ಶಿಲ್ಪಕಲೆಗಳ ನಾಡು ಹಾಸನ ಜಿಲ್ಲೆಯಲ್ಲಿ ಕೋಮುವಾದದ ಮೋಡ ಮುಸುಕುತ್ತಿದೆ

ಎಚ್.ಆರ್. ನವೀನ್ ಕುಮಾರ್, ಹಾಸನ

ಹಾಸನ ಎಂದರೆ ಅದು ಶಿಲ್ಪಕಲೆಗೆ ಹೆಸರುವಾಸಿಯಾದ ಜಿಲ್ಲೆ. ಜಗತ್ತಿನ ಅತ್ಯಂತ ಎತ್ತರದ ಏಕಶಿಲಾ ವಿಗ್ರಹ ಶ್ರಮಣಬೆಳಗುಳದಲ್ಲಿದೆ, ಅತ್ಯಂತ ನೈಪುಣ್ಯ ಶಿಲ್ಪಕಲೆಗೆ ಖ್ಯಾತಿಪಡೆದ ಯುನೆಸ್ಕೋ ಪಟ್ಟಿಗೆ ಸೇರುತ್ತಿರುವ ಬೇಲೂರು ಹಳೇಬೀಡುಗಳಿವೆ, ಕನ್ನಡದ ಮೊಟ್ಟಮೊದಲ ಶಾಸನ “ಹಲ್ಮಿಡಿ ಶಾಸನ” ಸಿಕ್ಕಿದ್ದು ಹಾಸನ ಜಿಲ್ಲೆಯಲ್ಲಿ, ಇಲ್ಲಿ ಕಾವೇರಿ ಹೇಮಾವತಿ ಯಗಚಿ ನದಿಗಳು ಹರಿಯುತ್ತವೆ. ಮಲೆನಾಡು, ಅರೆ ಮಲೆನಾಡಿನಿಂದ ಕೂಡಿದ ಈ ಜಿಲ್ಲೆಯನ್ನ ಬಡವರ ಊಟಿ ಎಂತಲೂ ಕರೆಯುತ್ತಾರೆ. ಇಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದ ಅಂತರಿಕ್ಷ ಉಪಗ್ರಹ ನಿಯಂತ್ರಣಾ ಕೇಂದ್ರ ಎಂಸಿಎಫ್ ಇದೆ. ಇಲ್ಲಿ ಕೃಷಿಯೇ ಪ್ರಧಾನ, ಇದರ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ಜಿಲ್ಲೆ ಹಿಂದೆ ಬಿದ್ದಿಲ್ಲ. ಚಾವುಂಡರಾಯ, ಮೊದಲನೇ ನಾಗವರ್ಮ, ನಾಗಚಂದ್ರ, ಜನ್ಮ, ಕೆರೆಯ ಪದ್ಮರಸ, ಕೇಶಿರಾಜ, ಆಂಡಯ್ಯ ಮುಂತಾದವರು ಪ್ರಾಚೀನ ಸಾಹಿತಿಗಳಾದರೆ, ಕರಿಬಸವ ಶಾಸ್ತ್ರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ವಿ.ರಂಗಣ್ಣ, ಡಿ.ಗೋವಿಂದದಾಸ್, ಅನಾಕೃ, ಎಸ್.ಕೆ.ಕರೀಂಖಾನ್, ಮತ್ತಿಘಟ್ಟ ಕೃಷ್ಣಮೂರ್ತಿ, ವಿಜಯಾ ದಬ್ಬೆ, ಕಿ.ರಂ. ನಾಗರಾಜ್ ಎಸ್.ಎಲ್. ಭೈರಪ್ಪ, ಎಂ.ವಿ.ವಸು, ಜ.ಹೋ.ನಾರಾಯಣಸ್ವಾಮಿ, ಭಾನು ಮುಸ್ತಾಕ್, ರೂಪಹಾಸನ ಸೇರಿದಂತೆ ಹಲವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಲ್ಲಿ ಅಂತರಾಷ್ಟ್ರೀಯ ಖ್ಯಾತಿಕ ಕಲಾವಿಧರಿದ್ದಾರೆ, ಕನ್ನಡದ ಏಕೈಕ ಪ್ರಧಾನಿ ದೇವೇಗೌಡರ ಹುಟ್ಟು ರಾಜಕೀಯ ಜೀವನ ಹಾಸನ ಜಿಲ್ಲೆಯಲ್ಲೇ ನಡೆದಿದೆ. ಇಷ್ಟೇ ಅಲ್ಲದೆ ಈ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಪಂಥಗಳು ಸಾಮರಸ್ಯವಾಗಿ ಬಾಳಿ ನಾಡಿನ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.

ಹಾಸನ ಜಿಲ್ಲೆಯ ಮೇಲೆ ಗಡಿ ಭಾಗದ ಜಿಲ್ಲೆಗಳ ಪ್ರಭಾವವಿದೆ. ಒಂದೆಡೆ ಕಡಲತಡಿ ಕರಾವಳಿ ಮಂಗಳೂರಿನ ಪ್ರಭಾವ, ಮತ್ತೊಂಡೆಗೆ ಸೌಹಾರ್ದದ ಸಂಕೇತವಾದ ಬಾಬಬುಡನ್ ಗಿರಿಯ ಪ್ರಭಾವ, ಮತ್ತೊಂದೆಡೆ ಮಲೆನಾಡಿನ ಸೊಬಗು ರಾಷ್ಟ್ರಕವಿಯ ನೆಲೆ ಶಿವಮೊಗ್ಗದ ಪ್ರಭಾವ, ಮತ್ತೊಂದೆಡೆ ವೀರಯೋಧರ ನಾಡಾದ ಕೊಡಗಿನ ಪ್ರಭಾವ, ಸಾಂಸ್ಕೃತಿಕ ನಗರಿ ಮೈಸೂರು ಶೈಕ್ಷಣಿಕವಾಗಿ ಪ್ರಭಾವಬೀರಿದೆ. ಭೌಗೋಳಿಕವಾಗಿ ಗಡಿಗಳನ್ನು ಹಂಚಿಕೊಂಡಿರುವ ಈ ಜಿಲ್ಲೆಗಳು ಇದುವರೆಗೂ ಅಲ್ಲಿಯ ಸಾಹಿತ್ಯ, ಸಂಸ್ಕೃತಿ ಮತ್ತು ಸೌಹಾರ್ದತೆಯನ್ನು ಹಂಚುತ್ತಿದ್ದವು. ಈಗ ಅದೇ ಜಿಲ್ಲೆಗಳಿಂದ ಕೋಮುವಾದದ ವಿಷಗಾಳಿ ಜಿಲ್ಲೆಯ ಮೇಲೆ ಮೆಲ್ಲಗೆ ಬೀಸುತ್ತಿದೆ.

ಜಿಲ್ಲೆ ಮೊದಲಿನಿಂದಲೂ ಕೋಮುಸೌಹಾರ್ದ ಎನ್ನುವುದು ಜನರ ಮನಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಇತ್ತೀಚಿನ ವರ್ಷಗಳ ರಾಜಕೀಯ ಬೆಳವಣಿಗೆಗಳು ಅರೆಮಲೆನಾಡಿನ ಮೇಲೆ ಮೋಡಕವಿದ ವಾತಾವರಣವನ್ನು ಸೃಷ್ಟಿಸುವ ಕೆಲವು ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ಸ್ಪಷ್ಟ ರಾಜಕೀಯ ಕಾರಣಗಳು ಢಾಳಾಗಿ ಗೋಚರಿಸಿದರೂ ಅದರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ. ಮಾತ್ರವಲ್ಲದೆ. ಅನುಮಾನಗಳ ವಿಷಬೀಜ ಮೊಳಕೆಯೊಡೆಯಲು ಪ್ರಾರಂಭಿಸಿದೆ. ಬಾಹ್ಯ ವಾತಾವರಣ ಈ ವಿಷ ಬೀಜವನ್ನು ಬೃಹತ್ ವಿಷಹೃಕ್ಷವನ್ನಾಗಿ ಬೆಳೆಸುವ ಮುನ್ನ ಎಚ್ಚೆತ್ತು ಅದನ್ನ ಬುಡಸಮೇತ ಕಿತ್ತು ಹಾಕದಿದ್ದರೆ ಅದು ನಮ್ಮೆಲ್ಲರನ್ನು ಆವರಿಸಿ ಉಸಿರುಗಟ್ಟಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಘಟೆಗಳನ್ನು ನೋಡೋಣ.

ಜಾತ್ರೆಗಳಲ್ಲಿ ಮುಸ್ಮಿಂ ವ್ಯಾಪಾರಿಗಳಿಗೆ ನಿರ್ಭಂದ

ಜಿಲ್ಲೆಯ ಬೇಲೂರಿನ ಚನ್ನಕೇಶವಸ್ವಾಮಿ ದೇವಸ್ಥಾನ ಶಿಲ್ಪಕಲೆಗೆ ಎಷ್ಟು ಪ್ರಸಿದ್ದವೋ ಅಷ್ಟೇ ಪ್ರಸಿದ್ದ ಇಲ್ಲಿ ಪ್ರತೀ ವರ್ಷ ನಡೆಯುವ ಜಾತ್ರೆ. ಈ ಜಾತ್ರೆಗೆ ಸುತ್ತಮುತ್ತಲಿಂದ ಸಾವಿರಾರು ಜನ ಸೇರಿರುತ್ತಾರೆ. ಚನ್ನಕೇಶವಸ್ವಾಮಿ ರಥೋತ್ಸವ ಪ್ರಾರಂಭವಾಗುವ ಮುನ್ನ ಸ್ಥಳೀಯ ದರ್ಗಾದಿಂದ ಮುಸ್ಮಿಂ ಧರ್ಮಗುರುಗಳು ಬಂದು ಕುರಾನಿನ ಕೆಲವು ಭಾಗಗಳನ್ನು ರಥದ ಮುಂದೆ ನಿಂತು ಪಠಿಸುವ ಮೂಲಕವೇ ತೇರಿಗೆ ಚಾಲನೆ ಕೊಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇಂತಹ ಜಾತ್ರೆಯಲ್ಲಿ ಮುಸ್ಮಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬಾರದೆಂದು ವಿಶ್ವಹಿಂದು ಪರಿಷತ್ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡುತ್ತದೆ. ಈ ವಿಷಯ ಬೇಲೂರು ಸೇರಿದಂತೆ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಇದಕ್ಕೆ ಪಕ್ಕದ ಮಂಗಳೂರಿನಲ್ಲಿ ನಡೆದ ಪ್ರಯೋಗವೇ ಪ್ರೇರಣೆಯೆಂಬುದನ್ನು ಪ್ರತ್ತೇಕವಾಗಿ ಹೇಳಬೇಕಾಗಿಲ್ಲ. ಬೇಲೂರು ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಯಾರಾದರೂ ಬೇಟಿಕೊಟ್ಟಿದ್ದರೆ ಅವರಿಗೆ ದೇವಸ್ಥಾನದ ಎದುರು ಕೊಳಲು ಬಾರಿಸುವ, ವೈಲಿನ್ ಬಾರಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ, ಅತ್ಯಂತ ಸಣ್ಣ ಗಾತ್ರದ ತಾಮ್ರದ ವಿಗ್ರಹಗಳು, ಹಳೆ ನಾಣ್ಯಗಳನ್ನು ಮಾರಾಟ ಮಾಡುವವರು ನಿಮ್ಮನು ಸ್ವಾಗತಿಸುತ್ತಾರೆ. ಇವರು ಬೇರಾರೂ ಅಲ್ಲಾ ತಲತಲಾಂತರಗಳಿಂದ ಇದೇ ದೇವಸ್ಥಾನದ ಎದುರು ಪ್ರವಾಸಿಗರನ್ನು ರಂಜಿಸುತ್ತಾ ವ್ಯಾಪಾರ ಮಾಡಿ ಬದುಕುತ್ತಿರುವ ಶ್ರಮಜೀವಿ ಮುಸ್ಲಿಮರು.

ಈ ಇತಿಹಾಸ, ಸಂಸ್ಕೃತಿ ತಿಳಿಯದ ಕಿಡಿಗೇಡಿಗಳು ಇವರ ವ್ಯಾಪಾರಕ್ಕೆ ಅಡ್ಡಿ ಮಾಡಿ ಕೋಮು ಸಾಮರಸ್ಯವನ್ನು ಹಾಳು ಮಾಡುವ ಜೊತೆಗೆ ಇವರ ಬದುಕಿಗೂ ಕಲ್ಲು ಹಾಕಲು ಮುಂದಾದರು. ಜಿಲ್ಲೆಯ ಪ್ರಜ್ಞಾವಂತ ಜನ ಎಚ್ಚೆತ್ತು ಎಲ್ಲಾ ಜನಪರ ಸಂಘಟನೆಗಳನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳ ಎದುರು ಪ್ರತಿಭಟಿಸಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಭಂದ ಹೇರಬಾರದೆಂದು ಒತ್ತಾಯಿಸಿ ಬೇಲೂರು ನಗರದಲ್ಲಿ ಸೌಹಾರ್ದ ನಡಿಗೆಯನ್ನೂ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಇದೆಲ್ಲದರ ಪರಿಣಾಮವಾಗಿ ಎಂದಿನಂತೆ ಜಾತ್ರೆ ಸುಗಮವಾಗಿ ನಡೆಯಿತು. ಮುಸ್ಲಿಂ ಮೌಲ್ವಿ ಬಂದು ಕುರಾನ್ ಪಠಿಸಿದರು ಚನ್ನಕೇಶವನ ರಥ ಮುಂದೆ ಸಾಗಿತು. ಜನರು ಪರಸ್ಪರ ಬೆರೆತು ಸಂತೋಷಪಟ್ಟರು ಮುಸ್ಲಿಮರು ತಮ್ಮ ವ್ಯಾಪಾರವನ್ನು ಮುಂದುವರೆಸಿದರು. ಮುಸ್ಲಿಮರಲ್ಲದವರೂ ಇವರಿಂದ ಗಣಪತಿ, ನಟರಾಜ, ಚನ್ನಕೇಶವನ ಚಿಕ್ಕವಿಗ್ರಹಗಳನ್ನು ಖರೀದಿಸಿ ತಮ್ಮ ದೇವರ ಕೋಣೆಗಳಲ್ಲಿ ಅಲಂಕರಿಸಿದರು, ತಮ್ಮ ಮಕ್ಕಳಿಗೆ ಇವರಿಂದ ಕೊಂಡ ಕೊಳಲನ್ನು ಊದಿಸಿ ಶ್ರೀಕೃಷ್ಣನನ್ನ ಕಂಡರು.

ಮುಸ್ಲಿಂ ವ್ಯಾಪಾರಿಗಳಿಂದ ಮಾವಿನ ಹಣ್ಣು ಖರೀಧಿಸಬೇಡಿ

ಮನುಷ್ಯನ ಶತೃವಿನಂತೆ ಬಂದೆರಗಿದ್ದ ಕೋವಿಡ್ ಮಹಾ ಸೋಂಕಿನ ಬಾದೆಯನ್ನು ಜನ ಅನುಭವಿಸುತ್ತಿರುವಾಗಲೇ ಅದರ ಬೆನ್ನಲ್ಲೇ ಅಂಟಿಕೊಂಡ ಕೋಮುವಾದದ ವೈರೆಸ್ ಕೂಡ ಅಷ್ಟೇ ವ್ಯಾಪಕವಾಗಿ ದೇಶದಾದ್ಯಂತ ಹರಡಿತು. ತಬ್ಲಿಕ್‌ಗಳು ಕರೋನಾ ಹರಡುತ್ತಿದ್ದಾರೆ, ಅವರು ಮಾರಾಟ ಮಾಡುವ ಹಣ್ಣುಗಳಿಗೆ ಎಂಜಲನ್ನು ಸೇರಿಸುತ್ತಿದ್ದಾರೆ, ಇಂತಹದ್ದೇ ಸುದ್ದಿಗಳನ್ನೂ ಜಿಲ್ಲೆಯಲ್ಲಿಯೂ ಹಬ್ಬಿಸಲಾಗಿದೆ… ಇದು ಹಣ್ಣುಗಳ ರಾಜ ಮಾವಿನ ಹಣ್ಣಿನ ಕಾಲ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವಿನ ಹಣ್ಣು ಬೆಳೆಯದಿದ್ದರೂ ರಾಜ್ಯದ ಇತರೆಡೆಗಳಿಂದ ಬರುವ ರೈತರು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರು ಬಹುತೇಕರು ಮುಸ್ಮಿಮರು. ಇದ್ದಕ್ಕಿದ್ದಂತೆ ಒಂದು ದಿನ ಧರ್ಮರಕ್ಷಕರ ಹೆಸರಿನ ಕೆಲವು ಕೇಸರೀಧಾರಿಗಳು ಜಿಲ್ಲೆಯಲ್ಲಿ ಮುಸ್ಲಿಮರಿಂದ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ, ಅವರು ಅದಕ್ಕೆ ವಿಷ ಬೆರೆಸುತ್ತಾರೆ ಎಂಬ ಸುದ್ದಿಯನ್ನು ಹರಡಿದರು. ಆದರೆ ಅವರ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ಮೂರ್ಖರ ಮಾತುಗಳನ್ನು ಕೇಳಿ ಮಾವಿನ ಹಣ್ಣುಗಳನ್ನು ತಿನ್ನದಿರುವಷ್ಟು ದಡ್ಡರಲ್ಲಾ ನಮ್ಮ ಜನ. ಮಾವಿನ ಹಣ್ಣನ್ನು ಮಾರುತ್ತಿರುವವರು ಯಾರು ಎಂಬುದು ಅವರಿಗೆ ಮುಖ್ಯವಾಗಲಿಲ್ಲ, ಬದಲಾಗಿ ಯಾರ ಬಳಿ ರುಚಿಕರವಾಗ ಮಾವಿನ ಹಣ್ಣು ಸಿಗುತ್ತದೆ, ಇದನ್ನು ಬೆಳೆದವನು ರೈತ ತಾನೆ ಎಂಬುದೇ ಮುಖ್ಯವಾಯಿತು.

ಮಂಜರಾಬಾದ್ ಕೋಟೆಯಲ್ಲಿ ಕೇಸರಿ ಧ್ವಜ

ಟಿಪ್ಪುಸುಲ್ತಾನ್ 1792ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಟ್ಟಿಸಿದ ಮಂಜರಾಬಾದ್ ಕೋಟೆ ಅದರ ವಿನ್ಯಾಸ ಮತ್ತು ವಾಸ್ತು ಶಿಲ್ಪದಲ್ಲಿ ಅತ್ಯಂತ ವಿಶಿಷ್ಟವಾಗಿದೆ. ನಕ್ಷತ್ರಾಕಾರದಲ್ಲಿರುವ ಈ ಕೋಟೆಯನ್ನು ನೋಡಲು ಇಂದಿಗೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಕೋಟೆಯನ್ನು ಟಿಪ್ಪುವೇ ಕಟ್ಟಿಸಿದ್ದು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಇದು ಮಂಜಿನ ಕೋಟೆ, ಇದನ್ನು ಪಾಳೇಗಾರ ಕಟ್ಟಿಸಿದ್ದು, ಇದು ಹಿಂದುಗಳಿಗೆ ಸೇರಬೇಕಾದದ್ದು ಎಂದು ಧರ್ಮವನ್ನು ತಲೆಗೇರಿಸಿಕೊಂಡ ಬಜರಂಗದಳದವರು ಇಲ್ಲಿ ಕೇಸರಿ ದ್ವಜವನ್ನು ಹಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಕಲೇಶಪುರ ಮಂಗಳೂರಿನ ಗಡಿ ಭಾಗದಲ್ಲಿರುವುದರಿಂದ ಬಹಳ ಬೇಗ ಇಲ್ಲಿಗೆ ಪ್ರಭಾವ ಬಿರುತ್ತದೆ. ಸಕಲೇಶಪುರದ ಯುವಕರನ್ನು ಕೇಂದ್ರೀಕರಿಸಿ ಜಾತ್ರೆ, ದೇವರ ಕಾರ್ಯಗಳಲ್ಲಿ ಬಜರಂಗದಳ ವ್ಯಾಪಕ ಮಧ್ಯಪ್ರವೇಶ ಮಾಡಿ ಹಳ್ಳಿಹಳ್ಳಿಗಳಲ್ಲೂ ಕೇಸರಿ ಧ್ವಜಗಳನ್ನು ಹಾರಿಸುತ್ತಿದೆ. ಈ ಮೂಲಕ ಕೋಮುಭಾವನೆಯನ್ನು ಕೆರಳಿಸಿ ಯುವಕರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಜೊತೆಗೆ ಇವರ ಬೆಳವಣಿಗೆಗೆ ಪಿ ಎಫ್‌ಐ ನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೂ ಕಾರಣವಾಗಿವೆ ಎಂದು ಸ್ಥಳೀಯರು ದೂರುತ್ತಾರೆ.

ಸಕಲೇಶಪುರದ ಬಾಳ್ಳುಪೇಟೆಯ ರಾಜೇಂದ್ರಪುರ ಎಂಬ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಇದರಲ್ಲಿ ಐದಾರು ಮುಸ್ಲಿಂ ಕುಟುಂಬಗಳೂ ಇವೆ. ಈ ಪ್ರದೇಶದಲ್ಲಿ ಒಂದು ಮರದ ಕೆಳಗೆ ಯಾರೋ ಕಿಡಿಗೇಡಿಗಳು ಹಳೆಯ ಶಾಸನದ ಕಲ್ಲೊಂದನ್ನು ತಂದು ಬಿಸಾಡಿದ್ದಾರೆ. ಈ ಕೆಲಸವನ್ನು ಮುಸ್ಲಿಮರೇ ಮಾಡಿದ್ದು ಅಲ್ಲಿ ಹಿಂದು ದೇವರ ವಿಗ್ರಹಗಳಿದ್ದವು ಅವುಗಳನ್ನು ನಾಶ ಮಾಡಲಾಗಿದೆ ಎಂದು ಪ್ರಚಾರ ಮಾಡಿದ ಬಜರಂಗದಳದವರು ಇವರುಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದರು. ಇದಲ್ಲದೆ ಈ ಪ್ರಕರಣವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಬಾಳ್ಳುಪೇಟೆ ಚಲೋ ಮತ್ತು ಬಂದ್ ಗೆ ಕರೆ ಕೊಡಲಾಗಿತ್ತು. ಆದರೆ ಜನಪರ ಸಂಘಟನೆಗಳ ಸೂಕ್ತ ಮಧ್ಯಪ್ರವೇಶದಿಂದಾಗಿ ಇದನ್ನು ವಿಫಲಗೊಳಿಸಲಾಯಿತು. ಮಾತ್ರವಲ್ಲ ಇದಕ್ಕೂ ಆ ಬಡ ಮುಸ್ಲಿಮರಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸಾಬೀತಾಯಿತು. ಈ ನಡುವೆ ದತ್ತಮಾಲೆ, ಹನುಮ ಮಾಲಾಧಾರಿಗಳು ಹೆಚ್ಚಾಗುತ್ತಿದ್ದಾರೆ ಮತ್ತು ಧರ್ಮಸ್ಥಳಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಪಾದಯಾತ್ರೆಗಳನ್ನು ಹಿಂದು ಸಂಘಟನೆಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ.

ದೇವರ ವಿಗ್ರಹ ನಾಶದ ಹೆಸರಿನಲ್ಲಿ ಅರಸೀಕೆರೆ ಬಂದ್

ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ದೇವಸ್ಥಾನ ಬಳಿ ಹಿಂದೂ ದೇವರ ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು ಅರಸೀಕೆರೆ ಬಂದ್ ಮಾಡಿ ಈ ಘಟನೆಯನ್ನು ತಮ್ಮ ಕೋಮು ಅಜೆಂಡಾಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಬಜರಂಗದಳದ ಆರೋಪವನ್ನು ಪೊಲೀಸರು ನಿರಾಕರಿಸಿ, ಅದು ಅನ್ಯ ಕೋಮಿನವರು ಮಾಡಿದ ಕೆಲಸವಲ್ಲ ಯಾರೋ ಕಿಡಿಗೇಡಿಗಳು ಮಾಡಿದ ಕೆಲಸ ಎಂದು ಸ್ಪಷ್ಟಪಡಿಸಿದ್ದರು. ದೇವರ ಶಿಲ್ಪ ಕೆತ್ತನೆ ಕೆಲಸಗಾರರು ಊಟಕ್ಕೆ ಹೋಗಿದ್ದ ವೇಳೆ, ಯಾರೂ ಇಲ್ಲದ ಸಂದರ್ಭದಲ್ಲಿ ಒಟ್ಟು 13 ಮೂರ್ತಿ ಭಗ್ನಗೊಳಿಸಿದ್ದಾರೆ. ಅದರಂತೆ ತನಿಖೆ ನಡೆಸಿದ ಪೋಲಿಸರು ಅಭಿಷೇಕ್ ಸೇರಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ದೇವಸ್ಥಾನದ ಬಳಿ ಇರುವ ಕಲ್ಯಾಣಿಯಲ್ಲಿ ಈ ಹುಡುಗರು ಈಜಲು ಬರುತ್ತಿದ್ದರು. ಈಜಾಡಿ ಸಿಗರೇಟ್ ಸೇದುತ್ತಿದ್ದ ಇವರನ್ನು ವಿಗ್ರಹ ಕೆತ್ತನೆ ಮಾಡುತ್ತಿದ್ದ ಕೆಲಸಗಾರರು ಪ್ರಶ್ನೆ ಮಾಡಿದ್ದರು. ಅಲ್ಲದೆ ಕಲ್ಯಾಣಿಯಲ್ಲಿ ಈಜಾಡಬೇಡಿ ಎಂದಿದ್ದಕ್ಕೆ ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಮಾಹಿತಿ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದ್ದು ನಡೆಯಬಹುದಾದ ದೊಡ್ಡ ಅನಾಹುತವನ್ನು ಪೊಲೀಸರ ಕರ್ತವ್ಯ ಪ್ರಜ್ಞೆ ತಪ್ಪಿಸಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ರಾಜಕೀಯ ಅಜೆಂಡಾ ಇರುವುದು ಸ್ಪಷ್ಟವಾಗುತ್ತದೆ. ಜಿಲ್ಲೆಯಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕ ಗೆದ್ದಿದ್ದರೂ ಮುಂದಿನ ಚುನಾವಣೆಯಲ್ಲಿ ಸಕಲೇಶಪುರ, ಅರಸೀಕೆರೆ ಮತ್ತು ಬೇಲೂರು ಕ್ಷೇತ್ರಗಳನ್ನು ಕೇಂದ್ರೀಕರಿಸಿ ಹಿಂದುತ್ವವಾದಿಗಳು ಕೋಮುಭಾವನೆಗಳನ್ನು ಕೆರಳಿಸುವ ಕೆಲಸಗಳನ್ನು ನಿರಂತರವಾಗಿ ನಡೆಸುತ್ತಿವೆ. ಇವುಗಳಿಗೆ ಇದುವರೆಗೂ ಜಿಲ್ಲೆಯ ಜನ ದೊಡ್ಡ ಪ್ರಮಾಣದ ಮನ್ನಣೆಯನ್ನು ನೀಡಿಲ್ಲಾ ಎಂಬುದು ಸಮಾಧಾನ ಪಡುವ ಸಂಗತಿಯಾಗಿದ್ದರೂ ಎಚ್ಚರ ತಪ್ಪುವಂತಿಲ್ಲ.

Donate Janashakthi Media

Leave a Reply

Your email address will not be published. Required fields are marked *