ಸಕಲೇಶಪುರ: ಮನುಷ್ಯ ಮತ್ತು ಅರಣ್ಯವನ್ನು ಬೇರ್ಪಡಿಸಬೇಕು. ಕಾಡುಪ್ರಣಿಗಳು ಜನವಸತಿ ಪ್ರದೇಶ ಗುರುತಿಸಬೇಕು. ಗ್ರಾ ಪಂ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಂದಕ, 12 ಅಡಿ ಎತ್ತರದ ಬೇಲಿ ನಿರ್ಮಿಸುವಂತಹ ಪ್ರಮುಖ ಯೋಜನೆ ರಾಜಕೀಯ ಇಚ್ಛಾಶಕ್ತಿಯಿಂದ ಕಾರ್ಯಗತಗೊಳಿಸಬೇಕು ಎಂದು ಕಾಫಿ ಫಾರ್ಮರ್ಸ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್‌ಎಫ್‌ಐ) ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಪ್ರಸಾದ್ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ನಡೆದ ಆನೆ ಮತ್ತು ಮಾನವ ಸಂಘರ್ಷ, ಭೂಮಿ ಪ್ರಶ್ನೆ (ಬಗರ್ ಹುಕುಂ ಸಾಗುವಳಿ) ಸಣ್ಣ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಕಾಫಿ ಬೆಳೆಯುವ ರೈತರು ಮತ್ತು ಕಾಫಿ ಬೆಳೆಗಾರರ ನಡುವೆ ಕೆಲಸ ಮಾಡುತ್ತಿರುವ ರೈತ ಮುಖಂಡರುಗಳ ಕಾಫಿ ರೈತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇದನ್ನು ಓದಿ: ಪದೇ ಪದೇ ದಾಳಿ ಮಾಡುತ್ತಿರುವ ಕಾಡಾನೆ; ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ
ಕಾಡು ಮತ್ತು ಅರಣ್ಯ ಬೇರ್ಪಡಿಸದಿದ್ದರೆ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷದ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳು ಮಾನವ ವಸತಿ ಪ್ರದೇಶಕ್ಕೆ ಯಾವ ಭಾಗದಿಂದ ಪ್ರವೇಶಿಸುತ್ತವೆ ಎಂಬುವುದನ್ನು ಗುರುತಿಸುವ ಕೆಲಸ ಗ್ರಾಮ ಪಂಚಾಯ್ತಿಗೆ ವಹಿಸಬೇಕು. ಈ ಪ್ರದೇಶದಲ್ಲಿ ಕಂದಕಗಳನ್ನು ನಿರ್ಮಿಸಬೇಕು, ಕೆಲವೊಂದು ಪ್ರಾಣಿಗಳು 12 ಅಡಿಯಷ್ಟು ಎತ್ತರಕ್ಕೆ ಹಾರುತ್ತವೆ. 12 ಅಡಿ ಎತ್ತರದ ಬೇಲಿ ನಿರ್ಮಿಸಬೇಕು ಎಂದರು.
ಈ ಯೋಜನೆಗಳ ವೆಚ್ಚ ಒಂದು ಕಿಲೋ ಮೀಟರ್ ಗೆ ಸುಮಾರು 45 ಲಕ್ಷ ರೂ. ತಗಲುತ್ತದೆ. ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕಾರ್ಯಗತಗೊಳಿಸಬಹುದು ಎಂದರು.
ಇದನ್ನು ಓದಿ: ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ
ಪ್ರಾಸ್ತಾವಿಕ ವಾಗಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್‌ಕುಮಾರ್, ಭಾರತದ ಕಾಫಿ ಉತ್ಪಾದನೆಯಲ್ಲಿ ಅತಿಹೆಚ್ಚು ಕೊಡುಗೆಯನ್ನು ನೀಡುತ್ತಿರುವುದು ಕರ್ನಾಟಕ ಅದರಲ್ಲೂ ಶೇಕಡ 90ರಷ್ಟು ಸಣ್ಣ ರೈತರು ಕಾಫಿ ಉತ್ಪಾದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಸಿಐಟಿಯು ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ ಮಾತನಾಡಿ, ದೊಡ್ಡ ಪ್ರಮಾಣದಲ್ಲಿರುವ ಸಣ್ಣ ಕಾಫಿ ರೈತರ ಸಮಸ್ಯೆಗಳು ಇಂದು ಚರ್ಚೆಯಾಗದೆ ಇದ್ದು, ಇವರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿ ಅದರಲ್ಲೂ ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಮತ್ತು ಮಾನವ ಸಂಘರ್ಷಕ್ಕೆ ಕಳೆದ ಮೂರು ವರ್ಷಗಳಲ್ಲಿ 70ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಎಂದರು.
ಪರಿಸರವಾದಿ ಕಿಶೋರ್ ಕುಮಾರ್ ಮಾತನಾಡಿ, ಹಾಸನ, ಕೊಡಗು, ಚಿಕ್ಕಮಗಳುರು ಜಿಲ್ಲೆಗಳಲ್ಲಿ ಆನೆ, ಹುಲಿ, ಕಾಡೆಮ್ಮೆ, ಕಾಡು ಹಂದಿಯತಹ ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆನೆಗಳ ದಾಳಿಯಿಂದಾಗಿ ಸಾವಿರಾರು ಎಕರೆ ಕಾಫಿ ಬೆಳೆ ನಾಶವಾಗಿದೆ, ಇದಕ್ಕೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ನಾವು ಈಗಾಗಲೇ ಪರಿಹಾರದ ಪ್ರಸ್ತಾವನೆಯನ್ನು ಸರಕಾರಕ್ಕೆ ನೀಡಿದ್ದೇವೆ ಎಂದರು.
ಇದನ್ನು ಓದಿ: ಅ.26-27: ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನ
ರಂಗಕರ್ಮಿ ಪ್ರಸಾದ್ ರಕ್ಷದಿ ಮಾತನಾಡಿ, ಸರ್ಕಾರಿ ಭೂಮಿಯನ್ನು ಬಗರ್ ಹುಕುಂ ಸಾಗುವಳಿ ಮಾಡಿ ಕೃಷಿ ಮಾಡುತ್ತಿರುವ ಕಾಫಿ ಬೆಳೆಗಾರರಿಗೆ ಇದುವರೆಗೂ ಭೂಮಿಯ ಪ್ರಶ್ನೆಯನ್ನು ರಾಜ್ಯ ಸರ್ಕಾರ ಇತ್ಯರ್ಥ ಮಾಡಲೇ ಇಲ್ಲ. ವಾಯಿದೆ ಮೇಲೆ ಭೂಮಿ ಉಳ್ಳವರಿಗೆ ನೀಡಲು ಮುಂದಾಗುತ್ತಿದೆ. ಇದರ ಬಗ್ಗೆ ಯಾರು ದ್ವನಿಯತ್ತುತ್ತಿಲ್ಲ ಎಂದರು.
ಮತ್ತೊಂದೆಡೆ ಬೆಳೆದ ಬೆಳೆಗೆ ಸರಿಯಾಗಿ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಮಾಡಿದ ಸಾಲವನ್ನು ತೀರಿಸಲಾಗದೆ ರೈತರು ಭೂಮಿಗಳನ್ನು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳ ಪರಿಣಾಮವಾಗಿ ಕೃಷಿಯು ಬಿಕ್ಕಟ್ಟಿಗೆ ಸಿಲುಗಿದೆ. ಅದರಲ್ಲೂ ಕಾಫಿ ಬೆಳೆಯುವ ಸಣ್ಣ ರೈತರು ಅತ್ಯಂತ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ಇದನ್ನು ಓದಿ: ಕಾಫಿ ಮಂಡಳಿಯನ್ನೂ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ?
ಈ ಸಭೆಯಲ್ಲಿ ದೇಶದ ಕಾಫಿ ಬೆಳೆಗಾರರ ಸಮಸ್ಯೆಗಳು ಅದರ ಪರಿಹಾರಕ್ಕಾಗಿ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಸಮಾವೇಶದ ಅಧ್ಯಕ್ಷತೆಯನ್ನು ಕಾಫಿ ಫಾರ್ಮರ್ಸ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಪಿ.ಕೆ. ಅಬ್ದುಲ್ ಲತೀಫ್ ವಹಿಸಿದ್ದರು. ಸಮಾವೇಶದಲ್ಲಿ ರಾಜ್ಯ ಪ್ಲಾಂಟೇಷನ್ ವರ್ಕರ್ ಫೆಡರೇಷನ್ ಅಧ್ಯಕ್ಷ ವಿ.ಸುಕುಮಾರ್, ಕೊಡಗು ಜಿಲ್ಲೆ ವಿಷಯ ತಜ್ಞ ಡಾ.ದುರ್ಗಾ ಪ್ರಸಾದ್, ಹಿರಿಯ ದಲಿತ ಮುಖಂಡ ಎಸ್.ಎನ್. ಮಲ್ಲಪ್ಪ, ಪತ್ರಕರ್ತ ಮಲ್ನಾಡ್ ಮೆಹಬೂಬ್, ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಯದರ್ಶಿ ಗಿಡ್ಡೇಗೌಡ, ಕೆ.ಪಿ.ಲಕ್ಷ್ಮಣಗೌಡ, ಡಿ.ಎಸ್.ಕಸ್ತೂರಿಗೌಡ, ಸಿ.ಎಸ್.ಮಂಜುನಾಥ್, ಸೋಮೇಶ್, ರುದ್ರೇಶ್ ಗೌಡ ವೀರೇಶ್, ಕೆ.ಎಲ್.ಶಂಕರ, ಸೌಮ್ಯ, ಸುಮ ಮುಂತಾದವರು ಇದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ