ಬೆಂಗಳೂರು : ವಿಧಾನಸಭೆ ಚುನಾವಣೆ 2023 ಸಮೀಪಿಸುತ್ತಲಿದ್ದು ಕೇಂದ್ರ ಚುನಾವಣಾ ಆಯೋಗವು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಜೊತೆಗೆ ಈ ಬಾರಿ ಮತದಾರರಿಗೆ ಮತವನ್ನು ಚಲಾವಣೆ ಮಾಡಲು ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಹಲವಾರು ಹೊಸ-ಹೊಸ ಪ್ರಯೋಗಗಳತ್ತ ಚುನಾವಣಾ ಆಯೋಗ ಕೈಹಾಕುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸುವಂತಹ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮನೆಯಿಂದಲೇ ಮತದಾನವನ್ನು ಮಾಡಬಹುದೆಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ 2018 ರಲ್ಲಿ ಹಿರಿಯ ಮತದಾರರ ಸಂಖ್ಯೆ 9.17 ಲಕ್ಷ ಇದ್ದು ಈ ಬಾರಿ 12.15 ಲಕ್ಷ ಜನ ಮತದಾರರು ಇದ್ದು ಮತದಾರರ ಏರಿಕೆಯ ಪ್ರಮಾಣ ಶೇ. 32.5ರಷ್ಟಿದೆ. ಇದರ ಜೊತೆಗೆ ವಿಶೇಷಚೇತನರ ಮತದಾರರ ಸಂಖ್ಯೆ 5.55 ಲಕ್ಷ ಇದ್ದು, 2018ರಲ್ಲಿ ಇವರ ಸಂಖ್ಯೆ 2.15 ಲಕ್ಷ ಮಾತ್ರ ಇತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವುದಾದರೆ ಅಂತವರು ಅಧಿಸೂಚನೆಯ ಐದು ದಿನಗಳಲ್ಲಿ ಫಾರ್ಮ್ 12D ಲಭ್ಯವಿರುತ್ತದೆ. ಇದರಿಂದಾಗಿ ಯಾವುದೇ 80 ವರ್ಷಕ್ಕಿಂತ ಮೇಲ್ಪಟ್ಟ ಅಥವಾ ಅಂಗವಿಕಲ ಮತದಾರರು, ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.
ರಾಜ್ಯವು 224 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಇವುಗಳ ಪೈಕಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ 15 ಕ್ಷೇತ್ರಗಳು ಪ.ಪಂಗಡಕ್ಕೆ ಮೀಸಲಾಗಿವೆ. ಇನ್ನು ರಾಜ್ಯದಲ್ಲಿ ಮತ ಚಲಾಯಿಸುವವರ ಸಂಖ್ಯೆಯನ್ನು ಗಮನಿಸುವುದಾದರೆ ರಾಜ್ಯವು ಒಟ್ಟು 5,21,76,579 ಮತದಾರರನ್ನು ಹೊಂದಿದ್ದು ಇದರಲ್ಲಿ 2,62,42,561 ಸಂಖ್ಯೆಗಳಷ್ಟು ಮಹಿಳಾ ಮತದಾರರಿದ್ದರೆ 2,59,26,319 ರಷ್ಟು ಪುರುಷ ಮತದಾರರಿದ್ದಾರೆ ಹಾಗೂ 41,312 ರಷ್ಟು ತೃತೀಯ ಲಿಂಗಿ ಮತದಾರರಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ, 5,55,073 ರಷ್ಟು ವಿಕಲ ಚೇತನರು, 12,15,763 ರಷ್ಟು ಜನರು 80ರ ಪ್ರಾಯದವರು ಹಾಗೂ 16,976 ನೂರರ ಪ್ರಾಯವನ್ನು ದಾಟಿದ ಹಿರಿಯರು ನೋಂದಾಯಿತರಾಗಿದ್ದಾರೆ. ಈ ಬಾರಿ 9,17,241 ರಷ್ಟು ಜನರು ಮೊದಲ ಬಾರಿ ಮತದಾನಕ್ಕೆ ಕಾಲಿಡಲಿದ್ದಾರೆ (18-19 ವಯೋಮಾನದವರು). ನಗರ ಪ್ರದೇಶಗಳಲ್ಲಿನ 24063 ಮತಗಟ್ಟೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 58,272 ಮತಗಟ್ಟೆಗಳಿವೆ.
ಈಗಾಗಲೇ ಭಾರತೀಯ ಚುನಾವಣಾ ಪ್ರಾಧಿಕಾರವು ಮತದಾನವು ಯಾವ ಅಡೆ-ತಡೆ, ಗೊಂದಲಗಳಿಲ್ಲದ ಸರಾಗವಾಗಿ ಸಾಗಬೇಕೆಂಬ ದೃಷ್ಟಿಯಿಂದ ಸುವಿಧಾ ಎಂಬ ವೆಬ್ ಪೋರ್ಟಲ್ ಹಾಗೂ ಸಕ್ಷಮ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿ ಚಾಲನೆ ನೀಡಿದೆ. ಈ ಎರಡೂ ಸೌಲಭ್ಯಗಳನ್ನು ಮತದಾರರು ಹಾಗೂ ಅಭ್ಯರ್ಥಿಗಳು ಬಳಸಬಹುದಾಗಿದೆ.