ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ನಿಧನ

ಉಡುಪಿ: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕ ಹಾಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್(80) ಮಂಗಳೂರಿನ ಯೆನೆಪೊಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಕರಾವಳಿಯ ಕಾಂಗ್ರೆಸ್ಸಿಗರಿಗೆ ‘ಹೈಕಮಾಂಡ್’ ಆಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಪುತ್ರ ಹಾಗೂ ಪುತ್ರಿಯೊಂದಿಗೆ ಅಪಾರ ಸಂಖ್ಯೆಯ ಬಂಧುಮಿತ್ರರು, ನಿಕಟವರ್ತಿಗಳು, ಅಭಿಮಾನಿಗಳು ಹಾಗೂ ಹಿಂಬಾಲಕರನ್ನು ಅಗಲಿದ್ದಾರೆ.

ಕೆಲವು ದಿನಗಳ ಹಿಂದೆ ಆಸ್ಕರ್ ಫರ್ನಾಂಡಿಸ್ ಯೋಗ ಮಾಡುವಾಗ ತಲೆ ಪೆಟ್ಟು ಬಿದ್ದಿತ್ತು. ಯೇನೆಪೋಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಅವರಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ನಂತರ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಇದನ್ನು ಓದಿ: ಎತ್ತಿನಗಾಡಿಯ ಮೂಲಕ ಅಧಿವೇಶನಕ್ಕೆ ಬಂದ ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್

ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾದ ನಂತರ ಕುಟುಂಬದವರನ್ನು ಕರೆ ಮಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ‌ ಹಲವರು ಮಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಐದು ದಶಕಗಳ ರಾಜಕೀಯ ಬದುಕಿ ಜೀವನದಲ್ಲಿ ಆಸ್ಕರ್ ಫೆರ್ನಾಂಡಿಸ್ ಸತತ ಐದು ಬಾರಿ ಉಡುಪಿಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಲ್ಲದೆ 1998ರಿಂದ ಸತತ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 2016ರ ಜುಲೈನಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾದ ಇವರ ಸದಸ್ಯತ್ವ ಅವಧಿ 2022ರ ಜೂ.30ರವರೆಗೆ ಇತ್ತು.

2006ರ ಅಕ್ಟೋಬರ್‌ 24ರಿಂದ 2009ರ ಮಾರ್ಚ್‌ 2ರವರೆಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿ ಅಧಿಕಾರ ನಿರ್ವಹಿಸಿದ್ದರು. ಆದರೆ ಇದಕ್ಕೂ ಮುನ್ನ ಅವರು ಯುಪಿಎ ಸರಕಾರದ ಎರಡೂ ಅವಧಿಗಳಲ್ಲಿ 2004ರಿಂದ 2009ರವರೆಗೆ- ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಪಕ್ಷದ ಕೆಲಸಗಳಿಗೆ ನಿಯೋಜಿತರಾಗಿದ್ದರು. ಮತ್ತೊಮ್ಮೆ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2ರ ಅಧಿಕಾರಾವಧಿಯಲ್ಲಿ ಅವರು ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

ಉಡುಪಿಯಲ್ಲಿ 1972ರಲ್ಲಿ ಉಡುಪಿ ಪುರಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ್ದ ಆಸ್ಕರ್ ಫರ್ನಾಂಡಿಸ್‌, 1980ರಲ್ಲಿ ತನ್ನ ರಾಜಕೀಯ ಗುರು ಟಿ.ಎ.ಪೈ ಅವರನ್ನೇ ಮಣಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡರು. ನಂತರ ಸತತ ಐದು ಬಾರಿ ಸಂಸತ್ ಸದಸ್ಯರಾಗಿ ಉಡುಪಿಯಲ್ಲಿ ಚುನಾಯಿತರಾಗಿದ್ದ, ಅವರು ನಂತರ ನಾಲ್ಕು ಬಾರಿ ರಾಜ್ಯಸಭಾ ಸದಸ್ಯದರು.

ಇದನ್ನು ಓದಿ: ಸರಕಾರದಿಂದ ದಿನವೂ ಜನರನ್ನು ಲೂಟಿ ಮಾಡುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಆಸ್ಕರ್ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನಲ್ಲಿ ಚಿಕಿತ್ಸೆಯಲ್ಲಿದ್ದರು.

ಪರಿಚಯ:
1941ರ ಮಾರ್ಚ್‌ 27ರಂದು ಉಡುಪಿಯಲ್ಲಿ ಅಂದಿನ ಜನಪ್ರಿಯ ಶಿಕ್ಷಕರಾಗಿದ್ದ ರಾಕಿ ಫೆರ್ನಾಂಡಿಸ್ ಹಾಗೂ ಲಿಯೋನಿಸ್ಸಾ ಫೆರ್ನಾಂಡಿಸ್ ದಂಪತಿಯ 12 ಮಂದಿ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದ ಆಸ್ಕರ್, ಒಬ್ಬ ಕಟ್ಟಾ ಕೆಥೊಲಿಕ್ ಹಿನ್ನೆಲೆಯಿಂದ ಬಂದವರು. ಆಸ್ಕರ್ ಎಳೆಯ ಪ್ರಾಯದಿಂದಲೂ ಚರ್ಚ್‌ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತಿದ್ದರು. ಮೂಲತಃ ಉದ್ಯಾವರ ದವರಾದ ಫೆರ್ನಾಂಡಿಸ್ ಕುಟುಂಬ ಉಡುಪಿಯ ಬ್ರಹ್ಮಗಿರಿಯಲ್ಲಿ ನೆಲೆಸಿತ್ತು. ಅವರ ಮನೆ (ಡೋರಿಸ್ ರೆಸ್ಟ್ ಹೆವನ್) ಈಗಲೂ ಇದ್ದು, ಅದೇ ಆಸ್ಕರ್ ಅವರ ಉಡುಪಿಯ ವಿಳಾಸವಾಗಿ ಗುರುತಿಸಲ್ಪಡುತ್ತಿದೆ.

ಆರಂಭದಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡ ಆಸ್ಕರ್ ಅವರ ಆ ಪಕ್ಷದೊಂದಿಗಿನ ನಂಟು ಆರು ದಶಕಗಳದ್ದಾಗಿದೆ. ಆಸ್ಕರ್ ಮೊದಲು ಎಲ್‌ಐಸಿಯಲ್ಲಿ ಕೆಲ ಕಾಲ ದುಡಿದಿದ್ದರು. ರಾಜಕೀಯ ಸೆಳೆತ ಹೆಚ್ಚಾದಾಗ ಅವರು ಕೆಲಸಕ್ಕೆ ರಾಜೀನಾಮೆ ನೀಡಿ 1972ರಲ್ಲಿ ನಗರಸಭಾ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಇದೇ ಅವಧಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡು ರಿಕ್ಷಾ ಯೂನಿಯನ್‌ನ ಅಧ್ಯಕ್ಷರಾಗಿ ಜನಪ್ರಿಯರಾದರು. ಈಗಲೂ ಅವರು ಉಡುಪಿಯ ಒಂದು ರಿಕ್ಷಾ ಯೂನಿಯನ್‌ನ ಗೌರವ ಅಧ್ಯಕ್ಷರಾಗಿದ್ದರು.

1980ರಲ್ಲಿ ಕೇಂದ್ರ ಸಚಿವರಾಗಿದ್ದ ಟಿ.ಎ.ಪೈ ಅವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸೆಣಸಿ, ಗುರುವನ್ನೇ ಮಣಿಸಿದ ಆಸ್ಕರ್ ಫೆರ್ನಾಂಡಿಸ್, ಒಮ್ಮೆ ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿಸಿಕೊಂಡ ಬಳಿಕ ಹಿಂದಿರುಗಿ ನೋಡಿಲ್ಲ. 1980, 1984, 1989, 1991 ಹಾಗೂ 1996ರಲ್ಲಿ ಸತತವಾಗಿ ಅವರು ಲೋಕಸಭೆಯಲ್ಲಿ ಉಡುಪಿಯನ್ನು ಪ್ರತಿನಿಧಿಸಿದರು. ಈ ಸಂದರ್ಭದಲ್ಲೇ ಅವರು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕುಟುಂಬಕ್ಕೆ ನಿಕಟರಾಗಿ, ಅದೇ ಸೌಹಾರ್ದ, ಸ್ನೇಹತ್ವವನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರು. ರಾಷ್ಟ್ರೀಯ ರಾಜಕೀಯದಲ್ಲಿ ಅವರು ಒಂದು ಶಕ್ತಿ ಎಂದು ಪರಿಗಣಿಸಲು ಸೋನಿಯಾ ಕುಟುಂಬದೊಂದಿಗಿನ ಸಾಮಿಪ್ಯ ಮುಖ್ಯ ಕಾರಣವಾಗಿದೆ.

ಒಮ್ಮೆ ಐ.ಎಂ.ಜಯರಾಂ ಶೆಟ್ಟಿ ಅವರ ವಿರುದ್ಧ ಚುನಾವಣೆಯಲ್ಲಿ ಉಡುಪಿಯಲ್ಲಿ ಅನಿರೀಕ್ಷಿತ ಸೋಲನನುಭವಿಸಿದ ಬಳಿಕ ಆಸ್ಕರ್ ಚುನಾವಣಾ ರಾಜಕೀಯದಿಂದ ದೂರವುಳಿದರು. ಉಡುಪಿಯ ರಾಜಕೀಯವನ್ನು ತೊರೆದು ಅವರು ರಾಷ್ಟ್ರ ರಾಜಕೀಯದಲ್ಲೇ ಹೆಚ್ಚು ಸಕ್ರಿಯರಾಗಿ, ಅದರಲ್ಲೇ ವ್ಯಸ್ತರಾದರೂ, ಜಿಲ್ಲೆಯಲ್ಲಿ ಪಕ್ಷದ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡದ ಕಾಂಗ್ರೆಸ್ ಆಸ್ಕರಣ್ಣ ಅವರನ್ನೇ ‘ಹೈಕಮಾಂಡ್’ ಎಂದು ಪರಿಗಣಿಸುತ್ತಿತ್ತು.

1998ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು. 2004ರಲ್ಲಿ ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆಯಾಗಿ, ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅವರು 2004ರಿಂದ 2009ರವರೆಗೆ ವಿವಿಧ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಅವರು ಅಂಕಿಅಂಶ, ಕಾರ್ಯಕ್ರಮ ಅನುಷ್ಠಾನ ಸಚಿವ, ಅನಿವಾಸಿ ಭಾರತೀಯ ವ್ಯವಹಾರ, ಯುವಜನ ಸೇವೆ ಮತ್ತು ಕ್ರೀಡೆ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2009ರಲ್ಲಿ ಪಕ್ಷದ ಕಾರ್ಯಕ್ಕೆ ನಿಯೋಜಿಸಲ್ಪಟ್ಟು ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾದ ಅವರು ಪಕ್ಷದ ಜವಾಬ್ದಾರಿಯಿಂದ ಮುಕ್ತಿ ಪಡೆದು ಮತ್ತೆ ಸಚಿವರಾಗಿ ನಿಯೋಜಿತ ರಾಗಿದ್ದರು.

ಆಸ್ಕರ್ ರಾಜಕೀಯ ಜೀವನದ ಕೆಲವು ಪ್ರಮುಖ ಘಟ್ಟಗಳು:
ಜನನ: 1941ರ ಮಾರ್ಚ್ 27
1972-76: ಉಡುಪಿ ನಗರಸಭಾ ಸದಸ್ಯ
1980-84: ಮೊದಲ ಬಾರಿ ಏಳನೇ ಲೋಕಸಭೆಗೆ ಉಡುಪಿ ಸದಸ್ಯರಾಗಿ ಆಯ್ಕೆ
1983: ಎಐಸಿಸಿಯ ಜಂಟಿ ಕಾರ್ಯದರ್ಶಿ
1984ರ ಡಿ.-1985ರ ಜೂ.: ಪ್ರಧಾನ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ
1985ರಿಂದ 1996ರಿಂದ: ಎಐಸಿಸಿ ಪ್ರಧಾನ ಕಾರ್ಯದರ್ಶಿ
1985-89: ಎಂಟನೇ ಲೋಕಸಭೆಗೆ ಉಡುಪಿಯಿಂದ ಆಯ್ಕೆ
1986: ಕೆಪಿಸಿಸಿ ಅಧ್ಯಕ್ಷ
1989-91: 9ನೇ ಲೋಕಸಭೆಗೆ ಉಡುಪಿಯಿಂದ ಆಯ್ಕೆ
1991-96: 10ನೇ ಲೋಕಸಭೆಗೆ ಉಡುಪಿಯಿಂದ ಆಯ್ಕೆ
1996-97:11ನೇ ಲೋಕಸಭೆಗೆ ಉಡುಪಿಯಿಂದ ಆಯ್ಕೆ
1998: ರಾಜ್ಯಸಭೆಗೆ ಆಯ್ಕೆ
1998-99: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿಯ ಸದಸ್ಯ
1999-2004: ಕೃಷಿ ಸಲಹಾ ಸಮಿತಿ ಸದಸ್ಯ
2000-2004: ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಸಲಹಾ ಸಮಿತಿಯ ಸದಸ್ಯ. ಹಾಗೂ ಎಚ್‌ಐವಿ-ಏಡ್ಸ್‌ನ  ಸಂಸದೀಯ ಪೋರಂನ ಸಂಚಾಲಕ
2004 ಮೇ-2006 ಜ.: ಕೇಂದ್ರದ ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಖಾತೆ)
2005 ನ.18ರಿಂದ 2006ರ ಜ.29: ಯುವಜನ ಸೇವಾ ಮತ್ತು ಕ್ರೀಡಾ ಸಚಿವ (ಸ್ವತಂತ್ರ)
2004: ರಾಜ್ಯಸಭೆಗೆ ಪುನರಾಯ್ಕೆ
2006ರ ಜ.29ರಿಂದ 2006ರ ಅ.24: ಖಾತೆರಹಿತ ಸಚಿವ
2006ರ ಅ.24ರಿಂದ 2009ರ ಮಾ.2: ಕಾರ್ಮಿಕ ಮತ್ತು ಉದ್ಯೋಗ ಸಚಿವ.
2009-2012: ರಾ. ಸಣ್ಣ, ಅತಿಸಣ್ಣ ಹಾಗೂ ಮದ್ಯಮ ಕೈಗಾರಿಕಾ ಮಂಡಳಿಯ ಸದಸ್ಯ
2010ರಿಂದ: ರಾಜ್ಯಸಭೆಗೆ ಮೂರನೇ ಬಾರಿ ಆಯ್ಕೆ. ಕಾಫಿ ಮಂಡಳಿ ಸದಸ್ಯ, ಅಲ್ಪಸಂಖ್ಯಾತ ಶಿಕ್ಷಣ ರಾ.ಸಮಿತಿಯ ಸದಸ್ಯ
2013ರ ಜೂ.17ರಿಂದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ
2016 ಜು.1: ಸತತ ನಾಲ್ಕನೇ ಬಾರಿಗೆ ರಾಜ್ಯಸಭೆಗೆ ಆಯ್ಕೆ

Donate Janashakthi Media

Leave a Reply

Your email address will not be published. Required fields are marked *