ರಾಜ್ಯದ ಶಿಕ್ಷಣ ಕ್ಷೇತ್ರ ಮತ್ತು ವಿದ್ಯಾರ್ಥಿಗಳು ಇಂದು ಅನೇಕ ಜ್ವಲಂತ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ನೇತೃತ್ವದಲ್ಲಿ ಇಂದು(ಸೆಪ್ಟಂಬರ್ 08) ರಾಜ್ಯದ ವಿವಿದೆಡೆ ಪ್ರತಿಭಟನೆ ನಡೆದಿದೆ.
ಹಾವೇರಿಯಲ್ಲಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಇಜಾರಿಲಕಮಾಪುರದಿಂದ ಜಿ.ಎಚ್.ಕಾಲೇಜಿನಿಂದ ಬೃಹತ್ ಮೆರವಣಿಗೆ ನಡೆಸಿ ಸಿದ್ದಪ್ಪ ವೃತ್ತದಲ್ಲಿ ಜಮಾವಣೆಗೊಂಡು ಧರಣಿ ನಡೆಸಿದರು. ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಶೈಕ್ಷಣಿಕ ವರ್ಷ ಆರಂಭಗೊಂಡು 5 ತಿಂಗಳಾದರೂ ರಾಜ್ಯಾದ್ಯಂತ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಸಿಗದೆ ನಿರಂತರವಾಗಿ ಬೀದಿಗಳಿದು ಪ್ರತಿಭಟನೆ ನಡೆಸುವ ಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ ತೀವ್ರವಾಗಿದೆ ಹಾಸ್ಟೆಲ್ ಪ್ರವೇಶ ಬಯಸಿ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾವಕಾಶ ಸಿಗುತ್ತಿಲ್ಲ. ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚು ಮಾಡಬೇಕಿತ್ತು, ಆದರ ಬದಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನಗತ್ಯ ಕೌನ್ಸಿಲಿಂಗ್ ಪದ್ದತಿ ತಂದಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಹಾಸ್ಟೆಲ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲ, ರಾಜ್ಯದಲ್ಲಿ ಆಹಾರ ಭತ್ಯೆ ಮಾಸಿಕ ರೂ.1650 ಇದ್ದು, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಅದು ಸಾಲದಾಗಿದೆ. ಆಹಾರ ಭತ್ಯೆಯನ್ನು ಕೇರಳ ಮಾದರಿಯಲ್ಲಿ ಕನಿಷ್ಠ ರೂ.3500 ಗೆ ಹೆಚ್ಚಳ ಮಾಡಬೇಕು. ಮೂಲಭೂತ ಸೌಲಭ್ಯಗಳಿಲ್ಲದೆ, ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ವಿದ್ಯಾರ್ಥಿ ಸಮುದಾಯ ನರಳುವಂತಾಗಿದೆ. ಬೈಸಿಕಲ್, ಸಮವಸ್ತ್ರ, ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಪಠ್ಯಪುಸ್ತಕ, ಫೆಲೋಶೀಫ್ ಮುಂತಾದ ಶೈಕ್ಷಣಿಕ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೊಂಡಿಲ್ಲ. ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ ಬಾಕಿ ಉಳಿಸಿಕೊಂಡಿದೆ. ಇವೆಲ್ಲ ನಿಗದಿತ ಶೈಕ್ಷಣಿಕ ವೇಳೆಯೊಳಗೆ ಸಮರ್ಪಕವಾಗಿ ಸಿಗದೆ ವಿದ್ಯಾರ್ಥಿಗಳು ಬಡ-ಕೃಷಿ ಕೂಲಿಕಾರ್ಮಿಕರ ಮಕ್ಕಳು ಶಾಲೆಯಿಂದ ಹಿಂದುಳಿಯುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ ಎಂದು ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೋಮುವಾದಿ ಮತ್ತು ಸಂಘ ಪರಿವಾರದ ವಿಚಾರಗಳನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದೆ. ಪಠ್ಯ ಪುಸ್ತಕಗಳ ಕೋಮುವಾದೀಕರಣ ಹಾಗೂ ಸಾವರ್ಕರ್ ಬುಲ್ ಬುಲ್ ಹಕ್ಕಿ ಮೇಲೆ ಪ್ರಯಾಣದ ಅವೈಜ್ಞಾನಿಕ ಪಾಠ ಪಠ್ಯದಿಂದ ಕೈಬಿಡಬೇಕು. ಅವೈಜ್ಞಾನಿ ಅಂಶಗಳನ್ನು ಒಳಗೊಂಡಿರುವ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ತುಮಕೂರು ವಿಶ್ವವಿದ್ಯಾಲಯದಲ್ಲಿ ಸಂಘ ಪರಿವಾರದ ಪ್ರಭಾವದಿಂದ ಸ್ಥಾಪಿಸಿರುವ ಸಾವರ್ಕರ್ ಅಧ್ಯಯನ ಪೀಠವನ್ನು ಕೂಡಲೇ ಬೇಷರತ್ತಾಗಿ ರದ್ದುಪಡಿಸಬೇಕು ಎಂದು ತಿಳಿಸಿದರು.
ಎಸ್ಎಫ್ಐ ಉಪಾಧ್ಯಕ್ಷ ಹೊನ್ನಪ್ಪ ತಳವಾರ ಮಾತನಾಡಿ, ರಾಜ್ಯದಲ್ಲಿ ಸುಮಾರು 38,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಾಲೇಜುಗಳಲ್ಲಿ ಶೇ 56% ಉಪನ್ಯಾಸಕರ ಹುದ್ದೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಾಧ್ಯಪಕರ ಹುದ್ದೆಗಳು ಖಾಲಿಯಾಗಿವೆ. ಖಾಯಂ ಪ್ರಾಧ್ಯಾಪಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುತ್ತಿಲ್ಲ. ಈ ಎಲ್ಲ ವಿಷಯಗಳು ಗೊತ್ತಿದ್ದರೂ ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಅತ್ಯಂತ ಬೇಜವಾಬ್ದಾರಿ ಮತ್ತು ಭ್ರಷ್ಟ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ರುಪ್ಸಾ ಸಂಘದ ರಾಜ್ಯ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೆ ಇದುವರೆಗೂ ಈ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಿಲ್ಲ. ಶಿಕ್ಷಣ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಠ್ಯಪುಸ್ತಕ ಮುದ್ರಣ, ಸಮವಸ್ತ್ರ ಟೆಂಡರಿಂಗ್, ಎನ್ಇಪಿ ಜಾರಿ ಮುಂತಾದ ಯೋಜನೆಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಆದ್ದರಿಂದ ಈ ಕೂಡಲೇ ಬಿ.ಸಿ ನಾಗೇಶ್ ರವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಒಂದೆಡೆಯಾದರೆ, ರಾಜ್ಯದ ವಿಶ್ವ ವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಅವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸಂಘಪರಿವಾರ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ. ಅಪ್ರಜಾಸತ್ತಾತ್ಮಕವಾಗಿ ಅಪಾಯಕಾರಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯನ್ನು ರಾಜ್ಯದಲ್ಲಿ ಜಾರಿಯ ಹೆಸರಿನಲ್ಲಿ ಪದವಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸಿ, ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರ ಹಾಕುವ ಹುನ್ನಾರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣ, ಕೋಮುವಾದೀಕರಣಗೊಳಿಸುತ್ತಿರುವುದು ಖಂಡನೀಯ ಎಂದರು.
ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕಡಕೋಳ ಮಾತಾನಾಡಿ, ರಾಜ್ಯದಲ್ಲಿ 2012ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪ್ರೋ ಗೋವಿಂದನ್ ವರದಿ ಆಧಾರದ ಮೇಲೆ ಸುಮಾರು 12,000 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಬಂದ್ ಮಾಡಿದೆ. ಆ ಸರ್ಕಾರಿ ಶಾಲೆಗಳು ಇದುವರೆಗೂ ಮತ್ತೆ ಪುನರಾರಂಭಗೊಂಡಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ಮತ್ತೆ ವಿಲೀನ ಹೆಸರಿನಲ್ಲಿ 13800 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವುದು ತೀವ್ರ ಖಂಡನೀಯವಾದುದು, ಇದರಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಶೇ.31 ಶಾಲೆಗಳಿಗೆ ಬೀಗ ಹಾಕಿದಂತಾಗುತ್ತದೆ ಎಂದರು.
ಬಡ ಮತ್ತು ಕೃಷಿ ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಖಾಸಗಿ ಶಾಲೆಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ರತ್ನಗಂಬಳಿ ಹಾಸುತ್ತಿದೆ. ಕೋವಿಡ್ ನಂತರದಲ್ಲಿ ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆ ತೊರೆದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಸರ್ಕಾರದ ಪ್ರಯತ್ನಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳದೆ, ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆಂದು ನೆಪ ಹೇಳಿ ಸರ್ಕಾರಿ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಜಿಲ್ಲಾ ಮುಖಂಡ ಗುಡ್ಡಪ್ಪ ಮಡಿವಾಳರ ಮಾತಾನಾಡಿ, ಹಾವೇರಿ ಜಿಲ್ಲೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಜಿಲ್ಲಾ ಕೇಂದ್ರ ಭಾಗವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ, ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು ನಗರ ಪ್ರದೇಶದಿಂದ ಹೊರಗೆ ಆರಂಭಗೊಳ್ಳುತ್ತಿವೆ. ವಿದ್ಯಾರ್ಥಿಗಳು ಸಾರ್ವಜನಿಕರು ಖಾಸಗಿ ವಾಹನದ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಮೆಡಿಕಲ್ ಕಾಲೇಜು ತರಗತಿಗಳು ಆರಂಭಗೊಂಡಿದ್ದು, ಮೂಲಭೂತ ಸೌಲಭ್ಯಗಳನ್ನು, ಅಗತ್ಯ ಬೋಧಕಬೋಧಕೇತರ ಸಿಬ್ಬಂದಿ ನೇಮಕಾತಿಯಾಗಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ವ್ಯಾಸಾಂಗಕ್ಕಾಗಿ ಹೊರ ಜಿಲ್ಲೆಗೆ ಹೋಗುವಂತಹ ಸ್ಥಿತಿ ತಪ್ಪಿಸಲು ಕಾನೂನು ಕಾಲೇಜು ಪ್ರಸಕ್ತ ವರ್ಷದಿಂದಲೆ ಆರಂಭಿಸಬೇಕು. ಏಷ್ಯಾ ಖಂಡದ ಮೊದಲ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಯಂ ಸಿಬ್ಬಂದಿ ಇಲ್ಲದಿರುವುದು ರಾಜ್ಯ ಸರ್ಕಾದ ಆಡಳಿತ ಹಿಡಿದ ಕೈಗನ್ನಡಿಯಾಗಿದೆ. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯು ಸರ್ಕಾರದ ಶೈಕ್ಷಣಿಕ ವಿರೋಧಿ ನಡೆಯನ್ನು ಖಂಡಿಸಿ ಪ್ರತಿಭಟಿಸುತ್ತಿದೆ ಎಂದರು.
ಪ್ರತಿಭಟನೆ ಮೂಲಕ ಎಸ್‌ಎಫ್‌ಐ ಸಂಘಟನೆಯು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದೆ. ಹಾವೇರಿ ಜಿಲ್ಲಾ ಕೇಂದ್ರಕ್ಕೆ ಅವಶ್ಯಕ ನಗರ ಸಾರಿಗೆ ವ್ಯವಸ್ಥೆ ಕೂಡಲೇ ಆರಂಭಿಸಬೇಕು ಹಾಗೂ ಹೆಚ್ಚುವರಿ ಬಸ್ ಮಂಜೂರಾಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು. ನಗರದ ಹೊರವಲಯದಲ್ಲಿರುವ ಹಾಸ್ಟೆಲ್ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಬಸ್ ಸೌಲಭ್ಯ ಒದಗಿಸಬೇಕು. ಹಿರೇಲಿಂಗದಹಳ್ಳಿ, ಬಸಾಪುರ, ಕುಣಿಮೆಳ್ಳಿ, ತವರಮೆಳ್ಳಳಿ, ಕಬ್ಬೂರ, ಗಾಂಧಿಪುರ ಸೇರಿದಂತೆ ಅನೇಕ ಹಳ್ಳಿಗಳ ಬಸ್ಸಿನ ಸಮಸ್ಯೆಗಳನ್ನು ಪರಿಹಾರಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಯ ನೆಪದಲ್ಲಿ ಅಂಗನವಾಡಿ, ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಸ್ಥಳೀಯ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿದರು. ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳು ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಭೆಯನ್ನು ಕರೆಯಬೇಕು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ವಿದ್ಯಾರ್ಥಿಗಳ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಮಾತನಾಡಿದ್ದರು. ಮುಖಂಡರಾದ ಯುವರಾಜ್ ಹಂಚಿನಮನಿ, ಸಂಜೀವ ತಳವಾರ, ವಿವೇಕ ಫನಸೆ, ಸುದೀಪ ಡೊಳ್ಳಿನ, ನಿವೇದಿತಾ ಹಿರೇಮಠ, ಸುಜಾತಾ ಕಮ್ಮಾರ, ಚೈತ್ರಾಲಿ, ಸಂಗೀತ ಕಟಗೇರ, ಸಂತೋಷ ಹಂಚಿನಮನಿ, ಕಿರಣ್ ಪಾಟೀಲ, ಕಲ್ಲವ್ವ ದೊಡ್ಡಕುರುಬರ, ಸಿಂಧು ಮಾಗೋಡು, ಕಿರಣ್ ಗುಬ್ಬೇರ, ಕವಿತಾ ಹುಗ್ಗೆರ, ಗಂಗಾ ಜಿ.ಟಿ, ಸುಮಾ ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಯಚೂರಿನಲ್ಲಿ ಪ್ರತಿಭಟನೆ
ಎಸ್‌ಎಫ್‌ಐ ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಸಬೇಕು ಹಾಗೂ ವಿದ್ಯಾರ್ಥಿ ವೇತನ-ಹಾಸ್ಟೆಲ್ ಸೌಲಭ್ಯಕ್ಕೆ ಆಗ್ರಹಿಸಿ ಹೋರಾಟ ನಡೆಸಿದರು. ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕಶ್ವೇರಾಳ, ರಾಜ್ಯ ಸಮಿತಿ ಸದಸ್ಯರಾದ ಚಿದಾನಂದ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಸ್‌ಎಫ್‌ಐ ಪ್ರತಿಭಟನೆಯ ಕರೆಯ ಮೇರೆಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಾಟದ ಚಿತ್ರಗಳು