ದಲಿತ, ಮಹಿಳೆ, ಆದಿವಾಸಿ, ಹಿಂದುಳಿದವರನ್ನು ಶಿಕ್ಷಣದಿಂದ ದೂರ ಉಳಿಸುವ ಹುನ್ನಾರ: ವಿ.ಪಿ ಸಾನು

ಗಂಗಾವತಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿ ಉಡುಪು, ಆಹಾರದ ಹೆಸರಿನಲ್ಲಿ ಹೆಣ್ಣು ಮಕ್ಕಳು, ಆದಿವಾಸಿಗಳು, ದಲಿತರು, ಹಿಂದುಳಿದರು, ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ದೂರ ಉಳಿಸಲು ಮನುವಾದಿ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಎಸ್ಎಫ್ಐ ರಾಷ್ಟಾಧ್ಯಕ್ಷ ವಿ. ಪಿ. ಸಾನು ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಚನ್ನಬಸವೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ 4 ದಿನಗಳ ಕಾಲ ನಡೆಯುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ರಾಜ್ಯ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ದೊಡ್ಡ ಪ್ರಮಾಣದ ಹೋರಾಟ ಚಳುವಳಿಯನ್ನು ಬೆಳೆಸಲಿದೆ. ಇದರ ಭಾಗವಾಗಿ ಆಗಸ್ಟ್ 1ರಿಂದ ದೇಶಾದ್ಯಂತ ಶಿಕ್ಷಣ ಉಳಿಸಿ, ಸಂವಿಧಾನಗೊಳಿಸಿ ದೇಶ ಉಳಿಸಿ ಎಂಬ ಹೆಸರಿನಲ್ಲಿ ಅಖಿಲ ಭಾರತ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಂಡವಾಳಶಾಹಿ ಆರ್ಥಿಕ ನೀತಿಗಳಿಂದಾಗಿ ಕೋವಿಡ್ ಸಂದರ್ಭದಲ್ಲಿ ಜಗತ್ತಿನಲ್ಲಿ ಆಹಾರ ಮತ್ತು ಲಸಿಕೆ ಅಸಮಾನ ಹಂಚಿಕೆಯಾಗಿದೆ. ಒಂದು ಕಾಲದಲ್ಲಿ ಅಮೇರಿಕದ ಆರ್ಥಿಕ ದಿಗ್ಬಂದನಕ್ಕೆ ಒಳಗಾಗಿ ಒಂದು ಸಿರಂಜ್ ನೀಡಲು ಸಹ ಪರದಾಡುತ್ತಿದ್ದ ಕ್ಯೂಬಾ ಸಮಾಜವಾದಿ ರಾಷ್ಟ್ರ ಈ ಕೋವಿಡ್ ಸಂದರ್ಭದಲ್ಲಿ ಜಗತ್ತಿನ ಶ್ರೀಮಂತ ದೇಶಗಳಿಗೆ ವೈದ್ಯರು ಹಾಗೂ ವೈದ್ಯಕೀಯ ಪರಿಕರಗಳನ್ನು ಕಳುಹಿಸಿದೆ. ಇದು ಜಗತ್ತಿನ ಜನರು ಕೋವಿಡ್ ನಂತರದಲ್ಲಿ ಬಲಪಂಥೀಯ ರಾಜಕಾರಣದಿಂದ ಎಡಪಂಥೀಯ ರಾಜಕಾರಣದ ಕಡೆಗೆ ವಾಲುತ್ತಿದ್ದಾರೆ ಎಂದು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಲ್ಯಾಟಿನ್ ಅಮೆರಿಕಾದ ದೇಶಗಳು ಸೇರಿದಂತೆ ಚಿಲಿ, ಬ್ರೆಜಿಲ್, ವಿಯೆಟ್ನಾಂ, ಕ್ಯೂಬಾ ಮುಂತಾದ ದೇಶಗಳು ಸಮಾಜವಾದಿ ಆರ್ಥಿಕ ನೀತಿಗಳಿಂದ ಆ ದೇಶದ ಎಲ್ಲಾ ಜನರಿಗೂ ಆಹಾರ, ಅಕ್ಷರ, ಆರೋಗ್ಯವನ್ನು ಉಚಿತವಾಗಿ ನೀಡುತ್ತಿವೆ. ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರ ಅನುಸರಿಸಿದ ಬಂಡವಾಳಶಾಹಿ ಆರ್ಥಿಕ ನೀತಿಗಳಿಂದ ನಿರುದ್ಯೋಗ ಹೆಚ್ಚಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಒಂದೊಂದು ಸುಳ್ಳು ಹೇಳಿ ಯುವಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿ ಉದ್ಯೋಗಗಳನ್ನು ನಾಶಗೊಳಿಸಿದ್ದಾರೆಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಇದೀಗ ಮತ್ತೊಂದು ಚುನಾವಣೆಗೆ ಒಂದುವರೆ ವರ್ಷ ಇರುವಾಗ ಅಗ್ನಿಪಥ ಯೋಜನೆ ಮೂಲಕ ಕೇವಲ ನಾಲ್ಕು ವರ್ಷಗಳಿಗೆ 10 ಲಕ್ಷ ಜನ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದಿರುವುದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡಲಿದೆ. ಏಕೆಂದರೆ ಅಧಿಕಾರಕ್ಕೆ ಬರುವ ಮುನ್ನ ಒಂದೇ ಪಿಂಚಣಿ ಎಂದು ಸೈನಿಕರಿಗೆ ಭರವಸೆ ನೀಡಿ ಇದೀಗ ಉಲ್ಟಾ ಹೊಡೆದಿರುವ ನರೇಂದ್ರ ಮೋದಿ ಸರ್ಕಾರ ಸೈನಿಕರಿಗೆ ಸಂಬಳ ನೀಡಲು ಸಹ ಸಾಧ್ಯವಿಲ್ಲ ಎಂದು ಹೇಳಿತ್ತಿದೆ. ಅಲ್ಲದೆ, ನಿರುದ್ಯೋಗಿ ಯುವಕರ ಪಡೆಯನ್ನು ಅಗ್ನಿಪಥ ಹೆಸರಿನಲ್ಲಿ ಬಳಸಿ ಬಿಸಾಕುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಮಾತನಾಡಿದರು. ಗ್ಯಾನೇಶ ಕಡಗದ್ ನಿರೂಪಿಸಿದರು. ಶಿವಕುಮಾರ್ ಈಚನಾಳ ವಂದಿಸಿದರು.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ರಾಜ್ಯ ಪದಾಧಿಕಾರಿಗಳಾದ ಗಾಯತ್ರಿ, ಶಿವಪ್ಪ, ಶಿವಕುಮಾರ್ ಮ್ಯಾಗಳಮನಿ, ಭೀಮನಗೌಡ, ಗ್ಯಾನೇಶ ಕಡಗದ್, ರಮೇಶ ವೀರಾಪೂರು,  ಸೋಮನಾಥ, ನಿರುಪಾದಿ, ಮಂಜುನಾಥ, ಮರಿನಾಗ ಸೇರಿದಂತೆ ಇತರರಿದ್ದರು.

Donate Janashakthi Media

Leave a Reply

Your email address will not be published. Required fields are marked *