ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ನಿರ್ಧಾರ ಕೈಬಿಡದಿದ್ದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ: ಎಚ್ಚರಿಕೆ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ವಾಸಿಸುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದೆ. ಸರ್ಕಾರ ತನ್ನ ತೀರ್ಮಾನ ಕೈಬಿಡದಿದ್ದರೆ ಆದಿವಾಸಿಗಳು ಬದುಕುವ ಹಕ್ಕುಗಳ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕ ಎಚ್ಚರಿಕೆ ನೀಡಿದೆ.

ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಆದಿವಾಸಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡುವುದು ಮೀನನ್ನು ನೀರಿನಿಂದ ಮೇಲಕ್ಕೆ ತೆಗೆದಂತೆ. ಮಾನವ- ಕಾಡುಪ್ರಾಣಿ ಸಂಘರ್ಷ ತಪ್ಪಿಸಲು ಇಂತಹ ಮೂರ್ಖತನದ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ರವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು ಎಂದು ಸಂಚಾಲಕ ಶೇಖರ್ ಲಾಯಿಲ ಆರೋಪಿಸಿದ್ದಾರೆ.

ಇದನ್ನೂ ಓದಿ: ನವದೆಹಲಿ | ಫೆಬ್ರವರಿ 12ರಂದು ದೇಶವ್ಯಾಪಿ ಸಾಮಾನ್ಯ ಮುಷ್ಕರ ನಾಲ್ಕು ಲೇಬರ್ ಕೋಡ್‌ಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ

ಅರಣ್ಯದ ಮಕ್ಕಳನ್ನು ಒಕ್ಕಲೆಬ್ಬಿಸುವ ಬದಲಾಗಿ ಅವರಿಗೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿರ್ಧಾರ ತೆಗೆದುಕೊಳ್ಳಲಿ. ಅಮಾಯಕ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಮೀಸಲಿಟ್ಟ 300 ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟು ವಿದ್ಯುತ್ , ರಸ್ತೆಯಂತಹ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಸರ್ಕಾರಗಳು ನಿರ್ದಾಕ್ಷಿಣ್ಯವಾಗಿ , ಬಲವಂತವಾಗಿ , ದಬ್ಬಾಳಿಕೆಯ ಮೂಲಕ ಒಕ್ಕಲೆಬ್ಬಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದರು.

ಇದರಿಂದ ಆಗುವ ಎಲ್ಲಾ ಅನಾಹುತಗಳಿಗೆ ಸರ್ಕಾರ ಹೊಣೆಯಾಗಬೇಕಾಗುತ್ತದೆ. ಹಿಂದೊಮ್ಮೆ ಒಕ್ಕಲೆಬ್ಬಿಸಲು ಹೊರಟು ನಕ್ಸಲ್ ಚಟುವಟಿಕೆಗಳನ್ನು ತಾನಾಗಿಯೇ ಆಹ್ವಾನಿಸಿಕೊಂಡ ಸರ್ಕಾರಗಳು ಈಗ ಮತ್ತೆ ಒಕ್ಕಲೆಬ್ಬಿಸಲು ಹೊರಟು ಯಾವ ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿರುವ ಅವರು ಬೆಂಕಿಯೊಂದಿಗೆ ಸರಸ ಸಲ್ಲಾಪ ಬೇಡ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !

Donate Janashakthi Media

Leave a Reply

Your email address will not be published. Required fields are marked *