ದಕ್ಷಿಣ ಕನ್ನಡ : ಜಿಲ್ಲೆಯ ಮೂಲ್ಕಿ, ಉಡುಪಿ ಜಿಲ್ಲೆಯ ಕಾಪು ತಾಲೂಕುಗಳ ಗಡಿಯಲ್ಲಿರುವ ಪಲಿಮಾರು ಹಾಗು ಬಳ್ಕುಂಜೆ ಗ್ರಾಮಗಳ ಕೊಂಡಿಯಾಗಿರುವ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯನ್ನು ಸಂಚಾರಕ್ಕೆ ಮುಚ್ಚಿ ಎರಡು ವರ್ಷ ಕಳೆದಿದ್ದು ಇನ್ನೂ ಪರ್ಯಾಯ ವ್ಯವಸ್ಥೆ ಮಾಡಿಲ್ಲವೇಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದಲೊ, ಇನ್ನೇನೊ ಕಾರಣದಿಂದ ಈ ಸೇತುವೆ ದುರ್ಬಲಗೊಂಡಿದೆ ಎಂಬ ಕಾರಣ ಮುಂದಿಟ್ಟು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಪ್ರಮುಖ ರಸ್ತೆಯ ಸೇತುವೆಯನ್ನು ಮುಚ್ಚಿಸಿದೆ. ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಒದಗಿಸಿದೆ ಎಂದು ದೂರಿದರು.
ಇದನ್ನೂ ಓದಿ : ಸಾರಿಗೆ ಬಸ್ಸುಗಳ ನೆರವಿಗಾಗಿ “ಅಪಘಾತ ತುರ್ತು ಸ್ಪಂದನ ವಾಹನ” ಗಳಿಗೆ ಚಾಲನೆ
ಸೇತುವೆಯಲ್ಲಿ ಘನವಾಹನ ಓಡಾಟ ನಿರ್ಬಂಧಿಸುವ ಆದೇಶ ಹೊರಡಿಸುವ ಸಂದರ್ಭ ಈ ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ, ಅದೇ ಸಂದರ್ಭ ಹೊಸ ಸೇತುವೆ ನಿರ್ಮಿಸುವ ಕುರಿತು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಅಚ್ಚರಿ ಆಂದರೆ, ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಎರಡು ವರ್ಷ ದಾಟಿದರೂ, ದುರಸ್ತಿಯನ್ನೂ ನಡೆಸಿಲ್ಲ, ಹೊಸ ಸೇತುವೆ ನಿರ್ಮಾಣದ ಪ್ರಕ್ರಿಯೆಯೂ ಆರಂಭಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದರಿಂದಾಗಿ ಕಿನ್ನಿಗೋಳಿ ಇನ್ನಾ ನಡುವಿನ ಗ್ರಾಮಗಳಾದ ಪಲಿಮಾರು, ಬಳ್ಕುಂಜೆ, ಕರ್ನಿರೆ ಸಹಿತ ಹಲವು ಊರಿನ ಗ್ರಾಮಸ್ಥರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಯಾಣಿಕರ ಬಸ್ಸುಗಳ ಓಡಾಟವನ್ನು ನಿರ್ಬಂಧಿಸಿರುವುದರಿಂದ ವಿದ್ಯಾರ್ಥಿಗಳು ಹತ್ತಾರು ಕಿ ಮೀ ಸುತ್ತಿಬಳಸಿ ಶಾಲಾ ಕಾಲೇಜುಗಳಿಗೆ ತಲುಪುತ್ತಿದ್ದಾರೆ. ಕಾರ್ಮಿಕರು, ದುಡಿಯುವ ಜನರು ದುಬಾರಿ ದರ ತೆತ್ತು ಆಟೋಗಳಲ್ಲಿ ಓಡಾಡುವ ಸ್ಥಿತಿ. ಒಟ್ಟಾರೆ ಇವರ ಕಷ್ಟ ಇಲ್ಲಿ ಕೇಳುವವರಿಲ್ಲ. ಸೇತುವೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಇರುವುದರಿಂದ ಅಪರ ಜಿಲ್ಲಾಧಿಕಾರಿಗಳಲ್ಲಿ ವಿಚಾರಿಸಿದರೆ ದುರಸ್ತಿ, ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಉತ್ತರಿಸಿದರು.
ಬಸ್ಸು ಸಹಿತ ಘನವಾಹನಗಳ ಓಡಾಟಕ್ಕೆ ಅವಕಾಶ ಆಗದಂತೆ ಲಘುವಾಹನಗಳ ಸಂಚಾರಕ್ಕೆ ಮಾತ್ರ ಸ್ಥಳಾವಕಾಶ ನೀಡಿ ಸೇತುವೆಗೆ ಅಡ್ಡಲಾಗಿ ಕಲ್ಲುಗಳನ್ನು ಕಟ್ಟಿದ್ದರೂ, ಮಿನಿ ಲಾರಿಗಳಲ್ಲಿ ಅತಿ ಭಾರದ ಕೆಂಪು ಕಲ್ಲುಗಳ ಸಾಗಾಟ, ಮರಳು ಸಾಗಾಟ ಯಾವುದೆ ಅಡೆತಡೆ ಇಲ್ಲದೆ ನಡೆಯುತ್ತಿದೆ. ಇದಕ್ಕಿಂತ ಕಡಿಮೆ ಭಾರದ ಪ್ರಯಾಣಿಕರ ಬಸ್ಸುಗಳಿಗೆ ಮಾತ್ರ ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಇದೇ ರೀತಿಯಲ್ಲಿ ಬಿರುಕುಗಳು ಕಂಡು ಬಂದ ಅಡ್ಡೂರು, ಪೊಳಲಿ ಸೇತುವೆ, ಮರವೂರು ಸೇತುವೆಗಳಲ್ಲಿ ದುರಸ್ತಿ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿತ್ತು. ಕೂಳೂರು ಕಮಾನು ಸೇತುವೆಯನ್ನೂ ಬಿರುಕು ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಅದೇ ಸಂದರ್ಭದಲ್ಲಿ ಇಲ್ಲೆಲ್ಲಾ ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಫಲಿಮಾರು ಬಳ್ಕುಂಜೆಯಲ್ಲಿ ಮಾತ್ರ ದುರಸ್ತಿಯೂ ಇಲ್ಲ, ಹೊಸ ಸೇತುವೆಯೂ ಇಲ್ಲ, ಸಂಚಾರವೂ ಇಲ್ಲ ಎಂಬಂತಾಗಿದೆ. ಈ ಸೇತುವೆಯ ಎರಡೂ ಬದಿಗಳಲ್ಲಿ ಬಿಜೆಪಿ (ಕಾಪು, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಗಳು) ಶಾಸಕರು ಇದ್ದಾರೆ. ಅವರುಗಳು ಎರಡು ವರ್ಷಗಳಾದರು ಈ ಸೇತುವೆಯ ಕುರಿತು ಗಮನ ಹರಿಸಿಲ್ಲ, ಸ್ಥಳೀಯವಾಗಿ ವಿರೋಧ ಪಕ್ಷ ಆಗಿರುವ ಕಾಂಗ್ರೆಸ್ ನ ಮುಖಂಡರೂ ಈ ಗ್ರಾಮಸ್ಥರ ಸಮಸ್ಯೆಯ ಕುರಿತು ಧ್ವನಿ ಎತ್ತಿಲ್ಲ ಎಂದು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ನಮ್ಮ ಗಮನಕ್ಕೆ ಕೆಲವರು ತಂದ ಕಾರಣ ಇಂದು ನ್ಯಾಯವಾದಿ ಹಾಗು ಜನಪರ ಚಳವಳಿಗಳಲ್ಲಿ ಜೊತೆಗಿರುವ ದಿನೇಶ್ ಹೆಗ್ಡೆ ಉಳೆಪಾಡಿ, ನಾನು, ಸಿಪಿಐಎಂ ನ ಶ್ರೀನಾಥ್ ಕುಲಾಲ್ ಫಲಿಮಾರು, ಬಳ್ಕುಂಜೆಗೆ ಭೇಟಿ ನೀಡಿದೆವು. ಅಲ್ಲಿ ನೆರೆದಿದ್ದ ಗ್ರಾಮಸ್ಥರ ಜೊತೆಗೆ ಸಮಾಲೋಚನೆ ನಡೆಸಿದೆವು, ಸಮಸ್ಯೆಯನ್ನು ಜಿಲ್ಲಾಡಳಿತ ದ ಗಮನಕ್ಕೆ ತಂದೆವು. ಸಂಬಂಧ ಪಟ್ಟ ಅಧಿಕಾರಿಗಳ ಬಳಿ ನಿಯೋಗ ಹೋಗಲು ನಿರ್ಧರಿಸಿದೆವು. ಹೊಸ ಸೇತುವೆ ನಿರ್ಮಾಣ, ಅಲ್ಲಿಯರಗೆ ಈಗಿರುವ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯ ಜೊತೆ ನಿಲ್ಲುವುದಾಗಿ ನಿರ್ಧರಿಸಿದೆವು. ಹೋರಾಟ, ಪ್ರತಿಭಟನೆ ಅಗತ್ಯವಾದಲ್ಲಿ ಸಮಾನ ಮನಸ್ಕರ ಬೆಂಬಲ ಪಡೆದು ಗ್ರಾಮಸ್ಥರ ನೇತೃತ್ವದಲ್ಲಿ ಮುಂದುವರಿಯುವುದು ಎಂದು ನಿರ್ಧರಿಸಲಾಯಿತು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30, 40 ವರ್ಷಗಳಷ್ಟೆ ಆಗಿರುವ ಸೇತುವೆಗಳು ಸರಣಿಯಾಗಿ ದುರ್ಬಲಗೊಳ್ಳುತ್ತಿರುವುದು ಯಾಕೆ ?
ಇದನ್ನೂ ನೋಡಿ : ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಪ್ರವಾಸಿಗರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ -ಮುನೀರ್ ಕಾಟಿಪಳ್ಳ Janashakthi Media
