ಅಮೆರಿಕ ಹಿತಾಸಕ್ತಿಗಳ ರಕ್ಷಣೆ, ಭಾರತದ ಸಾರ್ವಭೌಮತ್ವದ ಬಲಿ

ಪ್ರಕಾಶ್‌ ಕಾರಟ್‌

ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಏಕಸ್ವಾಮ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಹಿಡಿತಕ್ಕೆ ಭಾರತವನ್ನು ಒಪ್ಪಿಸಲು ಮೋದಿ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಭಾರತದಂತಲ್ಲದೆ, ಕ್ವಾಡ್ ಇತರ ಪಾಲುದಾರರಾದ ಆಸ್ಟ್ರೇಲಿಯಾ ಮತ್ತು ಜಪಾನ್, ಚೀನಾದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅದರೊಂದಿಗೆ ವ್ಯಾಪಕ ಆರ್ಥಿಕ ಮತ್ತು ವಾಣಿಜ್ಯ ಸಂಬಂಧವನ್ನು ಇಟ್ಟುಕೊಂಡಿವೆ. ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಸಿದ್ದಕ್ಕಾಗಿ ನ್ಯಾಟೋ ಮಿತ್ರಪಕ್ಷ ಟರ್ಕಿ ವಿರುದ್ಧ ಅಮೆರಿಕ ಈಗಾಗಲೇ ದಿಗ್ಬಂಧನ ವಿಧಿಸಿದೆ. ರಷ್ಯಾದಿಂದ ಮುಂದುವರಿದ ಕ್ಷಿಪಣಿ-ವಿರೋಧಿ ವ್ಯವಸ್ಥೆಯನ್ನು ಖರೀದಿಸುವ ಭಾರತದ ಬಗ್ಗೆ ಅಮೆರಿಕ ಮೃದು ಧೋರಣೆ ತಳೆಯುತ್ತದೆ ಎಂದು ನಿರೀಕ್ಷಿಸಲಾಗದು. 2020ಏಪ್ರಿಲ್-ಮೇನಲ್ಲಿ ಲಡಾಖ್ ನಲ್ಲಿ ಗಡಿ ಸಂಘರ್ಷ ನಡೆದ ನಂತರ ಭಾರತದ ಭದ್ರತೆ ಕಾಯುವಲ್ಲಿ ಕ್ವಾಡ್ ನ್ನು ಚೀನಾ-ವಿರೋಧಿ ಶಕ್ತಿಯಾಗಿ ಕಾಣುವವರು, ಲಡಾಖ್ ಸಂಘರ್ಷಕ್ಕೆ ಮುನ್ನ ಟ್ರಂಪ್ ಆಡಳಿತದ ವೇಳೆ ಕ್ವಾಡ್ ನ್ನು ಪುನರುಜ್ಜೀವನಗೊಳಿಸಲಾಗಿತ್ತು ಎನ್ನುವುದನ್ನು ಗಮನಿಸಬೇಕು. ಏಷ್ಯಾ ವಲಯದಲ್ಲಿ ಅಮೆರಿಕದ ಏಕಾಧಿಪತ್ಯ ಸ್ಥಾಪನೆಗೆ ಸಹಾಯ ಮಾಡುವ ಮೋದಿ ಸರ್ಕಾರದ ನಡೆಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾದುದಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯೂರೋ ಸದಸ್ಯರಾದ ಪ್ರಕಾಶ್‌ ಕಾರಟ್‌ ಅವರು ವಿವರಿಸಿದ್ದಾರೆ.

ಜೋ ಬೈಡೆನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡು ತಿಂಗಳ ನಂತರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತಕ್ಕೆ ಭೇಟಿ ನೀಡಿದ್ದು ಭಾರತವನ್ನು ಒಂದು ಮಿತ್ರ ದೇಶವಾಗಿ ಹಾಗೂ ರಕ್ಷಣಾ ಪಾಲುದಾರನಾಗಿ ಅಮೆರಿಕ ನೀಡುವ ಮಹತ್ವಕ್ಕೆ ಸಾಕ್ಷಿಯಾಗಿದೆ. ಆಸ್ಟಿನ್ ಭಾರತಕ್ಕೆ ಬರುವ ಮುನ್ನ ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದರು. ಇವೆರಡೂ ಏಷ್ಯಾದಲ್ಲಿ ಅಮೆರಿಕದ ನಿಕಟ ಮಿಲಿಟರಿ ಮತ್ತು ವ್ಯೂಹಾತ್ಮಕ ಮಿತ್ರ ರಾಷ್ಟ್ರಗಳಾಗಿವೆ. ಭಾರತ-ಅಮೆರಿಕ ಮೈತ್ರಿಯು ಭಾರತ-ಪೆಸಿಫಿಕ್ ವಲಯದ ಅಮೆರಿಕ ನೀತಿಯ ʻʻಕೇಂದ್ರೀಯ ಸ್ತಂಭವಾಗಿದೆʼʼ ಎಂದು ಆಸ್ಟಿನ್ ವರ್ಣಿಸಿದ್ದಾರೆ. ಭಾರತ-ಅಮೆರಿಕ ವ್ಯೂಹಾತ್ಮಕ ಮೈತ್ರಿಯು ಮಿಲಿಟರಿ ಸಂಬಂಧದ ಮೇಲೆ ಕೇಂದ್ರೀಕೃತವಾಗಿದೆ ಎನ್ನುವುದು ಆರಂಭದಿಂದಲೇ ಸ್ಪಷ್ಟವಾಗಿದೆ. ಕ್ಲಿಂಟನ್‌ರಿಂದ ಬುಷ್, ಒಬಾಮಾರಿಂದ ಟ್ರಂಪ್ ವರೆಗಿನ ಅಮೆರಿಕದಲ್ಲಿ ಸತತವಾಗಿ ಆಡಳಿತ ನಡೆಸಿದವರು ಭಾರತವನ್ನು ಈಗ ಇಂಡೊ-ಪೆಸಿಫಿಕ್ ಎನ್ನಲಾಗುವ ಏಷ್ಯಾ-ಪೆಸಿಫಿಕ್ ವಲಯದಲ್ಲಿ ಒಂದು ಮಿತ್ರ ದೇಶವಾಗಿ ಮಾಡಿಕೊಳ್ಳುವುದನ್ನು ಗುರಿಯಾಗಿಸಿಕೊಂಡಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಆಸ್ಟಿನ್ ನಡೆಸಿದ ಮಾತುಕತೆ ವೇಳೆ ಮೂರು ಪ್ರಮುಖ ಮೂಲ ಒಪ್ಪಂದಗಳ ಆಧಾರದಲ್ಲಿ ರಕ್ಷಣಾ ಬಾಂಧವ್ಯವನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಲೆಮೊಆ(ಎಲ್.ಇ.ಎಂ.ಒ.ಎ), ಕೊಮ್ಕಸ (ಸಿ.ಒ.ಎಂ.ಸಿ.ಎ.ಎಸ್.ಎ) ಮತ್ತು ಬೆಕ (ಬಿ.ಇ.ಸಿ.ಎ) ಇವೇ ಆ ಮೂರು ಮೂಲ ಒಪ್ಪಂದಗಳು. ಇದು ಭಾರತೀಯ ಸಶಸ್ತ್ರ ಪಡೆಗಳು ಅಮೆರಿಕದ ಮಿಲಿಟರಿ ಮೇಲೆ ಹೆಚ್ಚುಹೆಚ್ಚಾಗಿ ಅವಲಂಬಿಸುವುದಕ್ಕೆ ಹಾದಿ ಮಾಡಿಕೊಡಲಿದೆ. ಅಮೆರಿಕದ ಇಂಡೊ-ಪೆಸಿಫಿಕ್ ಕಮಾಂಡ್, ಸೆಂಟ್ರಲ್ ಕಮಾಂಡ್ ಮತ್ತು ಆಫ್ರಿಕಾ ಕಮಾಂಡ್ ಜೊತೆ ಸಹಕಾರವನ್ನು ಹೆಚ್ಚಿಸಲು ಭಾರತ ಒಪ್ಪಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಜಂಟಿ ಕಾರ್ಯಾಚರಣೆ ಮತ್ತು ಸಮನ್ವಯವನ್ನು ಹೆಚ್ಚಿಸಲಾಗುತ್ತದೆ. ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕೂಡ ಅಮೆರಿಕದ ಏಕಾಧಿಪತ್ಯದ ಗುರಿ ಸಾಧನೆಗೆ ನರೇಂದ್ರ ಮೋದಿ ಸರ್ಕಾರ ನೆರವಾಗುವಂತೆ ಕಾಣುತ್ತದೆ.

ಕ್ವಾಡ್ ಸಭೆ

ಆಸ್ಟಿನ್ ಭೇಟಿಗೂ ಮುನ್ನ ಮಾರ್ಚ್ 12ರಂದು ಕ್ವಾಡ್ ದೇಶಗಳ ವರ್ಚುವಲ್ ಶೃಂಗಸಭೆ ನಡೆದಿತ್ತು. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ಕ್ವಾಡ್ ಕೂಟದ ಸದಸ್ಯ ದೇಶಗಳು. ಅಧಿಕೃತವಾಗಿ ಬೇರೇನೇ ಹೇಳಿದರೂ, ಕ್ವಾಡ್ ಚೀನಾವನ್ನು ಎದುರಿಸುವ ಕೂಟವಾಗಿ ಹೊರಹೊಮ್ಮುತ್ತಿರುವುದು ಸ್ಪಷ್ಟವಾಗಿದೆ. 2020ರ ಏಪ್ರಿಲ್-ಮೇನಲ್ಲಿ ಲಡಾಖ್ ನಲ್ಲಿ ಗಡಿ ಸಂಘರ್ಷ ನಡೆದ ನಂತರ ಭಾರತದ ಭದ್ರತೆ ಕಾಯುವಲ್ಲಿ ಕ್ವಾಡ್ ನ್ನು ಚೀನಾ-ವಿರೋಧಿ ಶಕ್ತಿಯಾಗಿ ಕಾಣುವವರು, 2017ರಲ್ಲಿ ಬರಾಕ್ ಒಬಾಮಾರ ಭಾರತ ಭೇಟಿ ವೇಳೆ ಹೊರಡಿಸಲಾದ ಜಂಟಿ ಮುನ್ನೋಟ ಹೇಳಿಕೆಯಲ್ಲಿ ಭಾರತವನ್ನು ಅಮೆರಿಕದ ಇಂಡೊ-ಪೆಸಿಫಿಕ್ ವ್ಯೂಹದ ಭಾಗವಾಗಿಸುವುದಕ್ಕೆ ಮೋದಿ ಸರ್ಕಾರ ಹೃತ್ಪೂರ್ವಕವಾಗಿ ಒಪ್ಪಿತ್ತು ಎನ್ನುವುದನ್ನು ಗಮನಿಸಬೇಕು. ಲಡಾಖ್ ಸಂಘರ್ಷಕ್ಕೆ ಮುನ್ನ ಟ್ರಂಪ್ ಆಡಳಿತದ ವೇಳೆ ಕ್ವಾಡ್ ನ್ನು ಪುನರುಜ್ಜೀವನಗೊಳಿಸಲಾಗಿತ್ತು.

ವಿದೇಶ ನೀತಿ ಮತ್ತು ವ್ಯೂಹಾತ್ಮಕ ಧೋರಣೆಯು ಒಂದು ದೇಶದ ಆಂತರಿಕ ನೀತಿಯ ವಿಸ್ತರಣೆಯಾಗುತ್ತದೆ. ಮೋದಿ ಸರ್ಕಾರವು ದೇಶೀಯವಾಗಿ ನವ-ಉದಾರವಾದಿ ನೀತಿಯನ್ನು ತೀವ್ರಗೊಳಿಸಿದೆ. ಖಾಸಗೀಕರಣದ ಹೆಬ್ಬಾಗಿಲು ತೆರೆದಿದೆ. ಎಲ್ಲ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರವೇಶಕ್ಕೆ ಹಾದಿ ಮಾಡಿಕೊಟ್ಟಿದೆ. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ ಖಾಸಗೀಕರಣಕ್ಕೂ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕೆ ಅಮೆರಿಕ ಬಹಳ ದೀರ್ಘಕಾಲದಿಂದ ಒತ್ತಾಯಿಸುತ್ತಿದೆಯೆನ್ನುವುದು ಗಮನಾರ್ಹ.

ಸಾರ್ವಜನಿಕ ಕ್ಷೇತ್ರದ ಬಹುತೇಕ ಉದ್ಯಮ-ಸಂಸ್ಥೆಗಳು ಖಾಸಗೀಕರಣಕ್ಕೆ ಸಜ್ಜುಗೊಂಡಿವೆ. ರಕ್ಷಣಾ ಉತ್ಪಾದನಾ ವಲಯ ಕೂಡ ಖಾಸಗೀಕರಣದ ಗುರಿಯ ಭಾಗವಾಗಿದೆ. 2020 ಸೆಪ್ಟೆಂಬರ್‌ನಲ್ಲಿ ರಕ್ಷಣಾ ಉತ್ಪಾದನಾ ವಲಯದಲ್ಲಿ  ಸ್ವಯಂಚಾಲಿತ ಮಾರ್ಗದ ಮೂಲಕ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್.ಡಿ.ಐ) ಶೇಕಡ 74ಕ್ಕೆ ಏರಿಸಲಾಗಿತ್ತು. ಪೂರ್ವಾನುಮತಿಯೊಂದಿಗೆ ಶೇಕಡ ನೂರರಷ್ಟು ಎಫ್.ಡಿ.ಐ ಹೂಡಿಕೆಗೆ ಕೂಡ ಅವಕಾಶವಿದೆ.

ರಕ್ಷಣಾ ಉದ್ಯಮಕ್ಕೆ ಕಾರ್ಪೊರೇಟ್ ಪ್ರವೇಶ

ಭಾರತೀಯ ಕಾರ್ಪೊರೇಟ್ ಕಂಪೆನಿಗಳು ಈಗಾಗಲೇ ರಕ್ಷಣಾ ಉದ್ಯಮ ವಲಯಕ್ಕೆ ಕಾಲಿರಿಸಿವೆ. ಅಮೆರಿಕದ ಶಸ್ತ್ರಾಸ್ತ್ರ ಕಂಪೆನಿಗಳು ಭಾರತೀಯ ಕಾರ್ಪೊರೇಟ್‌ಗಳೊಂದಿಗೆ ಜಂಟಿ ಉದ್ಯಮಕ್ಕೆ ಪ್ರವೇಶಿಸಲು ಅವಕಾಶ ಕೊಡಬೇಕೆನ್ನುವುದು ಮೋದಿ ಆಡಳಿತದ ಆಶೆಯಾಗಿದೆ. ಅಥವಾ ಅಮೆರಿಕದ ಕಂಪೆನಿಗಳು ನೇರವಾಗಿ ತಮ್ಮ ಘಟಕಗಳನ್ನು ಭಾರತದಲ್ಲಿ ಸ್ಥಾಪಿಸಲು ಅವಕಾಶ ನೀಡುವುದೂ ಅದರ ಗುರಿಯಾಗಿದೆ.

ಅಮೆರಿಕದ ಸಂಪರ್ಕದೊಂದಿಗೆ ಬೃಹತ್ ಮಿಲಿಟರಿ ಕೈಗಾರಿಕಾ ಸಂಕೀರ್ಣವನ್ನು ಅಭಿವೃದ್ಧಿಪಡಿಸಲು ಭಾರತದ ದೊಡ್ಡ ಬಂಡವಾಳಶಾಹಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಅದೇ ಹೊತ್ತಿಗೆ, ಭಾರತವು ತನ್ನ ಶಸ್ತ್ರಾಸ್ತ್ರ ಮತ್ತು ಸಾಧನ ಸಲಕರಣೆಗಳಿಗೆ ಮಾರುಕಟ್ಟೆಯಾಗುವುದನ್ನು ಖಾತರಿಪಡಿಸಲು ಅಮೆರಿಕ ಅಗಾಧ ಒತ್ತಡ ಹಾಕುತ್ತಿದೆ.

ಮೋದಿ ಸರ್ಕಾರ, ಈಗಾಗಲೇ ಮಿಲಿಟರಿ ಮಿತ್ರನಾಗುವ ಮೂಲಕ ಅಮೆರಿಕದ ಹಿಡಿತಕ್ಕೆ ಭಾರತ ಸಿಲುಕಿ ಒದ್ದಾಡುವಂತೆ ಮಾಡಿದೆ. ದೇಶವು ಈಗಾಗಲೇ ವ್ಯೂಹಾತ್ಮಕ ಸ್ವಾಯತ್ತೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ರಷ್ಯಾದಿಂದ ಎಸ್-400 ಕ್ಷಿಪಣಿಯನ್ನು ಭಾರತ ಖರೀದಿಸಿದರೆ ಕೌಂಟರಿಂಗ್ ಅಮೆರಿಕಾಸ್ ಅಡ್ವರ‍್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್ (ಸಿಎಎಟಿಎಸ್‌ಎ – ಅಮೆರಿಕದ ಪ್ರತಿಸ್ಪರ್ಧಿಗಳ ವಿರುದ್ಧ ದಿಗ್ಬಂಧನದ ಮೂಲಕ ಪ್ರತೀಕಾರದ ಕಾಯಿದೆ) ಅನ್ವಯ ಭಾರತದ ಮೇಲೆ ದಿಗ್ಬಂಧನ ವಿಧಿಸಲಾಗುತ್ತದೆ. ಆಸ್ಟಿನ್ ತಮ್ಮ ಭೇಟಿಯ ವೇಳೆ ಮತ್ತೆ ಈ ಸಂದೇಶ ನೀಡಿದ್ದಾರೆ. ಭಾರತ ಭೇಟಿ ವೇಳೆ ಇದನ್ನು ಸ್ಪಷ್ಟಪಡಿಸುವಂತೆ ವಿದೇಶ ವ್ಯವಹಾರಗಳ ಕುರಿತ ಸೆನೆಟ್ ಸಮಿತಿಯ ಅಧ್ಯಕ್ಷ ಬಾಬ್ ಮೆನೆಂಡೆಸ್ ಸೂಚಿಸಿದ್ದರು.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಸಿದ್ದಕ್ಕಾಗಿ ನ್ಯಾಟೋ ಮಿತ್ರಪಕ್ಷ ಟರ್ಕಿ ವಿರುದ್ಧ ಅಮೆರಿಕ ಈಗಾಗಲೇ ದಿಗ್ಬಂಧನ ವಿಧಿಸಿದೆ. ಬೈಡೆನ್ ಆಡಳಿತ ರಷ್ಯಾ ವಿರುದ್ಧ ಕಠಿಣ ಹಾಗೂ ದ್ವೇಷಾತ್ಮಕ ಧೋರಣೆ ತಳೆಯುತ್ತಿದೆ. ರಷ್ಯಾದಿಂದ ಮುಂದುವರಿದ ಕ್ಷಿಪಣಿ-ವಿರೋಧಿ ವ್ಯವಸ್ಥೆಯನ್ನು ಖರೀದಿಸುವ ಭಾರತದ ಬಗ್ಗೆ ಅಮೆರಿಕ ಮೃದು ಧೋರಣೆ ತಳೆಯುತ್ತದೆ ಎಂದು ನಿರೀಕ್ಷಿಸಲಾಗದು.

ಭಾರತದ ಸಾರ್ವಭೌಮತ್ವಕ್ಕೆ ಅಡ್ಡಿ

ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಏಕಸ್ವಾಮ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಹಿಡಿತಕ್ಕೆ ಭಾರತವನ್ನು ಒಪ್ಪಿಸಲು ಮೋದಿ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಭಾರತದಂತಲ್ಲದೆ, ಕ್ವಾಡ್ ನ ಇತರ ಪಾಲುದಾರರಾದ ಆಸ್ಟ್ರೇಲಿಯಾ ಮತ್ತು ಜಪಾನ್, ಚೀನಾದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅದರೊಂದಿಗೆ ವ್ಯಾಪಕ ಆರ್ಥಿಕ ಮತ್ತು ವಾಣಿಜ್ಯ ಸಂಬಂಧವನ್ನು ಇಟ್ಟುಕೊಂಡಿವೆ. ಚೀನಾದೊಂದಿಗೆ ಈ ದೇಶಗಳು ಕೂಡ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರ (ಆರ್.ಸಿ.ಇ.ಪಿ) ಒಡಂಬಡಿಕೆಯ ಭಾಗವಾಗಿವೆ. ಏಷ್ಯಾ ಪೆಸಿಫಿಕ್ ವಲಯದ 15 ದೇಶಗಳು ಇದಕ್ಕೆ ಸಹಿ ಹಾಕಿವೆ.  ಬೈಡೆನ್ ಆಡಳಿತದ ಅಧಿಕಾರಿಗಳೇ ಮಾರ್ಚ್ 18 ಮತ್ತು 19ರಂದು ಅಲಾಸ್ಕಾದಲ್ಲಿ ಚೀನಾ ಸರ್ಕಾರದ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಒಮ್ಮತಾಭಿಪ್ರಾಯ ಮೂಡಲು ಸಾಧ್ಯವಾಗುವಂಥ ವಿಷಯಗಳಲ್ಲಿ ಮಾತುಕತೆಗಳನ್ನು ನಡೆಸಲು ಅಮೆರಿಕ ಇಚ್ಛಿಸಿದೆ.

ಏಷ್ಯಾ ವಲಯದಲ್ಲಿ ಅಮೆರಿಕದ ಏಕಾಧಿಪತ್ಯ ಸ್ಥಾಪನೆಗೆ ಸಹಾಯ ಮಾಡುವ ಮೋದಿ ಸರ್ಕಾರದ ನಡೆಯು ಆರ್‌ಎಸ್‌ಎಸ್-ಹಿಂದೂತ್ವ ಧೋರಣೆಗೆ ಅನುಗುಣವಾಗಿದೆ. ಅದು ನಿಸ್ಸಂಶಯವಾಗಿಯೂ ಸಾಮ್ರಾಜ್ಯಶಾಹಿ-ಪರ ಹಾಗೂ ಕಮ್ಯೂನಿಸ್ಟ್-ವಿರೋಧಿಯಾದುದಾಗಿದೆ. ಇಂಥ ಧೋರಣೆಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾದುದಾಗಿದೆ.

ಅನು: ವಿಶ್ವ

 

 

Donate Janashakthi Media

Leave a Reply

Your email address will not be published. Required fields are marked *