ಮಲ್ಲಪುರಂ ಫೆ 08 : ಕೇರಳದ ಮಲ್ಲಪುರಂನಲ್ಲಿ ನಡೆದ ರೈತರ ಹೋರಾಟದಲ್ಲಿ ಭಾಗವಹಿಸಿದ್ದ ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷರಾದ ವಿ.ಪಿ.ಸಾನು ರವರ ಮೇಲೆ ಮುಸ್ಲಿಂ ಸ್ಟೂಡೆಂಟ್ ಫ್ರಂಟ್ (MSF) ಕಾರ್ಯಕರ್ತರು ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ.
ಎಂ.ಎಸ್.ಎಫ್ ನ ಗೂಂಡಾ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಗಳು ತೀವ್ರವಾಗಿ ಖಂಡಿಸಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಿ ಸಾನು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಮಲ್ಲಪುರಂ ಕ್ಷೇತ್ರದಲ್ಲಿ ಸಾನು ಸಕ್ರಿಯವಾಗಿ ರೈತರ ಹೋರಾಟವನ್ನು ಬೆಂಬಲಿಸಿ ಪಾಲ್ಗೊಳ್ಳುತ್ತಿದ್ದಾರೆ. ಕ್ಷೇತ್ರದ ಸಂಸದ ಐಯುಎಂಎಲ್ ನ ಅಭ್ಯರ್ಥಿಯು ಇತ್ತೀಚೆಗೆ ಕೇರಳದಲ್ಲಿ ಮುಂದೆ ನಡೆಯುವ ಚುನಾವಣೆಗಾಗಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಷ್ಟೆ ಅಲ್ಲದೆ ಕ್ಷೇತ್ರದಲ್ಲಿ ಕೇಂದ್ರದ ಕೃಷಿ ಕಾಯಿದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಈ ಗಂಭೀರ ಸಂದರ್ಭದಲ್ಲಿ ಕ್ಷೇತ್ರದ ಜನತೆಯೊಟ್ಟಿಗೆ ನಿಲ್ಲದೆ ದೂರವಿದ್ದಾರೆ.
ವಿ.ಪಿ ಸಾನು ಅವರು ರೈತರ, ಜನರ ಪ್ರಶ್ನೆಗಳಿಗೆ ಧ್ವನಿಯಾಗಿ ಪ್ರಜಾಸತ್ತಾತ್ಮಕ ಚಳುವಳಿಯಲ್ಲಿ ತೊಡಗಿದ್ದಾರೆ. ಅವರಿಗೆ ಹೆಚ್ಚುತ್ತಿರುವ ಜನ ಬೆಂಬಲದಿಂದ ಹತಾಶೆಗೊಂಡಿರುವ ಎಂಎಸ್ಎಫ್ ಕಾರ್ಯಕರ್ತರು ಹಲ್ಲೆಗೆ ಮುಂದಾಗಿರುವುದು ಹೇಯಕೃತ್ಯವಾಗಿದೆ ಎಂದು ಎಸ್.ಎಫ್.ಐ, ಮತ್ತು ಡಿ.ವೈ.ಎಫ್.ಐ ಆರೋಪಿಸಿವೆ.
ದೇಶದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವಪರ ಹೋರಾಟಗಳಲ್ಲಿ ಜನತೆ ಭಾಗವಹಿಸುವುದನ್ನು ದೈಹಿಕ ದಾಳಿ ಮತ್ತು ಬೆದರಿಕೆಗಳಿಂದ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಫ್ಯಾಸಿಸ್ಟ್ ಎಂಎಸ್ಎಫ್ ಅರಿಯಬೇಕಿದೆ. ಸಾನು ಅವರ ಮೇಲೆ ಹಲ್ಲೆ ಯತ್ನ ನಡೆಸಿ, ಹಿಂಸಾಚಾರಕ್ಕೆ ಮುಂದಾದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎರಡು ಸಂಘಟನೆಗಳು ಒತ್ತಾಯಿಸಿವೆ.
ಪ್ರಜಾಸತ್ತಾತ್ಮಕ ಪರ ಹಾಗೂ ಪ್ರಗತಿಪರ ಮನಸುಗಳೆಲ್ಲ ಈ ರೀತಿಯ ಫ್ಯಾಸಿಸ್ಟ್ ಮೂಲಭೂತವಾದಿ, ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಐಕ್ಯ ಚಳುವಳಿಗೆ ಮುಂದಾಗಬೇಕೆಂದು ಮುಖಂಡರಾದ ಮುನೀರ್ ಕಾಟಿಪಳ್ಳ, ಬಸವರಾಜ ಪೂಜಾರ್, ವಿ.ಅಂಬರೀಶ್, ಅಮರೇಶ್ ಕಡಗದ್, ವಾಸುದೇವರೆಡ್ಡಿ ತಿಳಿಸಿದ್ದಾರೆ.