ಬಿ. ಶ್ರೀಪಾದ ಭಟ್
ಹಣಕಾಸು ಇಲಾಖೆಯು ಸಂಗ್ರಹಿಸುವ ಎಲ್ಲಾ ಬಗೆಯ ತೆರಿಗೆ, ಸೆಸ್‌ನ ಮೊತ್ತವು ಭಾರತೀಯ ನಿಧಿ ಕ್ರೋಡೀಕರಣ (ಸಿಎಫ್‌ಐ)ನಲ್ಲಿ ಸಂಚಯವಾಗುತ್ತದೆ. ನಂತರ ಈ ಸಿಎಫ್‌ಐನಲ್ಲಿ ಸಂಗ್ರಹಗೊಂಡ ಮೊತ್ತವನ್ನು ವಿವಿಧ ಇಲಾಖೆಗಳ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ, ಸರಕಾರವು ಹೇರುವ ತೆರಿಗೆ ಮತ್ತು ಸೆಸ್‌ನ ವಿನಿಯೋಗದ ಕುರಿತಂತೆ ಮುಖ್ಯ ವ್ಯತ್ಯಾಸಗಳಿವೆ. ಮೊದಲನೆಯದಾಗಿ ಈಗಿನ ಜಿಎಸ್‌ಟಿ ಮತ್ತು ಇತರೆ ತೆರಿಗೆ ಸಂಗ್ರಹವನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳುತ್ತವೆ. ಆದರೆ ಸೆಸ್ ಮೂಲಕ ಸಂಗ್ರಹವಾದ ಮೊತ್ತವು ನೇರವಾಗಿ ಕೇಂದ್ರದ ಬೊಕ್ಕಸಕ್ಕೆ ಹೋಗುತ್ತದೆ. ಕೇಂದ್ರ ಸರಕಾರವು ಶೇ.100ರಷ್ಟು ನೇರವಾಗಿ ತನ್ನ ಖಜಾನೆಯಲ್ಲಿ ತುಂಬಿಕೊಳ್ಳುವ ಸೆಸ್ ಮತ್ತು ಸರ್‌ಚಾರ್ಜ ತೆರಿಗೆಗಳನ್ನು ಹೆಚ್ಚಿಸುತ್ತಿದೆ ಮತ್ತು ಈ ಮೂಲಕ ರಾಜ್ಯಗಳಿಗೆ ನೇರವಾಗಿ ವಂಚಿಸುತ್ತಿದೆ.
2010-11ರಲ್ಲಿ ಶೇ. 10%ರಷ್ಟಿದ್ದ ಸೆಸ್ ಮತ್ತು ಸರ್ ಚಾರ್ಜ್ ನ ಪ್ರಮಾಣ 2019ರ ವೇಳೆಗೆ ಶೇ.19.9%ಕ್ಕೇರಿದೆ. ರಾಜ್ಯಗಳಿಗೆ ಇದರಿಂದ ಬಿಡಿಕಾಸು ದೊರಕುವುದಿಲ್ಲ ಮತ್ತು ಹಣಕಾಸು ಮುಗ್ಗಟ್ಟಿನಿಂದ ನರಳುತ್ತವೆ. ಎರಡನೆಯದಾಗಿ ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ಸಂಗ್ರಹವಾದ ಹಣವನ್ನು ವಿವಿಧ ಬಗೆಯ ಯೋಜನೆಗಳಿಗೆ ವಿನಿಯೋಗಿಸಲು ಅವಕಾಶವಿದೆ. ಆದರೆ ನಿರ್ದಿಷ್ಟ ವಲಯದ ಕಲ್ಯಾಣ ಯೋಜನೆಗಾಗಿ ಸೆಸ್ ಮೂಲಕ ಸಂಗ್ರಹವಾದ ಹಣವನ್ನು ಅದೇ ವಲಯಕ್ಕೆ ಮಾತ್ರ ವಿನಿಯೋಗಿಸಬೇಕಾಗುತ್ತದೆ. ಉದಾಹರಣೆಗೆ ಪೆಟ್ರೋಲಿಯಂ ಸೆಸ್‌ನ್ನು ಪೆಟ್ರೋಲಿಯಂ ಉತ್ಪನ್ನ ಮತ್ತು ಸಂಸ್ಕರಣ ಯೋಜನೆಗಳಿಗೆ, ಹಸಿರು ಸೆಸ್‌ನ್ನು ಪರಿಸರ ರಕ್ಷಣೆಗೆ, ಕೃಷಿ ತೆರಿಗೆಯನ್ನು ಬೇಸಾಯ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕಾಗುತ್ತದೆ.
ಇದೇ ರೀತಿ 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರು ಶಿಕ್ಷಣದ ಮೇಲೆ ಶೇ. 2ರಷ್ಟು ಪ್ರಮಾಣದ ಸೆಸ್ ತೆರಿಗೆ ಪ್ರಾರಂಭಿಸಿದರು. ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು, ಮದ್ಯಾಹ್ನದ ಬಿಸಿಯೂಟ, ವೇತನ, ಮೂಲಭೂತ ಸೌಕರ್ಯ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳ ಶಿಕ್ಷಣ, ಶಾಲೆಗಳಿಗೆ ಅಂತರ್ಜಾಲ ಸಂಪರ್ಕ, ಮುಂತಾದವುಗಳಿಗೆ ಈ ಶಿಕ್ಷಣ ಸೆಸ್‌ನ್ನು ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದರು.
ನಂತರ 2007-2008ರ ಹಣಕಾಸು ವರ್ಷದಲ್ಲಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಹೆಸರಿನಲ್ಲಿ ಹೆಚ್ಚುವರಿಯಾಗಿ ಶೇ. 1 ಸೆಸ್ ಸೇರಿಸಿ ಒಟ್ಟು ಶಿಕ್ಷಣದ ಮೇಲೆ ಶೇ.3ರಷ್ಟು ಸೆಸ್ ಹೇರಲಾಯಿತು ಮತ್ತು ಇದು ವೈಯುಕ್ತಿಕ ತೆರಿಗೆಗೆ ಮಾತ್ರ ಸೀಮಿತವಾಗಿತ್ತು. ನಂತರ 2018ರ ಕೇಂದ್ರ ಬಜೆಟ್ಟಿನಲ್ಲಿ ಹೆಚ್ಚುವರಿಯಾಗಿ ಶೇ. 1% ಸೆಸ್ ಹೆಚ್ಚಿಸಿ ಒಟ್ಟು ಶೇ. 4ರಷ್ಟು ತರಿಗೆ ವಿಧಿಸಿದರು. ಈ ಶೇ. 4 ಪ್ರಮಾಣದ ಸೆಸ್‌ನ್ನು ಶಿಕ್ಷಣ ಮತ್ತು ಆರೋಗ್ಯ ಎಂದು ಕರೆಯಲಾಯಿತು ಮತ್ತು ಇದನ್ನು ವೈಯುಕ್ತಿಕ ಮತ್ತು ಕಾರ್ಪೋರೇಟ್ ತೆರಿಗೆಗೂ ವಿಸ್ತರಿಸಲಾಯಿತು. ಆರಂಭದಲ್ಲಿ ಶೇ. 2ರಷ್ಟಿದ್ದ ಸಂದರ್ಭದಲ್ಲಿ ‘ಪ್ರಾರಂಭಿಕ ಶಿಕ್ಷ ಕೋಶ್’ ಎಂದು ಕರೆದು ಅದರ ಮೂಲಕ ಪ್ರಾಥಮಿಕ ಶಿಕ್ಷಣದ ಬಲವರ್ಧನೆಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಆದರೆ 2008ರಿಂದ ಮಾದ್ಯಮಿಕ ಮತ್ತು ಉನ್ನತ ಶಿಕ್ಷಣದ ಹೆಸರಿನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿದ ಶೇ. 1ರಷ್ಟು ಸೆಸ್‌ನ್ನು ವಿನಿಯೋಗಿಸದೆ ಅದು ಸಿಎಫ್‌ಐನಲ್ಲಿ ಉಳಿದುಕೊಂಡಿದೆ. ದುರಂತವೆಂದರೆ ಇಲ್ಲಿಯವರೆಗೂ ಶಿಕ್ಷಣದ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ಅದರ ಮೂಲ ಉದ್ದೇಶಗಳಿಗೆ ವಿನಿಯೋಗಿಸಲಿಲ್ಲ. ಹಾಗಿದ್ದಲ್ಲಿ ಕೋಟಿಗಟ್ಟಲೆ ಸಂಗ್ರಹವಾದ ಮೊತ್ತ ಏನಾಯಿತು? ಇದಕ್ಕೆ ಉತ್ತರವಿಲ್ಲ.
ಕೇಂದ್ರ ಹಣಕಾಸು ಇಲಾಖೆಯ ಬಜೆಟ್ ವರದಿಯ ಪ್ರಕಾರ 2004-2008ರ ನಾಲ್ಕು ವರ್ಷಗಳ ಅವಧಿಯಲ್ಲಿ ಶಿಕ್ಷಣ ಸೆಸ್ ಮೂಲಕ 32,224 ಕೋಟಿ ಸಂಗ್ರಹವಾಗಿದೆ. ಇದರಲ್ಲಿ 24,128 ಕೋಟಿ ಹಂಚಿಕೆಯಾಗಿದೆ. 8,096 ಕೋಟಿ ಹಂಚಿಕೆಯಾಗಿಲ್ಲ. 2009-2019ರ ಹತ್ತು ವರ್ಷಗಳ ಅವಧಿಯಲ್ಲಿ ಶಿಕ್ಷಣ ಸೆಸ್ ಮೂಲಕ 3.38 ಲಕ್ಷ ಕೋಟಿ ಸಂಗ್ರಹವಾಗಿದೆ. ಅದರಲ್ಲಿ ‘ಪ್ರಾರಂಬಿಕ ಶಿಕ್ಷ ಕೋಶ’ಕ್ಕೆ 2.21 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಉಳಿದಂತೆ 1.16 ಲಕ್ಷ ಕೋಟಿಯನ್ನು ಹಂಚಿಕೆ ಮಾಡಲಿಲ್ಲ. ಯಾಕೆ ಹಂಚಿಕೆ ಮಾಡಲಿಲ್ಲ? ಕಳೆದ 14 ವರ್ಷಗಳಲ್ಲಿ ಶಿಕ್ಷಣ ಸೆಸ್‌ನ ಮೂಲಕ ಸಂಗ್ರಹಿಸಿದ 1.25 ಲಕ್ಷ ಕೋಟಿ ಯಾಕೆ ಹಂಚಿಕೆ ಮಾಡಲಿಲ್ಲ? ಎಲ್ಲಿ ವಿನಿಯೋಗಿಸಲಾಗಿದೆ? ಯಾವುದಕ್ಕೂ ಉತ್ತರವಿಲ್ಲ. ಇನ್ನು ಹಂಚಿಕೆಯಾದ 2.46 ಲಕ್ಷ ಕೊಟಿ ಮೊತ್ತ ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗಿದೆಯೇ ಅಥವಾ ಬೇರೆ ಯೋಜನೆಗೆ ಹಂಚಲಾಗಿದೆಯೇ ಎನ್ನುವ ಪ್ರಶ್ನೆಗೆ ಅಧಿಕೃತವಾದ ಮಾಹಿತಿ ಲಭ್ಯವಿಲ್ಲ. ಎಲ್ಲಿಯೂ ಪಾರದರ್ಶಕತೆಯಿಲ್ಲ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 07.12.2022ರಂದು ರಾಜ್ಯಸಭೆಯಲ್ಲಿ ಕೇರಳ ಕಾಂಗ್ರೆಸ್(ಎಂ) ಪಕ್ಷದ ಜೋಸ್.ಕೆ.ಮಣಿಯವರು ಈ ಶಿಕ್ಷಣ ಸೆಸ್ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಮಂತ್ರಿ ಅನ್ನಪೂರ್ಣ ದೇವಿಯವರು ಕೊಟ್ಟ ಉತ್ತರದ ಪ್ರಕಾರ ಶಿಕ್ಷಣ ಮತ್ತು ಆರೋಗ್ಯ ಸೆಸ್‌ನ ಅಡಿಯಲ್ಲಿ 2019-20ರಲ್ಲಿ 39,131 ಕೋಟಿ ಸಂಗ್ರಹವಾಗಿದ್ದರೆ, ಅದರಿಂದ ಪ್ರಾಥಮಿಕ ಶಿಕ್ಷಣಕ್ಕೆ 19,565 ಕೋಟಿ ಮತ್ತು ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕೆ 9,782 ಕೋಟಿ ಹಂಚಿಕೆಯಾಗಿದೆ. 2020-21ರಲ್ಲಿ 35,821 ಕೋಟಿ ಸಂಗ್ರಹವಾಗಿದ್ದರೆ ಅದರಿಂದ ಪ್ರಾಥಮಿಕ ಶಿಕ್ಷಣಕ್ಕೆ 17,910 ಕೋಟಿ ಮತ್ತು ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕೆ 8,955 ಕೋಟಿ ಹಂಚಿಕೆಯಾಗಿದೆ. 2021-22ರಲ್ಲಿ 47,307 ಕೋಟಿ ಸಂಗ್ರಹವಾಗಿದ್ದರೆ ಅದರಿಂದ ಪ್ರಾಥಮಿಕ ಶಿಕ್ಷಣಕ್ಕೆ 25,212 ಕೋಟಿ ಮತ್ತು ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕೆ 12,606 ಕೋಟಿ ಹಂಚಿಕೆಯಾಗಿದೆ. ಹಂಚಿಕೆಯಾದ ಮೊತ್ತವನ್ನು ಸಂಪೂರ್ಣವಾಗಿ ಸಾರ್ವಜನಿಕ ಶಿಕ್ಷಣಕ್ಕೆ ವೆಚ್ಚ ಮಾಡಲಾಗಿದೆಯೇ? ಮಾಡಿದ್ದರೆ ವೆಚ್ಚದ ವಿವರಗಳನ್ನು ಕೊಡಿ ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ. ಒಂದು ವೇಳೆ ಶಿಕ್ಷಣಕ್ಕೆ ಬಳಸಿದ್ದರೆ ಯಾವ ಯಾವ ಯೋಜನೆಗಳಿಗಾಗಿ ಬಳಸಲಾಗಿದೆ ಎನ್ನುವ ಮಾಹಿತಿಯಿಲ್ಲ.
ಬಾರ್ಕ್ ನ (ಬಜೆಟ್ ವಿಶ್ಲೇಷಣೆ ಮತ್ತು ಸಂಶೋದನಾ ಕೇಂದ್ರ) ನಿರ್ದೇಶಕರಾದ ನೇಸರ ಅಹ್ಮದ್ ಅವರು ‘ಸರಕಾರವು ಶಿಕ್ಷಣ ಸೆಸ್ ಅಡಿಯಲ್ಲಿ ಸಂಗ್ರಹವಾದ ಹಣವನ್ನು ‘ಪ್ರಾರಂಬಿಕ ಶಿಕ್ಷ ಕೋಶ’ಕ್ಕೆ ಹಂಚಿಕೆ ಮಾಡಬೇಕು. ಅಲ್ಲಿಂದ ರಾಜ್ಯ ಸರಕಾರಗಳಿಗೆ ಹಂಚಿಕೆ ಮಾಡಬೇಕು’ ಎಂದು ಹೇಳುತ್ತಾರೆ. ಆದರೆ ಇಂದಿಗೂ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸುರಕ್ಷಿತ ಕಟ್ಟಡಗಳಿಲ್ಲ. 2021ರ ಮಾರ್ಚ್‌ನಲ್ಲಿ ಆಗಿನ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಲ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘ದೇಶದಲ್ಲಿರುವ 10.8 ಲಕ್ಷ ಸರಕಾರಿ ಶಾಲೆಗಳಲ್ಲಿ 42,000 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. 15,000 ಶಾಲೆಗಳಲ್ಲಿ ಶೌಚಾಲಯಗಳಿಲ್ಲ’ ಎಂದು ಲಿಖಿತ ಹೇಳಿಕೆ ಕೊಟ್ಟಿದ್ದಾರೆ. 26 ಜುಲೈ 2021ರಂದು ಲೋಕಸಭೆಯಲ್ಲಿ ಚುಕ್ಕಿರಹಿತ ಪ್ರಶ್ನೆಗೆ ಉತ್ತರಿಸುತ್ತ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ‘ದೇಶದ 10 ಲಕ್ಷ ಸರಕಾರಿ ಶಾಲೆಗಳಲ್ಲಿ 13,495 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳಿಲ್ಲ. 38,152 ಬಾಲಕರ ಶೌಚಾಲಯಗಳಿಲ್ಲ’ ಎಂದು ಲಿಖಿತ ಹೇಳಿಕೆ ಕೊಟ್ಟಿದ್ದಾರೆ.
‘ಶಿಕ್ಷಣ +ಗಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ’ಯ (ಯುಡಿಐಎಸ್‌ಇ+) 2019-20ರ ಸಮೀಕ್ಷೆಯ ಅನುಸಾರ ‘ದೇಶದಾದ್ಯಂತ 6465 ಶಾಲೆಗಳಿಗೆ ಕಟ್ಟಡಗಳಿಲ್ಲ. ಶೇ. 77.34ರಷ್ಟು ಸರಕಾರಿ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಶೇ. 80ರಷ್ಟು ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವಂತಹ ಶೌಚಾಲಯಗಳಿಲ್ಲ. ಶೇ. 16 ಪ್ರಮಾಣದ ಶಾಲೆಗಳಲ್ಲಿ ಗ್ರಂಥಾಲಯಗಳಿಲ್ಲ. ಶೇ. 89ರಷ್ಟು ಶಾಲೆಗಳಲ್ಲಿ ಅಂತರ್ಜಾಲ ಸಂಪರ್ಕವಿಲ್ಲ,’ ಎಂದು ವರದಿಯಾಗಿದೆ.
ನವೆಂಬರ್ 2, 2022ರಂದು ಪ್ರಕಟವಾದ ಯುಡಿಐಎಸ್‌ಇ+ ವರದಿಯ ಪ್ರಕಾರ ‘ ಕರ್ನಾಟಕದ ಸರಕಾರಿ ಶಾಲೆಗಳಲ್ಲಿ 2.08 ಲಕ್ಷ ರಷ್ಟಿದ್ದ ಶಿಕ್ಷಕರ ಸಂಖ್ಯೆ 1.99 ಲಕ್ಷಕ್ಕೆ ಕುಸಿದಿದೆ. 6,529 ಏಕ ಶಿಕ್ಷಕ ಶಾಲೆಗಳಿವೆ. ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಮಕ್ಕಳು, ಶಿಕ್ಷಕರ ಆದರ್ಶ ಅನುಪಾತವು 16:1 ರಷ್ಟಿರಬೇಕು. ಆದರೆ 2020-21ರಲ್ಲಿ 21:1 ರಷ್ಟಿದ್ದ ಮಕ್ಕಳು, ಶಿಕ್ಷಕರ ಅನುಪಾತ 23:1ರಷ್ಟಾಗಿದೆ. 942 ಶಾಲೆಗಳಲ್ಲಿ ಮೂಲಭೂತ ನೈರ್ಮಲ್ಯ ಮತ್ತು ಶೌಚಾಲಯ ವ್ಯವಸ್ಥೆಯಿಲ್ಲ. 44,371 ಸರಕಾರಿ ಶಾಲೆಗಳಲ್ಲಿ ಅಂತರ್ಜಾಲ ಸಂಪರ್ಕವಿಲ್ಲ.
ಉಪಸಂಹಾರ
ಮೇಲಿನ ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ ಶಿಕ್ಷಣ ಸೆಸ್‌ನ ಅಡಿಯಲ್ಲಿ ಸಂಗ್ರಹವಾದ ಹಣವನ್ನು ಈ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಯಾಕೆ ಬಳಸಲಿಲ್ಲ ಎನ್ನುವ ಪ್ರಶ್ನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉತ್ತರಿಸಬೇಕಾಗುತ್ತದೆ. ಗ್ರಾಮೀಣ ಭಾಗದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ವ್ಯವಸ್ಥೆಯ ಕುರಿತು ಯಾವುದೇ ಬಗೆಯ ಗ್ರಹಿಕೆಯಿಲ್ಲದ, ಕಾಳಜಿಯಿಲ್ಲದ ಪ್ರಭುತ್ವದಿಂದ ಈ ಉತ್ತರವನ್ನು ನಿರೀಕ್ಷಿಸುವುದೂ ಸಹ ವ್ಯರ್ಥವೆನಿಸುತ್ತದೆ.
ಇಲ್ಲಿ ಶಿಕ್ಷಣದ ಸಬಲೀಕರಣಕ್ಕಾಗಿ ಸಮಗ್ರ ಶಿಕ್ಷಣ ಅಭಿಯಾನ (ಹಿಂದಿನ ಸರ್ವ ಶಿಕ್ಷಣ ಅಭಿಯಾನ), ಪ್ರಾಥಮಿಕ ಶಾಲೆಯ ಬಾಲಕಿಯರಿಗಾಗಿ ರಾಷ್ಟ್ರೀಯ ಯೋಜನೆ, ಮದ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷ ಅಭಿಯಾನ, ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ, ಭೇಟಿ ಪಡಾವ್, ಭೇಟಿ ಬಚಾವ್ ಯೋಜನೆಗಳಿವೆ. ಆದರೆ ಈ ಯೋಜನೆಗಳಿಗೂ, ಶಿಕ್ಷಣದ ಹೆಸರಿನಲ್ಲಿ ಸಾರ್ವಜನಿಕರ ಹಣ ದೋಚುವ ಸೆಸ್‌ಗೂ ಯಾವುದೇ ಸಂಬಂದವಿಲ್ಲ ಎನ್ನುವುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ.
ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತೇವೆ ಎಂದು ಸಾರ್ವಜನಿಕರ ತೆರಿಗೆ ಹಣದಿಂದ ಸಂಗ್ರಹಿಸಿದ ಕೋಟಿಗಟ್ಟಲೆ ಮೊತ್ತವನ್ನು ಕೆರೆಯ ನೀರನು ಕೆರೆಗೆ ಚೆಲ್ಲದೆ ಮತ್ತು ಅದರ ಖರ್ಚು ವೆಚ್ಚಗಳ ವಿವರ ಕೊಡದೆ ಯಾವುದೇ ಉತ್ತರದಾಯಿತ್ವವನ್ನು ಪ್ರದರ್ಶಿಸದಿರುವುದು, ಸಾರ್ವಜನಿಕರ ತೆರಿಗೆ ಹಣ ಹೀಗೆ ವ್ಯರ್ಥವಾಗಿ ಪೋಲಾಗುವುದು ಅಥವಾ ರಾಜಕೀಯ ಪಕ್ಷಗಳ ಕಿಸೆ ಸೇರುವುದು ಒಂದು ಭ್ರಷ್ಟಾಚಾರ ಹಗರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ.
ಆದರೆ ಬಹುತೇಕ ಸರಕಾರಿ ಸಂಸ್ಥೆಗಳು ಕೇಂದ್ರದ ಬಿಜೆಪಿ ಪಕ್ಷದ ಅಡಿಯಾಳಾಗಿರುವ ಇಂದಿನ ದಿನಗಳಲ್ಲಿ ಮತ್ತದೇ ಯಕ್ಷ ಪ್ರಶ್ನೆ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?