ಒಂದು ತಿಂಗಳು ಪೂರೈಸಿದ ಶಕ್ತಿ ಯೋಜನೆ : ನಾಲ್ಕು ನಿಗಮಗಳ ಸಾರಿಗೆಯಲ್ಲಿ ಪ್ರಯಾಣಿಸಿದವರೆಷ್ಟು?

ಬೆಂಗಳೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಮಹಿಳೆಯರ ಉಚಿತ ಬಸ್‌ ಪ್ರಯಾಣ ಆರಂಭವಾಗಿ ಬರೋಬ್ಬರಿ ಒಂದು ತಿಂಗಳು ಪೂರ್ಣಗೊಂಡಿದೆ. ಈವರೆಗೂ 16.73 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, ಇವರ ಟಿಕೆಟ್‌ ಮೊತ್ತ 402 ಕೋಟಿ ರೂಪಾಯಿ ಆಗಿದೆ.

ಜೂನ್ 11 ರಿಂದ ಜುಲೈ 10ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇವರಲ್ಲಿ 16.73 ಕೋಟಿ ಮಹಿಳೆಯರು. ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದು: ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರಿಗೆ ಬಸ್​ ಪ್ರಯಾಣ ಉಚಿತ

ಈ ಯೋಜನೆಯು ರಸ್ತೆ ಸಾರಿಗೆ ನಿಗಮದ ಚಟುವಟಿಕೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಪ್ರಯಾಣಿಕರ ಸಂಖ್ಯೆಯಲ್ಲಿನ ದಿಢೀರ್ ಏರಿಕೆಯನ್ನು ನಿಭಾಯಿಸಲು, ಜೂನ್‌ನಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್ ನಿಗಮಗಳು 3,147 ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸಿವೆ. ಕೆಎಸ್‌ಆರ್‌ಟಿಸಿ 1,500, ಎನ್‌ಡಬ್ಲೂಕೆಆರ್‌ಟಿಸಿ 986, ಕೆಎಸ್‌ಆರ್‌ಟಿಸಿ 423 ಮತ್ತು ಬಿಎಂಟಿಸಿ 238 ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದರು. ಯೋಜನೆಯನ್ನು ಯಶಸ್ವಿಗೊಳಿಸಿದ 4 ಬಸ್ ನಿಗಮಗಳ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ.

ಪ್ರತಿ ದಿನ ಸರಾಸರಿ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ : ಕಳೆದ ಒಂದು ತಿಂಗಳಲ್ಲಿ ಸಾರಿಗೆ ಸಂಸ್ಥೆಗಳು ಬಸ್‌ಗಳಲ್ಲಿ ಸರಾಸರಿ 55.7 ಲಕ್ಷ ಮಹಿಳೆಯರು ನಿತ್ಯ ಉಚಿತ ಸಂಚಾರ ಮಾಡುತ್ತಿದ್ದಾರೆ. ಈ ಪೈಕಿ ಕೆಎಸ್ಆರ್‌ಟಿಸಿಯಲ್ಲಿ 16.97 ಲಕ್ಷ, ಬಿಎಂಟಿಸಿಯಲ್ಲಿ 17.95 ಲಕ್ಷ, ವಾಯವ್ಯ ಸಾರಿಗೆಯಲ್ಲಿ 13.42 ಲಕ್ಷ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7.43 ಲಕ್ಷ ಮಹಿಳಾ ಪ್ರಯಾಣಿಕರು ನಿತ್ಯ ಸಂಚಾರ ಮಾಡುತ್ತಿದ್ದಾರೆ.

ಸಾರಿಗೆ ಸಂಸ್ಥೆಗಳು ಒಟ್ಟು ಪ್ರಯಾಣಿಕರು (ಕೋಟಿಗಳಲ್ಲಿ) ಒಟ್ಟು ಮಹಿಳಾ ಪ್ರಯಾಣಿಕರು (ಕೋಟಿಗಳಲ್ಲಿ) ಶೇಕಡವಾರು ಮಹಿಳಾ ಪ್ರಯಾಣಿಕರು
KSRTC 9.69 5.09 52.52%
BMTC 11.17 5.38 48.16%
NWKRTC 7.24 4.02 55.52%
KKRTC 4.77 2.23 46.75%
ಒಟ್ಟು 32.89 16.73 50.86%

ಸಾರಿಗೆ ಸಂಸ್ಥೆಗಳ ಟಿಕೆಟ್‌ ಮೌಲ್ಯ (ಕೋಟಿ ರೂ.ಗಳಲ್ಲಿ)

KSRTC – 151.25
BMTC – 69.56
NWKRTC – 103.51
KKRTC – 77.62
ಒಟ್ಟು – 401.94

ಕರ್ನಾಟಕ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ‘ಶಕ್ತಿ’ ಯೋಜನೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೂನ್ 11ರಂದು ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆ ಒಂದು ತಿಂಗಳು ಪೂರೈಸಿದ್ದು, ಹಲವು ಟೀಕೆಗಳ ನಡುವೆಯೂ ಯೋಜನೆ ಯಶಸ್ವಿಯಾಗಿದೆ.

ಸಾಮಾನ್ಯರು, ವಿಶೇಷವಾಗಿ ಮಹಿಳಾ ಪ್ರಯಾಣಿಕರು, ಪ್ರತಿದಿನ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಬಸ್‌ಗಳು ಸಾರ್ವಜನಿಕರ ಜೀವನಾಡಿ ಮಾತ್ರವಲ್ಲದೆ ಮಹಿಳಾ ಪ್ರಯಾಣಿಕರ ಆದ್ಯತೆಯ ಸಾರಿಗೆ ವಿಧಾನವಾಗಿದೆ ಎಂಬ ಅಂಶಗಳು ಈ ಯೋಜನೆಯಿಂದ ದೊರಕಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *