ಸಮುದ್ರ ದೈತ್ಯ ಸಸ್ತನಿ ತಿಮಿಂಗಲಗಳು

ಡಾ. ಎನ್ ಬಿ. ಶ್ರೀಧರ

ತಿಮಿಂಗಿಲಗಳು, ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಾಣಿಗಳು. ತಿಮಿಂಗಿಲಗಳಲ್ಲಿ ಸುಮಾರು ೮೦ ಜಾತಿಗಳಿವೆ. ಅವುಗಳ ಭಾರೀ ಗಾತ್ರ, ಬುದ್ಧಿವಂತಿಕೆ, ಮತ್ತು ಕುತೂಹಲಕಾರಿ ರಹಸ್ಯ ಜೀವನದ ಮೂಲಕ ಮಾನವರ ಗಮನ ಸೆಳೆದಿವೆ. ಆಸಕ್ತಿದಾಯಕ ವಿಷಯವೆಂದರೆ ಸಮುದ್ರದಲ್ಲಿದ್ದರೂ ಸಹ ಇವು ಸಸ್ತನಿಗಳು ಮತ್ತು ಮರಿ ಹಾಕಿ ಸ್ಥನ ಪಾನ ಮಾಡಿಸುವ ಪ್ರಪಂಚದ ಅಪರೂಪದ ಅತ್ಯಂತ ದೈತ್ಯ ಜೀವಿಗಳು. ಈ ಅದ್ಭುತ ಸಮುದ್ರಸ್ತನಿಗಳು ಸೆಟೇಸಿಯನ್ ಕುಟುಂಬಕ್ಕೆ ಸೇರಿವೆ. ಇದರಲ್ಲಿ ಡಾಲ್ಫಿನ್‌ಗಳು ಮತ್ತು ಪಾರ್ಪೈಸಸ್‌ಗಳು ಕೂಡ ಸೇರಿವೆ. ಸಮುದ್ರದಲ್ಲಿದ್ದರೂ ಸಹ ಇವು ಬಿಸಿರಕ್ತದ ಪ್ರಾಣಿಗಳು. ಅಗಾಗ ಮೇಲಕ್ಕೆ ಬಂದು ಗಾಳಿಯನ್ನು ಸಹ ಅವು ಸೇವಿಸುತ್ತವೆ.

ಹುಟ್ಟು

ತಿಮಿಂಗಿಲಗಳು, ಇತರ ಸಮಕಾಲೀನ ಸಸ್ತನಿಗಳಂತೆ ಭೂಜೀವಿಗಳು. ಇವು ಮೀನುಗಳಲ್ಲ. ಇವುಗಳ ಪೂರ್ವಜ ಜೀವಿಗಳಿಗೆ ಪಾಕಿಸೆಟಿಡ್ಸ್ ಎಂದು ಕರೆಯುತ್ತಿದ್ದು ಇವುಗಳ ಮೂಲ ಈಗಿನ ಪಾಕಿಸ್ಥಾನ ಎಂದು ಹೇಳಲಾಗಿದೆ. ತಿಮಿಂಗಿಲಗಳ ಉಗಮ ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಇಯೋಸೀನ್ ಕಾಲದಲ್ಲಿ ಪ್ರಾರಂಭವಾಯಿತು. ಪಾಕಿಸೆಟಿಡ್ಸ್ ಒಂಥರಾ ತೋಳಗಳ ರೀತಿಯಲ್ಲಿದ್ದು ಅವುಗಳ ಜೀವನವನ್ನು ಭೂಮಿ ಮತ್ತು ಸಮುದ್ರದಲ್ಲಿ ಕಳೆಯುತ್ತಿದ್ದವು. ಹಿಪ್ಪೋಗಳೂ ಸಹ ತಿಮಿಂಗಲದ ಪೂರ್ವಜರನ್ನು ಹೋಲುತ್ತವೆ. ಕೋಟಿ ವರ್ಷಗಳಿಂದ ಆದ ಬದಲಾವಣೆಯ ನಂತರ ಈಗ ಎಲ್ಲಾ ತಿಮಿಂಗಲಗಳು ಸಂಪೂರ್ಣ ಸಮುದ್ರ ಜೀವಿಗಳಾಗಿ ಬದಲಾಗಿವೆ. ಸದ್ಯ ತಿಮಿಂಗಲಗಳ ಯಾವುದೇ ಪೂರ್ವಜರುಗಳು ಭೂಮಿಯಲ್ಲಿಲ್ಲ. ತಿಮಿಂಗಿಲಗಳದು ಮಾತ್ರ ಪ್ರಧಾನ ಕುಟುಂಬ.

ಸಮುದ್ರ ದೈತ್ಯ ಸಸ್ತನಿ ತಿಮಿಂಗಲಗಳು

ಜೀವನಚಕ್ರ

ತಿಮಿಂಗಿಲಗಳ ಜೀವನಚಕ್ರವು ಸಂಪೂರ್ಣ ಸಮುದ್ರದಲ್ಲಿಯೇ ಆಗುತ್ತಿದ್ದು, ಸಮುದ್ರದಲ್ಲಿ ವಾಸಿಸುವ ಬಹುತೇಕ ಜೀವಿಗಳಿಗೆ ವ್ಯತಿರಿಕ್ತವಾಗಿ ಇವು ಮೊಟ್ಟೆಗಳ ಬದಲಾಗಿ ಮರಿಗಳಿಗೆ ಜನ್ಮ ನೀಡಿ ಹಾಲೂಡಿಸುತ್ತವೆ. ಪ್ರಬೇಧಗಳಿಗೆ ತಕ್ಕ ಹಾಗೆ ತಿಮಿಂಗಲಗಳ ಗರ್ಭಧಾರಣೆ ಅವಧಿ ಬದಲಾಗುತ್ತದೆ. ನೀಲಿ ತಿಮಿಂಗಿಲಗಳ ಗರ್ಭಧಾರಣೆ ಅವಧಿ ೧೦ ರಿಂದ ೧೨ ತಿಂಗಳವರೆಗೆ ಇದ್ದರೆ ಸ್ಪರ್ಮ್ ತಿಮಿಂಗಿಲದ ಗರ್ಭಧಾರಣೆಯ ಅವಧಿ ಸುಮಾರು 16 ರಿಂದ 18 ತಿಂಗಳಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು| ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ; ರಸ್ತೆಗಳು ಜಲಾವೃತ

ಜೀವಿತಾವಧಿ

ತಿಮಿಂಗಿಲಗಳ ಜೀವನಾವಧಿಯು ಪ್ರತಿ ಪ್ರಭೇದದಂತೆ ಬಹಳಷ್ಟು ಬದಲಾಗುತ್ತದೆ. ಚಿಕ್ಕ ಪ್ರಭೇದಗಳಾದ ಡಾಲ್ಫಿನ್‌ಗಳು ಮತ್ತು ಪಾರ್ಪೈಸಸ್‌ಗಳು ಸಾಮಾನ್ಯವಾಗಿ 20 ರಿಂದ 30 ವರ್ಷಗಳಷ್ಟು ಬದುಕಿದರೆ ದೊಡ್ಡ ತಿಮಿಂಗಿಲಗಳಾದ ಬೋಹೆಡ್ ತಿಮಿಂಗಿಲಗಳು ತಿಮಿಂಗಿಲಗಳು ಭೂಮಿಯಲ್ಲಿಯೇ ಅತಿ ಧೀರ್ಘ ಕಾಲವಾದ 200 ವರ್ಷಗಳವರೆಗೆ ಜೀವಿಸುತ್ತವೆ.

ಆಹಾರ

ತಿಮಿಂಗಿಲಗಳನ್ನು ಅವುಗಳ ಆಹಾರದ ವ್ಯವಸ್ಥೆಯ ಆಧಾರದ ಮೇಲೆ ಬೇಲಿನ್ ತಿಮಿಂಗಿಲಗಳು (ಮಿಸ್ಟಿಸಿಟಿ) ಮತ್ತು ಹಲ್ಲು ತಿಮಿಂಗಿಲಗಳು (ಒಡೊಂಟೆಸಿಟಿ), ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಬೇಲಿನ್ ತಿಮಿಂಗಿಲಗಳು (ನೀಲಿ ತಿಮಿಂಗಿಲಗಳು, ಹಂಪ್ಬ್ಯಾಕ್ ತಿಮಿಂಗಿಲಗಳು ಮತ್ತು ಬೂದು ತಿಮಿಂಗಿಲಗಳು) ಶೋಧಿಸಿ ಅಥವಾ ಸೋಸಿ ತಿನ್ನುವ ಜೀವಿಗಳಾಗಿವೆ. ಹಲ್ಲುಗಳ ಬದಲು ಅವುಗಳಲ್ಲಿ ಕೃತಕ ಕೇರಾಟಿನ್‌(ಮನುಷ್ಯರ ಕೂದಲು ಮತ್ತು ಉಗುರುಗಳಲ್ಲಿ ಕಂಡುಬರುವ ಪ್ರೋಟೀನ್) ಮೂಲದ ಬೇಲಿನ್ ಬ್ಲೇಡ್‌ಗಳು ಇರುತ್ತವೆ. ಇವು ಅಗಾದ ಪ್ರಮಾಣದಲ್ಲಿ ಸಮುದ್ರದ ನೀರನ್ನು ಬಾಯಲ್ಲಿರಿಸಿಕೊಂಡು ಅದರಿಂದ ಕ್ರಿಲ್ಲುಗಳು, ಸಮುದ್ರ ಸಸ್ಯಗಳು ಮತ್ತು ಪುಟ್ಟ ಮೀನುಗಳನ್ನು ಮಾತ್ರ ಶೋಧಿಸಿ ನುಂಗುತ್ತವೆ.

ಸಂತಾನೋತ್ಪತ್ತಿ

ತಿಮಿಂಗಿಲಗಳಲ್ಲಿ ಸಂತಾನೋತ್ಪತ್ತಿ ವಿವಿಧ ಋತುಕಾಲದಲ್ಲಿ ಸಂಭವಿಸುತ್ತದೆ. ಬಹುತೇಕ ಪ್ರಭೇದಗಳು ಸಂತಾನೋತ್ಪತ್ತಿ ಮಾಡಲು ಮತ್ತು ಹೆರಿಗೆಗೆ ನಿರ್ದಿಷ್ಟ ಸ್ಥಳಗಳಿಗೆ ವಲಸ ಹೋಗುತ್ತವೆ. ಗಂಡು ತಿಮಿಂಗಿಲಗಳು ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹೆಣ್ಣುಗಳ ಗಮನವನ್ನು ಸೆಳೆಯಲು ಮತ್ತು ಕೂಡಲು ಪರಸ್ಪರ ಕಾದಾಡುತ್ತವೆ ಮತ್ತು ಸ್ಪರ್ಧಾತ್ಮಕ ಹೋರಾಟ ನಡೆಸುತ್ತವೆ. ಆಸಕ್ತಿಕರವಾಗಿ ಹಂಪ್ಬ್ಯಾಕ್ ಗಂಡು ತಿಮಿಂಗಿಲಗಳು ಸಂತಾನೋತ್ಪತ್ತಿ ಸಮಯದಲ್ಲಿ ಕಾಲದಲ್ಲಿ ಹುಣ್ಣುಗಳನ್ನು ಆಕರ್ಷಿಸಲು ಕುತೂಹಲಕರ ಮತ್ತು ದೀರ್ಘವಾದ ಹಾಡುಗಳಂತ ವಿಚಿತ್ರ ಶಬ್ಧವನ್ನು ಹೊರಡಿಸುತ್ತವೆ.

ಇದು ಒಂಥರಾ ನಮ್ಮ ಸಿನಿಮಾಗಳಲ್ಲಿ ನಾಯಕ ನಾಯಕಿಯನ್ನು ಆಕರ್ಷಿಸಲು ಹಾಡುವ ಹಾಡುಗಳಿಗೆ ಹೋಲಿಸಬಹುದು. ಉತ್ತಮ “ಹಾಡುಗಾರ” ಗಂಡು ತಿಮಿಂಗಲಗಳಿಗೆ ಹೆಣ್ಣು ಒಲಿದು ಕೂಡುತ್ತದೆ. ಮನುಷ್ಯನ ಮಗು ಹೇಗೆ ತನ್ನ ತಾಯಿಯನ್ನು ಹೇಗೆ ಅತಿಯಾಗಿ ಅವಲಂಭಿಸುತ್ತದೆಯೋ ಹಾಗೆಯೇ ಮರಿ ಮರಿ ತಿಮಿಂಗಲಗಳು ಅನೇಕ ವರ್ಷಗಳ ಕಾಲ ತಾಯಿಯ ಜೊತೆಗೇ ಇರುತ್ತವೆ.

ತಾಯಿ ತಿಮಿಂಗಲವು ಅದರ ಸ್ಥನದ ಮೂಲಕ ಸಮುದ್ರದ ನೀರಿನಲ್ಲಿ ಅತ್ಯಂತ ಹೆಚ್ಚಿನ ಕೊಬ್ಬಿನ ಅಂಶ ಹೊಂದಿದ ಹಾಲನ್ನು ಚಿಮ್ಮುತ್ತದೆ ಮತ್ತು ಮರಿ ತಿಮಿಂಗಲ ಅದನ್ನು ಕೂಡಲೇ ಕುಡಿಯುತ್ತದೆ. ಇಲ್ಲದಿದ್ದರೆ ಸಮುದ್ರದ ಉಪ್ಪು ನೀರಿಗೆ ಹಾಲು ಕೂಡಲೇ ಹಾಳಾಗಿ ಬಿಡುತ್ತದೆ. ತಾಯಿ ತಿಮಿಂಗಲವು ಸದಾ ಮರಿಯ ಹತ್ತಿರವೇ ಇದ್ದು ಅದನ್ನು ತಿನ್ನಲು ಬರುವ ಶಾರ್ಕ್ ಮೀನು ಇತ್ಯಾದಿಗಳ ವಿರುದ್ಧ ಹೋರಾಡಲು ಸಿದ್ಧವಿರುತ್ತದೆ.

ಕೆಲವೊಮ್ಮೆ ಕಾದಾಡೀ ಪ್ರಾಣಾವನ್ನೇ ಬಿಡುತ್ತದೆ. ನೀಲಿ ತಿಮಿಂಗಲವು ದಿನವೊಂದಕ್ಕೆ ಸುಮಾರು ೨೦೦ ಲೀಟರ್ ಹಾಲನ್ನು ಉತ್ಪಾದಿಸಿ ೯೦ ಕಿಲೋ ತೂಗುವ ತನ್ನ ಮರಿಗೆ ಕುಡಿಸುತ್ತದೆ. ಈ ಪೌಷ್ಟಿಕವಾದ ಹಾಲನ್ನು ಕುಡಿದು ಮೊದಲ ಎರಡು ವರ್ಷಗಳಲ್ಲಿ ಮರಿತಿಮಿಂಗಲಗಳು ಅತ್ಯಂತ ವೇಗವಾಗಿ ಬೆಳೆಯುತ್ತವೆ. ಮರಿಗಳು ೧೦-೧೨ ವರ್ಷಗಳಲ್ಲಿ ವಯಸ್ಕ ತಿಮಿಂಗಲಗಳಾದ ನಂತರ ಮಾತ್ರ ತಾಯಿಯಿಂದ ಬೇರ್ಪಡುತ್ತವೆ.

ರೋಗಗಳು

ತಿಮಿಂಗಿಲಗಳು ವೈರಾಣು, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕುಗಳು ಸೇರಿದಂತೆ ಹಲವಾರು ರೋಗಗಳಿಗೆ ತುತ್ತಾಗುತ್ತವೆ. ಚರ್ಮದ ಗಾಯಗಳು, ಶ್ವಾಸತೊಂದರೆ, ಜಠರ ಮತ್ತು ಕರುಳಿನ ತೊಂದರೆಯಿಂದ ಬಳಲುತ್ತವೆ. ಪರಿಸರದಲ್ಲಿ ಮಾನವ-ಪ್ರೇರಿತ ಬದಲಾವಣೆಗಳಾದ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗಳು ತಿಮಿಂಗಿಲಗಳ ಜೀವಕ್ಕೆ ಕುತ್ತು ತರುತ್ತಿವೆ. ತಿಮಿಂಗಲಗಳ ಬೇಟೆ ಅವಿರತವಾಗಿ ಮುಂದುವರೆದಿದ್ದು ಅವುಗಳ ಸಂತತಿಗೆ ಅನೇಕ ದೇಶಗಳಲ್ಲಿ ಸಂಚಕಾರ ತಂದಿದೆ.

ಸಾವು

ತಿಮಿಂಗಿಲಗಳು ವಯೋಸಹಜ ವೃದ್ಧಾಪ್ಯ, ಪರಭಕ್ಷಕ ಜೀವಿಗಳ ಆಕ್ರಮಣ ಅಥವಾ ರೋಗಗಳಿಂದ ಸಾಯುತ್ತವೆ. ಮುದಿ ತಿಮಿಂಗಲಗಳಿಗೆ ಕಣ್ಣು ಸರಿಯಾಗಿ ಕಾಣದಿರುವುದು ಮತ್ತು ಕೆಲವೊಮ್ಮೆ ದಡದ ತೀರಕ್ಕೆ ಹೋದಾಗ ಅಲ್ಲಿಯೇ ಸಿಕ್ಕಿಕೊಂಡು ಸಾಯುವುದು ಸಹ ಇದೆ.

ತಿಮಿಂಗಿಲ ವಾಂತಿ

ಈ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್ʼ. ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ. ಬದಲಾಗಿ ತಿಮಿಂಗಲದ ಮಲ ಎಂದರೆ ಸರಿಯಾದ ಹೆಸರು. ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು. ಇದೊಂದು ಅತ್ಯಂತ ಅಪರೂಪದ ದುಬಾರಿ ಸುಗಂಧ ದ್ರವ್ಯ.

ಆಸಕ್ತಿದಾಯಕ ಸಂಗತಿಗಳು

ತಿಮಿಂಗಿಲಗಳು ಕುತೂಹಲಕಾರಿ ಗುಣಲಕ್ಷಣಗಳಿಂದ ತುಂಬಿವೆ. ಈ ಸಾಗರ ದೈತ್ಯರ ಬಗ್ಗೆ ಕೆಲವು ಆಕರ್ಷಕ ಸಂಗತಿಗಳು ಇಲ್ಲಿವೆ.

  • ನೀಲಿ ತಿಮಿಂಗಿಲಗಳು 100 ಅಡಿ (30 ಮೀಟರ್) ಉದ್ದದವರೆಗೆ ಬೆಳೆಯುತ್ತವೆ ಮತ್ತು 200 ಟನ್ನುಗಳಷ್ಟು ತೂಕವಿರುತ್ತವೆ. ಅದರ ಹೃದಯ ಮಾತ್ರ ಚಿಕ್ಕ ನ್ಯಾನೋ ಕಾರಿನಷ್ಟು ಗಾತ್ರದಷ್ಟಿರುತ್ತದೆ.
  • ಹಂಪ್‌ಬ್ಯಾಕ್ ತಿಮಿಂಗಿಲಗಳ ಹಾಡುಗಳು ಸಾಗರದಲ್ಲಿ ಹೆಚ್ಚಿನ ದೂರದವರೆಗೆ ಕೇಳಿಸುತ್ತವೆ.
  •  ಸ್ಪರ್ಮ್ ತಿಮಿಂಗಿಲಗಳು ಪ್ರಪಂಚದ ಎಲ್ಲಾ ಪ್ರಾಣಿಗಳಲ್ಲಿಯೇ ಅತಿದೊಡ್ಡ ಮೆದುಳನ್ನು ಹೊಂದಿದ್ದು 7.8 ಕೆಜಿ ತೂಗುತ್ತದೆ. ಆನೆಯ ಮೆದುಳು ೪.೫ ಕೆಜಿ ತೂಗಿದರೆ ಮನುಷ್ಯನದು ೧.೫ ಕೆಜಿ ಇರುತ್ತದೆ.
  •  ಸ್ಪರ್ಮ್ ತಿಮಿಂಗಿಲಗಳು ತಿಮಿಂಗಿಲಗಳು ದೈತ್ಯ ಸ್ಕ್ವಿಡ್‌ನಂತಹ ಆಹಾರವನ್ನು ಹುಡುಕುತ್ತಾ 10,500 ಅಡಿ (3,200 ಮೀಟರ್) ಆಳಕ್ಕೆ ಹೋಗುವುದನ್ನು ದಾಖಲಿಸಲಾಗಿದೆ.
  •  ಕೊಲೆಗಾರ ತಿಮಿಂಗಿಲಗಳು ಎಂದು ಕರೆಯಲ್ಪಡುವ ಓರ್ಕಾಸ್‍ಗಳು ಮನುಷ್ಯನಂತೆ ಸಾಮಾಜಿಕ ಜೀವಿಯಾಗಿದ್ದು ಜೊತೆಯಾಗಿಯೇ ಸಮೂಹ ಬೇತೆಯಾಡುತ್ತವೆ ಮತ್ತು ಗಾಯಗೊಂಡ ಮತ್ತು ಮುದಿ ತಿಮಿಂಗಲಗಳನ್ನು ಆರೈಕೆ ಮಾಡುತ್ತವೆ.
  •  ತಿಮಿಂಗಿಲವು ಅದರ ಶಕ್ತಿಯುತ ಬಾಲದ ಚಲನೆಯಿಂದ ಉಂಟಾಗುವ ಸಮುದ್ರದ ನೀರಿನಲ್ಲಿ ವರ್ತುಲದ ರೀತಿಯಲ್ಲಿ ನಿರ್ಮಿಸುವ ಆಕಾರವನ್ನು “ತಿಮಿಂಗಿಲ ಹೆಜ್ಜೆಗುರುತು” ಎಂದು ಕರೆಯುತ್ತಾರೆ.
  • ಭೂಮಿಯ ಮೇಲಿನ ಸಸ್ತನಿ ಎಮ್ಮೆಯ ಹಾಲಿನಲ್ಲಿ ಕೊಬ್ಬಿನ ಅಂಶ ಶೇ:೯.೫ ಇದ್ದರೆ ಸಮುದ್ರ ಸಸ್ತನಿ ತಿಮಿಂಗಲದ ಹಾಲಿನಲ್ಲಿ ಶೇ ೩೦-೩೫ ರಷ್ಟಿರುತ್ತದೆ ಮತ್ತು ಇದು ಸಸ್ಥನಿಗಳಲ್ಲಿಯೇ ಅತ್ಯಂತ ಹೆಚ್ಚಿನದು.
  •  ತಿಮಿಂಗಲ ದಿನವೊಂದಕ್ಕೆ ೪ ಟನ್ ಆಹಾರ ಸೇವಿಸುತ್ತದೆ ಮತ್ತು ೨೦೦ ಲೀಟರ್ ದ್ರವರೂಪದ ಮಲವಿಸರ್ಜನೆ ಮಾಡುತ್ತವೆ.
  •  ನೀಲಿ ತಿಮಿಂಗಲದ ಹೃದಯ ಮಿಡಿತ ಆಳವಾದ ನೀರಿನಲ್ಲಿದ್ದಾಗ ನಿಮಿಷಕ್ಕೆ ೫-೬ ಮತ್ತು ಮೇಲಿದ್ದಾಗ ೨೫-೩೫.
  • ಬೂದು ತಿಮಿಂಗಲಗಳು ವರ್ಷಕ್ಕೆ ೨೨,೦೦೦-೨೫,೦೦೦ ಕಿಲೋಮೀಟರ್ ಪ್ರಯಾಣ ಮಾಡುತ್ತವೆ.
  • ತಿಮಿಂಗಲಗಳು ನಿದ್ರೆಯನ್ನು ಮಾಡುವುದಿಲ್ಲ. ಆದರೆ ಅವು ತಮ್ಮ ಮೆದುಳಿನ ಒಂದು ಭಾಗವನ್ನು ಮಾತ್ರ ವಿಶ್ರಾಂತಿಯ ಸಮಯದಲ್ಲಿ ಬಳಸುವುದರ ಮೂಲಕ ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತವೆ.

ಇದನ್ನೂ ನೋಡಿ: ವಾರದ ನೋಟ | ಭಾರತದಲ್ಲಿ ಜಿಡಿಪಿ ಹೆಚ್ಚಾದರೆ ನಿರುದ್ಯೋಗವೂ ಹೆಚ್ಚಾಗುತ್ತಿರುವ ಪವಾಡದ ವಿವರಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *