ತಿರುವನಂತಪುರಂ: ರಾಜಧಾನಿಯಲ್ಲಿನ ಕೇರಳ ವಿಶ್ವವಿದ್ಯಾನಿಲಯದ ಸಂಯೋಜಿತ ಹೆಚ್ಚಿನ ಕಾಲೇಜುಗಳ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಭಾರಿ ಗೆಲುವು ಸಾಧಿಸಿದೆ. ಈ ಚುನಾವಣಾ ವಿಜಯವನ್ನು ಸಂಭ್ರಮಿಸುವ ರ‍್ಯಾಲಿಯನ್ನು ಪ್ಯಾಲೆಸ್ತೀನ್ ಬೆಂಬಲದ ರ‍್ಯಾಲಿಯಾಗಿ ವಿದ್ಯಾರ್ಥಿಗಳು ರೂಪಾಂತರ ಮಾಡಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫ್ರೀ ಪ್ಯಾಲೆಸ್ತೀನ್
ಕಾಲೇಜಿನ ಫಲಿತಾಂಶದ ನಂತರ ಎಸ್‌ಎಫ್‌ಐ ಕಾರ್ಯಕರ್ತರು ತಿರುವನಂತಪುರಂ ನಗರದ ಬೀದಿಗಳಲ್ಲಿ “ಫ್ರೀ ಪ್ಯಾಲೆಸ್ತೀನ್” ಬ್ಯಾನರ್‌ನೊಂದಿಗೆ ವಿಜಯೋತ್ಸವವನ್ನು ಆಚರಿಸಿದ್ದಾರೆ. ಕೇರಳ ರಾಜಧಾನಿ ತಿರುವನಂತಪುರಂನ ಕೇರಳ ವಿಶ್ವವಿದ್ಯಾನಿಲಯ ಸಂಯೋಜಿತ 33 ಕಾಲೇಜುಗಳಲ್ಲಿ SFI 27 ಕಾಲೇಜುಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ (96) ನಿಧನ
ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿದ್ದ 48 ದಿನಗಳ ಯುದ್ಧವು ಸಾವಿರಾರು ಜೀವಗಳನ್ನು ಬಲಿ ಪಡೆದ ನಂತರ ನಾಲ್ಕು ದಿನಗಳ ತಾತ್ಕಾಲಿಕ ಕದನ ವಿರಾಮ ಶುಕ್ರವಾರ ಪ್ರಾರಂಭವಾಗಿದೆ. ಇದೇ ವೇಳೆ ಈಗಾಗಲೆ ಪ್ಯಾಲೇಸ್ತೀನ್ ಕೈದಿಗಳಿಗೆ ಬದಲಾಗಿ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ.
ನಾಲ್ಕು ದಿನಗಳ ಕದನ ವಿರಾಮದ ಸಮಯದಲ್ಲಿ, ಗಾಜಾದಿಂದ ಕನಿಷ್ಠ 50 ಬಂಧಿತರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದಕ್ಕೆ ಬದಲಾಗಿ ಇಸ್ರೇಲ್ 150 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಶುಕ್ರವಾರ ಗಾಜಾದಲ್ಲಿ 10 ಥಾಯ್ ಪ್ರಜೆಗಳು, ಒಬ್ಬ ಫಿಲಿಪಿನೋ ಮತ್ತು 13 ಇಸ್ರೇಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 24 ಬಂಧಿತರನ್ನು ಬಿಡುಗಡೆ ಮಾಡಲಾಯಿತು. ಬದಲಾಗಿ 24 ಪ್ಯಾಲೇಸ್ಟಿನಿಯನ್ ಮಹಿಳೆಯರು – ಇಬ್ಬರು 18 ವರ್ಷ ವಯಸ್ಸಿನವರು – ಮತ್ತು ಇಸ್ರೇಲ್‌ನಲ್ಲಿ ಕೈದಿಗಳಾಗಿದ್ದ 15 ಹುಡುಗರನ್ನು ಬಿಡುಗಡೆ ಮಾಡಲಾಗಿದೆ. ಫ್ರೀ ಪ್ಯಾಲೆಸ್ತೀನ್
ಇದನ್ನೂ ಓದಿ: 10ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ ಖ್ಯಾತ ನಟ ಇಂದ್ರನ್ಸ್!
ಬಂಧಿತರನ್ನು ಗಾಜಾದಿಂದ ಹೊರಗೆ ವರ್ಗಾಯಿಸಿ, ರಫಾ ಗಡಿ ಕ್ರಾಸಿಂಗ್‌ನಲ್ಲಿ ಈಜಿಪ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ನಾಲ್ಕು ಕಾರುಗಳಿದ್ದ ಬೆಂಗಾವಲುಪಡೆಯಲ್ಲಿ ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್ (ಐಸಿಆರ್‌ಸಿ) ಯ ಎಂಟು ಸಿಬ್ಬಂದಿ ಇದರ ಜೊತೆಗೂಡಿದ್ದರು ಎಂದು ಅಲ್‌ಜಝೀರಾ ವರದಿ ಹೇಳಿದೆ.
ಸುಮಾರು ಏಳು ವಾರಗಳಿಂದ ನಡೆಯುತ್ತಿರುವ ಸಂಘರ್ಷ ಮೊದಲ ಬಾರಿಗೆ ಒಪ್ಪಂದದ ಮೂಲಕ ಸ್ಥಗಿತಗೊಂಡಿದ್ದು, ಅದರ ನಂತರ ಯಾವುದೇ ದೊಡ್ಡ ಬಾಂಬ್ ಸ್ಫೋಟಗಳು ಅಥವಾ ಫಿರಂಗಿ ಅಥವಾ ರಾಕೆಟ್ ದಾಳಿಗಳು ವರದಿಯಾಗಿಲ್ಲ. ಆದರೆ, ಗುಂಡು ಹಾರಿಸಲಾಗಿದೆ ಎಂದು ಹಮಾಸ್ ಮತ್ತು ಇಸ್ರೇಲ್ ಇಬ್ಬರೂ ಪರಸ್ಪರ ಆರೋಪಿಸಿದ್ದಾರೆ. ಅಕ್ಟೋಬರ್ 7 ರಿಂದ ಇಸ್ರೇಲ್ ಸುಮಾರು 6,000 ಮಕ್ಕಳು ಸೇರಿದಂತೆ 14,532 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ವಿಡಿಯೊ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?