ಸೇನೆಗೆ ಗುತ್ತಿಗೆಯಾಧಾರಿತ ನೇಮಕ-ಅಗ್ನಿಪಥ್ ಯೋಜನೆಗೆ ಡಿವೈಎಫ್ಐ ಖಂಡನೆ

ಸಶಸ್ತ್ರ ಪಡೆಗಳ ಘನತೆಯನ್ನು ಖಾತ್ರಿಪಡಿಸುವ ರೀತಿಯಲ್ಲಿ ನೇಮಕಾತಿಯನ್ನು ನಡೆಸಲು ಒತ್ತಾಯ

ಬೆಂಗಳೂರು: ಭಾರತೀಯ ಸೇನೆಗೆ ಹೊಸದಾಗಿ ಸೈನಿಕರನ್ನು ಆಯ್ಕೆ ಮಾಡಲು ನೇಮಕಾತಿ ಅಭಿಯಾನ ನಡೆದು ಈಗಾಗಲೇ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಆದರೆ ರಕ್ಷಣಾ ಸಚಿವಾಲಯದ ಮಾಹಿತಿಯಂತೆ ಸೇನೆಯಿಂದ ನಿವೃತ್ತರಾಗುವ ಸೈನಿಕರ ಸಂಖ್ಯೆ ಕಡಿಮೆಯಾಗಿಲ್ಲ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವು ವೃತ್ತಿಪರ ಸೈನ್ಯವನ್ನು ಬೆಳೆಸುವ ಬದಲು, ಪಿಂಚಣಿ ಹಣವನ್ನು ಉಳಿಸಲು ‘ಒಪ್ಪಂದದ ಮೇಲೆ ಸೈನಿಕರನ್ನು ನೇಮಕ’ ಪ್ರಸ್ತಾಪಿಸುವ ರಾಷ್ಟ್ರವಿರೋಧಿ ಯೋಜನೆಯನ್ನು ಡಿವೈಎಫ್‌ಐ ಖಂಡಿಸಿದೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಕರ್ನಾಟಕ ರಾಜ್ಯ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘ಅಗ್ನಿಪಥ್’ ಯೋಜನೆಯನ್ನು ಘೋಷಿಸಿದ್ದು, ಅದರ ಮೂಲಕ ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳಲಾಗುವುದು. ಆದರೆ ಈ ಕ್ರಮ ದೇಶದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಸಿಗಲು ಸಾಧ್ಯವೇ ಇಲ್ಲವೆಂಬುದನ್ನು ಈ ಯೋಜನೆಯೇ ಸಾರುತ್ತಿದೆ. ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನರ ನೇಮಕಾತಿಯನ್ನು ಸರ್ಕಾರವು ʻಮಿಷನ್ ಮೋಡ್‌ʼನಲ್ಲಿ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಣೆ ಮಾಡಿದ್ದಾರೆ. ಆದರೆ ಈ ಹಿಂದೆ ನರೇಂದ್ರ ಮೋದಿಯವರು ನೀಡಿದ ಭರವಸೆಗಳ ಈಡೇರದೆ ಹಾಗೇ ಉಳಿದಿವೆ. ಇದು ಈಗಾಗಲೇ ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನರನ್ನು ಅಣಕಿಸುವ ಹೇಳಿಕೆಯಂತೆ ಕಾಣುತ್ತದೆಯೇ ವಿನಃ, ದೇಶದ ನಿರುದ್ಯೋಗಿ ಯುವಜನರ ಮೇಲಿನ ನೈಜ ಕಾಳಜಿಯ ಹಾಗೂ ಕಾರ್ಯಗತವಾಗುವ ಯೋಜನೆಯಾಗಿಯಂತೂ ಅಲ್ಲ ಎಂದು ಆರೋಪಿಸಿದ್ದಾರೆ.

ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಅದರ ಜೊತೆಗೆ, ಪ್ರತಿ ವರ್ಷ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಕಳೆದ ವರ್ಷಗಳಲ್ಲಿ ನೇಮಕಾತಿಯಲ್ಲಿನ ವಿಫಲತೆಯಿಂದಾಗಿ ಭಾರತೀಯ ಸೇನೆಯ ಕಾರ್ಯಾಚರಣೆಗಳಲ್ಲಿ ಅಪಾಯಗಳು ಎದುರಾದವು. ಮಾತ್ರವಲ್ಲದೆ, ವರ್ಷಗಟ್ಟಲೇ ಉದ್ಯೋಗದ ಹುಡುಕಾಟ ಹಾಗೂ ಸೇನೆ ಸೇರುವ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಡಿವೈಎಫ್‌ಐ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ್‌ ಅವರು, ಘೋಷಣೆ ಮಾಡಲಾಗಿರುವ ಅಗ್ನಿಪಥ್ ಯೋಜನೆಯ ಮೂಲಕ ಸಶಸ್ತ್ರ ಪಡೆಗಳಲ್ಲಿ ಗುತ್ತಿಗೆ ಉದ್ಯೋಗಗಳನ್ನು ಪರಿಚಯಿಸಲು ಕೇಂದ್ರ ಸಂಪುಟವು ಆಸಕ್ತಿ ತೋರುತ್ತಿದೆ. ಅಗ್ನಿವೀರ್‌ಗಳನ್ನು 4 ವರ್ಷಗಳ ಅವಧಿಗೆ ಮಾತ್ರ ಆಯಾ ಸೇವಾ ಕಾಯಿದೆಗಳ ಅಡಿಯಲ್ಲಿ ನೋಂದಾಯಿಸಲಾಗುತ್ತದೆ ಎಂದಿದ್ದಾರೆ.

ಅದರೊಂದಿಗೆ, ನೇಮಕಗೊಂಡವರಿಗೆ ಒಂದು ಬಾರಿ ‘ಸೇವಾನಿಧಿ’ ಪ್ಯಾಕೇಜ್ ಅನ್ನು ಪಾವತಿಸಲಾಗುತ್ತಾದರೂ, ಅದು ಅವರಿಂದ ತಡೆಹಿಡಿಯಲಾಗುವ ಸಂಬಳದ ಒಂದು ಭಾಗವನ್ನು ಮತ್ತು ಸರ್ಕಾರದಿಂದ ಕೊಡುಗೆಯಾಗಿ ನೀಡುವ ಭಾಗವನ್ನು ಕೂಡ ಒಳಗೊಂಡಿರುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ ಎಂಬುದನ್ನು ಗಮನಿಸಬೇಕು. ಯಾವುದೇ ಕ್ಷೇತ್ರದಲ್ಲಿ ಉದ್ಯೋಗಿಗಳ ಗುತ್ತಿಗೆ ಪದ್ಧತಿಯು ಕಾರ್ಮಿಕರಿಗೆ ಖಾತರಿಪಡಿಸಬೇಕಾದ ಹಕ್ಕುಗಳಿಗೆ ಬೆದರಿಕೆಯಾಗಿ ನೋಡುವ ಸ್ಥಿತಿಯಾಗಿದೆ. ಸಶಸ್ತ್ರ ಪಡೆಗಳ ವಿಷಯದಲ್ಲಿ ವರ್ಷಗಳ ತರಬೇತಿ ಮತ್ತು ಬಲವಾದ ಇಚ್ಛಾಶಕ್ತಿಯನ್ನು ಬೇಡುವ ಕೆಲಸವು ಗುತ್ತಿಗೆಯಾಧಾರದಲ್ಲಿ ನೇಮಕಾತಿ ನಡೆದರೆ ಪಡೆಗಳ ಗುಣಮಟ್ಟ ಕುಸಿಯಲು ಕಾರಣವಾಗುತ್ತದೆ. ಅದರೊಂದಿಗೆ ನೇಮಕಗೊಂಡವರ ಹಕ್ಕುಗಳೂ ಪ್ರಶ್ನಾರ್ಥಕ ಚಿಹ್ನೆಯಾಗಿರುತ್ತವೆ ಎಂದರು.

ದೇಶದ ಯುವಜನರ ಕಲ್ಯಾಣ ಮತ್ತು ರಾಷ್ಟ್ರದ ಸಾರ್ವಭೌಮತ್ವದ ಹಿತದೃಷ್ಟಿಯಿಂದ ಒಕ್ಕೂಟ ಸರಕಾರವು ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು. ಸಶಸ್ತ್ರ ಪಡೆಗಳ ಘನತೆಯನ್ನು ಖಾತ್ರಿಪಡಿಸುವಂತೆ ನೇಮಕಾತಿಯನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ಒತ್ತಾಯಿಸಿದೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಸವಾಲಾಗುವ ಈ ಯೋಜನೆಯನ್ನು ಪ್ರತಿರೋಧಿಸಲು ದೇಶದ ಯುವಜನರು ಮುಂದಾಗಬೇಕೆಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *