ಢಾಕಾ: ಕಳೆದ ವರ್ಷ (2024ರ) ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಮರಣದಂಡನೆ ವಿಧಿಸಿದೆ.
ಇದನ್ನೂ ಓದಿ : ನೇಪಾಳದಲ್ಲಿ ಪ್ರಕ್ಷುಬ್ಧತೆ: ಒಂದು ಪ್ರಜಾಸತ್ತಾತ್ಮಕ ನವೀಕರಣವೇ ಯುವಜನರ ಪ್ರತಿಭಟನೆಯ ಫಲಿತಾಂಶವಾಗಬೇಕು – ಸಿಪಿಐ(ಎಂ)
ಕಳೆದ ವರ್ಷ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಆಗಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಈ ಜಟಾಪಟಿಯಲ್ಲಿ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು.
ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್–ಮುಮುನ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ನ್ಯಾಯಮಂಡಳಿಯು 54 ಸಾಕ್ಷ್ಯಗಳನ್ನು ಪರಿಶೀಲಿಸಿ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು (ಸೋಮವಾರ) ತೀರ್ಪು ಪ್ರಕಟಿಸಿದೆ.
ಹಸೀನಾ ಅವರ ಸರ್ಕಾರ ಪ್ರತಿಭಟನಕಾರರ ಮೇಲೆ ಭದ್ರತಾ ಕ್ರಮ ಕೈಗೊಳ್ಳಲು ಆದೇಶಿಸಿದ್ದರಿಂದ 2024ರ ಜುಲೈ 15ರಿಂದ ಆಗಸ್ಟ್ 15ರವರೆಗೆ 1,400 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವರದಿ ಹೇಳಿದೆ.
ತೀರ್ಪಿಗೂ ಮುನ್ನ ಬಾಂಗ್ಲಾದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು, ಯಾವುದೇ ಅಹಿತಕರ ಘಟನೆ, ಸಂಘರ್ಷಗಳು ನಡೆಯದಂತೆ ಎಚ್ಚರ ವಹಿಸಲು ಸೇನಾ ಪಡೆಗಳು, ಬಾಂಗ್ಲಾದೇಶ ಗಡಿ ಭದ್ರತಾ ಪಡೆ ಹಾಗೂ ಅರೆ ಸೇನಾ ಪಡೆಯ ತುಕಡಿಗಳನ್ನು ರಾಜಧಾನಿ ಢಾಕಾದಲ್ಲಿ ನಿಯೋಜಿಸಲಾಗಿದೆ. ಅಲ್ಲದೇ ಹಿಂಸಾತ್ಮಕ ಪ್ರತಿಭಟನೆ ನಡೆಸುವವರ ವಿರುದ್ಧ ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಿರ್ದಯವಾಗಿ ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಆದೇಶಿಸಿದೆ.
ಇದನ್ನೂ ನೋಡಿ : JNU ವಿದ್ಯಾರ್ಥಿ ಸಂಘದ ಚುನಾವಣೆ | ಎಡ ವಿದ್ಯಾರ್ಥಿ ಒಕ್ಕೂಟ ಕ್ಲೀನ್ ಸ್ವೀಪ್ Janashakthi | #JNUSU |#LeftUnity
