ಬಿಜೆಪಿ, ರಾಜಕೀಯದ ‘ಸರಣಿ ಅತ್ಯಾಚಾರಿ ಮತ್ತು ಕೊಲೆಗಾರ’: – ಸಂಜಯ್ ರಾವತ್

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದ ಶಿಂಧೆ ಸರ್ಕಾರಕ್ಕೆ ಸೇರಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, “ಭಾರತೀಯ ಜನತಾ ಪಕ್ಷವೂ ರಾಜಕೀಯದ ಸರಣಿ ಅತ್ಯಾಚಾರಿ ಮತ್ತು ಕೊಲೆಗಾರ” ಎಂದು ಹೇಳಿದ್ದಾರೆ.

“ದಿಲ್ಲಿಯ (ಒಕ್ಕೂಟ ಸರ್ಕಾರ) ಮನಸ್ಸು ಈ ಬೆಳವಣಿಗೆಯ ಹಿಂದೆ ಇದೆ. ಅವರು ರಾಜಕೀಯದ ಸರಣಿ ಕೊಲೆಗಾರರು ಮತ್ತು ಸರಣಿ ಅತ್ಯಾಚಾರಿಗಳು. ಅವರ ಅಪರಾಧ ಮಾಡುವ ವಿಧಾನವು ಈ ಹಿಂದಿನಂತೆಯೆ ಇರುತ್ತದೆ. ಅವರು ತಮ್ಮ ಸ್ವ-ಹಿತಾಸಕ್ತಿಗಳಿಗಾಗಿ ರಾಜಕೀಯ ಪಕ್ಷಗಳನ್ನು ಒಡೆದು ಒಡೆದುಹೋದ ಬಣಗಳ ತಮ್ಮ ಮಾಲೀಕತ್ವವನ್ನು ಮೂಲ ಪಕ್ಷದಿಂದ ಪಡೆದುಕೊಳ್ಳುತ್ತಾರೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ: ಬಣ ರಾಜಕೀಯದ ಅವ್ಯವಹಾರ; ಶಿವಸೇನೆ ಚಿಹ್ನೆ-ಹೆಸರಿಗೆ ₹2 ಸಾವಿರ ಕೋಟಿ ರೂ ಲಂಚ: ಸಂಜಯ್ ರಾವತ್ ಆರೋಪ

ಅಜಿತ್ ಪವಾರ್ ಜುಲೈ 2ರ ಭಾನುವಾರದಂದು ಎನ್‌ಸಿಪಿಯಿಂದ ಬಂಡಾಯವೆದ್ದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಠಾತ್ ಬೆಳವಣಿಗೆಯ ನಂತರ, ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಮತ್ತು ಸಂಸದ ಸುನಿಲ್ ತಟ್ಕರೆ ಸೇರಿದಂತೆ ಐವರು ನಾಯಕರನ್ನು ಎನ್‌ಸಿಪಿ ಉಚ್ಚಾಟಿಸಿದೆ.

ಜುಲೈ 2 ರಂದು ಏಕನಾಥ್ ಶಿಂಧೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರನ್ನು ಔಪಚಾರಿಕವಾಗಿ ಅನರ್ಹಗೊಳಿಸಲು ಪಕ್ಷವು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಅಜಿತ್‌ ಪವಾರ್‌ ಬಣ ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್‌ ಪಾಟೀಲ್‌ ಅವರನ್ನು ಪದಚ್ಯುತಗೊಳಿಸಿ ಹೊಸ ನೇಮಕ ಮಾಡಿದೆ. ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಸದನದ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಮನವಿ ಮಾಡಿದೆ.

ಹೊಸ NCP ಕಚೇರಿಯನ್ನು ಉದ್ಘಾಟಿಸಲಿರುವ ಅಜಿತ್ ಪವಾರ್!

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಜಿತ್ ಪವಾರ್ ಅವರು ರಾಜ್ಯ ಸಚಿವಾಲಯದ ಬಳಿ ಹೊಸ ಎನ್‌ಸಿಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಪ್ರಸ್ತುತ ಪಕ್ಷದ ಕಚೇರಿಯು ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿದೆ. ಅಜಿತ್ ಪವಾರ್ ಬಣ ತಾವೇ ನಿಜವಾದ ಎನ್‌ಸಿಪಿಯೇ ಹೊರತು ಯಾವುದೇ ಪ್ರತಿಸ್ಪರ್ಧಿ ಬಣವಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ವ್ಯಾಗ್ನರ್ ಗುಂಪು’ ಮತದಾನದ ಮೂಲಕ ಮೋದಿಯನ್ನು ಕಿತ್ತೊಗೆಯಲಿದೆ: ವಿಪಕ್ಷಗಳನ್ನು ಉಲ್ಲೇಖಿಸಿ ಶಿವಸೇನೆ (ಯುಬಿಟಿ)

ಬುಧವಾರ (ಜುಲೈ 5) ಎರಡೂ ಬಣಗಳು ಮುಂಬೈನಲ್ಲಿ ಪ್ರತ್ಯೇಕ ಸಭೆ ನಡೆಸಲು ಸಜ್ಜಾಗಿವೆ. ಎನ್‌ಸಿಪಿ ವಿಭಜನೆಯ ನಂತರ ಎರಡು ಬಣಗಳ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡ ಮೊದಲ ಸಭೆ ಇದಾಗಿದೆ. ಎರಡೂ ಬಣಗಳು ಗರಿಷ್ಠ ಸಂಖ್ಯೆಯ ಶಾಸಕರ ಬೆಂಬಲವನ್ನು ಹೇಳಿಕೊಂಡಿವೆ.

Donate Janashakthi Media

Leave a Reply

Your email address will not be published. Required fields are marked *