- ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ- ಕರ್ನಾಟಕ ಮನವಿ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ರೈತ ಮತ್ತು ಕೃಷಿ ವಿರೋಧಿಯಾದ ಕೃಷಿ ಕಾಯ್ದೆಗಳ ತಿದ್ದುಪಡಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ- ಕರ್ನಾಟಕ (ಎಐಕೆಎಸ್‍ಸಿಸಿ) ಸೆ.28ಕ್ಕೆ ಕರ್ನಾಟಕ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಿದೆ.
ನಗರದ ಗಾಂಧಿ ಭವನದಲ್ಲಿ ವಿವಿಧ ರೈತಸಂಘಟನೆಗಳ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಐಕೆಎಸ್‍ಸಿಸಿ-ಕರ್ನಾಟಕದ ಸಂಚಾಲಕ ಜಿ.ಸಿ.ಬಯ್ಯಾರೆಡ್ಡಿ, ಕೇಂದ್ರ ಸರಕಾರದ, ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ ಗಳನ್ನು ಕೂಡಲೇ ವಾಪಸು ಪಡೆಯಬೇಕು ಹಾಗೂ ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ- 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ- 2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿ, ಈ ಕರಾಳ ಕಾಯ್ದೆಗಳಿಂದ ಬಾಧಿತರಾಗುವ ಎಲ್ಲ ಜನ ವಿಭಾಗಗಳು ಮತ್ತು ಸಮುದಾಯಗಳು, ನಾಗರೀಕರು ಸ್ವಯಂ ಪ್ರೇರಣೆಯಿಂದ ತಮ್ಮ ಎಲ್ಲಾ ಕೆಲಸ ಕಾರ್ಯ ಹಾಗೂ ವಹಿವಾಟುಗಳನ್ನು ಸ್ಥಗಿತಗೊಳಿಸಿ ಕರ್ನಾಟಕವನ್ನು ಸ್ವಯಂ ಪ್ರೇರಿತ ಬಂದ್ ಆಗಿ ಪರಿವರ್ತಿಸಿ, ತಮ್ಮ ತೀವ್ರ ಪ್ರತಿರೋಧವನ್ನು ರಾಜ್ಯಾದಾದ್ಯಂತ ಸೆಪ್ಟಂಬರ್ 28 ರಂದು ವ್ಯಕ್ತಪಡಿಸಲು ಮನವಿ ಮಾಡಿದರು.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ – ಕರ್ನಾಟಕದ ಆನ್ ಲೈನ್ ಸಭೆ ಬುಧವಾರ ನಡೆಯಿತು. ಈ ಸಭೆಯಲ್ಲಿ ಎರಡೂ ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ, ಜನಶಕ್ತಿ ಮುಂತಾದ 9 ಸಂಘಟನೆಗಳು ಪಾಲ್ಗೊಂಡಿದ್ದವು. ರಾಜ್ಯದ ಎಲ್ಲಾ ದಲಿತ ಹಾಗೂ ಕನ್ನಡಪರ ಸಂಘಟನೆಗಳು, ಬಹುತೇಕ ಕಾರ್ಮಿಕ ಸಂಘಗಳು, ಸಭೆಯ ನಿರ್ಣಯಕ್ಕೆ ಬದ್ದವೆಂದು ಸೂಚನೆ ನೀಡಿದ್ದವು. ವರ್ತಕ ಸಮುದಾಯ ಕೂಡ ಬೆಂಬಲಿಸಿದೆ ಎಂದರು.
ಅವಸರದಲ್ಲಿ ಅಂಗೀಕರಿಸಲು ಯಾರ ಒತ್ತಡವಿತ್ತು:
ಕೇಂದ್ರ ಸರಕಾರ, ಜಂಟಿ ಸಂಸದೀಯ ಸಮಿತಿಗಳಿಗೆ ಒಪ್ಪಿಸಿ ಹಾಗೂ ಸಾರ್ವಜನಿಕವಾಗಿ ಚರ್ಚಿಸಿ ನಂತರ ಪಾರ್ಲಿಮೆಂಟಿನಲ್ಲಿ ವಿವರವಾಗಿ ಪರಿಶೀಲಿಸಿ, ಸಾವಧಾನವಾಗಿ ಈ ಮಸೂದೆಗಳ ಕುರಿತು ನಿರ್ಧರಿಸಬಹುದಾಗಿತ್ತು. ಇವುಗಳು ಈ ದೇಶದ ರೈತರ ಕೋರಿಕೆಗಳೇನಾಗಿರಲಿಲ್ಲ. ಮಾತ್ರವಲ್ಲಾ, ದೇಶಾದ್ಯಂತ ಇವುಗಳ ಸುಗ್ರೀವಾಜ್ಞೆಗಳಿಗೆ ವ್ಯಾಪಕವಾದ ವಿರೋಧವನ್ನು ವ್ಯಕ್ತಪಡಿಸಲಾಗಿತ್ತು. ಆದಾಗಲೂ, ಅದೂ ಕೂಡಾ ಇಡೀ ದೇಶ ಕೋವಿಡ್-19 ರಿಂದ ತೀವ್ರವಾಗಿ ಬಾಧಿತವಾಗಿರುವಾಗ ಇಷ್ಟೊಂದು ಅವಸರವಾಗಿ ಮತ್ತು ಬಲವಂತವಾಗಿ, ಪಾರ್ಲಿಮೆಂಟ್ ನೀತಿಗಳನ್ನು ಉಲ್ಲಂಘಿಸಿ, ಈ ಬಿಲ್‌ಗಳನ್ನು ದೇಶದ ಮೇಲೆ ಹೇರುವ ಅವಶ್ಯಕತೆಯಾದರೂ ಏನಿತ್ತು? ಯಾರ ಒತ್ತಡವಿತ್ತು? ಯಾರನ್ನು ತೃಪ್ತಿ ಪಡಿಸಬೇಕಿತ್ತು? ಎಂದು ಎಐಕೆಎಸ್ ಸಿಸಿ-ಕರ್ನಾಟಕ ಪ್ರಶ್ನಿಸಿದೆ.
ಇವು, ರೈತರ ಹಾಗೂ ಮತ್ತಿತರೇ ಪರಂಪರೆಯಿಂದ ನಿರ್ವಹಿಸಲಾಗುವ ಉಪಕಸುಬುಗಳಾದ, ಹೈನುಗಾರಿಕೆ, ಕೋಳಿ, ಕುರಿ ಹಾಗೂ ಹಂದಿ ಸಾಕಣೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರು ಮತ್ತು ಕೃಷಿ ಆಧಾರಿತ ಕಸುಬುಗಳ ಕಸುಬುದಾರರ ಸಂಕುಲಗಳನ್ನೇ ಸರ್ವನಾಶ ಮಾಡಲಿವೆ. ಇದೊಂದು ಈ ಜನ ಸಮುದಾಯಗಳ ಮೇಲಿನ ಚಾರಿತ್ರಿಕ ದೌರ್ಜನ್ಯವಾಗಿದೆ. ಬೆಲೆ ಖಾತರಿ, ಕೃಷಿಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದದ ಮಸೂದೆ-2020 ನಮ್ಮ ದೇಶದ ಹಾಗೂ ವಿದೇಶಗಳ ಕೃಷಿ ವ್ಯಾಪಾರಿ ಸಂಸ್ಥೆಗಳು, ರಫ್ತುದಾರರು, ಸಗಟು ವರ್ತಕರು, ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ ದೊಡ್ಡ ಬಂಡವಾಳದಾರರು, ಕಾರ್ಪೋರೇಟ್ ಸಂಸ್ಥೆಗಳಿಗೆ ರೈತರ ಕೃಷಿ ಉತ್ಪನ್ನಗಳ ಮತ್ತು ಉಪಕಸುಬುಗಳ ಮುಂಗಡ ವ್ಯಾಪಾರದಲ್ಲಿ ತೊಡಗಲು ಅವಕಾಶ ನೀಡುತ್ತದೆ. ಈ ಮುಂಗಡ ವ್ಯಾಪಾರ ಪದ್ಧತಿ ಮೋಸದಿಂದ ಕೂಡಿದ ವ್ಯವಸ್ಥೆಯಾಗಿದೆ. ದೈತ್ಯ ಕಂಪನಿಗಳ ಭಾರಿ ಬಂಡವಾಳ ಹಾಗೂ ಪ್ರಧಾನ ಮಂತ್ರಿಗಳವರೆಗಿನ ಅಧಿಕಾರಿಗಳ ಪ್ರಭಾವದೆದುರು, ಯಾವುದೇ ರೈತ ಹಾಗೂ ಕಸುಬುದಾರ ಖಂಡಿತಾ ಅವರ ಮೋಸಗಳನ್ನು ಎದುರಿಸಿ ನಿಲ್ಲಲು ಸಾಧ್ಯವಿಲ್ಲ. ಇಂತಹ ದೈತ್ಯ ಕಂಪನಿಗಳ ಲೂಟಿಗಾಗಿಯೇ ಎಪಿಎಂಸಿಗಳನ್ನು ನಾಶ ಮಾಡುವ ಮತ್ತು ಗ್ರಾಹಕರ ಅಪಾರವಾದ ಲೂಟಿಗೆ ನೆರವಾಗುವ ಇನ್ನೆರಡು ತಿದ್ದುಪಡಿ ಕಾಯ್ದೆಗಳನ್ನ ತರಲಾಗಿದೆ. ಅದೇ ರೀತಿ ಈ ಎಲ್ಲವುಗಳು ನಮ್ಮ ಸಹಕಾರಿ ಚಳವಳಿಯನ್ನೇ ಹೊಸಕಿ ಹಾಕುತ್ತವೆ ಎಂದು ಎಐಕೆಎಸ್ ಸಿಸಿ-ಕರ್ನಾಟಕ ಆತಂಕ ವ್ಯಕ್ತಪಡಿಸಿದೆ.
ಈ ಕಾಯ್ದೆಗಳಿಂದ ಎಲ್ಲಾ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕೃಷಿ ಮಾರುಕಟ್ಟೆ ವರ್ತಕರು, ಅಲ್ಲಿನ ನೌಕರರು, ಕೃಷಿ ಸಂಬAಧಿ ಹೂಡಿಕೆಗಳಾದ ಬೀಜ, ಗೊಬ್ಬರ ಕ್ರಿಮಿನಾಶಕಗಳ ವ್ಯಾಪಾರಿಗಳು, ಹಾಲು ಉತ್ಪಾದಕರು, ಎಲ್ಲಾ ಸಹಕಾರ ಸಂಘಗಳು, ಕೋಳಿ, ಕುರಿ, ಹಂದಿ ಸಾಕಾಣೆದಾರರು, ಈ ಉತ್ಪನ್ನಗಳನ್ನು ಆಧರಿಸಿದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು, ಅಲ್ಲಿನ ಕಾರ್ಮಿಕರು ಹಾಗೂ ಇವುಗಳನ್ನು ಆಧರಿಸಿದ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಕುಲ ಕಸುಬುದಾರರು, ದಲಿತರು, ಮಹಿಳೆಯರು, ಒಟ್ಟಾರೇ ಸಮಸ್ಥ ಗ್ರಾಹಕ ಸಮುದಾಯಗಳು ತೀವ್ರ ರೀತಿಯಲ್ಲಿ ಬಾಧಿತರಾಗಿ ಬೀದಿ ಪಾಲಾಗಲಿದ್ದಾರೆ. ಅದೇ ರೀತಿ, ಒಂದು ವೇಳೆ ರಾಜ್ಯ ಸರಕಾರ ತನ್ನ ಹಟವನ್ನು ಮುಂದುವರೆಸಿ, ಸುಗ್ರೀವಾಜ್ಞೆಗಳನ್ನು ಕಾಯ್ದೆಗಳನ್ನಾಗಿಸಲು ರಾಜ್ಯದಲ್ಲಿ ಕ್ರಮ ವಹಿಸಿದಲ್ಲಿ ಈ ಸ್ವಯಂ ಪ್ರೇರಿತ ಬಂದ್ ಮಾತ್ರವಲ್ಲಾ, ಮತ್ತಷ್ಟು ವಿಶಾಲವಾದ ಉಧೃತವಾದ ಚಳವಳಿಯನ್ನು ಸಂಘಟಿಸುವುದಾಗಿ ಸಭೆಯು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಸುದ್ದಿಗೋಷ್ಠಿಯಲ್ಲಿ AIKSCC ಕೇಂದ್ರ ಸಮಿತಿ ಸದಸ್ಯರಾದ ಕವಿತಾ ಕುರುಗಂಟಿ, ಕೋಡಿಹಳ್ಳಿ ಚಂದ್ರಶೇಖರ್, KRRS ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, KPRS ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ, KPRS ರಾಜ್ಯ ಉಪಾಧ್ಯಕ್ಷ ಮಾರುತಿ ಮಾನಪಡೆ, AIKS ರಾಜ್ಯ ನಾಯಕರಾದ ಪಿ.ವಿ. ಲೋಕೇಶ್, RKS ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ದಿವಾಕರ್, AIAWU ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ ಮತ್ತು ಕರ್ನಾಟಕ ಜನಶಕ್ತಿ ರಾಜ್ಯ ನಾಯಕರ ಕುಮಾರ್ ಸಮತಲ ಮಾತನಾಡಿದರು.