- ಸೆ.25, ಪ್ರತಿಭಟನೆಗೆ ಸೀಮಿತ
ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಹಾಗೂ ಕಾಯ್ದೆಗಳನ್ನ ವಿರೋಧಿಸಿ ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕ ಸೆ. 28ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ. ಈ ಕುರಿತು ಜನಶಕ್ತಿ ಮೀಡಿಯಾಕ್ಕೆ ಮಾಹಿತಿ ನೀಡಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕ ಸಂಚಾಲಕರೂ ಆಗಿರುವ ಕರ್ನಾಟಕ ಪ್ರಾಂತರೈತಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಕೇಂದ್ರ ಸರ್ಕಾರ ಅಪ್ರಜಾಸತ್ತಾತ್ನಕವಾಗಿ ಅಂಗೀಕರಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ರೈತ ವಿರೋಧಿ ತಿದ್ದಪಡಿಗಳ ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಖಿಲ ಭಾರತ ಬಂದ್‍ಗೆ ಕರೆ ನೀಡಿದೆ. ರಾಜ್ಯದಲ್ಲೂ ಅದೇ ದಿನ ಬಂದ್ ನಡೆಸಬೇಕು ಎಂದು ಅಭಿಪ್ರಾಯಕ್ಕೆ ಬರಲಾಗಿತ್ತು. ಆದರೆ ರಾಜ್ಯದಲ್ಲಿ ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತಿತರ ಕಾಯ್ದೆಗಳನ್ನು ಈ ವಾರಾಂತ್ಯದೊಳಗೆ ಅಂಗೀಕರಿಸುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರಕ್ಕೆ ಸದರಿ ಕಾಯ್ದೆಗಳನ್ನು ಅಂಗೀಕರಿಸದಂತೆ ಜನತಾ ಪರ್ಯಾಯ ಅಧಿವೇಶನದ ಮೂಲಕ ಒತ್ತಡ ಹಾಕಲಾಗಿದೆ. ಹಾಗಾಗಿ ಸೆ.28ರಂದು ಬಂದ್ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಬಯ್ಯಾರೆಡ್ಡಿ ಹೇಳಿದರು.
ಸೆ. 25ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಸಂದರ್ಭದಲ್ಲಿ ಕರ್ನಾಟಕಲ್ಲಿ ಪ್ರತಿಭಟನೆ ಮಾಡಲಾಗುವುದು. ಅಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸುಮಾರು 2 ಸಾವಿರ ರೈತರು ಸೇರಿ ಪ್ರತಿಭಟನೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಇತರ ಪ್ರದೇಶಗಳಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಬಯ್ಯಾರೆಡ್ಡಿ ತಿಳಿಸಿದರು.
ಸೆ.28ರ ಬಂದ್ ಮತ್ತು ಸೆ.25ರ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತಸಂಘಟನೆ- ಹಸಿರು ಸೇನೆ, ರಾಷ್ಟ್ರೀಯ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ, ದಲಿತ ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಜೊತೆಗೆ ಜೆಡಿಎಸ್, ವಾಟಾಳ್ ಪಕ್ಷ ಬಂದ್‍ಗೆ ಬೆಂಬಲ ನೀಡುವುದಾಗಿ ಹೇಳಿವೆ. ಕಾಂಗ್ರೆಸ್‍ಪಕ್ಷ ಕೂಡ ಬೆಂಬಲ ನೀಡುವ ವಿಶ‍್ವಾಸವಿದೆ. ಹಾಗೆಯೇ ಕನ್ನಡಪರ ಸಂಘಟನೆಗಳು ಕೂಡ ಬಂದ್‍ಗೆ ಬೆಂಬಲ ನೀಡಿವೆ ಎಂದು ಇದೇ ವೇಳೆ ಬಯ್ಯಾರೆಡ್ಡಿ ಹೇಳಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೆ. 25ರಂದು ಭಾರತ್ ಬಂದ್ಗೆ ಬೆಂಬಲ ನೀಡುತ್ತೇವೆ. ರೈತ ಸಂಘದಿಂದ ಆ ದಿನ ರಸ್ತೆ ತಡೆ, ಜೈ ಭರೋ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ತಮ್ಮ ಬಣದೊಂದಿಗೆ ಪ್ರತಿಭಟನೆ ನಡೆಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಸೆ. 28ರ ಕರ್ನಾಟಕ ಬಂದ್ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ, ಸೆ. 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ಹೆದ್ದಾರಿ ಬಂದ್ ಮಾತ್ರ ಮಾಡಲಾಗುತ್ತದೆ. ಆದರೆ, ಸೆ. 28ರ ಕರ್ನಾಟಕ ಬಂದ್ ಬಗ್ಗೆ ನಾಳೆ ಸ್ಪಷ್ಟನೆ ನೀಡುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವುದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ರೈತರ ಬೆನ್ನೆಲುಬು ಮುರಿಯುತ್ತವೆ ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಪ್ರತಿಭಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ.