ಹಾವೇರಿ: ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿರುವ ನಂ2 ಸರ್ಕಾರಿ ಶಾಲೆ ಎದುರಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 13,800 ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ ರಾಜ್ಯ ಸರಕಾರ ಇಡೀ ರಾಜ್ಯದಲ್ಲಿ 13,800 ಸರಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಹೆಸರಿನಲ್ಲಿ ಮುಚ್ಚುವ ನಿರ್ಧಾರ ಮಾಡಿರುವುದು ಬಡವರ, ಕಾರ್ಮಿಕರ, ಕೂಲಿಕಾರರ, ದಲಿತರ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಮತ್ತು ಕನ್ನಡ ವಿರೋಧಿ ನಿಲುಮೆಯಾಗಿದೆಯೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಈ ಹಿಂದೆ 2011 ರಲ್ಲಿ ಪ್ರೋ: ಗೋವಿಂದ ಅವರ ವರದಿ ತರಿಸಿಕೊಂಡು ಸುಮಾರು 12000 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಚಿಂತನೆ ಮಾಡಿತು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರ ನಿಲುವನ್ನು ವಿರೋಧಿಸಿ ಎಸ್ಎಫ್ಐ ಸಂಘಟನೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗಿತ್ತು ಅಷ್ಟೇ ಅಲ್ಲದೆ ಗಂಗಾವತಿ ನಗರದಲ್ಲಿ ಅಂದು ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಮುಖ್ಯಮಂತ್ರಿಗಳ ವಿರುದ್ಧ ಸಮ್ಮೇಳನದಲ್ಲಿ ಪ್ರತಿಭಟನೆ ಮಾಡಿ ಬಂಧನ ಕೊಳ್ಳಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುಲು ಸಾಧ್ಯವಾಯಿತು ಅಂದು ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯಲ್ಲಿ ಒಂದು ಮಗುವಿದ್ದರೂ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರಕಾರ ಹೇಳಿತ್ತು ಮತ್ತು ಕಸಾಪ ಕಾರ್ಯಕ್ರಮದಲ್ಲಿ ನಿರ್ಣಯ ಮಾಡಲು ಸಾಧ್ಯವಾಹಿತ್ತು ಇದನ್ನು ಮುಖ್ಯಮಂತ್ರಿಗಳು ಅಧಿಕಾರಿಗಳು ತಿಳಿದುಕೊಳ್ಳಬೇಕು ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚಿಸುವ ನಿರ್ಧಾರವನ್ನು ಮುಂದುವರೆಸಬಾರದು. ತಕ್ಷಣವೇ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯ ಬೇಕೆಂದು ಸರಕಾರದ ಅಧಿಕಾರಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯ ಸರಕಾರಗಳೇ ನೇರ ಹೊಣೆಗಾರರಾಗಿವೆ. ಶಾಲೆಗೆ ಬರ ಬೇಕಾದ ಮಕ್ಕಳು ಬರದೇ ಇರುವುದಕ್ಕೆ ಕಾರಣ ಪ್ರಾಥಮಿಕ ಶಾಲೆಗಳು ಮಕ್ಕಳನ್ನು ಆಕರ್ಶಿಸುತ್ತಿಲ್ಲ. ಅಂತಹ ಆಕರ್ಷಣೀಯ ಶೈಕ್ಷಣಿಕ ಕೇಂದ್ರಗಳನ್ನಾಗಿ ಅವುಗಳನ್ನು ಸಾಕಷ್ಠು ಅನುದಾನ ಒದಗಿಸಿ ಮೇಲ್ದರ್ಜೆಗೆ ಏರಿಸುವ ಅಗತ್ಯ ಕ್ರಮಗಳನ್ನು ಅನುಸರಿಸದೇ ಉಪೇಕ್ಷೆ ಮಾಡಿ, ನಾಯಿಕೊಡೆಗಳಂತೆ ಎದ್ದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ನೆರವಾಗುತ್ತಿರುವುದು ಪ್ರಮುಖ ಕಾರಣವಾಗುತ್ತಿದೆ.
ನಮ್ಮ ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ 1100 ಕಿಂತ ಅಧಿಕ ಸರ್ಕಾರಿ ಶಾಲೆಗಳು ಹಾಗೂ ಆಟದ ಮೈದಾನ ಹಾಳಾಗಿ ಹೋಗಿವೆ ಎಂದು ಎಲ್ಲಾ ಪತ್ರಿಕೆ ಮಾಧ್ಯಮ ಗಳಲ್ಲಿ ಸರಣಿ ಸುದ್ದಿಯಾದರು ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಈ ಶಾಲೆಗಳಿಗೆ ವಿಶೇಷವಾಗಿ ಸರಿಯಾದ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು ವಿನಹ ವಿಲೀನ ಹೆಸರಿನಲ್ಲಿ ಮುಚ್ಚುವ ನಿರ್ಧಾರ ಮುಂದುವರೆಸಬಾರದು.
ಪಕ್ಕದ ಕೇರಳ ರಾಜ್ಯದಲ್ಲಿ ಶಾಲೆಗಳ ಗುಣಮಟ್ಟವನ್ನು ವ್ಯಾಪಕವಾಗಿ ಹೆಚ್ಚಿಸಿರುವುದರಿಂದ, ಸಾವಿರಾರು ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವಂತಾಗಿ, ಅಲ್ಲಿನ ಲಕ್ಷಾಂತರ ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ವಾಪಾಸು ಬಂದಿರುವುದು ನಮ್ಮ ಕಣ್ಣ ಮುಂದಿದೆ. ದೆಹಲಿ ಸರಕಾರ ನಡೆಸುವ ಶಾಲೆಗಳು ಅಂತರ್ರಾಷ್ಟ್ರೀಯ ಗುಣಮಟ್ಟದ ಶಾಲೆಗಳೆಂದು ಸ್ವತಃ ಪ್ರಧಾನ ಮಂತ್ರಿಗಳು ಜಗತ್ತಿಗೆ ಪರಿಚಯಿಸಿದ್ದಾರೆ. ದೇಶದ ಅನುಭವ ಹೀಗಿರುವಾಗ, ಕರ್ನಾಟಕ ಸರಕಾರ ಶಿಕ್ಷಣವನ್ನು ಖಾಸಗೀಕರಿಸುವ ಮತ್ತು ಕೋಮುವಾದಿ ಕರಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬಡವರು ಹಾಗೂ ಕನ್ನಡ ವಿರೋಧಿಯಾದ ನಿಲುಮೆಗಳನ್ನು ಕೈಬಿಟ್ಟು ಸರಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಶೈಕ್ಷಣಿಕ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಬಜೆಟ್ ಒದಗಿಸಿ ಯೋಜಿತ ಕ್ರಮಗಳಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಎಸ್ಎಫ್ಐ ತಾಲ್ಲೂಕು ಸಹಕಾರ್ಯದರ್ಶಿ ಅರುಣ್ ಕಡಕೋಳ, ಮುಖಂಡರಾದ ಮನೋಜ್ ಅಣ್ಣಗೇರಿ, ಮುಬಾರಕ್ ಎಸ್, ಮನೋಜ್ ಮುದುಕಣ್ಣನವರ, ನಾಗರಾಜ ಎನ್ ಕೆ, ಅಸ್ಲಾಂ, ಮಾಲತೇಶ ಎಸ್ ಡಿ, ಪ್ರಜ್ವಲ್ ಎಚ್ ಕೆ, ಸುಲೇಮಾನ, ಮುತ್ತುರಾಜ, ಬಸವರಾಜ, ವಿಜಯ, ಖಾಜಾ, ಕಿರಣ, ವಿನಾಯಕ, ಹೋನದ, ಭಾಗ್ಯ, ಹರ್ಷಿತಾ, ಗಿರಿಜಾ, ಐಶ್ವರ್ಯ ವೈ, ಚೈತನ್ಯ ಆರ್ ಡಿ, ಭವ್ಯ, ಪವಿತ್ರಾ, ಸುಮಿತ್ರಾ, ಕಸ್ತೂರಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.