ಎಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸೀಟ್ ಬ್ಲಾಕಿಂಗ್’ ಹಗರಣ ಶಂಕೆ

ಬೆಂಗಳೂರು:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರಸಕ್ತ ಸಾಲಿನ ಕೌನ್ಸೆಲಿಂಗ್‌ನಲ್ಲಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲೇ ಭಾರೀ ಬೇಡಿಕೆಯ ಎಂಜಿನಿಯರಿಂಗ್ ಕೋರ್ಸುಗಳಿಗೆ ಸೀಟು ಸಿಕ್ಕರೂ ಪ್ರವೇಶ ಪಡೆದಿಲ್ಲ. ಇದರ ಹಿಂದೆ ವ್ಯವಸ್ಥಿತ ಜಾಲದಿಂದ ‘ಸೀಟ್ ಬ್ಲಾಕಿಂಗ್’ ಹಗರಣ ನಡೆಸಿರುವ ಅನುಮಾನವಿದ್ದು, ಈ ಸಂಬಂಧ ಕ್ರಿಮಿನಲ್ ದೂರು ದಾಖಲಿಸಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ದಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಸೀಟು ಬ್ಲ್ಯಾಕಿಂಗ್ ಹಗರಣ ಪತ್ತೆಗೆ ವಿದ್ಯಾರ್ಥಿಗಳು ಕೋರ್ಸು, ಕಾಲೇಜು ಆಯ್ಕೆ ಸಂದರ್ಭದಲ್ಲಿ ಬಳಸಿದ ಕಂಪ್ಯೂಟರ್‌ನ ಐಪಿ ವಿಳಾಸವನ್ನು ಜಾಲಾಡಲಾಗಿದೆ. ಕೆಲವಡ ಒಂದೇ ಐಪಿ ವಿಳಾಸದಲ್ಲಿ 10ಕ್ಕೂ ಹೆಚ್ಚು ಸೀಟುಗಳನ್ನು ಬ್ಲ್ಯಾಕ್ ಮಾಡಲಾಗಿದೆ. ಅಂತಹ ಐಪಿ ಅಡ್ರೆಸ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ ಎಂದರು.

ಕೆಇಎ ನಡೆಸಿದ 3ನೇ ಸುತ್ತಿನ ಮಾಪ್‌ ಅಪ್ ಸೀಟು ಹಂಚಿಕೆಯಲ್ಲಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿಯಂತಹ ಅತಿ ಹೆಚ್ಚು ಬೇಡಿಕೆ ಇರುವ ಎಂಜಿನಿಯರಿಂಗ್ ಕೋರ್ಸ್‌ಗಳು ಪ್ರತಿಷ್ಠಿತ ಕಾಲೇಜುಗಳಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿವೆ. ಹೀಗೆ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಕಡ್ಡಾಯವಾಗಿದ್ದರೂ ಆಯಾ ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ. ಅಂತಹ 2348 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ವಿಚಾರ ಸಂಕಿರಣ  ಕಾರ್ಯಕ್ರಮ |  ಭಾರತದಲ್ಲಿ ಸಾಮಾಜಿಕ ಭದ್ರತೆ

ಈ ನೋಟಿಸ್‌ಗೆ ಶೇ.50ರಷ್ಟು ಮಂದಿ ಉತ್ತರ ನೀಡಿದ್ದು, ಕೆಲ ವಿದ್ಯಾರ್ಥಿಗಳು ನಾವು ಸೀಟು ಆಯ್ಕೆ ಪ್ರಕ್ರಿಯೆಯಲ್ಲೇ ಭಾಗವಹಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅಂತಹ ವಿದ್ಯಾರ್ಥಿಗಳ ಹೆಸರಲ್ಲಿ ಸೀಟು ಆಯ್ಕೆ ನಡೆದಿರುವ ಐಪಿ ವಿಳಾಸಗಳನ್ನು ಪತ್ತೆ ಮಾಡಲಾಗಿದೆ. ಒಂದೇ ಐಪಿ ವಿಳಾಸದಿಂದ ಹತ್ತಕ್ಕೂ ಹೆಚ್ಚು ಸೀಟ್ ಬ್ಲ್ಯಾಕಿಂಗ್ ಪ್ರಕ್ರಿಯೆಗಳು ನಡೆದಿದೆ.

ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ವ್ಯವಸ್ಥಿತ ಜಾಲ ಇದರ ಹಿಂದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಐಪಿ ವಿಳಾಸಗಳ ವಿರುದ್ಧವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ ಎಂದು ತಿಳಿಸಿದರು.

ಕೆಲ ಕಾಲೇಜುಗಳಲ್ಲಿ ಗರಿಷ್ಠ 90 ರವರೆಗೆ ಸೀಟುಗಳು ಬ್ಲ್ಯಾಕ್‌?

ಸಚಿವರು ನೀಡಿದ ಮಾಹಿತಿ ಪುಕಾರ, ಕೆಲವು ಕಾಲೇಜುಗಳಲ್ಲಿ ಕನಿಷ್ಠ 20ರಿಂದ ಗರಿಷ್ಠ 92 ಸೀಟುಗಳವರೆಗೆ ಸೀಟುಗಳು ಬ್ಲಾಕ್ ಆಗಿವೆ. ಅಂದರೆ ಹಂಚಿಕೆಯಾದ ಸೀಟಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದ ಅವು ಭರ್ತಿಯಾಗದೆ ಬಾಕಿ ಉಳಿದಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಈ ಪೈಕಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ರೀತಿ 92 ಸೀಟು, ಆಕಾಶ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 82, ನ್ಯೂ ಹಾರಿಜನ್ ಕಾಲೇಜಿನಲ್ಲಿ 52, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ 45, ದಯಾನಂದಸಾಗರ ಕಾಲೇಜಿನಲ್ಲಿ 34, ಸರ್ ಎಂ.ವಿಶ್ವೇಶ್ವರಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 37, ಎಂವಿಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ 31 ಸೀಟುಗಳಿಗೆ ವಿದ್ಯಾರ್ಥಿಗಳು ಪವೇಶ ಪಡೆದಿಲ್ಲ.

ಈ ರೀತಿ ಪ್ರವೇಶ ಪಡೆಯದ ಸೀಟುಗಳ ಪೈಕಿ ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಅತಿ ಹಚ್ಚು ಬೇಡಿಕೆಯ ಕೋರ್ಸಿನ ಸೀಟುಗಳ ಹಚ್ಚಿನ ಸಂಖ್ಯೆಯಲ್ಲಿವೆ. ಇದೇ ಸೀಟ್ ಬ್ಲ್ಯಾಕ್ ಹಗರಣದ ಸಂಶಯಕ್ಕೆ ಕಾರಣವಾಗಿದೆ ಎಂದು ಸಚಿವರು ವಿವರಿಸಿದರು.

ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆದು ವರದಿ ಬರದ ಯಾವುದೇ ಕಾಲೇಜುಗಳ ವಿರುದ್ಧ ಆರೋಪ ಮಾಡುವುದು ತಪ್ಪಾಗುತ್ತದೆ. ತನಿಖೆ ಬಳಿಕ ಇದರಲ್ಲಿ ಕಾಲೇಜುಗಳ ಪಾತ್ರವಿದೆಯಾ ಅಥವಾ ಯಾವ ವ್ಯವಸ್ಥಿತ ಜಾಲವಿದೆ ಎಂಬುದು ಹೊರಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ನೋಡಿ: ಮೋದಿಯವರೇ ಹತ್ತು ವರ್ಷದಲ್ಲಿ ಎಷ್ಟು ಆಶ್ವಾಸನೆ ಈಡೇರಿಸಿದ್ದಿರಿ ಸ್ಪಷ್ಟಪಡಿಸಿ – ವಿ ಎಸ್ ಉಗ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *