ದ್ವಿತೀಯ ಪಿಯುಸಿ ಪರೀಕ್ಷೆ ಈಗ ಮತ್ತಷ್ಟು ಸುಲಭ!

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿಶೇಷ ಕ್ರಮಕ್ಕೆ ಮುಂದಾಗಿದ್ದು, ಈ ಬಾರಿಯ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲ ವಿಷಯಗಳಲ್ಲೂ 1 ಅಂಕದ 20 ಬಹುಮಾದರಿಯ ಪ್ರಶ್ನೆಗಳು ಇರಲಿವೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಯನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ. 10 ಅಂಕಗಳಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ನೀಡಿದೆ.

20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು : 
ಈ ಹಿಂದಿನ ವರ್ಷಗಳಲ್ಲಿ ಈ ಮಾದರಿಯ 5 ಅಥವಾ 6 ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತಿತ್ತು. ಆದರೆ ಈ ಸಲ ಅದನ್ನು ಹೆಚ್ಚಿಸಲಾಗಿದೆ. ಈ 20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು, ಕೆಲವು ಬಿಟ್ಟಸ್ಥಳ ತುಂಬಿರಿ ಮತ್ತು ಹೊಂದಿಸಿ ಬರೆಯಿರಿ ಇತ್ಯಾದಿ ಮಾದರಿಯಲ್ಲಿ ಇರಲಿವೆ. ಈ ಬದಲಾವಣೆ ಹೊರತಾಗಿ ಇನ್ನುಳಿದಂತೆ ಪ್ರಶ್ನೆ ಪತ್ರಿಕೆ ಮಾದರಿಯು ಮೊದಲಿನಂತೆಯೇ ಉಳಿಯುತ್ತದೆ ಎಂದು ಕೆಎಸ್‌ಇಎಬಿಯ ನಿರ್ದೇಶಕ ಗೋಪಾಲಕೃಷ್ಣ ಹೇಳಿದ್ದಾರೆ.

ಅನುತ್ತೀರ್ಣಗೊಳ್ಳುವ ಭಯವಿಲ್ಲ :
ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ. ಬಹು ಆಯ್ಕೆ ಪ್ರಶ್ನೆಗಳಿದ್ದರೆ ಹೆಚ್ಚು ಅಂಕ ತೆಗೆಯಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಈ ಮಾದರಿಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಿದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, 5 ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ. ಒಟ್ಟಾರೆ 80 ಅಂಕಗಳಿಗೆ ವಿಸ್ತ್ರತವಾಗಿ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳಿವೆ. ಇದರಲ್ಲಿ ಸಂದರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆ ಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಿದೆ.

ಹೊಸ ಮಾದರಿಯ ಪ್ರಶ್ನೆಪತ್ರಿಕೆ ಬಿಡುಗಡೆ :
ಅಧಿಕೃತ ಜಾಲತಾಣದಿಂದ ಪ್ರಶ್ನೆ ಪತ್ರಿಕೆಯನ್ನೂ ಸಹ ಡೌನ್ಲೋಡ್​ ಮಾಡಿಕೊಳ್ಳಬಹುದು. ಅಲ್ಲಿ ಈ ಬಾರಿಯ ಹೊಸ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಆ ಕಾರಣದಿಂದ ನೀವೂ ಹೆಚ್ಚಿನ ಅಭ್ಯಾಸವನ್ನು ಮಾಡುವುದಕ್ಕೆ ಇದು ಸಹಾಯವಾಗಲಿದೆ. ಈ ಸಲ 6 ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದಿನಿಂದಲೂ ಪರೀಕ್ಷೆ ಬರೆದವರಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಕಡಿಮೆ ಇದೆ. ಪ್ರತಿ ವರ್ಷ ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 60ಕ್ಕಿಂತ ಮೀರುತ್ತಿಲ್ಲ. ಹೀಗಾಗಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದ ಕೆಲ ರಾಜ್ಯಗಳಲ್ಲಿ ಫಲಿತಾಂಶ ಸುಧಾರಿಸಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿಯೂ ಇಂತದ್ದೊಂದು ಪ್ರಯತ್ನಕ್ಕೆ ಈ ಸಲ ಮುಂದಾಗಲಾಗಿದೆ ಎಂದಿದ್ದಾರೆ.

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ :
ಇತ್ತೀಚಿನ ಪರೀಕ್ಷೆಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ರೇಸ್ ಮಾರ್ಕ್ಸ್ ಸೂತ್ರ, ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಸಹ ಅಂತಿಮಗೊಳಿಸಲಾಗಿದೆ. ವಿದ್ಯಾರ್ಥಿಗಳು ಈ ಹಿಂದೆ ಎರಡು ವಿಷಯಗಳಿಗೆ ಶೇಕಡಾ 5ರಷ್ಟು ಗ್ರೇಸ್ ಮಾರ್ಕ್ಸ್ ಪಡೆಯುತ್ತಾರೆ, ಒಂದು ಭಾಷೆಯಲ್ಲಿ ಮತ್ತು ಇನ್ನೊಂದು ಪ್ರಮುಖ ವಿಷಯದಲ್ಲಿ. ವಿದ್ಯಾರ್ಥಿಗಳು ಯಾವುದೇ ಎರಡು ವಿಷಯಗಳಲ್ಲೂ ಒಂದೇ ರೀತಿ ಗ್ರೇಸ್ ಮಾರ್ಕ್ಸ್ ಪಡೆಯುತ್ತಾರೆ. ಒಟ್ಟು 600 ಅಂಕಗಳಿಗೆ 210 ಮಾರ್ಕ್ಸ್​ ಪಡೆಯುವ ವಿದ್ಯಾರ್ಥಿಯು ಗ್ರೇಸ್ ಅಂಕ ಪಡೆಯಲು ಅರ್ಹನಾಗಿರುತ್ತಾನೆ. ಈ ಬಗ್ಗೆ ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿ, ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆಲವು ನಿಯಮಗಳನ್ನು ಮಾರ್ಪಡಿಸಿದ್ದೇವೆ.
ಗ್ರೇಸ್ ಮಾರ್ಕ್ಸ್, ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳುವುದರಿಂದ ಮತ್ತು ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ ಹೆಚ್ಚುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದೆ. ಇದೇ ಬರುವ ಮಾರ್ಚ್​​ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *