ಗುರುರಾಜ ದೇಸಾಯಿ
ಒಂದರ ಹಿಂದೆ ಒಂದರಂತೆ ಮಹಾ ಎಡವಟ್ಟು ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ವಿವಾದ ಸೃಷ್ಟಿಸುತ್ತಿರುವ ರಾಜ್ಯ ಸರಕಾರದ ವಿವಾದಕ್ಕೆ ಈಗ ಮತ್ತೊಂದು ವಿವಾದ ಸೇರ್ಪಡೆಯಾಗಿದೆ. ಶಾಲೆಯಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವಂತೆ ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ. ಸರಕಾರದ ಈ ನಡೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶತಾಯಗತಾಯ ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡುವ ಪ್ರಯತ್ನ ಸರಕಾರ ಎಡೆಬಿಡದೆ ಮಾಡುತ್ತಿದೆ. ಪಠ್ಯದಲ್ಲಿ ಟಿಪ್ಪು ಪಾಠ ಕೈ ಬಿಡುವ ಪ್ರಸ್ತಾಪದಿಂದ ಹಿಡುದು, ಹಿಜಾಬ್, ಪಠ್ಯ ಪರಿಷ್ಕರಣೆ , ಭಗವದ್ಗೀತೆ, ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದ, ಸರಕಾರ ಶಾಲೆಗಳ ಅಭಿವೃದ್ಧಿ ಪೋಷಕರಿಗೆ ಬಿಟ್ಟದ್ದು, ನಂತರ ಈಗ ಧ್ಯಾನದ ವಿವಾದ ಹುಟ್ಟುಹಾಕಿದೆ. ಧ್ಯಾನ ಮಾಡಿದರೆ ಮಕ್ಕಳ ಮನೋಬಲ ವೃದ್ಧಿಯಾಗಲಿದೆ ಎಂದು ಸರಕಾರ ಆದೇಶವನ್ನು ಹೊರಡಿಸಿದೆ.
ಸುತ್ತೋಲೆಯಲ್ಲಿ ಏನಿದೆ:? ಅಕ್ಟೋಬರ್ 20 ರಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಆದೇಶವನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿನ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನು ಮುಂದೆ ಪ್ರತಿದಿನ 10 ನಿಮಿಷ ಧ್ಯಾನ ಮಾಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉದ್ದೇಶಿಸಿದೆ.
ಶಾಲೆಗಳಲ್ಲಿ ಪ್ರತಿನಿತ್ಯ ಧಾನ್ಯ ಮಾಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗಲಿದೆ ಎಂದು ಇಲಾಖೆಯು ಈ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಡಿಕೊಂಡ ಮನವಿಯ ಮೇರೆಗೆ ಇಲಾಖೆಯ ಸಚಿವ ಬಿ.ಸಿ. ನಾಗೇಶ್ ಈ ಸಂಬಂಧ ಆದೇಶ ಹೊರಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಾಲೆ – ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಧ್ಯಾನ ಮಾಡುವುದು ಸೂಕ್ತವಾದ ಕ್ರಮವಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿಕೊಂಡು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶಾಲೆಗಳಿಗೆ ಸೂಚಿಸುವಂತೆ ಸೊತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಏಳು ಸಾಹಿತಿಗಳ ಪಾಠ-ಪದ್ಯ ಕೈಬಿಟ್ಟ ಶಿಕ್ಷಣ ಇಲಾಖೆ..!
ಪ್ರಾಥಮಿಕ ಶಿಕ್ಷಕರ ಸಂಘದ ಪತ್ರದಲ್ಲೇನಿದೆ?: ಅಕ್ಟೋಬರ್ 10 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿರವರ ಸಹಿಯೊಂದಿಗೆ, “ ಶಾಲೆಗಳಲ್ಲಿ ಧ್ಯಾನ” ಆರಂಭಿಸುವಂತೆ ಪತ್ರ ಬರೆದಿತ್ತು. ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಸಲಾಗುತ್ತಿದ್ದು, ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿಯೂ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದರು.
“ನಮ್ಮ ಮನವಿಯನ್ನು ಶಿಕ್ಷಣ ಸಚಿವರು ಒಪ್ಪಿ ಎಲ್ಲ ಶಾಲೆಗಳಲ್ಲಿಯೂ ಧ್ಯಾನ ಮಾಡಿಸಲು ಸೂಚಿಸಿದ್ದಾರೆ. ಇದರಿಂದ ಶಾಲೆಗಳ ವಾತಾವರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟ ಶಿಕ್ಷಣ ಸಚಿವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆʼʼ ಎಂದು ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಶರೀರದಲ್ಲಿರುವ 72 ಸಾವಿರ ನಾಡಿಗಳು ಶುಚಿಯಾಗುತ್ತವೆ. ನಾಡೀಮಂಡಲ ಶುದ್ಧಿ ಆಗುವುದರಿಂದ ಶರೀರ ದೃಢಕಾಯವಾಗುತ್ತದೆ. ಧ್ಯಾನ ಸಾಧನೆಯಿಂದ ಮಕ್ಕಳಲ್ಲಿ ಆಲಸ್ಯ, ಹಿಂಜರಿಕೆ ದೂರವಾಗಿ ಚುರುಕುತನ, ಧೈರ್ಯ ಮೊಳಕೆಯೊಡೆಯುತ್ತದೆ. ಕಲಿಕೆಯಲ್ಲಿ ಮಾತ್ರವಲ್ಲದೆ ಆಟಗಳಲ್ಲಿಯೂ ಪ್ರಗತಿ ಸಾಧಿಸಲಿದ್ದಾರೆ ಎಂದು ಶಿಕ್ಷಕರ ಸಂಘಟನೆ ಪ್ರತಿಕ್ರಿಯೆ ನೀಡಿದೆ.
ಕೇಸರಿಕರಣದ ಹುನ್ನಾರ : ರಾಜ್ಯ ಸರಕಾರ ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿದೆ. ಸಚಿವರ ಈ ಸೂಚನೆಯನ್ನು ನಮ್ಮ ಸಂಘಟನೆಯು ವಿರೋಧಿಸುತ್ತದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ತಿಳಿಸಿದ್ದಾರೆ.
ಸರಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೇಳಿದರೆ ಧ್ಯಾನ ಮಾಡಿ ಎಂದು ಹೇಳುತ್ತದೆ ನಮಗೆ ನಮ್ಮ ಶಾಲೆಗಳಲ್ಲಿ ದಿನನಿತ್ಯ ಬೆಳಗ್ಗೆ ಸಮಯದಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಯೇ ಬಹುದೊಡ್ಡ ಧ್ಯಾನ ಮಂದಿರ ಮತ್ತು ಧ್ಯಾನ ಇದ್ದಂಗೆ. ಸಚಿವರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಲ್ಲಿವರೆಗೂ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕೊಡುವಲ್ಲಿ ವಿಫಲರಾಗಿದ್ದಾರೆ ಅಲ್ಲದೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ಕೊಟ್ಟಿಲ್ಲ, ಶೂ ಸಾಕ್ಸ್ ಕೋಡಿ ಎಂದು ಕೇಳಿದರೆ ಶಾಲೆಗೆ ಯಾಕೆ ಬರುತ್ತೀರಿ ಎಂದು ಕೇಳುತ್ತಾರೆ. ಇಲ್ಲವೇ ದಾನಿಗಳಿಂದ ಸಂಗ್ರಹ ಮಾಡಿ ಎನ್ನುತ್ತಾರೆ, ಅಷ್ಟೇ ಅಲ್ಲದೆ ಇತ್ತೀಚಿಗೆ ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಪಾಲಕರಿಂದ ಶಾಲಾಭಿವೃದ್ಧಿಗೆ 100 ರೂ ಸಂಗ್ರಹ ಮಾಡಲು ಆಯುಕ್ತರು ಆದೇಶ ಮಾಡಿದ್ದರು ಇವರಿಗೆ ರಾಜ್ಯಾದ ಬಡವರ ದಲಿತರು ಮಧ್ಯಮವರ್ಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುಲು ಶ್ರಮಿಸುವ ಬದಲು ಕೇವಲ ವಿವಾದಾತ್ಮಕ ಆದೇಶವನ್ನು ಮಾಡುವುದರ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಅಮರೇಶ ವಾದವಾಗಿದೆ.
ಇವರು ಸಚಿವರಾದ ಸಂದರ್ಭದಲ್ಲಿ ಮೊದಲು ಪಠ್ಯಪುಸ್ತಕದ ಕೆಲವು ಪಾಠಗಳನ್ನು ಕೈಬಿಟ್ಟರು ನಂತರ ನಮ್ಮ ಸಂಘಟನೆ ಹಾಗೂ ಸಾರ್ವಜನಿಕರು ರಾಜ್ಯಾದ್ಯಂತ ಹೋರಾಟ ಮಾಡಿದ ನಂತರ ಲೇಖಕರ ಅಭಿಪ್ರಾಯ ಪಡೆದು ಕೈಬಿಟ್ಟರು. ಆದರೆ ಈಗಾಗಲೇ ಆ ಪಾಠಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ ಎಂದು ಶಿಕ್ಷಕರು ಪಾಲಕರು ಹೇಳಿದ ನಂತರ ಮತ್ತೆ ಆ ಪಾಠಗಳನ್ನು ಮರು ಸೇರ್ಪಡೆಗೆ ಆದೇಶ ಮಾಡಿದರು. ಸಚಿವರು ಯಾರು ಹೇಳಿದ ಮಾತನ್ನು ಕೇಳುತ್ತಾರೋ ಗೊತ್ತಿಲ್ಲ. ತಮ್ಮ ಮನ ಬಂದಂತೆ 15 ದಿನಕ್ಕೆ, ತಿಂಗಳಿಗೆ ಈ ರೀತಿಯ ಆದೇಶ ಮಾಡುವುದರ ಮೂಲಕ ಶಿಕ್ಷಣ ವ್ಯವಸ್ಥೆಯ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರನ್ನು ಬದಲಾಯಿಸಬೇಕು, ಮನುವಾದವನ್ನು ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುವ ಕೆಲಸ ಮಾಡುವುದನ್ನು ಬಿಟ್ಟು ಸಮರ್ಪಕವಾಗಿ ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಣತೊಡಬೇಕು. ರಾಜ್ಯದ ಬಡವರ ದಲಿತರ ಅಲ್ಪಸಂಖ್ಯಾತರ ಮಕ್ಕಳ ಜೀವನದಲ್ಲಿ ಈ ರೀತಿ ಆದೇಶ ಮಾಡುವ ಮೂಲಕ ಶಿಕ್ಷಣ ವ್ಯವಸ್ಥೆ ಹಾಳು ಮಾಡದಿರಲಿ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂಬುದು ಅಮರೇಶ್ ಕಡಗದ್ ಅಭಿಪ್ರಾಯವಾಗಿದೆ.
ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು
ಮನವಿ ತಕ್ಷಣವೇ ಆದೇಶ! : “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ”, ಶಿಕ್ಷಣ ಕ್ಷೇತ್ರದಲ್ಲಿ ಮತೀಯ ವಿಚಾರಗಳನ್ನು ತುಂಬಲು ಹವಣಿಸುತ್ತಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಶಿಕ್ಷಕರ ಸಂಘಟನೆಯ ಮನವಿ ಪುಷ್ಟಿ ಕೊಟ್ಟಿದೆ. ಅಕ್ಟೋಬರ್ 10 ರಂದು ಶಿಕ್ಷಕರ ಸಂಘ ಮನವಿ ಮಾಡುತ್ತದೆ, ಸಚಿವರು ಅಕ್ಟೋಬರ್ 15 ಕ್ಕೆ ಆದೇಶ ಮಾಡುತ್ತಾರೆ. ಕೇವಲ 05 ದಿನದಲ್ಲಿ ಶಿಕ್ಷಕರ ಸಂಘದ ಮನವಿ ಅಸ್ತು ಎನ್ನುತ್ತಾರೆ ಎಂದಾದರೆ ನಮ್ಮ ಸಚಿವರ ‘ತುರುಕುವ’ ಕಾಳಜಿ ಎಷ್ಟಿರಬೇಡ ಯೋಚಿಸಿ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮನವಿ ಮಾಡಿದ್ದರೆ, ಬಹುಷಃ ಅದು ಕಸದ ಬುಟ್ಟಿ ಸೇರಿರಿತ್ತು ಅನಿಸುತ್ತದೆ.
ಸರಕಾರ ಶಾಲೆಗಳಿಗೆ ಮೂಲ ಸೌಲಭ್ಯ, ಅಭಿವೃದ್ಧಿಯ ಬಗ್ಗೆ ಒಮ್ಮೂಯೂ ಪತ್ರ ಬರೆಯದ ಶಿಕ್ಷಕರ ಸಂಘಟನೆ ಈ ವಿಚಾರದಲ್ಲಿ ಪತ್ರ ಬರೆದಿದ್ದಾರ ಹುನ್ನಾರ ಏನು? ಎಂಬ ಲಾಜಿಕ್ ಸುಲಭವಾಗಿ ಅರ್ಥವಾಗುತ್ತದೆ. (ಕೊಟ್ಟಿದ್ದರು ಶಿಕ್ಷಕರ ಸಮಸ್ಯೆ ನಿವಾರಣೆಗೆ ಕೊಟ್ಟಿರಬಹುದು)
ಸರಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಸೊರಗಿ ಹೋಗಿವೆ. 30 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೈಹಿಕ ಶಿಕ್ಷಕರಿಲ್ಲದೆ ಆಟಗಳು ಮಾಯವಾಗುತ್ತಿವೆ. ಕೊಠಡಿ ಕೊರತೆ, ಶಿಥಿಲಾವಸ್ಥೆಯಲ್ಲಿರುವ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಹೀಗೆ ಸಮಸ್ಯೆಗಳನ್ನೆ ಸರಕಾರಿ ಶಾಲೆಗಳು ಹೊದ್ದು ಮಲಗಿವೆ. ಹೀಗಿರುವಾಗ ಅವುಗಳ ಅಭಿವೃದ್ಧಿ ಬಿಟ್ಟು ‘ಧ್ಯಾನ’ ಮಾಡಿ ಎಂದು ಹೇಳುತ್ತಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ.
ಈಗಾಗಲೇ ಶಿಕ್ಷಕರಿಗೆ ಸಾಕಷ್ಟು ಹೊರೆ ಇದೆ. ಮತ್ತೊಂದು ಹೊರೆ ಶಿಕ್ಷಕರ ಒತ್ತಡಕ್ಕೆ ಕಾರಣವಾಗಬಹುದು. ಧ್ಯಾನಕ್ಕೆ ಆದ್ಯತೆ ನೀಡುವ ಬದಲು ದೈಹಿಕ ಶಿಕ್ಷಣವನ್ನು ಬಲಪಡಿಸಿದಲ್ಲಿ ಮಕ್ಕಳ ಮನೋಭಲ ಹಚ್ಚಾಗಲಿದೆ. ಸೃಜನಶೀಲವಾಗಿ ಯೋಚಿಸುವ ಅವಕಾಶಗಳು ಹೆಚ್ಚಾಗಲಿವೆ. ಸರಕಾರ ಈ ‘ವಿವಾದಾತ್ಮಕ’ ಸುತ್ತೋಲೆಯನ್ನು ವಾಪಸ್ ಪಡೆದು, ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸುವ ಯೋಜನೆಗಳನ್ನು ರೂಪಿಸುವಂತಾಗಲಿ.