ಸಮಸಮಾಜದ ಕನಸು ಕಂಡಾಕೆ

ನಾನು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೆಲವೊಮ್ಮೆ “ಮಕ್ಕಳೇ, ಗಾಂಧೀಜಿ, ನೆಹರು, ರಾಜಾರಾಮ್‌ ಮೋಹನ್‌ ರಾಯ್‌, ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ ಇವರೆಲ್ಲ ಇಲ್ಲದಿದ್ದರೆ ನಮ್ಮ ಅಪ್ಪ ಅಮ್ಮ ಶಿಕ್ಷಕರಾಗುತ್ತಿರಲಿಲ್ಲ, ನಾನೂ ಕೂಡ ಉಪನ್ಯಾಸಕಿ ಆಗ್ತಾ ಇರಲಿಲ್ಲ. ಇದನ್ನು ಹೇಳೋಕೆ ನಾನೂ ಇಲ್ಲಿ ಇರ್ತಾ ಇರಲಿಲ್ಲ. ಅಷ್ಟೇ ಅಲ್ಲ, ಕೇಳೋಕೆ ನೀವೂ ಇಲ್ಲಿ ಇರ್ತಾ ಇರಲಿಲ್ಲ. ಹಾಗಾಗಿ ಕಾಲೇಜಿಗೆ ಬರುವ ಅವಕಾಶ ನಿಮಗೆ ಸಿಕ್ಕಿದೆಯಲ್ಲ ಇದರ ಹಿಂದೆ ಅದೆಷ್ಟು ಮಂದಿಯ ತ್ಯಾಗ ಇದೆ ಗೊತ್ತಾ” ಅನ್ನುತ್ತ ಸಾವಿತ್ರಿಬಾಯಿ ಫುಲೆಯವರ ಕಥೆ ಹೇಳುತ್ತೇನೆ. ಹೇಗೆ ನಮ್ಮ ಸಮಾಜ ಹೆಣ್ಣುಮಕ್ಕಳು ಶಾಲೆ ಕಲಿಯುವುದನ್ನು ಧರ್ಮ ದ್ರೋಹ ಎಂದು ಪರಿಗಣಿಸಿತ್ತು ಮತ್ತು ಹೇಗೆ ಅದು ತಪ್ಪು ಎಂದು ಹೇಳಹೊರಟ ಸಾವಿತ್ರಿಬಾಯಿಯಂತಹ ದೂರದೃಷ್ಟಿಯುಳ್ಳವರನ್ನು ಪರಿಪರಿಯಾಗಿ ಕಾಡಿತ್ತು ಅನ್ನುವುದನ್ನು ವಿವರಿಸುತ್ತೇನೆ. ಹೆಣ್ಣುಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿಯನ್ನು ಹಚ್ಚಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ. ಸಮಾಜ

 –ದೀಪಾ ಹಿರೇಗುತ್ತಿ

ಜನರು ಸಗಣಿ ನೀರು, ಕೆಸರು ನೀರನ್ನು ಎರಚಿದರೂ ಛಲ ಬಿಡದೇ ಮತ್ತೊಂದು ಸೀರೆಯನ್ನು ಕೈಚೀಲದಲ್ಲಿ ಇಟ್ಟುಕೊಂಡು ಹೋಗಿ ಬಟ್ಟೆ ಬದಲಾಯಿಸಿ ಪಾಠ ಮಾಡಿದ ಸಾವಿತ್ರಿ ಬಾಯಿಯವರ ಧೈರ್ಯ ನಿಜಕ್ಕೂ ಅಪ್ರತಿಮವಾದದ್ದು. ಏನೋ ಓಳ್ಳೆಯ ಕೆಲಸವನ್ನು ಉತ್ಸಾಹದಿಂದ ಮಾಡಹೊರಟು ಅದಕ್ಕೆ ಪ್ರತಿರೋಧ
ಬಂದಕೂಡಲೇ ಜನರಿಗೇ ಬೇಡವೆಂದ ಮೇಲೆ ನಮಗೇಕೆ ಬೇಕು ಬೇರೆಯವರನ್ನು ಉದ್ಧಾರ ಮಾಡುವ ಕೆಲಸ ಅನ್ನುತ್ತ ಹಗೂರಕ್ಕೆ ತಮ್ಮ ವೈಫಲ್ಯವನ್ನು ಸಮಾಜದ ಮೇಲೆ ವರ್ಗಾಯಿಸಿ ಸುಮ್ಮನಿರುವ ಪೈಕಿಯಾಗಿರಲಿಲ್ಲ ಸಾವಿತ್ರಿ ಬಾಯಿ. ಮಗು ಎಷ್ಟೇ ತಪ್ಪು ಮಾಡಿದರೂ ಅದಕ್ಕೆ ಗೊತ್ತಾಗುವುದಿಲ್ಲ ಎಂದು ಮತ್ತೆ ಮತ್ತೆ ಅದರ ತಪ್ಪನ್ನು ತಿದ್ದುವ ಮಮತಾಮಯಿ ತಾಯಿಯಂತಿದ್ದರು ಸಾವಿತ್ರಿಬಾಯಿ.

ಹತ್ತೊಂಬತ್ತನೆಯ ಶತಮಾನದ ಭಾರತದಲ್ಲಿ ಹೆಣ್ಣುಮಕ್ಕಳೂ ಶಾಲೆಗೆ ಹೋಗುವುದೆಂದರೆ ಅದೊಂದು ಅಪರಾಧ. ಶಾಲೆಗೆ ಹೆಣ್ಣುಮಕ್ಕಳೂ ಹೋಗುತ್ತಾರೆಂದರೆ ಸಮಾಜ ಹಾಳಾಗಿಯೇ ಹೋಯಿತೆಂದು ಗೊಬ್ಬೆ ಹಾಕಿ ಅವರನ್ನು ಬಹಿಷ್ಕರಿಸಿಬಿಡುವ ಕಾಲ. 1831ರಲ್ಲಿ ಹುಟ್ಟಿದ ಸಾವಿತ್ರಿ ಬಾಯಿಗೂ ವಿದ್ಯೆ ಸಿಗಲಿಲ್ಲ. ಮೈನೆರೆಯುವುದರೊಳಗೆ ಹುಡುಗಿಯರನ್ನು ಕನ್ಯಾದಾನ ಮಾಡಿ ಕೈತೊಳೆದುಕೊಳ್ಳುವ ಕಾಲ! ಆದರೆ ಒಂಬತ್ತರ ಆಡುವ ಬಾಲೆಗೆ ಮದುವೆಯಾದರೂ ಸಿಕ್ಕ ಹದಿಮೂರರ ಹರಯದ ಪತಿ ವಿದ್ಯೆ ಕಲಿತವ. ಅದರ ಮಹತ್ವದ ಅರಿವಿದ್ದಾತ. ಪುಟ್ಟ ಬಾಲೆಯಲ್ಲಿದ್ದ ಜ್ಞಾನದಾಹವನ್ನು ಮನಗಂಡ ಜ್ಯೋತಿಬಾ ಫುಲೆಯವರು ಪತ್ನಿಗೆ ಅಕ್ಷರ ಕಲಿಸಿದ್ದು ಕ್ರಾಂತಿಯ ಮೊದಲ ಹೆಜ್ಜೆಯಾಗಿತ್ತು.

ಇದನ್ನೂ ಓದಿ: ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ

ಹೆಂಡತಿಗೂ ಕಲಿಸುತ್ತ ತಾನೂ ಶಾಲೆಗೆ ಹೋಗುತ್ತ ವಿದ್ಯಾಭ್ಯಾಸ ಮುಂದುವರೆಸಿದ ಜ್ಯೋತಿಬಾರಿಗೋ ತನ್ನ ಪತ್ನಿಗೆ ಸಿಕ್ಕ ಓದು ಎಲ್ಲರಿಗೂ ಸಿಗಬೇಕೆಂಬ ಆಸೆ. ಇತ್ತ ಸಾವಿತ್ರಿ ಬಾಯಿಯವರಿಗೋ ತನಗೆ ತೆರೆದುಕೊಂಡ ಜ್ಞಾನದ ಕಿಟಕಿ ಎಲ್ಲ ಹೆಣ್ಣುಮಕ್ಕಳಿಗೂ ತೆರೆಯಬೇಕೆಂಬ ಆಸೆ! ಈ ಇಬ್ಬರು ಎಳೆಯ ದಂಪತಿಗಳಿಗೆ ತಾವು
ತಮ್ಮ ಮನೆ ಸಂಸಾರ ಎನ್ನು ಬಯಕೆಗಳ ಬದಲು ಸಮಾಜ, ಅಲ್ಲಿನ ಅಕ್ಷರ ವಂಚಿತರ ಬಗ್ಗೆ ಕಾಳಜಿ ಎಳೆಯ ಪ್ರಾಯದಲ್ಲೇ ಬಂದಿದ್ದು ಅವರ ವ್ಯಕ್ತಿತ್ವದ ಎತ್ತರವನ್ನು ಹೇಳುತ್ತದೆ. ಹೆಣ್ಣುಮಕ್ಕಳ ಅದರಲ್ಲೂ ಹಿಂದುಳಿದಿರುವ ಜಾತಿಗಳ ಹೆಣ್ಣುಮಕ್ಕಳ ಸಮಸ್ಯೆ, ಶೋಷಣೆ ಅವರಿಗಾಗುತ್ತಿರುವ ಅನ್ಯಾಯ, ಅವರ ಬಡತನ, ಅವಮಾನ ಎಲ್ಲದಕ್ಕೂ ಉತ್ತರ ಶಿಕ್ಷಣದಲ್ಲಿದೆ ಎಂದು ಬಲವಾಗಿ ನಂಬಿದ್ದ ಸಾವಿತ್ರಿಬಾಯಿ ಸಂಕಟದ ಕತ್ತಲೆಯನ್ನು ಕಳೆಯಲು ಅಕ್ಷರದೀಪದಿಂದಷ್ಟೇ ಸಾಧ್ಯ ಎಂದು ಸಮಾಜಕ್ಕೆ ತಿಳಿಸಲು ಪ್ರಯತ್ನ ಪಟ್ಟರು.

ವಿದ್ಯಾಭ್ಯಾಸ ಬದುಕನ್ನು ಬದಲಾಯಿಸುವ ಅಸೀಮ ಸಾಮರ್ಥ್ಯದ ಅರಿವಾದ ಸಾವಿತ್ರಿಬಾಯಿ ಸುಮ್ಮನೆ ಕೂರಲಿಲ್ಲ.ವಿದೇಶೀ ಶಿಕ್ಷಕಿಯರು ಇದ್ದರೆ ಜನ ಅನುಮಾನಿಸುತ್ತಾರೆಂದು ಸಾವಿತ್ರಿಬಾಯಿ ತಾವೇ ಶಿಕ್ಷಕಿಯಾದರು. ಪತಿಯ ಸಹಕಾರ ದಿಂದ ಹೆಣ್ಣುಮಕ್ಕಳಿಗಾಗಿ 1948ರಲ್ಲಿ ಶಾಲೆ ತೆರೆದರು. ತನ್ಮೂಲಕ ಭಾರತದ ಮೊದಲ ಶಿಕ್ಷಕಿಯಾದರು. ಬೈಗುಳ ದೈಹಿಕ ಹಲ್ಲೆಗಳ ನಡುವೆಯೇ ನಡೆದು ಶಾಲೆ ತಲುಪಿದರು. ಇದು ದಿನನಿತ್ಯ ನಡೆಯಿತು! ತುಳಿತಕ್ಕೊಳಗಾದ ಜಾತಿಗಳ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸತೊಡಗಿದರು. ಕೆಲವೊಮ್ಮೆ ನೊಂದು ಕಣ್ಣೀರಾದಾಗ ಪತಿ ಸಮಾಧಾನಿಸುತ್ತಿದ್ದರು. ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರೇ ವಿನಃ ಸಮಾಜದ ಉಸಾಬರಿ ಬೇಡವೆನ್ನಲಿಲ್ಲ. ಇಬ್ಬರೂ ಸೇರಿ ಪರಿತ್ಯಕ್ತ ವಿಧವೆಯರು, ಗರ್ಭಿಣಿ ಮಹಿಳೆಯರಿಗೆ ಆಶ್ರಯ ನೀಡಿದರು.

ಸಾವಿತ್ರಿಬಾಯಿ ಕವಯತ್ರಿಯೂ ಆಗಿದ್ದರು. ಕವಿತೆಗಳ ಮೂಲಕವೂ ಸಾವಿತ್ರಿಬಾಯಿ ಓದುವಿಕೆ ಯ ಮಹತ್ವವನ್ನು ಸಾರಿದರು. ಸಮಾಜದ ಓರೆಕೋರೆಗಳನ್ನು ಹೇಳುತ್ತಲೇ ತಮ್ಮ ಕವಿತೆಗಳ ಮೂಲಕ ಮಹಿಳೆಯರನ್ನು ಬದಲಾವಣೆಯ ಹರಿಕಾರರಾಗಲು ಪ್ರೋತ್ಸಾಹಿಸಿದರು. ತಮ್ಮನ್ನು ತಾವೇ ತೇಯ್ದುಕೊಂಡು ಭಾರತದ ಮನೆಮನೆಗಳಲ್ಲಿ ಅಕ್ಷರಗಳ ಪರಿಮಳ ಹರಡಲು ಕಾರಣರಾದರು. ಅವರ ಎರಡು ಕವಿತೆಗಳ ಒಂದೊಂದು ಚರಣ ಇಲ್ಲಿದೆ. ಇದನ್ನು ಕನ್ನಡಕ್ಕೆ ಡಾ ಎಚ್ಎಸ್ಅನುಪಮಾ ಅನುವಾದಿಸಿದ್ದಾರೆ. 

1) ಇಂಗ್ಲೀಷಮ್ಮ ನಮ್ಮಂಥೋರ್ನ ಅಪ್ಪಿ ಹಿಡೀತಾಳೆ

ಕೆಳಬಿದ್ದೋರ್ನ ಮೇಲೆತ್ತಿ ಮೈದಡವಿ ಸಲವುತಾಳೆ

2)ಜಾಣರಾಗಿದ್ದೂ ಶಾಲೆಗೋಗದೇ ಇದ್ರೆ
ಹೋಗ್ಬೇಕಂತನೂ ಅನಿಸ್ಲಿಲ್ಲ ಅಂದರೆ
ಬುದ್ಧಿ ಇದ್ದೂ ಅದ್ನ ಬಳಸ್ಬೇಕು ಅನಿಸದಿದ್ರೆ
ಮನ್ಸ ಅಂತ ಹೆಂಗ್‌ ಕರಿಯೋದ್‌ ನಿನ್ನ ಹಾಗಾದ್ರೆ?

ಇಂದು ಹೆಣ್ಣಮಕ್ಕಳು ಸಮಾಜನಿರ್ಮಿತ ಬೇಲಿಗಳನ್ನು ದಾಟಿ ಆಕಾಶದಲ್ಲಿ ರೆಕ್ಕೆ ಬಿಚ್ಚಿ ತೇಲಲು ಸಾವಿತ್ರಿಬಾಯಿಯವರಂತಹ ಚೇತನಗಳು ತಮ್ಮ ಬದುಕನ್ನೇ ತೇದಿವೆ. ಆದರೆ ಇನ್ನೂ ಹೊಸಿಲು ದಾಟಲಾಗದ ಅನಿವಾರ್ಯತೆ ಇರುವ ಹೆಣ್ಣುಗಳು ಸೆರಗನ್ನು ಬಾಯಿಗೆ ಅಡ್ಡ ಹಿಡಿದು ಬಿಕ್ಕನ್ನು ನುಂಗುತ್ತಿದ್ದಾರೆ.

ಫುಲೆಯಂತಹವರು ನಮಗೆ ದಾರಿ ಮಾಡಿದಂತೆ ಇಂತಹ ಬಾಯಿಲ್ಲದ ಹೆಣ್ಣುಗಳಿಗೆ ನಡೆಯಲು ಅನುವು ಮಾಡಿಕೊಡುವ ಜವಾಬ್ದಾರಿ ಸಮಾಜವಾಗಿ ನಮ್ಮೆಲ್ಲರದ್ದೂ ಆಗಿದೆ. ಇಂದು ಜನವರಿ ಮೂರರಂದು, ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಯವರ ಜನ್ಮದಿನದಂದು ಅವರನ್ನು ಕೃತಜ್ಞತೆಯಿಂದ ನೆನೆಯೋಣ.

ಇದನ್ನೂ ನೋಡಿ: ಸೈಬರ್‌ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice

Donate Janashakthi Media

Leave a Reply

Your email address will not be published. Required fields are marked *