ಮಂಡ್ಯ: ‘ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅನ್ನ ದಾಸೋಹ ಯೋಜನೆಗೆ ಮಾರಕವಾಗಿದ್ದು ಮುಂದೆ ಬಿಸಿಯೂಟ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ’ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಆತಂಕ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಬುಧವಾರ ಗಾಂಧಿಭವನದಲ್ಲಿ ನಡೆದ ಹೊಸ ಶಿಕ್ಷಣ ನೀತಿ– 2020 ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಯಾವ ಆಧಾರದ ಮೇಲೆ ಶಿಫಾರಸು ಮಾಡಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಸದ್ಯ ಜಾರಿಯಲ್ಲಿರುವ ಶಿಕ್ಷಣ ನೀತಿಯನ್ವಯ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ಆದರೆ ಹೊಸ ಶಿಕ್ಷಣ ನೀತಿಯಿಂದ ಉಚಿತ ಮತ್ತು ಕಡ್ಡಾಯಶಿಕ್ಷಣಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ’ ಎಂದರು.
‘ಜಾಗತಿಕ ಮಟ್ಟದ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಗುಣಮಟ್ಟದ ಶಿಕ್ಷಣ ಶಿಕ್ಷಣ ನೀಡುವ ಉದ್ದೇಶ ಹೊಸ ನೀತಿಯಲ್ಲಿ ಇಲ್ಲವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 5ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆಗಳು ತೆರೆಯಲಿದ್ದು ಮಕ್ಕಳು ವಾಸಿಸುವ ಸ್ಥಳದಲ್ಲೇ ಇರುವ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಅಪಾಯ ಎದುರಾಗಿದೆ’ ಎಂದರು.
‘ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಸಮುದಾಯಗಳು, ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ದೊರೆಯುವುದು ಮುಂದೆ ಕಷ್ಟವಾಗಲಿದೆ. ಅದರಲ್ಲೂ ಹೊಸ ಶಿಕ್ಷಣ ನೀತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯಾದ ಆದ್ಯತೆ ನೀಡಿಲ್ಲ. ಶಿಕ್ಷಣ ವ್ಯವಸ್ಥೆ ಸಂಕೀರ್ಣಗೊಳ್ಳಲಿದ್ದು ಖಾಸಗಿ, ವಿದೇಶ ಶಿಕ್ಷಣ ಸಂಸ್ಥೆಗಳ ಮಾರಾಟದ ಸರಕಾಗಲಿದೆ. ಸಮಾನ ಶಿಕ್ಷಣಕ್ಕೆ ಹೊಸ ನೀತಿ ಮಾರಕವಾಗಿದ್ದು ಸಾರ್ವಜನಿಕರು ಈ ಬಗ್ಗೆ ಚಿಂತಿಸಬೇಕು’ ಎಂದರು.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಮಾತನಾಡಿ ‘ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮ್ಮ ದೇಶದ ಬಹುಸಂಸ್ಕೃತಿಗೆ ಧಕ್ಕೆ ತಂದು ವಿದೇಶಿ ಸಂಸ್ಕೃತಿಯನ್ನು ಅಳವಡಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ವಿದೇಶಿ ಕಂಪನಿಗಳಿಗೆ ಅನುಕೂಲವಾಗಲಿದ್ದು ದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಅಪಾಯವಿದೆ’ ಎಂದರು.
‘ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿಯಲ್ಲಿರುವ ಶಿಕ್ಷಣವನ್ನು ಕೇಂದ್ರ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಹೊರಟಿದೆ. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಆರ್‌ಎಸ್‌ಎಸ್ ಉದ್ದೇಶಗಳಿಗೆ ಶಿಕ್ಷಣ ನೀತಿಯಲ್ಲಿ ರೂಪ ನೀಡಲಾಗಿದೆ’ ಎಂದು ಆರೋಪಿಸಿದರು.
ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ ‘ಹೊಸ ಶಿಕ್ಷಣ ನೀತಿಯಲ್ಲಿ ವೈದಿಕಶಾಹಿ ವ್ಯವಸ್ಥೆಯನ್ನೇ ತುಂಬಲಾಗಿದೆ. ಜ್ಯೋತಿಷ್ಯ, ಮೂಢನಂಬಿಕೆ, ಆಧಾರ ರಹಿತ ಪುರಾಣಗಳಿಗೆ ಆದ್ಯತೆ ನೀಡಲಾಗಿದೆ. ಆ ಮೂಲಕ ಮನುವಾದಿ ಶಿಕ್ಷಣವನ್ನು ಹೊಸ ಪೀಳಿಗೆಯ ಮಕ್ಕಳ ಮೇಲೆ ಹೇರುವ ಹುನ್ನಾರ ಮಾಡಲಾಗುತ್ತಿದೆ’ ಎಂದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪ್ರಾಂತ ರೈತಸಂಘದ ಟಿ.ಯಶವಂತ್, ಮಾಲಿನಿ ಮೇಸ್ತಾ, ಮಹಾದೇವಮ್ಮ ಪ್ರಮೀಳಾ ಇದ್ದರು.