ಶಾಲಾ ಶಿಕ್ಷಣ ಸಚಿವರಿಗೆ ಕಲಿಕೆಯ ಸ್ವರೂಪದ ಬಗ್ಗೆ ತಿಳುವಳಿಕೆ ಕೊರತೆ: ನಿರಂಜನಾರಾಧ್ಯ.ವಿ.ಪಿ

ಬೆಂಗಳೂರು: ಶಿಕ್ಷಣ ಸಚಿವರು ತುಮಕೂರಿನ ಸಮಾವೇಶವೊಂದರಲ್ಲಿ ಮಾತನಾಡುವಾಗ 5 ಮತ್ತು 8ನೇ ತರಗತಿಗಳಿಗೆ ನಡೆಸುತ್ತಿರುವ ಪರೀಕ್ಷೆಗಳನ್ನು ಸಮರ್ಥಿಸಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಇದು  ಪಬ್ಲಿಕ್ ಪರೀಕ್ಷೆಯಲ್ಲ ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡುವುದಷ್ಟೇ ಎಂದು ಹೇಳಿದ್ದಾರೆ. ಸ್ವತಃ ಸಚಿವರೇ ಮೌಲ್ಯಮಾಪನದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳದೆ ತಮ್ಮ ಅವೈಜ್ಞಾನಿಕ  ಹಾಗು ಮಕ್ಕಳ ವಿರೋಧಿ ತೀರ್ಮಾನವನ್ನು ವೃಥಾ  ಸಮರ್ಥಿಸಿಕೊಳ್ಳುವ ಭರದಲ್ಲಿ ಬೇರೆಯವರನ್ನು ದೂಷಿಸುವ ಮತ್ತು ತಪ್ಪು ಸಂದೇಶ ಸಾರುವ ಕೆಲಸದಲ್ಲಿ ತೊಡಗಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ.

ಇದನ್ನು ಓದಿ: ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕಂಟಕ: ನಿರಂಜನಾರಾಧ್ಯ

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ನಿರಂಜನರಾಧ್ಯ ಅವರು, ಕೇಂದ್ರೀಕೃತ  ಪ್ರಶ್ನೆ ಪತ್ರಿಕೆಯನ್ನು ಆಧರಿಸಿ  ಮಾಡುವ ಯಾವುದೇ ಪರೀಕ್ಷೆ ಅದು ಸಾರ್ವಜನಿಕ ಪರೀಕ್ಷೆ ಅಥವಾ ಸಾರ್ವತ್ರಿಕ ಪರೀಕ್ಷೆಯಾಗಿರುತ್ತದೆ. ಪ್ರತೀ ಶಾಲೆಯಲ್ಲಿ ಮಕ್ಕಳ ಕಲಿಕೆಯೆಂಬುದು ನಿರಂತರ ಮತ್ತು ವಿಭಿನ್ನವಾಗಿದ್ದಾಗ, ಕೇಂದ್ರೀಕೃತ  ಪ್ರಶ್ನೆ ಪತ್ರಿಕೆಯನ್ನು ಆಧರಿಸಿ ಮಾಡುವ ಯಾವುದೇ ಪರೀಕ್ಷೆಯು ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಲು ಸಹಾಯವಾಗುವುದಿಲ್ಲ. ಅದೊಂದು ನಿರರ್ಥಕ ಪರಿಣಾಮಕಾರಿಯಲ್ಲದ ಕ್ರಿಯೆಯಾಗುತ್ತದೆ. ಸಮಯ ಹಾಗು ಸಂಪನ್ಮೂಲಗಳ ವ್ಯಯವಾಗುವುದರ ಜೊತೆಗೆ, ಮಕ್ಕಳಲ್ಲಿ ಭಯ, ಆತಂಕ ಮತ್ತು ಕೀಳಿರಿಮೆಯನ್ನು ಹುಟ್ಟು ಹಾಕುತ್ತದೆ ಎಂದು ಹೇಳಿದ್ದಾರೆ.

ಮಕ್ಕಳ ಕಲಿಕೆಯಾಗಿಲ್ಲ ಆದ್ದರಿಂದ ಅವರು ಶಾಲೆ ಬಿಡುತ್ತಿದ್ದಾರೆ. ಹೀಗಾಗಿ ಮೂರು ಗಂಟೆಗಳ ಪರೀಕ್ಷೆ ಮಾಡಿ ಆತ್ಮಸ್ಥೈರ್ಯ ತುಂಬುತ್ತೇವೆ ಎಂಬುದು ಕಲಿಕೆಯ ಬಗ್ಗೆ ನಮಗಿರುವ ತಿಳುವಳಿಕೆಯ ಕೊರತೆಯನ್ನು ಸೂಚಿಸುತ್ತದೆ. ಕಲಿಕೆಯಾಗಿಲ್ಲವೆಂದರೆ ಕಲಿಕೆಯನ್ನು ಗಟ್ಟಿಗೊಳಿಸುವ ಮತ್ತು ಮತ್ತಷ್ಟು ಅರ್ಥಪೂರ್ಣಗೊಳಿಸುವ ಕೆಲಸವಾಗಬೇಕೆ ಹೊರತು ಸನಾತನ ಮಾದರಿಯ ಪರೀಕ್ಷೆ ಹೆಚ್ಚು ಪ್ರಯೋಜನವಾಗುವುದಿಲ್ಲ.

ಇದನ್ನು ಓದಿ: ಶಿಕ್ಷಣ ಸಚಿವರ ಟಿಪ್ಪಣಿ ಉಚಿತ-ಕಡ್ಡಾಯ ಶಿಕ್ಷಣದ ಸ್ಪಷ್ಟ ಉಲ್ಲಂಘನೆ; ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಈ ಕಾರಣದಿಂದಲೇ, ಮಕ್ಕಳ ಕಲಿಕೆಯನ್ನು ವರ್ಷಕ್ಕೊಮ್ಮೆ ಅಳೆದು ಅವರನ್ನು ದೂಷಿಸುವ ಬದಲು ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮತ್ತು ವಿಸ್ತೃತವಾಗಿ ಮೌಲ್ಯಮಾಪನ ಮಾಡುತ್ತಾ ಮಕ್ಕಳು ಕಲಿಕೆಯಲ್ಲಿ ಎಲ್ಲಿದ್ದಾರೆ ಎಂದು ದಿನ ನಿತ್ಯ ತಿಳಿದು ಅದರ ಆಧಾರದಲ್ಲಿ ಕಲಿಕೆಯನ್ನು ಸಂಘಟಿಸಿ ಹಾಗು ಸಂಯೋಜಿಸಿ ಎಲ್ಲಾ ಮಕ್ಕಳು ಪ್ರಭುತ್ವದ ಮಟ್ಟಕ್ಕೆ ಕಲಿಯಬೇಕೆಂಬ ಉದಾತ್ತ ಆಶಯದಿಂದಲೇ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೆ ತಂದು ಸಮಗ್ರ ಹಾಗು ನಿರಂತರ ಮೌಲ್ಯಮಾಪನವನ್ನು ಜಾರಿಗೊಳಿಸಿದ್ದು ಎಂದು ಉಲ್ಲೇಖಿಸಿದ್ದಾರೆ.

ಸಚಿವರು, ಶಿಕ್ಷಣ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಕಾಯಿದೆ ಪ್ರಕರಣ 29(ಹೆಚ್) ಆಶಯದಂತೆ ಪಠ್ಯಕ್ರಮ ಮತ್ತು ಮೌಲ್ಯಮಾಪನ ನಿಯಮವು ಸಮಗ್ಯ ಮತ್ತು ನಿರಂತರವಾಗಿದ್ದು ಮಗುವಿನ ಜ್ಞಾನದ ತಿಳುವಳಿಕೆ ಮತ್ತು ಅದನ್ನು ಅನ್ವಯಿಸುವ ಅವನ ಅಥವಾ ಅವಳ ಸಾಮರ್ಥ್ಯವನ್ನು ನಿರಂತರ ಮೌಲ್ಯಮಾಪನ ಮಾಡಬೇಕೇಂದು ಹೇಳುತ್ತದೆ. ಕಲಿಕಾ ಅಂಶಗಳನ್ನು ಕಲಿಸುವ ಮೂಲಕ ಸಾಧಿಸಬೇಕಾದ ಸಾಮರ್ಥ್ಯಗಳನ್ನು ಒಂದು ನಿರ್ದಿಷ್ಟವಾದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿ ಕಲಿತು ಸೂಕ್ತ ಸಾಧನ ತಂತ್ರಗಳನ್ನು ಬಳಸಿ ಮೌಲ್ಯಮಾಪನ ಮಾಡಬೇಕಿರುತ್ತದೆ. ಅದಕ್ಕೆ ಅತ್ಯಂತ ಸೂಕ್ತವಾದ ವಿಧಾನ ಸಮಗ್ರ ಹಾಗು ನಿರಂತರ ಮೌಲ್ಯಮಾಪನ ಮತ್ತು ಅದನ್ನು ಮಾಡಬೇಕಾದವರು ಆ ಶಾಲೆಯಲ್ಲಿ ಕಲಿಸುವ ಶಿಕ್ಷಕರು. ಅಂತಹ ಕಲಿಕೆಯನ್ನು ಅಥವಾ ಕಲಿಕಾ ಸಾಮರ್ಥ್ಯಗಳನ್ನು ಕೇವಲ ಕೆಲವು ಗಂಟೆಗಳಲ್ಲಿ ಮೌಲ್ಯಮಾಪನ ಮಾಡುವುದು ಎಂಥಹ ವೈಜ್ಞಾನಿಕ ಕ್ರಮವನ್ನು ಸಚಿವರು ಅರಿಯಬೇಕಿದೆ ಎಂದು ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ.

ಇದನ್ನು ಓದಿ: ಮೊಟ್ಟೆ ನೀಡದಂತೆ ಶಿಕ್ಷಣ ಇಲಾಖೆಗೆ ಶಿಫಾರಸ್ಸು : ಎನ್‌ಇಪಿ ಸಮಿತಿ ವಿರುದ್ಧ ತೀವ್ರ ಆಕ್ರೋಶ

ನಮಗೆ ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡುವ ಅಗತ್ಯವಿದ್ದರೆ, ಈಗಾಗಲೇ ಶಿಕ್ಷಕರು ಮಕ್ಕಳು ಕಲಿಯುವ ಪ್ರತಿಯೊಂದು ವಿಷಯದಲ್ಲಿ ನಾಲ್ಕು ರೂಪಣಾತ್ಮಕ ಹಾಗು ಒಂದು ಸಂಕಲನಾತ್ಮಕ ಪರೀಕ್ಷೆಯನ್ನು ನಡೆಸಿ ಅದರ ವಿವರಗಳನ್ನು ಶಾಲಾವಹಿಗಳಲ್ಲಿ ಮತ್ತು ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಕ್ಕಳು ಎಲ್ಲಿದ್ದಾರೆ ಎಂದು ಗುರುತಿಸಲು ಇಷ್ಟು ದೊಡ್ಡ ಮಟ್ಟದ ದತ್ತಾಂಶ ನಮ್ಮ ಬಳಿ ಇರುವಾಗ ಮತ್ತೊಂದು ಪರೀಕ್ಷೆಯ ಅಗತ್ಯ ಏನು ಮತ್ತು ಅದರ ಹಿಂದಿರುವ ರಹಸ್ಯವೇನು ಎಂಬುದನ್ನು ಸಚಿವರು ಸಾರ್ವಜನಿಕವಾಗಿ ಹೇಳಬೇಕು.

ಕೇಂದ್ರೀಕೃತ ಪರೀಕ್ಷೆಗಳನ್ನು ಮಾಡಿ ಮಕ್ಕಳನ್ನು ʻಫೇಲ್ʼ ಎಂದು ಘೋಷಿಸದಿದ್ದರೂ, ಮಕ್ಕಳನ್ನು ಗ್ರೇಡ್ ಆಧಾರದಲ್ಲಿ ಘೋಷಿಸುವುದು ಅಥವಾ ಬಹಿರಂಗವಾಗಿ ಕಳಪೆ ಅಂಕಗಳನ್ನು ಪಡೆದ ಮಕ್ಕಳೆಂದು ವರ್ಗೀಕರಿಸುವುದು ಅಂತಹ ಮಕ್ಕಳು ಶಾಲೆಯನ್ನು ತೊರೆಯುವ ಅವಕಾಶವನ್ನು ಹೆಚ್ಚಿಸುತ್ತದೆ. ಅವರ ಮನೋಬಲ ಕುಸಿಯುತ್ತದೆ. ಮಕ್ಕಳ ಕಲಿಕೆ, ಕಲಿಕೆಗೆ ನಾವು ಒದಗಿಸುವ ವಾತಾವರಣ, ಶಿಕ್ಷಕರ ಸಾಮರ್ಥ್ಯ, ಶಿಕ್ಷಕರು ಪೂರ್ಣವಾಗಿ ಕಲಿಸಲು ಸಾಧ್ಯವಾಗುವ ಪರಿಸರ ಮತ್ತು ಅವಕಾಶ, ಮಕ್ಕಳ ಮನಸ್ಸನ್ನು ಅರಿತು ಸಂವೇದನಾಶೀಲತೆಯಿಂದ ಕಲಿಸುವ ಮನೋಧರ್ಮ, ಇತ್ಯಾದಿಗಳನ್ನು ಅವಲಂಬಿಸುತ್ತದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು, ಅಂದರೆ, ೨೦೧೯-೨೦ ರಲ್ಲಿ ೨೨,೨೦೦ (ಶೇಕಡ.೮.೪೬); ೨೦೨೦-೨೧ ರಲ್ಲಿ ೩೪,೦೭೯ (ಶೇಕಡ.೧೪.೬೨); ಮತ್ತು ೨೦೨೧-೨೨ರಲ್ಲಿ ೧,೪೧,೩೫೮ (ಶೇಕಡ. ೫೭.೫೭), ಮಕ್ಕಳು ಕಲಿಕೆ ಎಲ್ಲಿದೆ ಎಂದು ಪರೀಕ್ಷಿಸಲು ಇರುವ ನೈತಿಕತೆಯಾದರು ಏನು ನಿರಂಜನಾರಾಧ್ಯ.ವಿ.ಪಿ ಪ್ರಶ್ನಿಸಿದ್ದಾರೆ.

ಮಕ್ಕಳ ಕಲಿಕೆಯನ್ನು ನಿರ್ಣಯಿಸುವ ಅತ್ಯುತ್ತಮ ಕಾರ್ಯವಿಧಾನವಾದ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಶಿಕ್ಷಣ ಹಕ್ಕು ಕಾಯಿದೆ ಭಾಗವಾಗಿ ಜಾರಿಯಲ್ಲಿರುವಾಗ ಕೇಂದ್ರೀಕೃತ ಪರೀಕ್ಷೆ ನಡೆಸುವ ಅವಶ್ಯಕತೆಯಾದರು ಏನು. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಮಗುವನ್ನು ಬೆದರಿಸುವುದಿಲ್ಲ. ಬದಲಿಗೆ  ಮಗುವನ್ನು ಭಯ ಮತ್ತು ವೈಫಲ್ಯದ ಆಘಾತದಿಂದ ಬಿಡುಗಡೆ ಮಾಡುತ್ತದೆ ಮತ್ತು ಮಗುವಿನ ಕಲಿಕೆ ಮತ್ತು ಕಾರ್ಯಕ್ಷಮತೆಗೆ ವೈಯಕ್ತಿಕ ಗಮನವನ್ನು ನೀಡಲು ಶಿಕ್ಷಕರನ್ನು ಶಕ್ತಗೊಳಿಸುತ್ತದೆ. ಇದು ವ್ಯವಸ್ಥೆಯು ಗುಣಮಟ್ಟವನ್ನು ಸುಧಾರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಮಗು ನಿರೀಕ್ಷೆಯ ಮಟ್ಟಕ್ಕೆ ಕಲಿಯದಿರುವುದು, ಮಗುವಿನಲ್ಲಿ ಯಾವುದೇ ಅಂತರ್ಗತ ನ್ಯೂನತೆಯಿಂದಾಗಿ ಅಲ್ಲ, ಆದರೆ ಹೆಚ್ಚಾಗಿ ಅಸಮರ್ಪಕ ಕಲಿಕೆಯ ವಾತಾವರಣದಿಂದ ಎಂದು ನಿರಂಜನಾರಾಧ್ಯ.ವಿ.ಪಿ ವಿಶ್ಲೇಷಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಸಚಿವರು, ಈಗಲಾದರು ಈ ಎಲ್ಲಾ ಅಂಶಗಳನ್ನು ಅರಿತು 5 ಮತ್ತು 8ನೇ ತರಗತಿಯ ಉದ್ದೇಶಿತ ಕೇಂದ್ರೀಕೃತ ಪರೀಕ್ಷೆಯನ್ನು ಮಕ್ಕಳ ಹಿತದೃಷ್ಟಿಯಿಂದ ಕೈ ಬಿಡಬೇಕು. ಇದು ಪ್ರತಿಷ್ಟೆಯ ಪ್ರಶ್ನೆಯಲ್ಲ, ಬದಲಿಗೆ ಮಕ್ಕಳಿಗೆ ಕಲಿಕಾ ಸ್ನೇಹಿ ವಾತಾವರಣದಲ್ಲಿ ವೈಜ್ಞಾನಿಕವಾಗಿ ಕಲಿಸುವ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *