- ಸಂಸದೀಯ ಗಣತಂತ್ರದ ಮೇಲೆ ದಾಳಿಗಳನ್ನು ಪ್ರತಿಭಟಿಸಿ ಜಂಟಿ ಹೊರಾಟಕ್ಕೆ ಕರೆ
ದೆಹಲಿ : ಬಿಜೆಪಿ ಸರಕಾರ ಎಲ್ಲ ಸಂಸದೀಯ ವಿಧಿ-ವಿಧಾನಗಳನ್ನು ಗಾಳಿಗೆ ತೂರಿ ಭಾರತೀಯ ಕೃಷಿಯನ್ನು ಒತ್ತೆಯಿಡುವ ಶಾಸನಗಳನ್ನು ಬಲವಂತದಿಂದ ಪಾಸು ಮಾಡಿಕೊಂಡಿರುವುದನ್ನು ಎಡಪಕ್ಷಗಳು ಬಲವಾಗಿ ಖಂಡಿಸಿವೆ.
ಮಸೂದೆಗಳ ಮೇಲೆ ಮತದಾನ ಕೇಳಿದ ಸದಸ್ಯರನ್ನು ಅಮಾನತು ಮಾಡಲಾಗಿದೆ. ಇಂತಹ ಕ್ರಮಗಳ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ಸರಕಾರ ಭಾವಿಸಿದ್ದರೆ ಅದು ಎಂದೂ ಸಾಧ್ಯವಿಲ್ಲ. ಭಾರತೀಯ ಸಂವಿಧಾನ, ಭಾರತೀಯ ಸಂಸತ್ತು ಮತ್ತು ಜಾತ್ಯತಿತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ರಕ್ಷಿಸಲು ತಾವು ಬದ್ಧ ಎಂಬುದನ್ನು ಎಡಪಕ್ಷಗಳು ಪುನರುಚ್ಚರಿಸಿವೆ, ಮತ್ತು ನಮ್ಮ ಸಂವಿಧಾನಿಕ ಗಣತಂತ್ರದ ಮೇಲೆ ಇಂತಹ ದಾಳಿಗಳನ್ನು ನಡೆಸುವುದರ ವಿರುದ್ಧ ಎದ್ದು ನಿಂತು ಪ್ರತಿಭಟಿಸಬೇಕು ಎಂದು ಜನಗಳಿಗೆ ಕರೆ ನೀಡಿವೆ.
ಈ ಶಾಸನಗಳು ಭಾರತೀಯ ಕೃಷಿಯನ್ನು, ನಮ್ಮ ರೈತರನ್ನು ಧ್ವಂಸ ಮಾಡುತ್ತವೆ ಮತ್ತು ಈ ರೀತಿ ಇಡೀ ವಲಯವನ್ನು ಕೃಷಿ ಕಾರ್ಪೊರೇಟ್‍ಗಳಿಗೆ ವಹಿಸಿಕೊಡುವುದೆಂದರೆ ರೈತರಿಗೆ ಕನಿಷ್ಟ ಬೆಂಬಲ ಬೆಲೆಗಳ ರದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಂಪೂರ್ಣ ನಾಶ ಮತ್ತು ನೀತಿಬಾಹಿರ ವ್ಯಾಪಾರಿಗಳು, ದೈತ್ಯ ಕಾರ್ಪೊರೇಟ್‍ಗಳು ಕಳ್ಳದಾಸ್ತಾನು ನಡೆಸಲು ಉತ್ತೇಜನೆ ಕೊಟ್ಟು ಆಹಾರದ ಕೃತಕ ಕೊರತೆಯನ್ನು ಉಂಟು ಮಾಡಿ ಭಾರತದ ಆಹಾರ ಭದ್ರತೆಗೆ ಸಂಚಕಾರ ತರಲಿವೆ ಎಂದು ಎಡಪಕ್ಷಗಳು ಎಚ್ಚರಿಸಿವೆ.
ಈ ಶಾಸನಗಳನ್ನು ಹಿಂದಕ್ಕೆ ತಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಸೆಪ್ಟಂಬರ್ 25ರಂದು ದೇಶವ್ಯಾಪಿ ಪ್ರತಿಭಟನೆಗಳಿಗೆ ನೀಡಿರುವ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕು, ರೈತರ ಹೋರಾಟಕ್ಕೆ ಸೌಹಾರ್ದ ವ್ಯಕ್ತಪಡಿಸಬೇಕು ಎಡಪಕ್ಷಗಳು ಎಂದು ತಮ್ಮ ಘಟಕಗಳಿಗೆ ಕರೆ ನೀಡಿವೆ.
ಇದನ್ನು ಓದಿ :ಕೃಷಿ ಕಾಯ್ದೆಗಳಿಗೆ ರೈತವಿರೋಧಿ ತಿದ್ದುಪಡಿ ಖಂಡಿಸಿ ಸೆ.25 ಅಖಿಲ ಭಾರತ ಬಂದ್: ಬೆಂಬಲ
ಕೇಂದ್ರ ಸರಕಾರ ಈ ಶಾಸನಗಳನ್ನು ಹಿಂದಕ್ಕೆ ತಗೊಳ್ಳುವಂತೆ ಮಾಡಲು ರಾಜ್ಯ ಮಟ್ಟಗಳಲ್ಲಿ ಇತರ ರಾಜಕೀಯ ಪಕ್ಷಗಳೊಡನೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ರೂಪಿಸಬೇಕು ಎಂದು ತಮ್ಮ ಎಲ್ಲ ರಾಜ್ಯ ಘಟಕಗಳಿಗೆ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ-ಎಲ್)-ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಆರ್.ಎಸ್.ಪಿ. ಪ್ರಧಾನ ಕಾರ್ಯದರ್ಶಿಗಳ ಜಂಟಿ ಹೇಳಿಕೆ ಕರೆ ನೀಡಿದೆ.