ಶಾಲೆಗಳನ್ನು ಮುಚ್ಚುವುದಲ್ಲ, ಬಲಪಡಿಸಿ – ವಿದ್ಯಾರ್ಥಿಗಳ ಆಗ್ರಹ

ಗಂಗಾವತಿ:- ರಾಜ್ಯ ಸರಕಾರ ರಾಜ್ಯದಾದ್ಯಂತ 13,800 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಬಡವರ ಹಾಗೂ ದಲಿತರ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಮತ್ತು ಕನ್ನಡ ವಿರೋಧಿ ನಿಲುಮೆಯಾಗಿದೆಯೆಂದು ಭಾರತ ವಿದ್ಯಾರ್ಥಿ ಫೆಡರೇಷನ್ SFI ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಆರೋಪಿಸಿದರು.

ಇಂದು ಗಂಗಾವತಿಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಸಿ ಮಾತನಾಡಿ, ರಾಜ್ಯ ಸರ್ಕಾರ ಈ ಹಿಂದೆ 2011 ರಲ್ಲಿ ಪ್ರೋ: ಗೋವಿಂದ ಅವರ ವರದಿ ತರಿಸಿಕೊಂಡು ಸುಮಾರು 12000 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಚಿಂತನೆ ಮಾಡುತ್ತ ಇತ್ತು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರ ನಿಲುವನ್ನು ವಿರೋಧಿಸಿ ಎಸ್ಎಫ್ಐ ಸಂಘಟನೆ ಅಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಿತ್ತು. ಅಷ್ಟೇ ಅಲ್ಲ ಗಂಗಾವತಿ ನಗರದಲ್ಲಿ ಅಂದು ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಮುಖ್ಯಮಂತ್ರಿಗಳ ವಿರುದ್ಧ ಸಮ್ಮೇಳನದಲ್ಲಿ ಪ್ರತಿಭಟನೆ ಮಾಡಿ ಬಂಧನ ಕೊಳ್ಳಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುಲು ಸಾಧ್ಯವಾಯಿತು. ಅಂದು ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯಲ್ಲಿ ಒಂದು ಮಗುವಿದ್ದರೂ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರಕಾರ ಹೇಳಿತ್ತು ಮತ್ತು ಕಸಾಪ ಕಾರ್ಯಕ್ರಮದಲ್ಲಿ ನಿರ್ಣಯ ಮಾಡಲು ಸಾಧ್ಯವಾಗಿತ್ತು. ಇದನ್ನು ಮುಖ್ಯಮಂತ್ರಿಗಳು ಅಧಿಕಾರಿಗಳು ತಿಳಿದುಕೊಳ್ಳಲಿ ಎಂದರು.

ತಕ್ಷಣವೇ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯ ಬೇಕೆಂದು ಸರಕಾರದ ಅಧಿಕಾರಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸಿದರು. ಮುಚ್ಚುವಿಕೆಯ ಪ್ರಮಾಣ ಬಹಳ ದೊಡ್ಡದಿದೆ, ಸುಮಾರು ಶೇ 20 ಕ್ಕೂ ಅಧಿಕವಾಗುತ್ತದೆ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮುಂದುವರೆದ ದುರ್ನಡೆಯಾಗಿದೆ ಎಂದರು

ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯ ಸರಕಾರಗಳೇ ನೇರ ಹೊಣೆಗಾರರಾಗಿವೆ. ಶಾಲೆಗೆ ಬರ ಬೇಕಾದ ಮಕ್ಕಳು ಬರದೇ ಇರುವುದಕ್ಕೆ ಕಾರಣ ಪ್ರಾಥಮಿಕ ಶಾಲೆಗಳು ಮಕ್ಕಳನ್ನು ಆಕರ್ಶಿಸುತ್ತಿಲ್ಲ. ಅಂತಹ ಆಕರ್ಷಣೀಯ ಶೈಕ್ಷಣಿಕ ಕೇಂದ್ರಗಳನ್ನಾಗಿ ಅವುಗಳನ್ನು ಸಾಕಷ್ಠು ಅನುದಾನ ಒದಗಿಸಿ ಮೇಲ್ದರ್ಜೆಗೆ ಏರಿಸುವ ಅಗತ್ಯ ಕ್ರಮಗಳನ್ನು ಅನುಸರಿಸದೇ ಉಪೇಕ್ಷೆ ಮಾಡಿ, ನಾಯಿಕೊಡೆಗಳಂತೆ ಎದ್ದಿರುವ ಖಾಸಗೀ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ನೆರವಾಗುತ್ತಿರುವುದು ಪ್ರಮುಖ ಕಾರಣವಾಗುತ್ತಿದೆ.

ಪಕ್ಕದ ಕೇರಳ ರಾಜ್ಯದಲ್ಲಿ ಶಾಲೆಗಳ ಗುಣಮಟ್ಟವನ್ನು ವ್ಯಾಪಕವಾಗಿ ಹೆಚ್ಚಿಸಿರುವುದರಿಂದ, ಸಾವಿರಾರು ಖಾಸಗೀ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವಂತಾಗಿ, ಅಲ್ಲಿನ ಲಕ್ಷಾಂತರ ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ವಾಪಾಸು ಬಂದಿರುವುದು ನಮ್ಮ ಕಣ್ಣ ಮುಂದಿದೆ.
ದೆಹಲಿ ಸರಕಾರ ನಡೆಸುವ ಶಾಲೆಗಳು ಅಂತರ್ರಾಷ್ಟ್ರೀಯ ಗುಣಮಟ್ಟದ ಶಾಲೆಗಳೆಂದು ಸ್ವತಃ ಪ್ರಧಾನ ಮಂತ್ರಿಗಳು ಜಗತ್ತಿಗೆ ಪರಿಚಯಿಸಿದ್ದಿದೆ.

ದೇಶದ ಅನುಭವ ಹೀಗಿರುವಾಗ, ಕರ್ನಾಟಕ ಸರಕಾರ ಶಿಕ್ಷಣವನ್ನು ಖಾಸಗೀಕರಿಸುವ ಮತ್ತು ಕೋಮುವಾದಿ ಕರಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬಡವರು ಹಾಗೂ ಕನ್ನಡ ವಿರೋಧಿಯಾದ ನಿಲುಮೆಗಳನ್ನು ಕೈಬಿಟ್ಟು ಸರಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಶೈಕ್ಷಣಿಕ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಬಜೆಟ್ ಒದಗಿಸಿ ಯೋಜಿತ ಕ್ರಮಗಳಿಗೆ ಮುಂದಾಗಬೇಕೆಂದು ಆಗ್ರಹಿಸಿದರು.

ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದರಿಂದ ಬಹುತೇಕ ಶಿಕ್ಷಣವನ್ನು ಸರ್ಕಾರಿ ಶಾಲೆ ಮೇಲೆ ಅವಲಂಬಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರಾಗುತ್ತಾರೆ ಅಷ್ಟೇ ಅಲ್ಲ ಈ ಎರಡು ವರ್ಷದ ಕರೋನ್ ಸಂದರ್ಭದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಡೆ ಉಳಿದಿದ್ದಾರೆ ಎಂಬ ಅಂಕಿ ಸಂಖ್ಯೆಯನ್ನು ನೀವು ಗಮನಿಸಬಹುದು ಇದರ ಮಧ್ಯೆ ಸತಕಾರ ಶಾಲೆಗಳ ವಿಲೀನ ಪ್ರಕ್ರಿಯ ಕೈ ಹಾಕಿರುವುದು ಸರಿಯಲ್ಲ ಕೂಡಲೇ ಆ ನಿರ್ಧಾರವನ್ನು ಕೈ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಅಧಿಕಾರಿಗಳು ಶ್ರಮವಹಿಸಲಿ ಎಂದರು. ಪ್ರತಿಭಟನೆಯಲ್ಲಿ ಎಸ್ಎಫ್ಐ ತಾಲೂಕ ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ಸೋಮನಾಥ ಗೌಡ್ರ, ನಾಗರಾಜ ಸೂಗುರು, ಶರೀಫ್, ರಾಜಭಕ್ಷಿ, ಅಂಜಲಿ, ಪ್ರೀಯಾ, ಮಂಜುಳ, ನೇತ್ರ, ರೇಣುಕಾ, ಯಶೋಧ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *