ಬೆಂಗಳೂರು: ಪ್ರಸಕ್ತ 2022-23ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾವ ಕೊಡುಗೆಯನ್ನು ನೀಡದಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ನಿರಾಸೆಯನ್ನು ಮೂಡಿಸಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೇಜಷನ್(ಎಐಡಿಎಸ್‌ಓ) ಸಂಘಟನೆಯು ಆರೋಪಿಸಿದೆ.
ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಶೇ. 12ರಷ್ಟು ಮಾತ್ರ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. ಆದರೆ ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಬೇಡಿಕೆ, ರಾಜ್ಯ ಬಜೆಟ್ಟಿನಲ್ಲಿ ಶಿಕ್ಷಣಕ್ಕೆ ಕನಿಷ್ಠ ಶೇ.30 ರಷ್ಟು ಮೀಸಲಿಡಬೇಕು ಎಂಬ ಒತ್ತಾಯವನ್ನು ಪರಿಗಣಿಸದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ರಾಜ್ಯದ 10 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐ.ಐ.ಟಿ. ಮಟ್ಟಕ್ಕೆ ಮುಂಬಡ್ತಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಹೊಸ ಸರ್ಕಾರಿ ಇಂಜಿನಿಯರಿಂಗ್ ಸಂಸ್ಥೆಗಳನ್ನು ಸೃಷ್ಟಿಸುವುದು. ಇದರ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ಈಗ ಕೇವಲ ಮುಂಬಡ್ತಿ ಮಾಡುತ್ತೇವೆ ಎನ್ನುವುದು ಯಾರ ಲಾಭಕ್ಕಾಗಿ ಎಂದು ಪ್ರಶ್ನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ.
ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳ ಮೇಲೆ ಅವಲಂಬನೆ ಹೆಚ್ಚಾಗಿರುವುದು ವಾಸ್ತವ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ 1% ಮಾತ್ರ ಬಜೆಟ್ ನಲ್ಲಿ ಏರಿಕೆ ಆಗಿದೆ. ಇದು ಹೆಚ್ಚು ಹೆಚ್ಚು ಸರ್ಕಾರಿ ಸಂಸ್ಥೆಗಳನ್ನು ತೆರೆಯಬೇಕಿರುವ ಅವಶ್ಯಕತೆಯನ್ನು ಪೂರೈಸುವುದಿಲ್ಲ. ಈ ಅಲ್ಪ ಹಣದಿಂದ ಈಗಿರುವ ಸರ್ಕಾರಿ ಸಂಸ್ಥೆಗಳ ನಿರ್ವಹಣೆ ಆಗಬಹುದೇ ಹೊರತು, ಹೊಸ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಆಗುವುದಿಲ್ಲ.
ರಾಜ್ಯದ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಸೀಟನ್ನು ದಕ್ಕಿಸಿಕೊಳ್ಳಲು ಸಾಲಕ್ಕಾಗಿ ನೆರವು ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಇದು ಯಾವ ನೆರವೂ ಅಲ್ಲ. ಬದಲಿಗೆ ಸರ್ಕಾರ ಸಂಪೂರ್ಣವಾಗಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಸರ್ಕಾರವು ಉನ್ನತ ಶಿಕ್ಷಣದ ಶುಲ್ಕವನ್ನು ಕಡಿಮೆ ಮಾಡಬೇಕಿತ್ತು. ಹೆಚ್ಚೆಚ್ಚು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿತ್ತು. ಈ ಯೋಜನೆಗಳು ವಿದ್ಯಾರ್ಥಿಗಳಿಗೆ ನೆರವು ಆಗುತ್ತಿತ್ತು. ಆದರೆ, ಸಾಲದ ನೆರವಿನ ನೆಪದಲ್ಲಿ, ಸರ್ಕಾರ ಮತ್ತೊಮ್ಮೆ ವಿದ್ಯಾರ್ಥಿಗಳ ತಲೆಯ ಮೇಲೆ ಶುಲ್ಕದ ಹೊರೆಯನ್ನು ಹೋರಿಸಿದೆ.
ಆರ್‌ಜಿಯುಹೆಚ್‌ಎಸ್ ನ ನೂತನ ಕ್ಯಾಂಪಸ್ ತೆರೆಯಲು ಸರ್ಕಾರವು 1000 ಕೋಟಿ ಅನುದಾನ ನೀಡಿದೆ. ಆದರೆ, ರಾಜ್ಯದಲ್ಲಿ ಅತೀ ಅವಶ್ಯಕತೆ ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಲು ಯಾವುದೇ ಅನುದಾನ ಬಿಡುಗಡೆ ಆಗಿಲ್ಲ.
ಕಳೆದ ಹಲವು ವರ್ಷಗಳಿಂದ ಸರ್ಕಾರಿ ಹಾಸ್ಟೆಲ್ ಗಳನ್ನು ಹೆಚ್ಚಿಸಬೇಕು ಎಂದು ಹೋರಾಟಗಳು ನಡೆದಿದ್ದವು. ಪ್ರಸ್ತುತ ವರ್ಷಕ್ಕೆ 150 ಸರ್ಕಾರಿ ಹಾಸ್ಟೆಲ್ ಗಳನ್ನು ಹೆಚ್ಚಿಗೆ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವೆಂದು ಹೇಳಲು ಬಯಸುತ್ತೇವೆ.
ಹಿಂದುಳಿದ ಜಿಲ್ಲೆಗಳಲ್ಲಿ ಹೆಚ್ಚು ತಂತ್ರಜ್ಞಾನ ಆಧಾರಿತ ವಿವಿ ಸ್ಥಾಪಿಸಲು ಸರ್ಕಾರ ನಿರ್ಧರಿಸುವುದು, ವಿಶ್ವ ವಿದ್ಯಾಲಯ ಎಂಬ ಉದಾತ್ತ ಪರಿಕಲ್ಪನೆಗೆ ಬೃಹತ್ ಪ್ರಹಾರ ನೀಡಿದಂತಿದೆ. ಅದರಲ್ಲೂ, ನಿರ್ವಹಣೆಗೆ ಕೇವಲ ವರ್ಷಕ್ಕೆ ₹2 ಕೋಟಿ ನೀಡಿರುವುದು, ವಿಶ್ವವಿದ್ಯಾಲಯ ಎಂದು ಕರೆದಿರುವುದು ಏಕೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
2022-23ನೇ ಸಾಲಿನ ಬಜೆಟ್ಟಿನಲ್ಲಿ ಮೇಲಿನ ಬಹುಪಾಲು ಅಂಶಗಳು ಶಿಕ್ಷಣದ ಬಗೆಗೆ ಸರ್ಕಾರದ ನಿರ್ಲಕ್ಷ್ಯವನ್ನು ತೋರುತ್ತದೆ. ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್ ವಿದ್ಯಾರ್ಥಿ ಪರವಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅಜಯ್ ಕಾಮತ್ ತಿಳಿಸಿದ್ದಾರೆ.