ನವದೆಹಲಿ : ಕೋವಿಡ್ -19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಆಗ್ರಹಿಸಿದೆ.
ಭಾರತದ ಎಲ್ಲ ನಾಗರಿಕರಿಗೆ ಸಾರ್ವತ್ರಿಕ ಉಚಿತ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ನಿರ್ದೇಶಿಸಲು ಮತ್ತು ವೈಯಕ್ತಿಕ ಬಳಕೆಯ ಆಮದು ಮೇಲೆ ವಿಧಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಮನ್ನಾ ಮಾಡುವಂತೆ ಎಸ್.ಎಫ್.ಐ ಆಗ್ರಹಿಸಿದೆ.
ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ಸರಬರಾಜು ಮತ್ತು ಸೇವೆಗಳ ವಿತರಣೆಗೆ ಸಂಬಂಧಿಸಿದ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಸುಯೊ ಮೊಟೊ ರಿಟ್ ಅರ್ಜಿಯಲ್ಲಿ ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಖ್ ಬಿಸ್ವಾಸ್ ತಿಳಿಸಿದ್ದಾರೆ.
ಇದನ್ನು ಓದಿ: “ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು” ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ
2021 ರ ಮೇ 1 ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು ಆಕ್ಸಿಜನ್ ಸಾಂದ್ರಕಗಳ ಆಮದಿಗೆ 12% ಜಿಎಸ್ಟಿ ವಿಧಿಸಿದೆ ಎಂದು ಅರ್ಜಿಯಲ್ಲಿ ಎಸ್.ಎಫ್.ಐ ನಮೂದಿಸಿದೆ. ಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗವನ್ನು ಗಮನಿಸಿದರೆ, ದೇಶಾದ್ಯಂತ ಆಮ್ಲಜನಕದ ಪೂರೈಕೆಯ ಕೊರತೆಯಿದೆ ಮತ್ತು ಭಾರತದ ನಾಗರಿಕರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಖಾತ್ರಿಪಡಿಸುವಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳು ಶೋಚನೀಯವಾಗಿ ವಿಫಲವಾಗಿವೆ. ಆಮ್ಲಜನಕದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ವಿವಿಧ ದೇಶಗಳಿಂದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸನ್ನಿವೇಶದಲ್ಲಿ ಎಲ್ಲಾ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲು ಜಿಎಸ್ಟಿ ಮನ್ನಾ ಮಾಡಬೇಕು ಎಂದು ಎಸ್.ಎಫ್.ಐ ಆಗ್ರಹಿಸಿದೆ.
ಇದನ್ನು ಓದಿ: ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರಾಜಕೀಯ ಪಕ್ಷಗಳು
ಸಾರ್ವತ್ರಿಕ ಸಾಮೂಹಿಕ ವ್ಯಾಕ್ಸಿನೇಷನ್ ನೀತಿಯನ್ನು ರೂಪಿಸಲು ಮತ್ತು ಅದನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಗೌರವಾನ್ವಿತ ಸುಪ್ರೀಂ ಕೋರ್ಟ್ನ ಹಸ್ತಕ್ಷೇಪವನ್ನು ಅರ್ಜಿಯು ಕೋರುತ್ತದೆ. ಪ್ರಸ್ತುತ ಎರಡು ಔಷಧೀಯ ಕಂಪನಿಗಳಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಮಾತ್ರ ಭಾರತದಲ್ಲಿ ಕೋವಿಡ್ -19 ಲಸಿಕೆಗಳನ್ನು ತಯಾರಿಸಲು ಪರವಾನಗಿ ನೀಡಿದೆ. ಪೇಟೆಂಟ್ ಕಾಯ್ದೆ 1970 ರ ಸಂಬಂಧಿತ ನಿಬಂಧನೆಗಳನ್ನು ಲಸಿಕೆಗಳ ಉತ್ಪಾದನೆಯನ್ನು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಖಚಿತಪಡಿಸಿಕೊಳ್ಳಲು ಹಲವಾರು ಔಷಧೀಯ ಕಂಪನಿಗಳಿಗೆ ಕಡ್ಡಾಯ ಪರವಾನಗಿಗಳನ್ನು ಒದಗಿಸಲು ಅರ್ಜಿಯನ್ನು ಮುಂದಿಡಲಾಗಿದೆ. ದೇಶದಲ್ಲಿ ಹಲವಾರು ಸರ್ಕಾರಿ ನಿಯಂತ್ರಿತ ಔಷಧೀಯ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರವು ಮೂಲಸೌಕರ್ಯಗಳನ್ನು ಬಳಸಿಕೊಳ್ಳಬಹುದು ಮತ್ತು ಲಸಿಕೆಗಳ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಆ ಸೌಲಭ್ಯಗಳಲ್ಲಿ ಕೋವಿಡ್ ಲಸಿಕೆ ತಯಾರಿಸಬಹುದು ಎಂದು ಮಯೂಕ್ ಬಿಸ್ವಾಸ್ ತಿಳಿಸಿದ್ದಾರೆ.