ಹಿರೇಕೆರೂರು: ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನ 30% ಹಣವನ್ನು ಮೀಸಲಿಡಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಿರೇಕೆರೂರು ತಾಲ್ಲೂಕ ಸಮಿತಿ ಕಾರ್ಯಕರ್ತರು ನಗರದಲ್ಲಿರುವ ಶಾಸಕರ ಗೃಹ ಕಛೇರಿಯಲ್ಲಿ ಯು.ಬಿ ಬಣಕಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಅಭಿವೃದ್ಧಿ
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮಾ. 6ರಂದು ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಕೊಠಾರಿ ಆಯೋಗದ ಶಿಫಾರಸ್ಸಿನಂತೆ ಶೇ.30ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು.
ಹಿರೇಕೆರೂರು ತಾಲ್ಲೂಕಿಗೆ ಸರ್ಕಾರಿ ನರ್ಸಿಂಗ್, ಪ್ಯಾರಮೆಡಿಕಲ್, ಬಿ ಫಾರ್ಮ್, ಸರ್ಕಾರಿ ಜಿಟಿಟಿಸಿ, ಡಿಪ್ಲೊಮಾ, ಸೇರಿದಂತೆ ವಿವಿಧ ರೀತಿಯ ಕೋರ್ಸಿನ ಕಾಲೇಜ್ ಗಳನ್ನು ಮಂಜೂರು ಮಾಡಬೇಕು. ಸರ್ಕಾರಿ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಮೆಡಿಕಲ್, ನರ್ಸಿಂಗ್, ಹಾವೇರಿ ವಿಶ್ವವಿದ್ಯಾಲಯ, ಶಿಗ್ಗಾಂವಿ ಚಾನಪದ ವಿವಿ, ಹನುಮನಮಟ್ಟಿ ಕೃಷಿ ವಿವಿಗಳು ಸೇರಿದಂತೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಬೇಕು.
ಇದನ್ನೂ ಓದಿ: ನೆಗಿನಾಳ| ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ
ಸರ್ಕಾರಿ ಕಾನೂನು ವಿದ್ಯಾಲಯ ಶೀಘ್ರವಾಗಿ 3 ಮತ್ತು 5 ವರ್ಷದ ಕೋರ್ಸ್ ಗಳನ್ನು ಪ್ರಾರಂಭಿಸಬೇಕು. ಪ್ರತ್ಯೇಕ ವೃತ್ತಿಪರ ಹಾಸ್ಟೆಲ್ ಗಳು ಮಂಜೂರು ಮಾಡಬೇಕೆಂದು ಎಸ್‌ಎಫ್‌ಐ ಒತ್ತಾಯಿಸುತ್ತದೆ ಎಂದರು.
ಎಸ್‌ಎಫ್‌ಐ ಹಾಸ್ಟೆಲ್ ಘಟಕದ ಅಧ್ಯಕ್ಷರಾದ ಭರತ ಮಡಿವಾಳ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಯನ್ನು ಕನಿಷ್ಠ 4.500ರೂ ಗಳಿಗೆ ಹೆಚ್ಚಿಸಬೇಕು. ಹೆಚ್ಚುವರಿಯಾಗಿ ಕನಿಷ್ಟ 10 ಹಾಸ್ಟೆಲ್ ಮಂಜೂರು ಮಾಡಬೇಕು. ರಾಜ್ಯದಲ್ಲಿ ಶಿಕ್ಷಣದ ಶುಲ್ಕ ಕಟ್ಟಲು ಶೈಕ್ಷಣಿಕ ಸಾಲ ಮಾಡಿಕೊಂಡಿರುವ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು. ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಉನ್ನತ ಶಿಕ್ಷಣದವರೆಗೂ (ಎಲ್.ಕೆ.ಜಿ ಯಿಂದ ಪಿಎಚ್.ಡಿವರೆಗೆ), ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು.
ಈ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲ ಶಾಸಕರು ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದೂ ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲ್ಲೂಕ ಕಾರ್ಯದರ್ಶಿ ಮಾರುತಿ ಲಂಕೇರ್, ಕಾಲೇಜ್ ಘಟಕದ ಉಪಾಧ್ಯಕ್ಷ ಮಹೇಶ್ ಕೊಂಡಜ್ಜಿ, ಸೌಮ್ಯಾ ಕ್ಯಾತನ, ಪವನ್ ಜಾಡರ್, ಚೇತನ್ ಉಲ್ಲೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ 167 |ಪಿಚ್ಚರ್ ಪಯಣ 167 | “Dry Leaf : ಆಟದ ಮಾಟ ಬದುಕಿನ ಪಾಠ”| Janashakthi Media
