ್ಷತೆಯನ್ನು ಮುಸ್ಲಿಂ ಬಾಂಧವರಿಗೆ ನೀಡಲಾಗಿತ್ತು. ಇದಕ್ಕೆ ಬಂದ ವಿರೋಧವನ್ನು ಲೆಕ್ಕಿಸದೇ ನಿರ್ಧಾರಯುತವಾಗಿ ಜಾತ್ರೆ ನಡೆಸಲಾಯಿತು. ಇದು ಈ ನೆಲದ ಸಾಮರಸ್ಯದ ಪರಂಪರೆ.
ಕಲಬುರಗಿಯ ಶರಣ ಬಸವೇಶ್ವರ ಮತ್ತು ಖ್ವಾಜಾ ಬಂದೇನವಾಜ, ತಿಂಥಿಣಿಯ ಮೋನಪ್ಪಯ್ಯನ ಸನ್ನಿಧಿ, ಬೀದರಿನ ಅಷ್ಟೂರಿನ ದರ್ಗಾ, ಹಾಸನದ ಬೇಲೂರು ಜಾತ್ರೆ, ಶಿರಸಿಯ ಮಾರಿಕಾಂಬಾ ಜಾತ್ರೆ, ದಕ್ಷಿಣ ಕನ್ನಡದ ಹಲವು ಪ್ರದೇಶಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳು ಒಂದು ಧರ್ಮದ, ಒಂದು ಜಾತಿಯ ಉತ್ಸವಗಳಾಗಿ ನಡೆಯುತ್ತಿಲ್ಲ. ಶರಣಬಸವೇಶ್ವರ ರಥೋತ್ಸವಕ್ಕೆ ಬಂದೇನವಾಜ್ ದರ್ಗಾದಿಂದ ತಪ್ಪದೆ ಗಂಧ ಬರುತ್ತದೆ. ಸಿಹಿಭಕ್ಷ್ಯಗಳು, ಹೂಹಾರ ಅಪ್ಪನ ಸನ್ನಿಧಿಗೆ ದರ್ಗಾದ ಸಜ್ಜಾದೆಯವರು ಭಯಭಕ್ತಿಯಿಂದ ಅರ್ಪಿಸುತ್ತಾರೆ. ಬಂದೇನವಾಜ್ ಉರುಸಿಗೆ ಅಪ್ಪನ ದಾಸೋಹದಿಂದ ಚಾದರ, ಹೂಹಾರ, ಸಿಹಿಖಾದ್ಯಗಳು ಬಾಜಾ ಭಜಂತ್ರಿ ಸಕಲ ಗೌರವದೊಂದಿಗೆ ತೆರಳುತ್ತವೆ.
ದೇಶ ವಿದೇಶಗಳಲ್ಲಿ ಕಂಪು ಹರಡಿರುವ ಮಂಗಳೂರು ಮಲ್ಲಿಗೆಯನ್ನು ಬೆಳೆಯುವವರು ಕ್ರಿಶ್ಚಿಯನ್ನರು, ಮಾರುವವರು ಮುಸಲ್ಮಾನರು ಮತ್ತು ಮುಡಿಯುವವರು ಹಿಂದೂಗಳು ಇದು ಯಾವತ್ತಿಗೂ ಕೇಳಿ ಬರುವ ಮಾತುಗಳು. ಇದು ಇಲ್ಲಿನ ಭಾವೈಕ್ಯದ ಅನೂಚಾನಾದ ಪರಂಪರೆ. ಇದನ್ನು ಕಲುಷಿತಗೊಳಿಸುವ, ಕೋಮುವಾದಿ ಬಣ್ಣ ಹಚ್ಚುವ ಹಕ್ಕು ಯಾರಿಗೂ ಇಲ್ಲ.
ಬೆಂಗಳೂರಿನ ಪ್ರಖ್ಯಾತ ಕರಗ ಕಾಟನ್ ಪೇಟೆಯ ಮಸ್ತಾನ್ ದರ್ಗಾಕ್ಕೆ ತೆರಳಿ ಪೂಜೆಯನ್ನು ಸ್ವೀಕರಿಸಿ ಮುನ್ನಡೆಯುತ್ತದೆ. ಹೀಗೆ ಈ ನೆಲದ ಪ್ರತಿ ಬೀದಿಗಳಲ್ಲಿ ಸಾಮರಸ್ಯದ ಸಂಕೇತ ಕಾಣಸಿಗುತ್ತಿದೆ. ಅದು ನೆಲದ ಜೀವನಾಡಿ. ಇದನ್ನು ಹೀಗೇ ಕಾಪಿಟ್ಟುಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಎಲ್ಲರ ಮೇಲಿದೆ.
ಸಾಮರಸ್ಯ ಪರಂಪರೆಯ ನಾಡಿನಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರಿದ್ದು ಅಸಂವಿಧಾನಿಕ ನಡೆ. ಎಲ್ಲ ತಾಲೂಕುಗಳಲ್ಲಿ ಹಿಂದುತ್ವವಾದಿ ಸಂಘಟನೆಗಳು ತಹಶೀಲ್ದಾರರಿಗೆ ಪತ್ರ ಸಲ್ಲಿಸಿ ಮುಸಲ್ಮಾನರಿಗೆ ಅಂಗಡಿ ಪರವಾನಗಿ ನೀಡದಂತೆ, ಒತ್ತಾಯಿಸುತ್ತಿದ್ದಾರೆ. ಜಾತ್ರೆಗಳ ಸ್ಥಳದಲ್ಲಿ ಈ ಕುರಿತ ಬ್ಯಾನರ್‌ಗಳನ್ನು ಕಟ್ಟಿ ಎಚ್ಚರಿಕೆ ನೀಡಲಾಗುತ್ತಿದೆ. ಯಾವುದೇ ಸಮುದಾಯದ ಜನರ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ತಂದು ಅವರ ಜೀವನೋಪಾಯಗಳನ್ನು ಕಿತ್ತುಕೊಳ್ಳುವುದು ಅವರ ಜೀವಿಸುವ ಹಕ್ಕಿನ ಮೇಲಿನ ಧಾಳಿಯಾಗುತ್ತದೆ. ಇದರಿಂದ ಮುಂದೆ ಉಂಟಾಗಬಹುದಾದ ಪರಿಣಾಮಗಳನ್ನು ಊಹಿಸಲು ಸಾಧ್ಯವಿಲ್ಲ. ಇದು ಧರ್ಮ ಪಾಲನೆಯ ಕೆಲಸವಲ್ಲ. ಸಾಮರಸ್ಯದ ಈ ನೆಲವನ್ನು ಹಾಳುಗೆಡಹುವುದು ಅಧಿಕಾರದಲ್ಲಿರುವ ತಮಗೆ ಶೋಭೆಯಲ್ಲ.
ಯಾವುದೇ ಸರಕಾರದ ಕರ್ತವ್ಯ ಜನ ಜೀವನ ಶಾಂತಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದೇ ಹೊರತು ದುರುದ್ದೇಶಪೂರಿತವಾಗಿ ಶಾಂತಿ ಕದಡುವುದಲ್ಲ ಎಂದು ಹೇಳಬಯಸುತ್ತೇವೆ.
ವಿಧಾನ ಪರಿಷತ್ತಿನಲ್ಲಿ “ಹಿಂದೂ ದೇವಸ್ಥಾನಗಳ ಆವರಣದ ಸ್ವತ್ತು ಮತ್ತು ಜಾಗವನ್ನು ಹಿಂದೂ ಧರ್ಮದವರಿಗಲ್ಲದೆ ಬೇರೆಯವರ ಬಳಕೆಗೆ ನೀಡಬಾರದೆಂಬ ಕಾನೂನು ಇದೆ” ಎಂದು ಉತ್ತರ ಬಂದಿದೆ. 2002ರ ಕಾನೂನಲ್ಲಿ ದೇವಸ್ಥಾನಗಳಲ್ಲಿ ವ್ಯಾಪಾರ ನಡೆಸುವ ಗುತ್ತಿಗೆದಾರರು ಅಶ್ಲೀಲ, ಅನಾರೋಗ್ಯಕರ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವಂತಹ ಚಟುವಟಿಕೆಗಳನ್ನು ನಡೆಸಬಾರದು ಎಂದಿದೆ. ಮತ್ತು ದೇವಸ್ಥಾನದ ಆಸ್ತಿ-ಪಾಸ್ತಿಗಳನ್ನು ಯಾರೂ ಲಪಟಾಯಿಸಬಾರದು ಎಂಬ ಉದ್ದೇಶವಿದೆ. ಕೋಮುವಿಷಕ್ಕೆ ಗಾಳಿ ಹಾಕಲೆಂದು ಅಲ್ಲ. ಒಂದು ವೇಳೆ ಅದನ್ನು ವಿಪರೀತವಾಗಿ ಅರ್ಥೈಸಿಕೊಳ್ಳುವ ಹಾಗಿದ್ದರೆ ಅದನ್ನು ಸರಿಪಡಿಸಲು ಅಗತ್ಯವಾದ ತಿದ್ದುಪಡಿ ಮಾಡಬೇಕು.
ಈ ಹಿನ್ನೆಲೆಯಲ್ಲಿ ನಾವು ಕಳವಳದ ಮನಸ್ಸಿನಿಂದ ತಮಗೆ ಈ ಒತ್ತಾಯ ಪತ್ರವನ್ನು ನೀಡುತ್ತಿದ್ದೇವೆ. ಪಕ್ಷ ಯಾವುದೇ ಇರಲಿ ಸರಕಾರಕ್ಕೆ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವ ಜವಾಬ್ದಾರಿ ಇದೆ. ಅದನ್ನು ನಿಭಾಯಿಸಲು ಕರ್ನಾಟಕ ಸರ್ಕಾರ ಬದ್ಧವಾಗಬೇಕು ಎಂದು ಆಗ್ರಹಿಸುತ್ತೇವೆ.
ನಮ್ಮ ಒತ್ತಾಯಗಳು ಹೀಗಿವೆ:
- ಶೈಕ್ಷಣಿಕ ವರ್ಷಾಂತ್ಯದಲ್ಲಿ ಅನಗತ್ಯ ಎದ್ದ ಶಿರವಸ್ತ್ರ ವಿವಾದದಿಂದ ತೊಂದರೆಗೊಳಗಾದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವರ ಸಾಂವಿಧಾನಿಕ ಶಿಕ್ಷಣದ ಹಕ್ಕನ್ನು ನಿರಾಕರಿಸದೇ ಸಮವಸ್ತ್ರದ ಭಾಗವಾಗಿಯೇ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು ಅದಕ್ಕೆ ಅಗತ್ಯವಾದ ಸೂಚನೆಯನ್ನು ಅಧಿಕೃತವಾಗಿ ಸರಕಾರವು ನೀಡಬೇಕು.
- ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು.
- ರಾಜದ್ಯ ವಿವಿಧ ಕಡೆ ನಡೆಯುತ್ತಿರುವ ಜಾತ್ರೆಗಳಲ್ಲಿ ಧರ್ಮ ಬೇಧವಿಲ್ಲದೇ ಈ ಮೊದಲು ನಡೆಯುತ್ತಿದ್ದ ಸಾಮರಸ್ಯ ಪರಂಪರೆಯ ಚಟುವಟಿಕೆಗಳು, ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮುಂದುವರೆಯಬೇಕು. ದುರುದ್ದೇಶಪೂರ್ವಕವಾಗಿ ಅದನ್ನು ಹಾಳುಗೆಡಹುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು.
- ಪ್ರಸ್ತಾಪಿಸುತ್ತಿರುವ 2002ರ ಕಾಯ್ದೆಯಲ್ಲಿ ಸಂವಿಧಾನ ವಿರೋಧವಾದ ನಿರ್ಬಂಧದ ಅಂಶಗಳಿದ್ದರೆ ಅವನ್ನು ಸರಿಪಡಿಸಲು ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು.
- ಧರ್ಮ ಮತ್ತು ಮತಾಂಧತೆಯ ಅಮಲೇರಿಸಿಕೊಂಡು ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು. ಭಗವದ್ಗೀತೆಯನ್ನು ಪಠ್ಯವಾಗಿಸುವ ಪ್ರಸ್ತಾಪವನ್ನು ಕೈ ಬಿಡಬೇಕು.
- ಕನ್ನಡ ನೆಲದ ಸಾಮರಸ್ಯ ಪರಂಪರೆಗೆ ಯಾವುದೇ ಕುತ್ತು ಬಾರದಂತೆ ಸರ್ಕಾರವು ಕ್ರಮಕೈಗೊಳ್ಳಬೇಕು.
ಸಂವಿಧಾನದತ್ತ ಹಕ್ಕುಗಳ ಪರವಾದ ನಮ್ಮ ಒತ್ತಾಯಗಳನ್ನು ತಮ್ಮ ಸಾಂವಿಧಾನಿಕ ಕರ್ತವ್ಯದ ಭಾಗವಾಗಿ ಪರಿಗಣಿಸಬೇಕೆಂದು ವಿನಂತಿಸುತ್ತೇವೆ ಎಂದು ಕೆಳಗೆ ಹೆಸರಿಸಲಾದ ಪ್ರಮುಖರು ಮುಖ್ಯಮಂತ್ರಿಗಳಿಗೆ ಪತ್ರವನ್ನು ರವಾನಿಸಿದ್ದಾರೆ.
ಡಾ. ಕೆ.ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಬೊಳುವಾರ ಮಹ್ಮದ್ ಕುಂಞಿ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಸುರೇಶ್, ಕೆ.ನೀಲಾ, ಡಾ.ರಹಮತ್ ತರಿಕೆರೆ, ಚಿದಂಬರ ರಾವ್ ಜಂಬೆ, ಡಾ.ವಸುಂಧರಾ ಭೂಪತಿ, ವಿಮಲಾ.ಕೆ.ಎಸ್, ಡಾ.ಎನ್.ಗಾಯತ್ರಿ, ಡಾ. ಜಿ.ರಾಮಕೃಷ್ಣ, ಅಚ್ಯುತ, ವಾಸುದೇವ ಉಚ್ಚಿಲ, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಬಿ.ಐ.ಇಳಿಗೆರ, ಜೆ.ಸಿ.ಶಶಿಧರ್, ಡಾ.ಕಾಶಿನಾಥ ಅಂಬಲಗಿ, ಡಾ.ಪ್ರಭು ಖಾನಾಪುರೆ, ಎನ್.ಕೆ.ವಸಂತ್ ರಾಜ್, ಯಶವಂತ ಮರೋಳಿ, ಡಾ.ಕೆ.ಷರೀಫಾ, ಡಾ ಹೇಮಾ ಪಟ್ಟಣಶೆಟ್ಟಿ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಚಂದ್ರ ಪೂಜಾರಿ, ಪ್ರೊ.ನರೇಂದ್ರ ನಾಯಕ್, ಪ್ರೊ.ಕೆ.ಫಣಿರಾಜ್, ಡಾ.ಇಂದಿರಾ ಹೆಗಡೆ, ಪ್ರೊ.ರಾಜೇಂದ್ರ ಉಡುಪ, ಪ್ರೊ.ಮಾಧವಿ ಭಂಡಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಕೆ.ರಾಘವ, ಅಮೃತಾ ಅತ್ರಾಡಿ, ಕೆ ಸದಾಶಿವ ಮಾಸ್ಟ್ರು, ಪ್ರೊ.ಭೂಮಿಗೌಡ, ಎಂ ದೇವದಾಸ, ಎಸ್.ವೈ.ಗುರುಶಾಂತ್, ವೆಂಕಟೇಶ ಪ್ರಸಾದ್, ಚಂದ್ರಹಾಸ ಉಲ್ಲಾಳ್, ಐ.ಕೆ.ಬೋಳವಾರ್, ಮನೊಜ ವಾಮಂಜೂರ್, ಪ್ರಭಾಕರ ಕಾಪಿಕಾಡ್, ಟಿ.ಆರ್.ಭಟ್, ಶ್ಯಾಮಸುಂದರ ರಾವ್, ನಾ.ದಿವಾಕರ್, ಕಲೀಂ, ಸಿ.ಬಸವಲಿಂಗಯ್ಯ, ಎಲ್.ಜಗನ್ನಾಥ್, ಕೆ.ಎಸ್.ಲಕ್ಷ್ಮೀ, ಬಿ.ಎಂ.ಹನೀಫ್, ನಾಗೇಶ ಕಲ್ಲೂರ, ಸುಷ್ಮಾ, ಡಾ.ಕಾಳೆಗೌಡ ನಾಗವಾರ, ಕೋದಂಡ ರಾಂ, ಮಾವಳ್ಳಿ ಶಂಕರ್, ಯಮುನಾ ಗಾಂವ್ಕರ್