ಕೆ.ನೀಲಾ
ಹತ್ತಿಯ ಹೊಲಗಳನು ದಾಟುತ ದಾಟುತ ನಡೆದೆವು. ಮೊದಲಿಗೆ ಯುವತಿಯ ಮನೆ ಸಿಕ್ಕಿತು. ನಂತರ ಅನತಿ ದೂರದಲ್ಲಿ ಬಲಕ್ಕೆ ತಿರುವಿನಲ್ಲಿ ಸಾಗಿ ಎಡಕ್ಕೆ ಹೊರಳಿದರೆ ತಗಡಿನ ಮನೆಯೇ ಮರ್ಯಾದೆಗೇಡು ಹತ್ಯೆಗೆ ಬಲಿಯಾದ ಯುವಕನದ್ದು. ಬೆಳೆಗಳ ಮರ್ಮರ ರೋದನದೊಂದಿಗೆ ಅಲ್ಲಿ ಕಡುಮೌನವೊಂದು ಕಾಲೂರಿತ್ತು. ರವಿ ನಿಂಬರಗಿ ಹೆತ್ತವ್ವಳ್ಳ ಕಣ್ಣೀರು ಬತ್ತಿ ಹೋಗಿ ಜ್ವಾಲೆಯಂತೆ ಒಡಲು ಲಿಗಿಲಿಗಿ ಎನ್ನುತ್ತಿತ್ತು. ಅವನ ಅಣ್ಣ, ತಮ್ಮ, ಅಕ್ಕಂದಿರು ಅಗಾಧ ನೋವಿನ ಭಾರದಲ್ಲಿ ಕುಸಿದಂತಿದ್ದರು.
ತಂಗಿಯೊಬ್ಬಳ ಬಾಣಂತನವಾಗಿ ಹದಿನೈದು ದಿನಗಳಾಗಿವೆ. ಹೇಳಲಿಕ್ಕೆ ಎಂಟೆಕೆರೆ ಹೊಲವಿದ್ದರೂ ವಾಸ್ತವದಲ್ಲಿ ಐದೆಕೆರೆಯ ಬೆಳೆ. ರವಿ ನಿಂಬರಗಿಯೇ ನೀರು ಹೂಡಿ ಬೆಳೆಸಿದ ಕಬ್ಬು ತಲೆಯೆತ್ತರ ದಾಟಿ ಹೋಗಿದೆ. ರವಿಯ ಗೆಳೆಯರು ಬಂಧುಗಳು ಸುತ್ತ ನೆರೆದರು. ಎಲ್ಲರ ಗಂಟಲಲ್ಲೂ ನಿನ್ನೆ(ಅಕ್ಟೋಬರ್ 24, 2021) ತಾನೇ ಬಾವಿಯೊಂದರಲ್ಲಿ ಶವವಾಗಿ ಸಿಕ್ಕ ರವಿ ನಿಂಬರಗಿಯನ್ನು ಮಣ್ಣೊಳಗೆ ಇಟ್ಟು ಬಂದ ದುಃಖವಿತ್ತು.
ಅಕ್ಟೋಬರ್ 21ರ ಸಂಜೆ 7 ಗಂಟೆ ಸುಮಾರಿಗೆ ರವಿ ಪ್ರೀತಿಸಿದ ಯುವತಿಯ ಮನೆಯ ಗಂಡಸರು, ಊರಿಂದ ತರಕಾರಿ ದಿನಸಿ ಹೊತ್ತು ತರುತ್ತಿದ್ದ ರವಿಯನ್ನು ತರುಬಿ ಎಳೆದೊಯ್ದು ಥಳಿಸಿದರು. ಇದನ್ನರಿತ ಯುವತಿ ಧಾವಿಸಿ ಓಡೋಡಿ ಯುವಕನ ಮನೆಗೆ ಬಂದು ಸುದ್ದಿ ಮುಟ್ಟಿಸಿದಳು. ಹಾಗೆಯೆ ಪೊಲೀಸರಿಗೂ ಫೋನು ಮಾಡಿರುವಳು. ಹಲ್ಲೆ ಮಾಡುವವರು ಹಗ್ಗದಿಂದ ರವಿಯನ್ನು ಬಿಗಿದು ಸ್ಥಳ ಬದಲಾಯಿಸುತ್ತಾ ಹೊತ್ತೊಯ್ದು ಹತ್ಯೆ ಮಾಡಿ ಬಾವಿಗೆ ಎಸೆದಿರುವರು. ದಾರಿಯಲ್ಲಿ ಬಿದ್ದ ತರಕಾರಿ ಚೀಲ, ಚಪ್ಪಲಿ ಕಂಡಿದ್ದು ಹೌದು. ಎಳೆದಾಡಿದ ಗುರುತು ಹೊತ್ತ ಮಣ್ಣ ನೆಲ ಬಿದ್ದಲ್ಲಿಯೇ ಕತೆ ಅರುಹಲು ಹೆಣಗುತ್ತಿತ್ತು. ಮೂರು ದಿನಗಳ ಕಾಲ ಹುಡುಕಿದರು. ಕಡೆಗೆ ರವಿಯ ಶವ ಬಾವಿಯಲ್ಲಿ ಸಿಕ್ಕಿದೆ. ಹತ್ಯೆಗೈದ ಎಂಟು ಜನರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿರುವರು. ಇನ್ನೂ ಆರು ಜನ ಗಂಡಸರು ಮತ್ತು ಮನೆಯ ಹೆಣ್ಣುಮಕ್ಕಳು ಪರಾರಿಯಾಗಿದ್ದಾರೆ.
ಯುವತಿಯನ್ನು ಪೊಲೀಸರು ತಮ್ಮ ನಿಗರಾಣಿಯಲ್ಲಿ ಸುರಕ್ಷತೆಗಾಗಿ ಸಾಂತ್ವನ ಕೇಂದ್ರದಲೀಸಿರುವರು. ಈಗ ಯುವತಿಯ ಸುರಕ್ಷತೆಯೂ ಬಹಳ ಮುಖ್ಯವಾಗಿದೆ.
“ಅವರು ಜೀವ ತಗೀಬಾರದಿತ್ತು… ಪ್ರೀತಿಸಿದ್ರು, ಎಲ್ಲೋ ಬದುಕ್ಕೋತ್ತಿದ್ರು. ನಮಗೇನೂ ಗೊತ್ತಿರಲಿಲ್ಲ. ಅವನೇ ಮನಿ ಹೊಲದ ವ್ಯವಹಾರ ನೋಡ್ತಿದ್ದ… ಹೊಡದವ್ರಿಗೆಲ್ಲ ಶಿಕ್ಷೆ ಆಗ್ಬೇಕು… ನಾವು ದಿಕ್ಕಿಲ್ದೋರು.. ” ಎಂಬ ನುಡಿಗಳು ರವಿಯ ಅಕ್ಕ ಅವ್ವ ಕಣ್ಣೀರಾಗಿ ಹರಿದಬಂದಿತು.
ಅಣ್ಣನು ಗಾಬರಿಯಿಂದ ಇನ್ನೂ ಹೊರಬಂದಿರಲಿಲ್ಲ.
“ಆ ಹುಡಗಿ ಒಳ್ಳ್ಯಾಕಿನೇ…. ಬಂದು ಹೇಳಿದ್ದಕ್ಕನೇ ಹೊಡದವ್ರು ಯಾರಂತ ಗೊತ್ತಾಯ್ತು. ಪೊಲೀಸರಿಗೂ ದೂರು ಹೇಳ್ಯಾಳ” ಬಿಕ್ಕುತ ಹೇಳಿದರು.
ನಮ್ಮ ಭಾಗದಲ್ಲಿ ಹಿಂದು ಮುಸ್ಲಿಂ ಸಮುದಾಯಗಳ ಯುವಕರು ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಂಡಿದ್ದಾರೆ. ಆದರೆ ಕೋಮುವಾದಿಗಳು ಬೆಳೆಯುತ ಹೋದಂತೆ ಸುಂದರ ಬದುಕಿನ ಆಯ್ಕೆಗಳಿಗೂ ಧಮಕಿಗಳು ಎದುರಾಗುತ್ತವೆ. ಹಲ್ಲೆ-ಹತ್ಯೆಗಳ ಮಟ್ಟಿಗೂ ತಾರಕ್ಕೇರುತ್ತವೆ. ಈ ಮರ್ಯಾದೆಗೇಡು ಹತ್ಯೆಗೆ ಧರ್ಮದ ಬಣ್ಣ ಬಳಿಯಬೇಕಿಲ್ಲ. ಹೆತ್ತವರೇ ಮಕ್ಕಳನ್ನು ಹತ್ಯೆ ಮಾಡಿದ ಪ್ರಕರಣಗಳಿವೆ. ಯುವಜನರ ನಿರ್ಮಲದಂತಹ ಪ್ರೇಮವು ಮರ್ಯಾದೆ ಹೆಸರಿನ ಮೂಲಭೂತವಾದಕ್ಕೆ ಭಯೋತ್ಪಾನೆಗೆ ತತ್ತರಗೊಂಡಿದೆ. ಜವಾಬ್ದಾರಿಯುತ ಆಯ್ಕೆಗಳೂ ಹೀಗೆ ಅತಿ ದುರಂತಕ್ಕೆ ಸಿಲುಕಿಕೊಳ್ಳುತ್ತಿವೆ. ನಾಲ್ಕು ವರ್ಷದ ಪ್ರೇಮವು ಇಷ್ಟೊಂದು ದಾರುಣ ದುರಂತದಲ್ಲಿ ಅಂತ್ಯಗೊಂಡಿದೆ. ಇದಕ್ಕೆ ಯಾರು ಹೊಣೆ?
ಯುವಕ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಹನ್ನೆರಡನೆಯ ಶತಮಾನದಲ್ಲಿಯೇ ಜಾತಿ ಮುರಿದು ಹರಳಯ್ಯ ಮಧುವರಸರ ಮಕ್ಕಳ ಮದುವೆಯಾಗಿದೆ. ಶರಣರು ಸಾಕ್ಷಿಯಾಗಿದ್ದಾರೆ. ಇಂತಹ ನೆಲದಲ್ಲಿ ಈ ಹತ್ಯೆಗಳು ಘಟಿಸುತ್ತಿವೆ. ವೈಶಾಲ್ಯತೆಯ ಮನೋಭಾವವಿರಬೇಕಾದ ಮುಸ್ಲಿಂ ಸಮುದಾಯದ ಕೆಲವರು ದಿನೇದಿನೇ ಮುದುಡಿಕೊಳ್ಳುತ ಮೂಲಭೂತವಾದಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಸೇರಿ ಯುವಜನತೆಯ ಆಯ್ಕೆಯ ಹಕ್ಕಿನ ಮೇಲೆ ಕಟುಕರಂತೆ ಎರಗುತ್ತಿದ್ದಾರೆ.
ರವಿ ನಿಂಬರಗಿ ಕುಟುಂಬದವರನ್ನು ಭೇಟಿ ಮಾಡಿ ಹಿಂತಿರುಗುವಾಗ ರವಿಯ ತಮ್ಮ ಹೇಳಿದ “ನಮಗ್ಯಾವ ನೆರವು ಬೇಕಿಲ್ಲ. ನನ್ನಣ್ಣನಿಗೆ ಕೊಂದವರಿಗೆ ಶಿಕ್ಷೆ ಆಗಬೇಕು” ಎಂದು ದೃಢವಾಗಿ ಹೇಳಿದನು.
ಈ ನೆಲದಿಂದಲೇ ಇಂತಹ ಹತ್ಯೆಗಳು ನಿಲ್ಲಬೇಕು. ಹೀಗೆ ಮನಸು ಮತ್ತೆ ಮತ್ತೆ ಹೇಳುತಲೇ ಇತ್ತು. ಬಸವತತ್ವದ ಶರಣಸಂಗಾತಿ ಮಲ್ಲಪ್ಪ ನಿಂಬರಗಿ ಮತ್ತು ಎಲ್ಲರೂ ಹತ್ತಿಯ ಹೊಲದ ನಡುವಿಂದ ಬೀಳ್ಕೊಟ್ಟರು.
ಆಲಮೇಲಿನ ಸಂಬಂಧಿಕರೊಬ್ಬರ ಮನೆಯಲ್ಲಿ ಚಹಾ ಕಾಯುತ್ತಿತ್ತು. ಬಹಳ ಬೇಸರದಿಂದ ಹೃದಯ ಮನಸು ಭಾರವಾಗಿತ್ತು. ಬಿಸಿಯ ಚಹಾ ತುಟಿ ಸೋಕುವ ಮುನ್ನವೇ ಅಲ್ಲಿಗೆ ಬಂದ ಮದ್ಯ ವಯಸ್ಕ ಹೆಂಗಸು ಹೇಳಿದ ಸುದ್ದಿಗೆ ಚಹಾದ ರುಚಿಯೂ ತಿಳಿಯದಾಯಿತು. ಇಂದು ಮಣ್ಣಾದ ಯುವತಿಗೆ ಗಂಡನ ಮನೆಯವರೇ ಕೊಂದು ಹೊಲದಲ್ಲಿ ಬೀಸಾಕಿದ್ದರಂತೆ. ಕೇಸು ಮಾಡಬಾರದೆಂದು ಆರು ಲಕ್ಷ ರೊಕ್ಕ ಗಂಡನ ಮನೆಯವರು ಅವಳ ಹೆತ್ತವರಿಗೆ ಕೊಟ್ಟಿರುವರು. ಮಗಳ ಜಾಗದಲ್ಲಿ ಕುರುಡು ಕಾಂಚಾಣ ಪವಡಿಸಿತು. ಕರುಳಿಗೂ ಕಣ್ಣಿಲ್ಲ-ಹೃದಯವಿಲ್ಲ. ಹೆಣ್ಣೆಂಬುದು ಯಾರಿಗೆ ಬೇಕು? ತಾಯ ಎದೆ ಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆನಯ್ಯಾ?
ಪ್ರಭು ಖಾನಾಪುರೆ, ಶ್ರೀಮಂತ ಬಿರಾದಾರ, ಬಸಮ್ಮ ಬಳೂರಗಿ ಜೊತೆ ಸುಮ್ಮನೆ ಹೆಜ್ಜೆ ಹಾಕತೊಡಗಿದೆ. ಹಗಲು ಜಾರತೊಡಗಿತು. ಇರುಳು ಮೆಲ್ಲ ಮೆಲ್ಲಗೆ ಆವರಿಸಿಕೊಳ್ಳತೊಡಗಿತು. ಮತ್ತೆ ಬೆಳಕ ಬರಬಹುದು. ಆದರೆ ಬದುಕೇ ನಂದಿ ಹೋದ ಮೇಲೆ ಬೆಳಕೆಲ್ಲಿ?