ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ರೈತರು ರಣಕಹಳೆ ಮೊಳಗಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ನೀಡಿದೆ. ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಗಳು, ಯುವಕರು, ಶಿಕ್ಷಕರು, ಕಾರ್ಮಿಕರು ಮತ್ತು ಇತರರು ಸೇರಿದಂತೆ ಸುಮಾರು 100 ಸಂಸ್ಥೆಗಳು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆಗೆ ಬೆಂಬಲ ಸೂಚಿಸಿವೆ.
ಬಿಜೆಪಿಯೇತರ ಪಕ್ಷಗಳು ಭಾರತ್ ಬಂದ್‌ಗೆ ಬೆಂಬಲ ನೀಡಲಿದ್ದು, ಅದನ್ನು ಯಶಸ್ವಿಗೊಳಿಸಲು ಮುಂದಾಗಿವೆ. ಕರ್ನಾಟಕದಲ್ಲಿಯೂ ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ 42 ಸಂಘಟನೆಗಳಿವೆ.
ಇದನ್ನು ಓದಿ: ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ವಾಪಾಸು ಪಡೆಯಲು ಒತ್ತಾಯ
ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಜೆಡಿ, ಟಿಡಿಪಿ ಸೇರಿದಂತೆ ಎಡಪಕ್ಷಗಳು ಬಂದ್ ಕರೆಗೆ ಬೆಂಬಲ ಸೂಚಿಸಿ ಎಲ್ಲಡೆ ಪ್ರಚಾರವನ್ನು ಕೈಗೊಂಡಿದೆ. ರಾಜ್ಯದ ಎಲ್ಲ ರೈತಪರ ಸಂಘಟನೆಗಳು, ಜನಪರ, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸರ್ಕಾರಿ, ಬ್ಯಾಂಕ್ ನೌಕರರು ಬೆಂಬಲ ಸೂಚಿಸಿವೆ.
ರಾಜ್ಯದಲ್ಲಿಯೂ ಬಂದ್ ನಡೆಯಲಿದ್ದು, ಎಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ದಲಿತ ಸಂಘ, ಕಾರ್ಮಿಕ ಸಂಘ ಕೆಲ ಆಟೋ ಸಂಘ, ಕನ್ನಡ ಸಂಘಗಳು ಬೆಂಬಲ ಕೊಟ್ಟಿದೆ. ಎಪಿಎಂಸಿ ತರಕಾರಿ ಮಾರುಕಟ್ಟೆ ವರ್ತಕರ ಸಂಘ ಬಂದ್ ಗೆ ಬೆಂಬಲ ಕೊಟ್ಟಿದೆ. ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟದಿಂದಲೂ ಬೆಂಬಲವಿದ್ದು, ಕರ್ನಾಟಕ ರಣಧೀರ ಪಡೆ, ಆಟೋ, ಊಬರ್, ಓಲಾ ಸಂಘಟನೆಗಳಿಂದ ನೈತಿಕ ಬೆಂಬಲ ನೀಡಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಭಾರತ್ ಬಂದ್‌ಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ತನ್ನ ಬೆಂಬಲವನ್ನು ನೀಡಿದೆ.
ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಹಸಿರು ಬಟ್ಟೆ ಧರಿಸಿ ಅಥವಾ ಕೈಗೆ ಹಸಿರು ಪಟ್ಟಿಯನ್ನು ಧರಿಸಿ ಬೆಂಬಲಿಸಲು ನಿರ್ಧರಿಸಿದ್ದಾರೆ.
ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ ಒಪ್ಪಂದ) ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯ ವಿರುದ್ಧ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿಯೂ ಸಹ ಕರೋನಾ ಮಧ್ಯೆಯೇ ಭಾರತ ಬಂದ್ ನಡೆಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ತದನಂತರ ಕಳೆದ ಮಾರ್ಚ್ 26ರಂದು ಸಹ ಭಾರತ ಬಂದ್‌ಗೆ ಕರೆ ನೀಡಲಾಗಿತ್ತು. ಈಗ ಮತ್ತೊಮ್ಮೆ ಭಾರತ ಬಂದ್ ಕರೆ ನೀಡುವ ಮೂಲಕ ಹೋರಾಟದ ಬಿಸಿಯನ್ನು ಕಾಪಾಡುವ ಪ್ರಯತ್ನ ಮುಂದುವರಿಸಲಾಗುತ್ತಿದೆ.
ದೆಹಲಿಯಲ್ಲಿ ರೈತರು ಒಂಬತ್ತು ತಿಂಗಳಿಂದ ಆಂದೋಲನ ನಡೆಸುತ್ತಿದ್ದಾರೆ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಆದ್ದರಿಂದ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನ ಕೈಗೊಂಡಿವೆ.
ಇದನ್ನು ಓದಿ: ಸುಪ್ರೀಂ ನೇಮಿಸಿದ ಸಮಿತಿ ಕಾಯ್ದೆ ರದ್ದತಿ ಬಗ್ಗೆ ಪ್ರಸ್ತಾಪಿಸಿಲ್ಲ-ರೈತ ಹೋರಾಟ ಮುಂದುವರೆದಿದೆ: ಕೋಡಿಹಳ್ಳಿ ಚಂದ್ರಶೇಖರ್
ಕೇಂದ್ರ ಸರ್ಕಾರದ ಮೂರು ಕಪ್ಪು ಕಾನೂನುಗಳು ರೈತರನ್ನು ಬಿಕ್ಕಟ್ಟಿಗೆ ಸಿಲುಕಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ನಗದೀಕರಣ ಯೋಜನೆ ಹೆಸರಿನಲ್ಲಿ ರೈಲ್ವೆ ನಿಲ್ದಾಣಗಳು, ರೈಲ್ವೆ ಮಾರ್ಗಗಳು, ಟೆಲಿಕಾಂ, ತೈಲ, ಅನಿಲ, ವಿಮೆ, ಬ್ಯಾಂಕುಗಳು, ವಿಮಾನ ನಿಲ್ದಾಣ ಮತ್ತು ಬಂದರುಗಳನ್ನು ಮಾರಾಟ ಮಾಡುತ್ತಿದೆ. ಸರ್ಕಾರವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಯೋಜಿಸಿದೆ ಸರಕಾರದ ಇಂತಹ ನೀತಿಗಳ ವಿರುದ್ಧ ರೈತ ಕಾರ್ಮಿಕರು ಭಾರತ್ ಬಂದ್ ನಡೆಸುತ್ತಿವೆ.
ಭಾರತ್ ಬಂದ್ ಕೇವಲ ರೈತರಿಗಷ್ಟೇ ಸೀಮಿತವಲ್ಲ. ಜನಸಾಮಾನ್ಯರ ವಿಷಯಗಳನ್ನೂ ಒಳಗೊಂಡಿದೆ. ಕೊರೊನಾ ಸಂಕಷ್ಟದಿಂದ ಜನರು ಉದ್ಯೋಗಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಎಣ್ಣೆ, ದಿನಸಿ ಬೆಲೆಗಳು ಮಧ್ಯಮ ವರ್ಗವನ್ನೂ ಬಡವರನ್ನಾಗಿಸಿದೆ. ಬಡವರು ಅತೀ ಬಡವರಾದ ಸ್ಥಿತಿಯಲ್ಲಿದ್ದಾರೆ. ಭಾರತ್ ಬಂದ್ ನಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂಬ ಒತ್ತಡವು ಇದೆ.
ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಕಾಯ್ದೆಯಲ್ಲಿ ತಿದ್ದುಪಡಿ ತರುವುದು ಬೇಡ. ಸಂಪೂರ್ಣ ರದ್ದು ಮಾಡಿ ಎಂಬುದು ರೈತ ಸಂಘಟನೆಗಳ ಬೇಡಿಕೆಯಾಗಿದೆ. ಸರ್ಕಾರದ ಪ್ರತಿನಿಧಿಗಳು ರೈತ ಸಂಘಟನೆಗಳ ಜೊತೆ ನಡೆಸಿದ 11 ಸಭೆಗಳು ಸಹ ವಿಫಲವಾಗಿವೆ.
ಬೆಂಗಳೂರಿನ ಪ್ರಮುಖ ಹೆದ್ದಾರಿ ಸೇರಿದಂತೆ ರಾಜ್ಯದ್ಯಾಂತ ಹೆದ್ದಾರಿ ತಡೆ. ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ‍್ಯಾಲಿ. ಒಟ್ಟು 700ಕ್ಕೂ ಹೆಚ್ಚು ಕ್ಯಾಂಟರ್ ವಾಹನದಲ್ಲಿ ನಗರದಲ್ಲಿ ಭಾಗವಹಿಸಲು ನಿರ್ಧರಿಸಿವೆ.