ಹಿರಿಯ ಕಲಾವಿದ ಉದಯ್ ಹುತ್ತಿನಗದ್ದೆ ಇನ್ನಿಲ್ಲ

ಬೆಂಗಳೂರು: ಚಿತ್ರರಂಗದ ಹಿರಿಯ ಕಲಾವಿದ ಉದಯ್ ಹುತ್ತಿನಗದ್ದೆ(61) ಗುರುವಾರ(ಜೂನ್‌ 02) ಸಂಜೆ ನಿಧನರಾಗಿದ್ದಾರೆ.  ಮಾಗಡಿ ರಸ್ತೆಯಲ್ಲಿ ಅವರು ವಾಸವಾಗಿದ್ದರು. ಹಾಗೂ ರಾಜಾಜಿನಗರದ ಬಾಷ್ಯಂ ಸರ್ಕಲ್‌ನಲ್ಲಿ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ್ ಹಲವಾರು ದಶಕಗಳಿಂದ ವೃತ್ತಿಪರ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಅವರು ಅದರಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಡಾ.ರಾಜ್‌ಕುಮಾರ್ ಅವರು ಅಭಿನಯಿಸಿದ್ದ ‘ದೇವತಾ ಮನುಷ್ಯ’ ಚಿತ್ರದಲ್ಲಿ ಸುಧಾರಾಣಿ ಅವರ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದ್ದರು. ತಮ್ಮ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆ ಗ್ರಾಮದವರಾಗಿದ್ದರು. ಮೈಸೂರು ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದು, ನಂತರ ಡಾ.ರಾಜ್‌ಕುಮಾರ್, ಶಂಕರ್ ನಾಗ್, ಅಂಬರೀಶ್, ಡಾ. ವಿಷ್ಣುವರ್ಧನ್ ಸೇರಿದಂತೆ ಅನೇಕ ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಅಲ್ಲದೇ, ಅಭಿನಯ ತರಂಗ ನಟನಾ ಶಾಲೆಯಲ್ಲಿ ತರಬೇತಿ ಪಡೆದು, ರಂಗಕರ್ಮಿ ಕೂಡ ಆಗಿದ್ದರು

1987 ರಲ್ಲಿ ತೆರೆಕಂಡಿದ್ದ ತಮ್ಮ ನಿರ್ಮಾಣದ ‘ಆರಂಭ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಉದಯ್ ಹುತ್ತಿನಗದ್ದೆ ಕಾಲಿಟ್ಟರು. ‘ಅಗ್ನಿಪರ್ವ’, ‘ಶುಭ ಮಿಲನ’ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದರು.

ʻಆರಂಭʼ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಉದಯ್ ಹುತ್ತಿನಗದ್ದೆ ಅವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ತಮ್ಮ ಪ್ರತಿಭೆಯಿಂದ ಅಪಾರ ಜನಮನ್ನಣೆ ಗಳಿಸಿದ್ದ ಉದಯ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *