ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ (RBI), 8 ಜೂನ್ 2023 ರಂದು ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ವಿತ್ತೀಯ ಸಂಸ್ಥೆ (NBFC)ಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಸುಸ್ತಿ ಸಾಲ ವಸೂಲಾತಿಗಾಗಿ, ರಾಜಿ ಸಂಧಾನ ಮೂಲಕ ಇತ್ಯರ್ಥ (Compromise Settlement) ಮತ್ತು ತಾಂತ್ರಿಕವಾಗಿ ಸಾಲ ವಜಾ ( write off) ಮಾಡುವ ವಿಧಾನಗಳ ಚೌಕಟ್ಟಿನ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಇದನ್ನು ವಿರೋಧಿಸಿ ಬ್ಯಾಂಕ್ ಎಂಪ್ಲಾಯ್ಸ್ ಫೆಡರೇಷನ್ ಆಫ್ ಇಂಡಿಯಾ ಪ್ರತಿಭಟನೆಗೆ ಕರೆ ನೀಡಿದೆ.
ಈ ಕುರಿತು ಬಿಇಎಫ್ಐ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ ಶಾನುಭೋಗ್ ಪತ್ರಿಕಾ ಹೇಳಿಕೆ ನೀಡಿದ್ದು, ಈ ಹೊಸ ನೀತಿಯು ‘ ಉದ್ದೇಶ ಪೂರ್ವಕ ಸುಸ್ತಿದಾರರು’ಮತ್ತು ವಂಚನೆಯ ಪ್ರಕರಣಗಳೆಂದು ನಿರ್ಣಯಿಸಲ್ಪಟ್ಟ ಸುಸ್ತಿದಾರರೊಂದಿಗೆ ರಾಜಿ ಸಂಧಾನದ ಮೂಲಕ ಸಾಲ ವಸೂಲಾತಿ ಮಾಡುವ ಹಾಗೂ ಆ ಮೂಲಕ ವಸೂಲಾಗದ ಸಾಲದ ಮೊತ್ತ ತಾಂತ್ರಿಕವಾಗಿ ತಮ್ಮ ಆಂತರಿಕ ಲೆಕ್ಕ ಪತ್ರಗಳಿಂದ ವಜಾಗೊಳಿಸುವ ನೀತಿಗಳನ್ನು ರೂಪಿಸಲು ವಾಣಿಜ್ಯ ಬ್ಯಾಂಕ್ ಗಳು ಹಾಗೂ ಮೇಲೆ ತಿಳಿಸಿದ ಎಲ್ಲ ವಿತ್ತೀಯ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.
ಉದ್ದೇಶಪೂರ್ವಕ ಸುಸ್ತಿದಾರರು ಎಂದರೆ ಸಾಲವನ್ನು ಪಾವತಿಸುವ ಸಾಮರ್ಥ್ಯವನ್ನು ಹೊಂದಿರುವ ಆದರೆ ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದೇ ಇರುವವರು., ಆದರೆ ವಂಚನೆ ಎಂದು ಗುರುತಿಸಲಾದ ಸಾಲ ಗಾರರು, ಬ್ಯಾಂಕುಗಳಿಗೆ ವಂಚನೆ ಎಸಗಿ ಸಾಲಪಡೆದು ಹಣ ಲಪಟಾಯಿಸಿದವರು. ಆಗಾಗ, ಈ ಚಟುವಟಿಕೆಗಳು ದೊಡ್ಡ ಕಾರ್ಪೊರೇಟ್ ಘಟಕಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳ ಪಟ್ಟಿಯು ಬೆಳೆದಿದೆ. ಉದಾಹರಣೆಗೆ ನೀರವ್ ಮೋದಿ, ವಿಡಿಯೋಕಾನ್,ಸತ್ಯಂ ಕಂಪ್ಯೂಟರ್ಸ್, ಯೆಸ್ ಬ್ಯಾಂಕ್ ಹಗರಣ, ಇತ್ತೀಚೆಗೆ ವರದಿಯಾಗಿರುವ ಭೂಷಣ್ ಸ್ಟೀಲ್ ಇತ್ಯಾದಿ.ಎಲ್ಲವೂ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣಗಳೇ ಆಗಿವೆ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ಈಗಾಗಲೇ 2016ರಲ್ಲೇ ಕೇಂದ್ರ ಸರ್ಕಾರ ಜಾರಿಗೆ ತಂದ ದಿವಾಳಿತನ ಮತ್ತು ದಿವಾಳಿತನ ಕೋಡ್ (IBC)ಪ್ರಕಾರ NCLT ಮೂಲಕ ಈಗಾಗಲೇ ಹಲವಾರು ದೊಡ್ಡ ದೊಡ್ಡ ಕಂಪನಿಗಳ ಬ್ರಹತ್ ಮೊತ್ತದ ಸುಸ್ತಿಸಾಲಗಳನ್ನು ಅತ್ಯಂತ ಕಡಿಮೆ ಮೊತ್ತ ವಸೂಲಿ ಮಾಡಿ ಇತ್ಯರ್ಥ ಮಾಡಿ, ಬ್ಯಾಂಕುಗಳು ಅಪಾರ ಮೊತ್ತದ ಹಣವನ್ನು ನಷ್ಟ ಮಾಡಿಕೊಂಡಿವೆ. ಈ ಪ್ರಕ್ರಿಯೆಯಲ್ಲಿ ಬಾಕಿ ಸಾಲದ ಮೊತ್ತದಲ್ಲಿ ವಸೂಲಿಯ ಪ್ರಮಾಣ ಹೆಚ್ಚಿನ ಪ್ರಕರಣಗಳಲ್ಲಿ 50% ಕ್ಕಿಂತ ಕಡಿಮೆ. ಕೆಲವು ಪ್ರಕರಣಗಳಲ್ಲಿ ಬಿಟ್ಟುಕೊಟ್ಟ ಮೊತ್ತ ಬರಬೇಕಿರುವ ಬಾಕಿಯ 90% ರಷ್ಟು. ಹೀಗೆ ಬ್ಯಾಂಕು ಗಳು ಬಿಟ್ಟುಕೊಟ್ಟ ಮೊತ್ತಕ್ಕೆ “ಕೂದಲು ಕತ್ತರಿಸಿ ಕೊಳ್ಳುವುದು “(Hair cut)ಎಂದು ಹೆಸರಿಸಲಾಗಿದೆ. ಈ ಹಣ ಬ್ಯಾಂಕ್ ಗಳು ಗಳಿಸಿದ ಲಾಭದಲ್ಲಿ ಸುಸ್ತಿ ಸಾಲಕ್ಕಾಗಿ ಮೀಸಲಿಟ್ಟ ಮೊತ್ತದಿಂದ ಭರಿಸುವುದರಿಂದ, ಸಾರ್ವಜನಿಕ ಹಣದ ಕಾನೂನು ಬದ್ಧ ಲೂಟಿಯಾಗಿದೆ ಎಂದುಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉದ್ದೇಶ ಪೂರ್ವಕ ಸುಸ್ತಿದಾರರು ಮತ್ತು ವಂಚನೆಯ ಸಾಲ ಪ್ರಕರಣಗಳಲ್ಲಿ ಸುಸ್ತಿದಾರರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ, ಸಾಲ ವಸೂಲಿಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬದಲು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಮತ್ತು ಈ ರೀತಿ ಸಾಲ ಮುಕ್ತಾಯ ಮಾಡಿಕೊಂಡವರಿಗೆ ಒಂದು ವರ್ಷದ ಅವಧಿಯ ನಂತರ ಪುನಃ ಸಾಲ ಸೌಲಭ್ಯಗಳನ್ನು ಪಡೆಯಲು ಅವಕಾಶ ನೀಡಿರುವುದು, ಸಾರ್ವಜನಿಕ ಸಂಪತ್ತಿನ ಲೂಟಿಕೋರರಿಗೆ ಇನ್ನಷ್ಟು ಪ್ರೋತ್ಸಾಹ ಕೊಟ್ಟಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಎಂಪ್ಲೋಯೀಸ್ ಫೆಡರೇಶನ್ ಆಫ್ ಇಂಡಿಯಾ ( BEFI) ಸೇರಿದಂತೆ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ ( UFBU), ಅನುತ್ಪಾದಕ ಆಸ್ತಿ (NPA) ವಸೂಲಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಉದ್ದೇಶ ಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಪ್ರಕಟಿಸುವಂತೆ ಒತ್ತಾಯಿಸಿ ಮುಷ್ಕರಗಳು ಸೇರಿದಂತೆ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಹೊಸ ಸಾಲ ವಸೂಲಿ ನೀತಿಯ ಪ್ರಕಟಣೆ ಹಿಂದೆ ದೊಡ್ಡ ಕಾರ್ಪೊರೇಟ್ ಸುಸ್ತಿದಾರರಿಗೆ ಅನುಕೂಲ ಮಾಡಲು ರಿಸರ್ವ್ ಬ್ಯಾಂಕ್ ಮೇಲೆ ಒತ್ತಡವೇನಾದರೂ ಇರಬಹುದೇ ಎಂಬ ಸಂಶಯ ವ್ಯಕ್ತ ಪಡಿಸುತ್ತ ಈ ಕೂಡಲೇ ಈ ಪ್ರಕಟಣೆ ಹಿಂಪಡೆಯಬೇಕೆಂದು ಬಿ.ಇ. ಎಫ್. ಐ. ಆಗ್ರಹಿಸಿದ್ದು ಮತ್ತು ಜೂನ್ ತಿಂಗಳ 21 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.