ಡಾ. ಎಸ್.ವೈ. ಗುರುಶಾಂತ್
ಈಗ ಪ್ರಕಟಗೊಂಡಿರುವ ಐದು ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದ ಬಿಜೆಪಿ ನಾಯಕರಿಗೂ ನಶೆ ಏರಿಸಿದೆ. ಎಣಿಕೆ ಆರಂಭಗೊಂಡಿರುವ ಸಂದರ್ಭದಲ್ಲಿ ಫಲಿತಾಂಶದ ಕುರಿತು ಮಾಧ್ಯಮದಲ್ಲಿ ಚರ್ಚೆ ನಡೆದಿತ್ತು. ಗೋವಾ ಮಣಿಪುರ ಮುಂತಾದ ಕಡೆಗಳಲ್ಲಿ ಬಹುಮತದ ಕೊರತೆ ಉಂಟಾದರೆ ಬಿಜೆಪಿ ’ಆಪರೇಷನ್ ಕಮಲ’ಕ್ಕೆ ಕೈ ಹಾಕುವುದೇ?’ ’ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರವನ್ನು ಆಪರೇಷನ್ ಮಾಡಿ ಉರುಳಿಸಿದ್ದು ಅನೈತಿಕವಲ್ಲವೇ’? ಎಂಬ ಪ್ರಶ್ನೆಗಳಿಗೆ ಅದರ ವಕ್ತಾರ, ಶಾಸಕ ರವಿಕುಮಾರ್ ಅವರ ಉತ್ತರ ನಾಟಕೀಯವಾಗಿತ್ತು. ’ದೇಶದ ಹಿತಕ್ಕಾಗಿ ಯಾವುದು ಅಗತ್ಯವೋ ಬಿಜೆಪಿ ಅದನ್ನು ಮಾಡುವುದು. ಈಗಲೂ ದೇಶಕ್ಕೆ ಬೇಕೆನಿಸಿದರೆ ಆಪರೇಷನ್ ಅನ್ನು ಮಾಡುತ್ತೇವೆ’ ಎಂದು ಬೀಗುತ್ತಾ, ಯಾವುದೇ ಅಳುಕಿಲ್ಲದೇ ಹೇಳಿದರು. ಬಿಜೆಪಿಗೆ ದೇಶದ ಚಿಂತೆ ಬಿಟ್ಟು ಬೇರೇನು ಇಲ್ಲವೆಂದು, ಮಾಡುವ ಎಲ್ಲ ಕೆಲಸಗಳು ಮನೆಹಾಳು ಕೃತ್ಯಗಳು ದೇಶಕ್ಕಾಗಿಯೇ ಎಂದೂ ಸಮೀಕರಿಸಿಕೊಂಡ ಪರಿ ಹೇಸಿಗೆ ಹುಟ್ಟಿಸುವಂತಿತ್ತು. ನಾಗರಿಕ ಸಮಾಜ ಒಪ್ಪಿಕೊಂಡ ಮೌಲ್ಯಗಳು, ರೀತಿ-ರಿವಾಜುಗಳು, ಕಾನೂನು ಸಂವಿಧಾನದ ಕಟ್ಟಳೆಗಳಿಗೆ ಯಾವ ಕಿಮ್ಮತ್ತೂ ಇಲ್ಲ. ದೇಶದ ಹೆಸರಿನಲ್ಲಿ ಏನಾದರೂ ಮಾಡಬಹುದು. ಅದು ಆಗಬೇಕು ಎನ್ನುವ ಅದರ ಚಿಂತನಾ ಲಹರಿಯೇ ವಿಚಿತ್ರ, ವಿಕೃತ.
ಯಾವುದೀ ಸಿದ್ಧಾಂತ?
ಹಾಗೆ ನೋಡಿದರೆ, ಬಿಜೆಪಿಗೆ ತನ್ನ ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಯಾವ ಹಿಂಜರಿಕೆ ಇಲ್ಲದಿರುವುದೇ ಅದರ ’ಸಬಲತೆ’ ಎಂದು ಭಾವಿಸಿದೆ! ಕಾರ್ಪೊರೇಟ್ ಕಂಪನಿಗಳನ್ಮು ಕೊಬ್ಬಿಸುವುದು, ಅದನ್ನು ಮರೆಮಾಚಲು ಕೋಮುವಾದದ ದುರ್ಗಂಧ ಹರಡುವುದನ್ನು ಹದವಾಗಿ ಮಾಡಲಾಗುತ್ತದೆ. ಉತ್ತರಪ್ರದೇಶ ಒಳಗೊಂಡು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಹಿಂದಿರುಗಿದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ’ಬಿಜೆಪಿ ಸಿದ್ಧಾಂತದ ಪರಿಣಾಮಕಾರಿ ಬಳಕೆ ಗೆಲುವಿನ ಹಿಂದಿನ ಶಕ್ತಿ’ ಎಂದಿದ್ದಾರೆ. ಬಿಜೆಪಿಯ ಸಿದ್ಧಾಂತವೇನು? ಚುನಾವಣೆಗಳಲ್ಲಿ ಅದರ ಪ್ರಯೋಗ ಹೇಗಾಗುತ್ತದೆ? ಎನ್ನುವುದನ್ನು ಬಿಡಿಸಿದರೆ ನಿಜ ದರ್ಶನವಾಗುತ್ತದೆ. ಕೋಮುವಾದ, ಕಾರ್ಪೊರೇಟ್ ಹಣದ ಹೊಳೆಯ ಹರಿವು ಆದರ್ಶಗಳ ಪ್ರಚಾರವನ್ನು ಹಿಂದಕ್ಕಟ್ಟುತ್ತವೆ. ದೇಶಪ್ರೇಮ, ಅಭಿವೃದ್ಧಿಯ ಮಾತುಗಳ ಪೊಳ್ಳುತನ ಬಯಲಾಗುತ್ತದೆ. ಜನರಲ್ಲಿ ಬಿಜೆಪಿ ಸರಕಾರಗಳ ಆಡಳಿತದ ಬಗ್ಗೆ ವಿರೋಧ ಬೆಳೆಯುತ್ತಿರುವಾಗ ಮತೀಯ ದ್ವೇಷದ ಹಿಂದುತ್ವ ಉದ್ರೇಕತೆಯನ್ನು ಬಳಸಲಾಗುತ್ತಿದೆ. ಫ್ಯಾಸಿಸ್ಟ್ ಮಾದರಿಯ ಕೋಮುವಾದ ಬಿಜೆಪಿಯ ಚಾಲ್ತಿಯಲ್ಲಿರುವ ಸಿದ್ಧಾಂತವಾಗಿದೆ. ಇದನ್ನೇ 5 ರಾಜ್ಯಗಳ ಚುನಾವಣೆಗಳಲ್ಲಿ ಅದರ ತಯಾರಿಯಲ್ಲಿ ಪ್ರಭುತ್ವ ಪ್ರಾಯೋಜಿತ ಧಾರ್ಮಿಕತೆಯನ್ನು, ಮತೀಯ ವಾದವನ್ನೇ ಎಗ್ಗಿಲ್ಲದೆ ಬಳಸಿದ್ದು. ಅದನ್ನೇ ಪ್ರಧಾನಿ ಮೋದಿಯವರು ಗೆಲುವಿನ ಗುಟ್ಟು ಎಂದು ಹೇಳಿರುವುದು!
ಧಾಳಿಗಳು
ಕಳೆದ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ’ತಮ್ಮ ಲಕ್ಷ್ಯ ಮುಂದೆ ಬರುವ ಚುನಾವಣೆ ತಯಾರಿಯತ್ತ’ ಎಂದು ಘೋಷಿಸಿದರು. ಇದರ ನಂತರದಲ್ಲಿಯೇ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಕರಾವಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ, ಅವರ ಪ್ರಾರ್ಥನಾ ಮಂದಿರಗಳ ಮೇಲೆ ಧಾಳಿಯಾಯಿತು. ನರಗುಂದದಲ್ಲಿ ಮುಸ್ಲಿಂ ಯುವಕ ಸಮೀರ ನನ್ನು ಬಜರಂಗದಳದ ಗುಂಪು ಥಳಿತದಲ್ಲಿ ಕೊಲ್ಲಲಾಯಿತು. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ತರುವುದಕ್ಕೆ ಪೂರ್ವ ಸಿದ್ಧತೆಯಾಗಿ ಚರ್ಚ್ ಮಸೀದಿಗಳ ಮೇಲೆ ರಾಜ್ಯದ ಹಲವೆಡೆ ದಾಳಿಗಳು ನಡೆದವು. ಸಂವಿಧಾನದ ಮೇಲೆ ಪ್ರಮಾಣವಚನ ಮಾಡಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪನವರು ಅಲ್ಪಸಂಖ್ಯಾತರ ವಿರುದ್ಧ ಅವ್ಯಾಚ್ಯವಾಗಿ ನಿಂದಿಸಿ ಪ್ರಚೋದನಾತ್ಮಕವಾಗಿ ಮಾತನಾಡಿದರು. ಕೆಂಪುಕೋಟೆಯ ಮೇಲೆ ಭಗವಾಧ್ವಜ ಹರಿಸುವುದಾಗಿ ಘೋಷಿಸಿದರು. ಸಚಿವರೊಬ್ಬರ ಇಂತಹ ಮಾತುಗಳ ಬಗ್ಗೆ ವಿಧಾನಸಭೆಯಲ್ಲಿ ಮತ್ತು ಹೊರಗೆ ಪ್ರಶ್ನಿಸಿದಾಗ ಅವರ ಮೇಲೆ ಹರಿಹಾಯ್ದರು. ಮೇಲಾಗಿ ಶಿವಮೊಗ್ಗದಲ್ಲಿ ಬಿಜೆಪಿ ಘಟಕ ಇದಕ್ಕೆ ತಕ್ಕ ಉತ್ತರ ಕೊಡುವುದಾಗಿಯೂ ಹೇಳಿತು. ನಂತರ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಮತ್ತು ಅದಕ್ಕೆ ಹೊಂದಿಕೊಂಡು ಶಿವಮೊಗ್ಗದಲ್ಲಿ ಸಚಿವರು, ಸಂಸದರ ನೇತೃತ್ವದಲ್ಲಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವ್ಯಾಪಕ ಹಿಂಸೆ, ಆಸ್ತಿ ನಾಶ, ನಾಗರಿಕರ ಮೇಲೆ ದಾಳಿಗಳು ನಡೆದವು. ಆಳಂದದ ದರ್ಗಾವನ್ನು ರಣರಂಗವಾಗಿಸಲಾಯಿತು.
ಇಲ್ಲಿ ನಡೆದ ಹತ್ಯೆಗಳನ್ನು ಜಾತಿ ಮತ್ತು ಕೋಮು ಆಧಾರದಲ್ಲಿ ವಿಭಜಿಸಲಾಗುತ್ತಿದೆ. ಕ್ರಿಮಿನಲ್ ಹಿನ್ನೆಲೆ ಇರುವ ಮತ್ತು ಗೋಡ್ಸೆ ಭಕ್ತನಾದ ಬಜರಂಗದಳದ ಹರ್ಷನ ಸಾವಿಗೆ ಕರ್ನಾಟಕ ಸರ್ಕಾರ 25 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೊಟ್ಟಿದೆ. ಆದರೆ ನರಗುಂದದ ಅಲ್ಪಸಂಖ್ಯಾತ ಬಡ ಯುವಕ ಸಮೀರ ನ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಮಾತ್ರವಲ್ಲ, ಸರ್ಕಾರದ ಸಚಿವರು, ಶಾಸಕರು ಇದುವರೆಗೂ ಭೇಟಿ ನೀಡಿ ಸಾಂತ್ವನವನ್ನು ಹೇಳಲಿಲ್ಲ. ದೇಶಕ್ಕಾಗಿ ಹುತಾತ್ಮರಾದ ಕೊಡಗಿನ ಮೂಲದ ಯೋಧ ಅಲ್ತಾಫ್ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ನೀಡಲಿಲ್ಲ. ಹರ್ಷನ ಕೊಲೆ ಖಂಡನೀಯ. ಅವರ ಕುಟುಂಬಕ್ಕೆ ನೆರವು ನೀಡುವವರು ಅವರ ಸಂಘಟನೆಯವರು ಅಥವಾ ಬಿಜೆಪಿಯವರು ಆಗಿದ್ದಲ್ಲಿ ತಕರಾರಿಲ್ಲ. ಬದಲಾಗಿ ನೀಡಿದ್ದು ಜನತೆಯ ಹಣ ಮನಬಂದಂತೆ ಕೊಡಬಾರದು ಎನ್ನುವುದನ್ನು ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ. ಸರಕಾರದ ಹಣಕ್ಕೂ ಖಾಸಗಿ ಹಣಕ್ಕೂ ವ್ಯತ್ಯಾಸವಿಲ್ಲವೇ?
ಬಲಿಪೀಠ
ಇವೆಲ್ಲಾ ಮತಾಂಧತೆಯ ಉದ್ರೇಕ್ತತೆ, ಕೋಮುದ್ವೇಷವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳ ಭಾಗವಾಗಿ ನಡೆದ ಯೋಜಿತ ಘಟನೆಗಳು. ವಿಶೇಷವಾಗಿ, ಇತ್ತೀಚಿನ ಇಂತಹ ಬಹುತೇಕ ಪ್ರಕರಣಗಳಲ್ಲಿ ಯುವಜನರನ್ನೇ ಗುರಿಯಾಗಿಸಲಾಗಿದೆ ಮತ್ತು ಅವರೇ ಬಲಿಯಾಗುತ್ತಿದ್ದಾರೆ. ಬದುಕಿ ಬಾಳಬೇಕಾದ ಹಲವು ಕನಸುಗಳನ್ನು, ಆದರ್ಶಗಳನ್ನು ಕಣ್ಣಲ್ಲಿ ತುಂಬಿಕೊಂಡವರು ಇವರು. ಅವರನ್ನು ಇಂತಹ ಕೃತ್ಯಗಳಲ್ಲಿ ತೊಡಗಿಸುತ್ತಿರುವುದು ದೊಡ್ಡ ದುರಂತ. ಘಟನೆಗಳು ಉರಿದು ಬೂದಿಯಾಗಿ ಹಾರಿ ನೇಪಥ್ಯಕ್ಕೆ ಸರಿದು ಹೋಗುತ್ತವೆ ಎಂಬಂತೆ ಕಂಡರೂ ಅವು ಸೃಷ್ಟಿಸುವಗಾಢ ಪರಿಣಾಮ ಮುಂದಿನ ದ್ವೇಷದ ಸರಪಳಿಯ ಕೊಂಡಿಗಳು ಎಂಬುದನ್ನು ಮರೆಯುವಂತಿಲ್ಲ. ಮತೀಯವಾದಿ ಶಕ್ತಿಗಳ ಮಾತು ಕೃತಿಗಳನ್ನು ಗಮನಿಸಿದರೆ ವಿದ್ವೇಷ ಹುಟ್ಟಿಸುವ ಕೃತ್ಯಗಳು ನಿತ್ಯ ಕಾರ್ಯಸೂಚಿಯೇ ಆಗಿರುವುದನ್ನು ನಿರಾಕರಿಸುವಂತಿಲ್ಲ.
ಆತಂಕಕಾರಿ ಬೆಳವಣಿಗೆಗಳು
ನವಕರ್ನಾಟಕ ನಿರ್ಮಾಣದ ಕನಸನ್ನು ಮುಖ್ಯಮಂತ್ರಿ ಬೊಮ್ಮಾಯಿ ಯವರು ಪ್ರಕಟಿಸಿದರು. ಆದರೆ ಅದಕ್ಕಾಗಿ ಕಾರ್ಯಯೋಜನೆಯೇನೂ ಕಾಣುತ್ತಿಲ್ಲ. ಅವರ ಆಯವ್ಯಯದಲ್ಲಿ ಹಣ, ನೀತಿ ನಿರ್ದೇಶನಗಳ ಗಂಧ ಗಾಳಿಯೂ ಲವಲೇಶ ಇಲ್ಲ. ಬದಲಾಗಿ ಮೌಢ್ಯತೆ, ಅತಿ ಧಾರ್ಮಿಕತೆ, ಜಾತಿ-ಮತಧರ್ಮಗಳ ಓಲೈಕೆ, ಬಜೆಟ್ ಉದ್ದಕ್ಕೂ ಹರಿದಿದೆ. ವಿಶ್ವವಿದ್ಯಾಲಯಗಳಿಗಿಂತಲೂ ಅತ್ಯಧಿಕ ಅನುದಾನ ಗುಡಿ ಗುಂಡಾರಗಳ ಅಭಿವೃದ್ಧಿಗೆ ಸಾರ್ವಜನಿಕ ಹಣದ ಹರಿವು ನಡೆದಿದೆ. ಅಧಿಕಾರದಲ್ಲಿ ಇರುವವರು ತಾವು ಎಲ್ಲಾ ಸಮುದಾಯಗಳ ಎಲ್ಲ ಜನತೆಯ ಪ್ರತಿನಿಧಿಸುವ ಅವರು ಎನ್ನುವುದಕ್ಕಿಂತ ತಾವು ಹಿಂದುತ್ವದ ಆಡಳಿತಗಾರರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಪರೋಕ್ಷವಾಗಿ, ಬಿಜೆಪಿ ಪಕ್ಷದ ಸರ್ಕಾರ ಕೇಂದ್ರದಂತೆ ರಾಜ್ಯದಲ್ಲಿಯೂ ಆರ್ಥಿಕ-ಸಾಮಾಜಿಕ ಪ್ರಗತಿಯಲ್ಲಿ ಆಡಳಿತಾತ್ಮಕವಾಗಿ ವಿಫಲವಾಗಿರುವುದನ್ನು ಒಪ್ಪಿಕೊಳ್ಳುತ್ತಿದೆ. ಇವನ್ನು ಮುಚ್ಚಿಕೊಳ್ಳಲು ಶಾಂತಿ-ಸೌಹಾರ್ದತೆಯ ಸುಂದರ ತೋಟಕ್ಕೆ ಬೆಂಕಿ ಹಚ್ಚಲು ಪರಿವಾರ ಹೇಸುವುದಿಲ್ಲ ಎನ್ನುವುದನ್ನು ಸದ್ಯದ ಪ್ರತಿ ಘಟನಾವಳಿಗಳು ತೋರಿಸುತ್ತಿವೆ. ಹಾಗೆಯೇ, ಇದಕ್ಕೆದುರಾಗಿ ಅಲ್ಪಸಂಖ್ಯಾತರ ನಡುವೆಯೂ ಮತೀಯ ಮೂಲಭೂತವಾದೀ ಶಕ್ತಿಗಳು ನೆಲೆಯನ್ನು ಕಂಡುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಇದನ್ನೇ ಸಂಘಪರಿವಾರ ಬಯಸುತ್ತಿದೆ.
ಬಿಗಿಯಾದ ಹಿಡಿತ
ಆದ್ದರಿಂದಲೇ ಬಿಜೆಪಿ ಸಂಘಪರಿವಾರ ಮುಂದಿನ ಚುನಾವಣೆಯ ಕಾರ್ಯತಂತ್ರವನ್ನು ಕೋಮುವಾದಿ ಕೃತ್ಯಗಳ ಮೂಲಕ ಜನರನ್ನು ಧರ್ಮ-ಜಾತಿ ವಿಭಜನೆಯನ್ನು ಆಧಾರವಾಗಿರಿಸಿಕೊಂಡಿದೆ. ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವಲ್ಲಿ ಆರೆಸ್ಸೆಸ್ ಹಾಕಿದ ತನ್ನ ಲೆಕ್ಕಾಚಾರದಂತೆ ಆಡಳಿತದ ಮೇಲೆ ಹಿಡಿತ ಹೆಚ್ಚಿಸಿದೆ ಮತ್ತು ಇನ್ನಷ್ಟು ಆಕ್ರಮಣಕಾರಿ ಆಗಿದೆ.
ಕೋಮು ದೃವೀಕರಣ
ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿಗಳೇ ಜಾತಿ ಮತ್ತು ಕೋಮು ವಿಭಜನೆಯ ದಾಳವನ್ನು ಯಥೇಚ್ಛವಾಗಿ ಬಳಸಿದರು. ಇಲ್ಲಿಯೂ, ಬಿಜೆಪಿ ನಾಯಕರು ಚುನಾವಣಾ ಗುಂಗಿನಲ್ಲಿದ್ದಾರೆ ಮತ್ತು ಆರ್ಥಿಕ ಪ್ರಗತಿಯನ್ನು ತೋರಿಸುವುದಕ್ಕಿಂತ ಕೋಮು ಧ್ರುವೀಕರಣವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಬಂದ ಅವಕಾಶಗಳನ್ನು ಬಳಸಿಕೊಳ್ಳದೇ ಬಿಡುವುದಿಲ್ಲ, ಮಾತ್ರವಲ್ಲ, ಅಂತಹ ಅವಕಾಶಗಳನ್ನು ಹೊಸದಾಗಿ ಸೃಷ್ಟಿಸಬಲ್ಲರೂ ಕೂಡ. ಮುಂಬರುವ 2023ರ ವಿಧಾನಸಭಾ ಚುನಾವಣೆ ಎದುರಿನಲ್ಲಿ ಕರ್ನಾಟಕ ವಾತಾವರಣ ಕೋಮು ಸೌಹಾರ್ದತೆ, ಸಾಮರಸ್ಯ, ಶಾಂತಿ ಕದಡುವುದರತ್ತ, ಕಿಚ್ಚು ಹೆಚ್ಚಿಸುವುದರತ್ತ ಸಾಗುತ್ತಿವೆ.
ದೇಶವೇ ಬಲಿ
ಇಂತಹ ವಾತಾವರಣದಲ್ಲಿ ಜನತೆಯ ಸಂಕಟಗಳನ್ನು ಕೇಳುವ, ಪರಿಹಾರ ಬಯಸುವ ಪರಿಸ್ಥಿತಿಯು ಮೂಲೆಗೆ ತಳ್ಳಲ್ಪಡುತ್ತಿದೆ. ಆತಂಕಗಳು ಸಮಾಜವನ್ನು ಆವರಿಸಿಕೊಂಡರೆ ನೆಮ್ಮದಿ, ಪ್ರಗತಿಯ ಬದುಕು ಇಲ್ಲವಾಗುತ್ತದೆ. ಚುನಾವಣೆಗಳು ಬಂದುಹೋಗುತ್ತವೆ ನಿಜ, ಆದರೆ ಸಮಾಜದ ಅಂತರಾತ್ಮಕ್ಕೆ ಆದ ಗಾಯಗಳು ಅಷ್ಟು ಸುಲಭದಲ್ಲಿ ಮಾಯವಾಗುವುದಿಲ್ಲ. ಒಟ್ಟಾರೆ, ಇಂಥವುಗಳ ಪರಿಣಾಮಗಳು ಬಲು ಘೋರ. ಇದಕ್ಕೆ ಜನ, ಸಮಾಜ, ದೇಶವೇ ಬಲಿ ಎನ್ನುವುದನ್ನು ಮರೆಯಬಾರದು.