ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ ಭಾಗ 2

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ – ಭಾಗ 2

ನಾ ದಿವಾಕರ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಗೃಹ ಕೈಗಾರಿಕೆಗಳಲ್ಲಿ ದುಡಿಯುವವರು, ಸಾರ್ವಜನಿಕ ಕಾಮಗಾರಿಯ ಕಾರ್ಮಿಕರು ಮತ್ತು ಇತರ ಅನೌಪಚಾರಿಕ ವಲಯದ ಮಹಿಳಾ ದುಡಿಮೆಗಾರರೂ ಸಹ ಬಸ್‌ ಪ್ರಯಾಣದ ಖರ್ಚು ವೆಚ್ಚವನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ದುಡಿಮೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಾಭಾವಿಕ

ದುಡಿಮೆ ಮತ್ತು ಶ್ರಮಶಕ್ತಿಯ ಚಲನೆ

ಭಾರತೀಯ ಆರ್ಥಿಕತೆಯು 1990ರ ಜಾಗತಿಕರಣ ನಂತರದ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಅಂದರೆ 1990-91 ಮತ್ತು 2020-21ರ ನಡುವೆ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಶೇ 30 ರಿಂದ ಶೇಕಡಾ 19 ಕ್ಕೆ ಕುಸಿದಿದೆ. ಕಳೆದ 15 ವರ್ಷಗಳ ದತ್ತಾಂಶವನ್ನು ಗಮನಿಸಿದಾಗ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು 2005 ರಲ್ಲಿ ಶೇ 32ರಷ್ಟಿದ್ದುದು 2021 ರಲ್ಲಿ ಶೇ 19 ಕ್ಕೆ ಕುಸಿದಿದೆ.  ಆರ್ಥಿಕತೆಯು ನಾಲ್ಕು ಪಟ್ಟು ಹೆಚ್ಚಾಗಿರುವ ಅವಧಿಯಲ್ಲೇ ಮಹಿಳಾ ದುಡಿಮೆಗಾರರ ಸಂಖ್ಯೆ ಕುಸಿದಿರುವುದು ಭಾರತದಲ್ಲಿನ ಲಿಂಗ ಅಸಮಾನತೆಯ ನೆಲೆಗಳನ್ನು ಸೂಚಿಸುತ್ತದೆ. ಕೋವಿದ್‌ ಸಾಂಕ್ರಾಮಿಕದ ನಂತರದಲ್ಲಿ ಕೊಂಚ ಸುಧಾರಣೆ ಕಂಡುಬಂದಿದ್ದರೂ ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ಪ್ರಮಾಣ (Women Labour Force Participation Rate-LFPR) ಸ್ಥಗಿತಗೊಂಡಿರುವುದನ್ನು ಕಳೆದ ವರ್ಷದ ದತ್ತಾಂಶಗಳು ನಿರೂಪಿಸುತ್ತವೆ.

ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (Progressive Labour force Survey) ದತ್ತಾಂಶಗಳ ಅನುಸಾರ ಜೂನ್‌ 2021ರಿಂದ ಜೂನ್‌ 2022ರ ಅವಧಿಯಲ್ಲಿ ಈ ಸ್ಥಗಿತತೆ ಕಂಡುಬರುತ್ತದೆ. 2021-22ರಲ್ಲಿ 15 ರಿಂದ 59 ವಯೋಮಾನದ ಶೇ 29.4ರಷ್ಟು ಮಹಿಳೆಯರು ಮಾತ್ರ ಕಾರ್ಮಿಕ ಶಕ್ತಿಯ ಭಾಗವಾಗಿದ್ದರು. ಹಿಂದಿನ ವರ್ಷದಲ್ಲಿ ಈ ಪ್ರಮಾಣ ಶೇ 29.8ರಷ್ಟಿತ್ತು. ಈ ಸ್ಥಗಿತತೆ ಅಥವಾ ಕುಸಿತದ ಹೊರತಾಗಿಯೂ ಗಮನಿಸಬೇಕಾದ ಅಂಶವೆಂದರೆ ಈ ಕುಸಿತದಿಂದ ಬಾಧಿತರಾಗಿರುವವರ ಪೈಕಿ ಗ್ರಾಮೀಣ ಮಹಿಳೆಯರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಸಮುದಾಯಗಳ ಮಹಿಳೆಯರು ಮತ್ತು ಅನಕ್ಷರಸ್ಥ ಅಥವಾ ಪ್ರಾಥಮಿಕದಿಂದ ಮಧ್ಯಮ ಮಟ್ಟದ ಶಿಕ್ಷಣವನ್ನು ಹೊಂದಿರುವ ಮಹಿಳೆಯರು ಪ್ರಧಾನವಾಗಿ ಕಂಡುಬರುತ್ತಾರೆ. ಮತ್ತೊಂದೆಡೆ, ನಗರ ಮಹಿಳೆಯರು, ಪದವೀಧರ (ಅಥವಾ ಉನ್ನತ) ಮಟ್ಟದ ಶಿಕ್ಷಣ ಹೊಂದಿರುವ ಮಹಿಳೆಯರು ಅಥವಾ ಅನಕ್ಷರಸ್ಥರಲ್ಲಿ ಮಹಿಳಾ LFPR  ಪ್ರಮಾಣವು 2020-21 ಮತ್ತು 2021-22 ರ ನಡುವೆ ಅಲ್ಪ ಸುಧಾರಣೆಯನ್ನು ಕಂಡಿದೆ.

2021-22ರಲ್ಲಿ 15-59 ವರ್ಷ ವಯಸ್ಸಿನ 57.3% ಮಹಿಳೆಯರು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಕೇವಲ 34.4% ಪುರುಷ ಉದ್ಯೋಗಿಗಳು ಮಾತ್ರ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಸರಾಸರಿ, ಮಹಿಳಾ ಕಾರ್ಮಿಕರು ಉದ್ಯೋಗದ ಪ್ರಕಾರಗಳಲ್ಲಿ ಪುರುಷರಿಗಿಂತ ಕಡಿಮೆ ಸಂಪಾದಿಸುತ್ತಾರೆ. ಆದಾಗ್ಯೂ, ಸ್ವಯಂ ಉದ್ಯೋಗಿಗಳಲ್ಲಿ ಲಿಂಗ ಗಳಿಕೆಯ ಅಂತರವು ಹೆಚ್ಚು ವ್ಯತ್ಯಯಗಳನ್ನು ಸೂಚಿಸುವುದನ್ನು PLFS  ದತ್ತಾಂಶವು ತೋರಿಸುತ್ತದೆ. ಸಂಬಳ ಪಡೆಯುವ ಕಾರ್ಮಿಕರಲ್ಲಿ, ಏಪ್ರಿಲ್-ಜೂನ್ 2022 ರ ಅವಧಿಯಲ್ಲಿ ಮಹಿಳೆಯರು ತಿಂಗಳಿಗೆ ಸರಾಸರಿ 14,678 ರೂ.ಗಳನ್ನು ಗಳಿಸಿದರೆ, ಪುರುಷರು ತಿಂಗಳಿಗೆ 19,722 ರೂ.ಗಳನ್ನು (ಮಹಿಳೆಯರಿಗಿಂತ 1.3 ಪಟ್ಟು) ಗಳಿಸುತ್ತಾರೆ. ದಿನಗೂಲಿ ಕಾರ್ಮಿಕರಾಗಿ ದುಡಿಯುವವರು ಸಾಮಾನ್ಯವಾಗಿ ಕಡಿಮೆ ಸಂಪಾದಿಸುತ್ತಾರೆ. ಆದರೆ ಇಲ್ಲಿಯೂ ಪುರುಷರು ಸರಾಸರಿ ಹೆಚ್ಚು ಸಂಪಾದಿಸುತ್ತಿದ್ದರು. ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರ ಸರಾಸರಿ ದಿನಗೂಲಿ 272 ರೂ.ಗಳಾಗಿದ್ದರೆ, ಪುರುಷರಿಗೆ ಸರಾಸರಿ 408 ರೂ.ಗಳನ್ನು (ಮಹಿಳೆಯರಿಗಿಂತ 1.5 ಪಟ್ಟು) ಗಳಿಸುತ್ತಾರೆ.

ಅಸಂಘಟಿತ-ಸಂಘಟಿತ-ಅನೌಪಚಾರಿಕ ಕಾರ್ಮಿಕ ವಲಯದಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವುದಕ್ಕೆ ಹಲವು ಸಾಮಾಜಿಕ ಸಾಂಸ್ಕೃತಿಕ ಕಾರಣಗಳನ್ನು ಶೋಧಿಸಬಹುದಾದರೂ, ಮಹಿಳೆಯ ಭೌತಿಕ ಚಲನೆಯೂ ಒಂದು ಪ್ರಧಾನ ಅಂಶವಾಗಿ ಕಾಣುತ್ತದೆ. ಅಲ್ಪ ದುಡಿಮೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ನೌಕರಿಗಳಿಗೆ ಬಹುಸಂಖ್ಯೆಯ ಮಹಿಳೆಯರು ಹಣಕಾಸಿನ ಕೊರತೆಯ ಕಾರಣದಿಂದಲೇ ಹಿಂಜರಿಯುತ್ತಾರೆ. ಅಸಂಘಟಿತ ವಲಯದ, ದಿನಗೂಲಿ ನೌಕರಿಗಳಲ್ಲಿ ಬಸ್‌ ಪ್ರಯಾಣದ ಖರ್ಚುಗಳೇ ಆದಾಯದ ಬಹುಪಾಲು ಅಂಶವನ್ನು ಕಬಳಿಸುವುದರಿಂದ ಮನೆಯಲ್ಲೇ ಉಳಿಯುತ್ತಾರೆ. ಬಡತನ ಮತ್ತು ಹಸಿವೆಯನ್ನು ನೀಗುವ ಅನಿವಾರ್ಯತೆ ಇರುವ ಗ್ರಾಮೀಣ-ಬಡ ಕುಟುಂಬದ ಮಹಿಳೆಯರು ಹತ್ತಾರು ಕಿಲೋಮೀಟರ್‌ ನಡೆದೇ ಹೋಗುವುದನ್ನೂ ಸಹ ಗಮನಿಸಬಹುದಿತ್ತು.  ಅತಿ ಹೆಚ್ಚಿನ ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಗಾರ್ಮೆಂಟ್‌ ವಲಯದಲ್ಲಿ ಇದು ಢಾಳಾಗಿ ಕಾಣುವ ವಿದ್ಯಮಾನ.

ಇದನ್ನೂ ಓದಿ:ಆಧುನಿಕ ನಾಗರಿಕತೆಯೂ ಉಳ್ಳವರ ಬೌದ್ಧಿಕ ಕೌರ್ಯವೂ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಗೃಹ ಕೈಗಾರಿಕೆಗಳಲ್ಲಿ ದುಡಿಯುವವರು, ಸಾರ್ವಜನಿಕ ಕಾಮಗಾರಿಯ ಕಾರ್ಮಿಕರು ಮತ್ತು ಇತರ ಅನೌಪಚಾರಿಕ ವಲಯದ ಮಹಿಳಾ ದುಡಿಮೆಗಾರರೂ ಸಹ ಬಸ್‌ ಪ್ರಯಾಣದ ಖರ್ಚು ವೆಚ್ಚವನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ದುಡಿಮೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಾಭಾವಿಕ. ಆಶಾ/ಅಂಗನವಾಡಿ/ಸಾರ್ವಜನಿಕ ಆರೋಗ್ಯ ವಲಯದ ಸಾವಿರಾರು ಕಾರ್ಯಕರ್ತೆಯರು ಬಸ್‌ ಪ್ರಯಾಣದ ಖರ್ಚು ಉಳಿಸಲು ಹಳ್ಳಿಯಿಂದ ಹಳ್ಳಿಗೆ ನಡೆದು ಹೋಗುವುದು ಸಾಮಾನ್ಯ ವಿದ್ಯಮಾನವಾಗಿದ್ದುದನ್ನು ಸ್ಮರಿಸಬಹುದು. ಉತ್ತಮ ಶಾಲಾ ಕಾಲೇಜು ಸೌಲಭ್ಯ ಇಲ್ಲದ ನಗರದ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕೆಳಮಧ್ಯಮ ವರ್ಗದ-ಬಡ ಕುಟುಂಬಗಳ ಹೆಣ್ಣುಮಕ್ಕಳು ಸಹ ದುಬಾರಿ ಬಸ್‌ ಪ್ರಯಾಣದ ಕಾರಣಕ್ಕಾಗಿಯೇ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಾರೆ. ಏಕೆಂದರೆ ಈ ಕುಟುಂಬಗಳಲ್ಲಿ ಗಂಡು ಮಕ್ಕಳ ಶಿಕ್ಷಣ ಪ್ರಥಮ ಆದ್ಯತೆಯಾಗಿರುತ್ತದೆ. ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ದುಡಿಮೆಗಾರರು, ಪುರುಷರು ಮತ್ತು ಮಹಿಳೆಯರು, ರೈಲು ಸೌಲಭ್ಯವಿದ್ದೆಡೆ ಪ್ಯಾಸೆಂಜರ್‌ ರೈಲುಗಳನ್ನೇ ಆಶ್ರಯಿಸುವುದನ್ನು ಗಮನಿಸಿದರೆ ಈ ವಾಸ್ತವದ ಅರಿವೂ ಮೂಡಲು ಸಾಧ್ಯ.

Donate Janashakthi Media

Leave a Reply

Your email address will not be published. Required fields are marked *